BBK 13: ‘ಇಷ್ಟು ದೊಡ್ಡ ತಪ್ಪು ಮಾಡಿದ್ದೀಯಾ, ನಾಚಿಕೆ ಆಗ್ತಿಲ್ವಾ?’: ಮಂಜನ ಬಳಿಕ ಕಿರಣ್ ಶಾಸ್ತ್ರಿ ವಿರುದ್ಧ ಸಿಡಿದೆದ್ದ ಸೌಂದರ್ಯಾ ಶೆಟ್ಟಿ!
Bigg Boss Kannada 13: ಕಿರಣ್ ಶಾಸ್ತ್ರಿ ವಿರುದ್ಧ ನಟಿ ಸೌಂದರ್ಯಾ ಶೆಟ್ಟಿ ಅಕ್ಷರಶಃ ಕೆಂಡಕಾರಿದ್ದಾರೆ. ಮನಸ್ಸಿಗೆ ನೋವುಂಟು ಮಾಡಿದ ಶಾಸ್ತ್ರಿಯನ್ನು ಮನೆಯಲ್ಲಿ ಇರಲು ಬಿಡುವುದಿಲ್ಲ ಎಂದು ಸೌಂದರ್ಯಾ ಎಚ್ಚರಿಸಿದ್ದಾರೆ. ಲಿಖಿತ್ ಹಾಗೂ ವೈಷ್ಣವಿ ಕೂಡ ಕಿರಣ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ಈ ಹೈಡ್ರಾಮಾದ ಅಸಲಿ ರಹಸ್ಯವು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
-
ಜಿದ್ದಾಜಿದ್ದಿನ ಕಣವಾಗಿ ಮಾರ್ಪಡುತ್ತಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ಇದೀಗ ಮತ್ತೊಂದು ಹೊಸ ಬಿರುಗಾಳಿ ಎದ್ದಿದೆ. ಕಳೆದ ಕೆಲ ದಿನಗಳಿಂದ ಸಹ ಸ್ಪರ್ಧಿಗಳ ಹಾಗೂ ವೀಕ್ಷಕರ ಮೆಚ್ಚುಗೆ ಗಳಿಸಿ, ‘ಸಾಕಷ್ಟು ಬದಲಾಗಿದ್ದಾರೆ’ ಎಂಬ ಸಕಾರಾತ್ಮಕ ಇಮೇಜ್ ಪಡೆಯುತ್ತಿದ್ದ ಕಿರಣ್ ಶಾಸ್ತ್ರಿ, ಇದೀಗ ಮನೆಮಂದಿಯೇ ಕೋಪಕ್ಕೆ ಗುರಿಯಾಗಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಮಹಾಕವಿ ಮಂಜನ ಜೊತೆ ನಿರಂತರವಾಗಿ ವಾಕ್ಸಮರ ನಡೆಸುತ್ತಿದ್ದ ನಟಿ ಸೌಂದರ್ಯಾ ಶೆಟ್ಟಿ ಅವರ ಆಕ್ರೋಶದ ಬಾಣ ಈಗ ಕಿರಣ್ ಶಾಸ್ತ್ರಿ ಅವರತ್ತ ತಿರುಗಿರುವುದು ಪ್ರೇಕ್ಷಕರಲ್ಲಿ ಭಾರೀ ಅಚ್ಚರಿ ಮೂಡಿಸಿದೆ.
ಪ್ರೋಮೋದಲ್ಲಿ ಸೌಂದರ್ಯಾ ಶೆಟ್ಟಿ ಅವರ ಕೋಪದ ಕಟ್ಟೆಯೊಡೆದಿದ್ದು, ಕಿರಣ್ ಶಾಸ್ತ್ರಿ ಅವರಿಗೆ ಮುಖಕ್ಕೆ ಹೊಡೆದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ. “ನೀನು ಈ ಮನೆಯಲ್ಲಿ ಇರೋ ತನಕ ನಾನು ನಿನ್ನನ್ನು ಬಿಡಲ್ಲ. ನಿನಗೆ ನಾಚಿಕೆ ಆಗ್ತಿಲ್ವಾ? ಇಷ್ಟು ದೊಡ್ಡ ತಪ್ಪು ಮಾಡಿದ್ದೀಯ ನೀನು.. ಎಲ್ಲೋ ಒಂದ್ಕಡೆ ನನ್ನ ಮನಸ್ಸಿಗೆ ತುಂಬಾ ನೋಯಿಸಿದ್ದಾನೆ. ನಾನು ಸುಮ್ಮನೆ ಬಿಡಲ್ಲ, ತುಂಬಾ ಕೆಟ್ಟ ಕೆಲಸ ಮಾಡಿದ” ಎಂದು ಅಸಮಾಧಾನ ಮತ್ತು ಆಕ್ರೋಶ ಹೊರಹಾಕಿದ್ದಾರೆ.
ಸೌಂದರ್ಯಾ ಜೊತೆಗೆ ಇತರ ಸದಸ್ಯರೂ ಶಾಸ್ತ್ರಿ ವಿರುದ್ಧ ಮುಗಿಬಿದ್ದಿದ್ದು, ಲಿಖಿತ್ ಗೋಂದಿ “ಅವನು ಕಳ್ಳ ಅಂತ ನಾನು ನಿನಗೆ ಯಾವತ್ತೋ ಹೇಳಿದ್ದೆ” ಎಂದು ಗುಡುಗಿದರೆ, ವೈಷ್ಣವಿ “ಧಮ್ ಇದ್ರೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಶಾಸ್ತ್ರಿ.. ಥೂ” ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಏನಿದು ಹೈಡ್ರಾಮಾ?
ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿ, ಸಂಯಮದಿಂದ ಆಟವಾಡುತ್ತಿದ್ದ ಕಿರಣ್ ಶಾಸ್ತ್ರಿ ಅವರ ವಿರುದ್ಧ ಎಲ್ಲರೂ ಏಕಾಏಕಿ ಹೀಗೆ ಕೆಂಡಾಮಂಡಲವಾಗಲು ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಶಾಸ್ತ್ರಿ ಮನೆಯಲ್ಲಿ ಅಂಥದ್ದೇನು ದೊಡ್ಡ ತಪ್ಪು ಮಾಡಿದರು ಅಥವಾ ಸೌಂದರ್ಯಾ ಅವರ ನಂಬಿಕೆಗೆ ದ್ರೋಹ ಬಗೆಯುವಂತಹ ಘಟನೆಯೇನಾದರೂ ನಡೀತಾ ಎಂಬ ತೀವ್ರ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ. ಈ ಹೈಡ್ರಾಮಾದ ಅಸಲಿ ಸತ್ಯವೇನು ಎಂಬುದು ಇಂದಿನ ಎಪಿಸೋಡ್‌ನಲ್ಲಿಯೇ ಬಯಲಾಗಬೇಕಿದೆ.