ʻಜೈಲರ್ 2ʼ ಚಿತ್ರದಲ್ಲಿ ರಜನಿಕಾಂತ್ ಜೊತೆ ನಟಿಸಿರುವ ಈ ಬಾಲನಟ ರಿತ್ವಿಕ್ ಸಾಧನೆ ಎಂಥದ್ದು ಗೊತ್ತಾ? ಅಚ್ಚರಿ ಮೂಡಿಸಿದ 13 ವರ್ಷದ ಬಾಲಕ!
Jailer 2 Movie: ರಿತ್ವಿಕ್ ಜ್ಯೋತಿರಾಜ್ ಕೇವಲ 13ರ ಹರೆಯದಲ್ಲೇ ಸಾಫ್ಟ್ವೇರ್ ಸಂಸ್ಥೆ ಕಟ್ಟಿ ಅಚ್ಚರಿ ಮೂಡಿಸಿದ್ದಾನೆ. ʻಜೈಲರ್ 2ʼ ಸಿನಿಮಾದಲ್ಲಿ ಸೂಪರ್ಸ್ಟಾರ್ ರಜನಿಕಾಂತ್ ಮೊಮ್ಮಗನಾಗಿ ನಟಿಸಿರುವ ಈ ಬಾಲಪ್ರತಿಭೆ, ಪೈಥಾನ್ ಕೋಡಿಂಗ್ ಹಾಗೂ ರೋಬೋಟಿಕ್ಸ್ನಲ್ಲಿ ಪರಿಣತಿ ಸಾಧಿಸಿದ್ದಾನೆ.
-
'ಜೈಲರ್ 2' ಚಿತ್ರದ ಬಾಲನಟ ರಿತ್ವಿಕ್ ಜ್ಯೋತಿರಾಜ್ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆದಿದ್ದಾನೆ. 'ಜೈಲರ್' ಚಿತ್ರದಲ್ಲಿ ಸೂಪರ್ಸ್ಟಾರ್ ರಜನಿಕಾಂತ್ ಅವರ ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಿತ್ವಿಕ್, 'ಜೈಲರ್ 2' ಚಿತ್ರದಲ್ಲೂ ನಟಿಸಿದ್ದಾನೆ. ವಯಸ್ಸಿಗೆ ಮೀರಿದ ಮಾತುಗಳು ಹಾಗೂ ಮುದ್ದಾದ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ರಿತ್ವಿಕ್, ರಜನಿ ಜೊತೆಗಿನ ಭಾವನಾತ್ಮಕ ಸನ್ನಿವೇಶಗಳಲ್ಲಿ ಮಿಂಚಿದ್ದಾನೆ. ಆದರೆ ಇದೀಗ ಬಾಲ ನಟ ರಿತ್ವಿಕ್ ಬಗ್ಗೆ ಹಲವು ಇಂಟರೆಸ್ಟಿಂಗ್ ವಿಚಾರಗಳು ಹೊರಬಂದಿವೆ.
ಸಾಫ್ಟ್ವೇರ್ ಕಂಪನಿ ಹೊಂದಿರುವ ರಿತ್ವಿಕ್
ಕೊಯಮತ್ತೂರು ಮೂಲದ ರಿತ್ವಿಕ್, ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದಾನೆ. ಕೇವಲ 13 ವರ್ಷದ ಪ್ರಾಯದಲ್ಲೇ ಕೋಡಿಂಗ್ನಲ್ಲಿ ಆಸಕ್ತಿ ಬೆಳೆಸಿಕೊಂಡು ಒಂದು ವೆಬ್ಸೈಟ್ ರೂಪಿಸಿದ್ದಾನೆ. ಅದಕ್ಕಾಗಿ ತನ್ನ ಸ್ನೇಹಿತರೊಂದಿಗೆ ಸೇರಿ ಸ್ವಂತ ಕಂಪನಿಯೊಂದನ್ನು ಸಹ ಸ್ಥಾಪಿಸಿದ್ದಾನೆ. ಇತ್ತೀಚೆಗೆ 'ಜೈಲರ್ 2' ಪ್ರಚಾರದ ಅಂಗವಾಗಿ ನಡೆದ ಸಂದರ್ಶನವೊಂದರಲ್ಲಿ ಆತನೇ ಸ್ವತಃ ಈ ವಿಷಯವನ್ನು ಹಂಚಿಕೊಂಡಿದ್ದಾನೆ. ನಟನೆಯ ಜೊತೆಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ನಲ್ಲೂ ತನಗೆ ಆಸಕ್ತಿಯಿದ್ದು, ಪೈಥಾನ್ ಕೋಡಿಂಗ್ ಜೊತೆಗೆ ರೋಬೋಟ್ಗಳನ್ನು ರಚಿಸುವುದು ಕೂಡ ತನಗೆ ಗೊತ್ತು ಎಂದು ಆತ ಬಹಿರಂಗಪಡಿಸಿದ್ದಾನೆ.
ಪ್ರಶ್ನೆ ಕೇಳಿದ ನಿರೂಪಕಿಗೆಆಶ್ಚರ್ಯ
"ನೀನು ಸಾಫ್ಟ್ವೇರ್ ಕಂಪನಿ ಶುರು ಮಾಡಿರೋದು ನಿಜವೇ" ಎಂದು ನಿರೂಪಕಿ ಪ್ರಶ್ನೆ ಮಾಡಿದಾಗ, "ಹೌದು, ಬೇಸರವಾಗುತ್ತಿತ್ತು ಅಂತ ಒಂದು ದಿನ ಸಂಜೆ ನಾನು ಒಂದು ವೆಬ್ಸೈಟ್ ಮಾಡಿದೆ. ನನಗೆ ಸ್ವಲ್ಪ ಕೋಡಿಂಗ್ ಗೊತ್ತು" ಎಂದು ಉತ್ತರಿಸಿದ್ದಾನೆ ರಿತ್ವಿಕ್. ಇದಕ್ಕೆ ಅಚ್ಚರಿಗೊಂಡ ನಿರೂಪಕಿ, "ಏನು, ನಿನಗೆ ಕೋಡಿಂಗ್ ಗೊತ್ತಾ? ಯಾವ ಸಾಫ್ಟ್ವೇರ್?" ಎಂದು ಕೇಳಿದ್ದಾರೆ. "ಪೈಥಾನ್" ಎಂದು ರಿತ್ವಿಕ್ ಉತ್ತರಿಸಿದಾಗ ಆಂಕರ್ಗೆ ಮತ್ತಷ್ಟು ಆಶ್ಚರ್ಯವಾಯಿತು.
"ನನಗೇ ಪೈಥಾನ್ ಗೊತ್ತಿಲ್ಲ, ಕಾಲೇಜಿನಲ್ಲೂ ಹೇಳಿಕೊಟ್ಟಿಲ್ಲ.. ಆದರೆ ನಿನಗೆ ಗೊತ್ತಿದೆ.. ವಾವ್! ನಿನಗೆ ಬೇರೆ ಯಾವ್ಯಾವ ಸಾಫ್ಟ್ವೇರ್ ಗೊತ್ತು" ಎಂದು ಕೇಳಿದ್ದಾರೆ. ಅದಕ್ಕೆ ರಿತ್ವಿಕ್, "ನನಗೆ ರೋಬೋಟ್ಗಳನ್ನು ಕ್ರಿಯೇಟ್ ಮಾಡುವುದು ಗೊತ್ತು.. ಹಾಗಾಗಿ ನಾನು ಅದನ್ನು ಕೋರ್ಸ್ಗಳ ರೂಪದಲ್ಲಿ ಆ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದೇನೆ" ಎಂದಿದ್ದಾನೆ.
ರಿತ್ವಿಕ್ಗೆ ಭಾರಿ ಮೆಚ್ಚುಗೆ
ಪ್ರಸ್ತುತ ತನ್ನ ಕಂಪನಿಯಲ್ಲಿ ತನ್ನೊಂದಿಗೆ ಮುಖ್ಯವಾಗಿ 5 ಜನರ ತಂಡವಿದ್ದು, ಇನ್ನೂ 5 ಕೆಲಸ ಮಾಡುತ್ತಿದ್ದಾರೆ ಎಂದು ರಿತ್ವಿಕ್ ತಿಳಿಸಿದ್ದಾನೆ. 'ಜೈಲರ್ 2' ಬಾಲನಟ ಇಷ್ಟು ಚಿಕ್ಕ ವಯಸ್ಸಿನಲ್ಲೇ ಕಂಪನಿ ನಡೆಸುತ್ತಿದ್ದಾನೆ ಎಂದು ತಿಳಿದು ಎಲ್ಲರೂ ದಂಗಾಗಿದ್ದಾರೆ. "ಟೈಗರ್ ಮುತ್ತುವೇಲ್ ಪಾಂಡಿಯನ್ ಮೊಮ್ಮಗ ಸಾಮಾನ್ಯದವನಲ್ಲಪ್ಪಾ.." ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. "13 ವರ್ಷದ ಮಕ್ಕಳು ಮೊಬೈಲ್ನಲ್ಲಿ ಗೇಮ್ಸ್ ಆಡುತ್ತಿದ್ದರೆ, ರಿತ್ವಿಕ್ ಪೈಥಾನ್ ಕೋಡಿಂಗ್ ಕಲಿತಿದ್ದಾನೆ" ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ನಟನೆಯ ಜೊತೆಗೆ ತಂತ್ರಜ್ಞಾನದಲ್ಲೂ ಆಸಕ್ತಿ ಹೊಂದಿರುವ ರಿತ್ವಿಕ್ಗೆ ಎಲ್ಲರಿಂದ ಮೆಚ್ಚುಗೆ ಸಿಕ್ತಿದೆ.
ಯೂಟ್ಯೂಬ್ ಚಾನೆಲ್ ಹೊಂದಿರುವ ರಿತ್ವಿಕ್
ರಿತ್ವಿಕ್ ಆರಂಭದಲ್ಲಿ 'ರಿತು ರಾಕ್ಸ್' ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಫೇಮಸ್ ಆಗಿದ್ದ. ಆತನ ಚಾನೆಲ್ಗೆ ಸುಮಾರು 30 ಲಕ್ಷಕ್ಕೂ ಹೆಚ್ಚು ಸಬ್ಸ್ಕ್ರೈಬರ್ಸ್ ಇದ್ದಾರೆ. ಈ ಹಿಂದೆ ನಯನತಾರಾ ನಟಿಸಿದ್ದ ‘O2’, ಕಾರ್ತಿ ಅಭಿನಯದ 'ಸರ್ದಾರ್', ರಜನಿಕಾಂತ್ ಅವರ 'ಜೈಲರ್' ಚಿತ್ರಗಳಲ್ಲಿ ನಟಿಸಿ ರಿತ್ವಿಕ್ ತನ್ನ ಪ್ರತಿಭೆಯನ್ನು ಮೆರೆದಿದ್ದಾನೆ. ದುಲ್ಕರ್ ಸಲ್ಮಾನ್ ಅಭಿನಯದ 'ಲಕ್ಕಿ ಭಾಸ್ಕರ್' ಚಿತ್ರದ ಮೂಲಕ ಟಾಲಿವುಡ್ಗೂ ಪಾದಾರ್ಪಣೆ ಮಾಡಿದ್ದಾನೆ.
ಈಗ ‘ಜೈಲರ್ 2’ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆದಿದ್ದಾನೆ. ರಜನಿಕಾಂತ್, ರಮ್ಯಾ ಕೃಷ್ಣ, ಮೋಹನ್ಲಾಲ್, ಶಿವರಾಜ್ಕುಮಾರ್, ಜಾಕಿ ಶ್ರಾಫ್, ವಿಜಯ್ ಸೇತುಪತಿ, ಮಿಥುನ್ ಚಕ್ರವರ್ತಿ, ಯೋಗಿಬಾಬು ಅವರಂತಹ ಖ್ಯಾತ ಕಲಾವಿದರ ನಡುವೆಯೂ ʻಜೈಲರ್ 2ʼ ಚಿತ್ರದಲ್ಲಿ ರಿತ್ವಿಕ್ ತನ್ನದೇ ಆದ ಗುರುತು ಮೂಡಿಸಿದ್ದಾನೆ.