ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BBK 13: ʻಬಿಗ್‌ ಬಾಸ್‌ʼ ಕನ್ನಡ 13ಕ್ಕೆ ‘ಲವ್‌ ಮಾಕ್‌ಟೇಲ್‌ 3’ ಖ್ಯಾತಿಯ ‘ಜಗ್ಗಾ ಮಮ್ಮಿ’ ಎಂಟ್ರಿ; ಮೊದಲ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟ ಜಗದೀಶ್!

ಮಂಡ್ಯ ಮೂಲದ ಜಗದೀಶ್ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಡಾರ್ಲಿಂಗ್ ಕೃಷ್ಣ ಅಕ್ಕನ ಮನೆ ಅಡುಗೆಯವನಾಗಿದ್ದ ಇವರು 'ಲವ್ ಮಾಕ್‌ಟೇಲ್ 3' ಮೂಲಕ ಮನೆಮಾತಾಗಿದ್ದರು. ಸಾಲ ತೀರಿಸಲು ಬಂದಿರುವುದಾಗಿ ಹೇಳಿದ ಜಗದೀಶ್, ಟಾಸ್ಕ್ ಆಡಿ ಟ್ರೋಫಿ ಗೆಲ್ಲುವ ಪಣತೊಟ್ಟಿದ್ದಾರೆ. ಕಿಚ್ಚ ಸುದೀಪ್ ಎದುರು ತಮ್ಮ ಕಷ್ಟದ ಬದುಕು ತೆರೆದಿಟ್ಟಿದ್ದಾರೆ.

ʻಬಿಗ್ ಬಾಸ್ʼ ಕನ್ನಡ 13 ಶೋಗೆ 'ಜಗ್ಗಾ ಮಮ್ಮಿ' ಅಚ್ಚರಿಯ ಎಂಟ್ರಿ!

-

Avinash GR
Avinash GR Sep 6, 2026 7:55 PM

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ ಬಾಸ್ ಕನ್ನಡ ಸೀಸನ್‌ 13’ ಅದ್ಧೂರಿಯಾಗಿ ಆರಂಭವಾಗಿದ್ದು, ದೊಡ್ಮನೆಗೆ ಮೊದಲ ಸ್ಪರ್ಧಿಯಾಗಿ ‘ಲವ್‌ ಮಾಕ್‌ಟೇಲ್‌ 3’ ಖ್ಯಾತಿಯ ಜಗದೀಶ್‌ (ಜಗ್ಗಾ ಮಮ್ಮಿ) ಎಂಟ್ರಿ ಕೊಟ್ಟಿದ್ದಾರೆ. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿದ್ದ ಸೂಪರ್ ಹಿಟ್ ಚಿತ್ರ ‘ಲವ್ ಮಾಕ್‌ಟೇಲ್‌ 3’ ಚಿತ್ರದಲ್ಲಿ ಕಥಾನಾಯಕ ಆದಿಯ ಮಗಳು ನಿಧಿಯನ್ನು ನೋಡಿಕೊಳ್ಳುವ ಕೇರ್‌ಟೇಕರ್‌ ‘ಜಗ್ಗಾ ಮಮ್ಮಿ’ ಪಾತ್ರದ ಮೂಲಕ ರಾತ್ರೋರಾತ್ರಿ ಮನೆಮಾತಾಗಿದ್ದ ಜಗದೀಶ್‌, ಇದೀಗ ಕಿಚ್ಚ ಸುದೀಪ್‌ ಸಾರಥ್ಯದ ಬಿಗ್ ಬಾಸ್ ಮನೆ ಪ್ರವೇಶಿಸುವ ಮೂಲಕ ಗಮನ ಸೆಳೆದಿದ್ದಾರೆ.

ಚಿತ್ರರಂಗ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಬಿಗ್ ಬಾಸ್‌ಗೆ ಎಂಟ್ರಿ

ಮೂಲತಃ ಮಂಡ್ಯ ಜಿಲ್ಲೆಯ ಶೂಟಿಂಗ್‌ ಮಹದೇವಪುರದ ಬಡ ಕುಟುಂಬದ ಹಿನ್ನೆಲೆಯ ಜಗದೀಶ್ ಎಂ.ಬಿ, ಕೇವಲ 8ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾರೆ. ಬಣ್ಣದ ಲೋಕಕ್ಕೆ ಬರುವ ಮುನ್ನ ನಟ ಡಾರ್ಲಿಂಗ್ ಕೃಷ್ಣ ಅವರ ಅಕ್ಕನ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಇವರ ವಿಶಿಷ್ಟ ನಡವಳಿಕೆ ಹಾಗೂ ಹಾಸ್ಯಪ್ರವೃತ್ತಿಯನ್ನು ಗಮನಿಸಿದ ಕೃಷ್ಣ, ‘ಲವ್ ಮಾಕ್‌ಟೇಲ್‌ 3’ ಚಿತ್ರದಲ್ಲಿ ‘ಜಗ್ಗಾ ಮಮ್ಮಿ’ ಎಂಬ ವಿಶಿಷ್ಟ ಪಾತ್ರವನ್ನು ನೀಡಿ ಬೆಳ್ಳಿತೆರೆಗೆ ಪರಿಚಯಿಸಿದ್ದರು. ಚೊಚ್ಚಲ ಸಿನಿಮಾದಲ್ಲೇ ಅದ್ಭುತ ಹಾಸ್ಯದ ಮೂಲಕ ಜನಮನ ಗೆದ್ದ ಜಗದೀಶ್, ಚಿತ್ರರಂಗ ಪ್ರವೇಶಿಸಿದ ಕೆಲವೇ ತಿಂಗಳುಗಳಲ್ಲಿ ಬಿಗ್ ಬಾಸ್ ವೇದಿಕೆ ಏರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸಾಲ ತೀರಿಸಬೇಕು ನಾನು ಎಂದ ಜಗ್ಗಾ ಮಮ್ಮಿ

ವೇದಿಕೆಯ ಮೇಲೆ ನಟ ಕಿಚ್ಚ ಸುದೀಪ್ ಅವರ ಜೊತೆ ತಮ್ಮದೇ ಧಾಟಿಯಲ್ಲಿ ಸಖತ್ ಕಾಮಿಡಿ ಮಾಡಿದ ಜಗದೀಶ್, ಬಿಗ್ ಬಾಸ್ ವೇದಿಕೆಗೆ ಬರಲು ಸ್ನೇಹಿತನ ಮದುವೆ ಡ್ರೆಸ್ ಧರಿಸಿ ಬಂದಿರುವುದಾಗಿ ಹೇಳಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು. ಇದೇ ವೇಳೆ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದ ಅವರು, "ಚಿನ್ನ ಅಡವಿಟ್ಟು ₹2.50 ಲಕ್ಷ ಸಾಲ ಮಾಡಿಕೊಂಡಿದ್ದೇನೆ, ಬಿಗ್‌ ಬಾಸ್‌ನಿಂದ ಬರುವ ಸಂಭಾವನೆಯಿಂದ ಆ ಸಾಲವನ್ನು ತೀರಿಸಿ ಒಡವೆ ಬಿಡಿಸಿಕೊಳ್ಳುತ್ತೇನೆ. ಮುಂದಿನ 3-4 ವರ್ಷಗಳಲ್ಲಿ 30 ರಿಂದ 40 ಸಿನಿಮಾಗಳಲ್ಲಿ ನಟಿಸುವ ದೊಡ್ಡ ಕನಸು ಹೊತ್ತಿದ್ದೇನೆ" ಎಂದು ತಮ್ಮ ಆಸೆಯನ್ನು ಹಂಚಿಕೊಂಡರು.

ಲ್ಲರನ್ನೂ ಹಿಂದಿಕ್ಕಿ ಗೆದ್ದು ತೋರಿಸುತ್ತೇನೆ

ಬಿಗ್ ಬಾಸ್ ಮನೆಯಲ್ಲಿ ಗೆಲ್ಲುವುದೇ ತಮ್ಮ ಏಕೈಕ ಗುರಿ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ ಜಗ್ಗಾ ಮಮ್ಮಿ, "ಮನೆಯಲ್ಲಿ ಎಲ್ಲರಿಗೂ ರುಚಿಕರ ಅಡುಗೆ ಮಾಡಿಕೊಡುತ್ತೇನೆ, ಮನೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತೇನೆ. ಕೇವಲ ತಮಾಷೆ ಅಷ್ಟೇ ಅಲ್ಲದೆ, ಪ್ರತಿಯೊಂದು ಟಾಸ್ಕ್‌ಗಳಲ್ಲೂ ಚೆನ್ನಾಗಿ ಆಡಿ ಎಲ್ಲರನ್ನೂ ಹಿಂದಿಕ್ಕಿ ಗೆದ್ದು ತೋರಿಸುತ್ತೇನೆ" ಎಂದು ಸವಾಲು ಹಾಕಿದ್ದಾರೆ. ಸಾಮಾನ್ಯ ಅಡುಗೆ ಕೆಲಸಗಾರನಿಂದ ಜನಪ್ರಿಯ ಹಾಸ್ಯ ನಟನಾಗಿ, ಇದೀಗ ಬಿಗ್ ಬಾಸ್‌ನ ಮೊದಲ ಕಂಟೆಸ್ಟೆಂಟ್ ಆಗಿ ಅಡಿಯಿಟ್ಟಿರುವ ಜಗದೀಶ್ ಅವರ ಪಯಣ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.