ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಕ್ಷಿಣ ಭಾರತದಲ್ಲಿ ‘ಬಿಗ್ ಬಾಸ್‌’ ಸುನಾಮಿ; ಕೇವಲ 5 ವಾರಗಳಲ್ಲಿ 550 ಮಿಲಿಯನ್ ವಾಚ್‌ ಅವರ್ಸ್‌ ದಾಖಲೆ!

Bigg Boss: ‘ಬಿಗ್ ಬಾಸ್’ ರಿಯಾಲಿಟಿ ಶೋ ದಕ್ಷಿಣ ಭಾರತದ ಕಿರುತೆರೆ ಮತ್ತು ಒಟಿಟಿಯಲ್ಲಿ ಸಾರ್ವಕಾಲಿಕ ಇತಿಹಾಸ ಸೃಷ್ಟಿಸಿದ್ದು, ಕೇವಲ ಐದೇ ವಾರಗಳಲ್ಲಿ ಬರೋಬ್ಬರಿ 550 ಮಿಲಿಯನ್ ವಾಚ್ ಅವರ್ಸ್ ಪಡೆದುಕೊಂಡಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ನಾಲ್ಕೂ ಆವೃತ್ತಿಗಳು ಏಕಕಾಲಕ್ಕೆ ಆರಂಭವಾಗಿ ಈ ದಾಖಲೆ ಮಾಡಿವೆ.

ದಕ್ಷಿಣ ಭಾರತದಲ್ಲಿ ಧೂಳೆಬ್ಬಿಸಿದ ʻಬಿಗ್ ಬಾಸ್ʼ; ಸೃಷ್ಟಿಯಾಯ್ತು ಹೊಸ ದಾಖಲೆ

-

Avinash GR
Avinash GR Oct 16, 2026 3:02 PM

ಜಿಯೋಸ್ಟಾರ್ ಸಂಸ್ಥೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ದಕ್ಷಿಣ ಭಾರತದ ಕಿರುತೆರೆ ಹಾಗೂ ಡಿಜಿಟಲ್ ಲೋಕದಲ್ಲಿ ಸಾರ್ವಕಾಲಿಕ ಇತಿಹಾಸ ಸೃಷ್ಟಿಸಿದೆ. ಪ್ರಸಾರ ಆರಂಭವಾದ ಕೇವಲ ಐದೇ ವಾರಗಳಲ್ಲಿ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳ ನಾಲ್ಕೂ ಆವೃತ್ತಿಗಳು ಒಟ್ಟಾಗಿ ಬರೋಬ್ಬರಿ 550 ಮಿಲಿಯನ್ ವಾಚ್ ಅವರ್ಸ್‌ ಗಡಿ ದಾಟಿ ಮುನ್ನುಗ್ಗುತ್ತಿವೆ. ಈ ಮೂಲಕ ಬಿಗ್ ಬಾಸ್ ದಕ್ಷಿಣ ಭಾರತದ ಫ್ರಾಂಚೈಸ್ ಇತಿಹಾಸದಲ್ಲೇ ಅತಿ ದೊಡ್ಡ ಲಾಂಚ್ ದಾಖಲಿಸಿದಂತಾಗಿದೆ.

ಮನರಂಜನೆಯ ಮಹಾಹಬ್ಬ

ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ನಾಲ್ಕೂ ಭಾಷೆಗಳ ಬಿಗ್ ಬಾಸ್ ಆವೃತ್ತಿಗಳು ಒಂದೇ ದಿನ ಏಕಕಾಲಕ್ಕೆ ಅದ್ಧೂರಿಯಾಗಿ ಪ್ರೀಮಿಯರ್ ಆಗಿದ್ದವು. ಆಯಾ ಭಾಷೆಗಳ ಸ್ಥಳೀಯ ಸೊಗಡು ಹಾಗೂ ವಿಶಿಷ್ಟತೆಯನ್ನು ಉಳಿಸಿಕೊಂಡೇ ಇಡೀ ದಕ್ಷಿಣ ಭಾರತದಾದ್ಯಂತ ಏಕಕಾಲಕ್ಕೆ ಮನರಂಜನೆಯ ಮಹಾಹಬ್ಬವನ್ನು ಸೃಷ್ಟಿಸಲಾಗಿತ್ತು. ಪರಿಣಾಮವಾಗಿ, ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದರೆ ಒಟ್ಟಾರೆ ವೀಕ್ಷಣಾ ಅವಧಿಯಲ್ಲಿ ಬರೋಬ್ಬರಿ 20 ಪ್ರತಿಶತದಷ್ಟು ಭಾರೀ ಏರಿಕೆ ದಾಖಲಾಗಿದೆ.

ಆಲ್‌ವೇಸ್‌ ಆನ್ ಎಂಟರ್‌ಟೇನ್‌ಮೆಂಟ್

ಟೆಲಿವಿಷನ್ ಎಪಿಸೋಡ್‌ಗಳ ಜೊತೆಗೆ ಡಿಜಿಟಲ್ ಮಾಧ್ಯಮದಲ್ಲೂ ಈ ಬಾರಿ ವೀಕ್ಷಕರ ಸಂಖ್ಯೆ ಕಲ್ಪನೆಗೂ ಮೀರಿ ಹೆಚ್ಚಾಗಿದೆ. ಮುಖ್ಯವಾಗಿ 24x7 ಲೈವ್ ಫೀಡ್‌ಗೆ ಪ್ರೇಕ್ಷಕರಿಂದ ಅದ್ಭುತ ಸ್ಪಂದನೆ ಸಿಕ್ಕಿದ್ದು, ದಿನನಿತ್ಯದ ಎಪಿಸೋಡ್‌ಗಳನ್ನು ನೋಡುವ ಪ್ರತಿ 10 ವೀಕ್ಷಕರಲ್ಲಿ 6 ಮಂದಿ ಲೈವ್ ಫೀಡ್‌ನಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬಿಗ್ ಬಾಸ್ ಕೇವಲ ರಾತ್ರಿಯ ಒಂದು ಗಂಟೆಯ ಟಿವಿ ಕಾರ್ಯಕ್ರಮವಾಗಿ ಉಳಿಯದೆ, ವೀಕ್ಷಕರು ದಿನವಿಡೀ ಮನೆಯ ಸದಸ್ಯರ ಮಾತುಕತೆ, ಜಗಳ, ಸಂಬಂಧಗಳನ್ನು ವೀಕ್ಷಿಸುವ ‘ಆಲ್‌ವೇಸ್‌ ಆನ್ ಎಂಟರ್‌ಟೇನ್‌ಮೆಂಟ್’ ಆಗಿ ಜನಮಾನಸದಲ್ಲಿ ನೆಲೆಯೂರಿದೆ.

ಈ ಅಭೂತಪೂರ್ವ ಯಶಸ್ಸಿನ ಕುರಿತು ಮಾತನಾಡಿರುವ ಜಿಯೋಸ್ಟಾರ್‌ನ ಸೌತ್ ಕ್ಲಸ್ಟರ್ ಎಂಟರ್‌ಟೇನ್‌ಮೆಂಟ್ ಬಿಸಿನೆಸ್ ಮುಖ್ಯಸ್ಥ ಕೃಷ್ಣನ್ ಕುಟ್ಟಿ, "ಪ್ರತಿ ಸೀಸನ್‌ನಲ್ಲೂ ಬಿಗ್ ಬಾಸ್‌ನ ವ್ಯಾಪ್ತಿ ಮತ್ತು ಪ್ರಭಾವ ವಿಸ್ತಾರವಾಗುತ್ತಿದೆ. ಕೇವಲ ಐದು ವಾರಗಳಲ್ಲಿ ಇಷ್ಟೊಂದು ವಾಚ್ ಅವರ್ಸ್ ತಲುಪಿರುವುದು ದೊಡ್ಡ ಮೈಲಿಗಲ್ಲು. ಆದರೆ ಈ ಸಂಖ್ಯೆಗಿಂತಲೂ ಮುಖ್ಯವಾಗಿ ಪ್ರೇಕ್ಷಕರು ಶೋ ಜೊತೆಗೆ ಬೆಸೆದುಕೊಂಡಿರುವ ಬಾಂಧವ್ಯ ನಮಗೆ ಹೆಚ್ಚು ಸಂತಸ ತಂದಿದೆ. ಕನೆಕ್ಟೆಡ್ ಟಿವಿ ಬಳಕೆಯಲ್ಲಿ ಆಗುತ್ತಿರುವ ಕ್ರಾಂತಿಕಾರಿ ಬೆಳವಣಿಗೆಯು ಪ್ರೇಕ್ಷಕರ ವೀಕ್ಷಣಾ ಶೈಲಿ ಹೇಗೆ ಬದಲಾಗುತ್ತಿದೆ ಎಂಬುದನ್ನು ಬಿಂಬಿಸುತ್ತಿದೆ. ಇದು ನಮ್ಮ ಫ್ರಾಂಚೈಸ್‌ನ ಭವಿಷ್ಯದ ಬಲದ ಮೇಲಿನ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿದೆ" ಎಂದು ತಿಳಿಸಿದ್ದಾರೆ.

Bigg Boss Kannada 12: ಬಿಗ್‌ ಬಾಸ್‌ ಶೋಗೆ ಬಿಗ್‌ ಸಂಕಷ್ಟ, ಪ್ರತಿಭಟನೆ, ಪೊಲೀಸ್‌ ಅನುಮತಿಯೂ ಇಲ್ಲ

75ಕ್ಕೂ ಹೆಚ್ಚು ಪ್ರಮುಖ ಬ್ರ್ಯಾಂಡ್‌ಗಳು ಕೈಜೋಡಿಸಿವೆ

ಪ್ರೇಕ್ಷಕರ ಮೆಚ್ಚುಗೆಯಷ್ಟೇ ಅಲ್ಲದೆ, ಜಾಹೀರಾತು ಜಗತ್ತಿನಲ್ಲೂ ಈ ಬಾರಿಯ ಬಿಗ್ ಬಾಸ್ ಬಲವಾದ ಹೆಜ್ಜೆಗುರುತು ಮೂಡಿಸಿದೆ. ನಾಲ್ಕೂ ಭಾಷೆಗಳ ಆವೃತ್ತಿಗಳಿಗೆ ಬರೋಬ್ಬರಿ 75ಕ್ಕೂ ಹೆಚ್ಚು ಪ್ರಮುಖ ಬ್ರ್ಯಾಂಡ್‌ಗಳು ಕೈಜೋಡಿಸಿದ್ದು, 120ಕ್ಕೂ ಅಧಿಕ ಸ್ಪಾನ್ಸರ್‌ಶಿಪ್ ಒಪ್ಪಂದಗಳು ನಡೆದಿವೆ. ವಿಶೇಷವೆಂದರೆ, ಜಾಹೀರಾತು ನೀಡಿದ ಸಂಸ್ಥೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಬ್ರ್ಯಾಂಡ್‌ಗಳು ಮೊದಲ ಬಾರಿಗೆ ಬಿಗ್ ಬಾಸ್ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿವೆ. ಒಟ್ಟು ಜಾಹೀರಾತು ವೆಚ್ಚದಲ್ಲಿ ಪ್ರಾದೇಶಿಕ ಮಾರುಕಟ್ಟೆಗಳ ಪಾಲು ಶೇಕಡಾ 30ರಷ್ಟಿದ್ದು, ರಾಷ್ಟ್ರೀಯ ಹಾಗೂ ಸ್ಥಳೀಯ ಬ್ರ್ಯಾಂಡ್‌ಗಳೆರಡನ್ನೂ ಸಮಾನವಾಗಿ ಸೆಳೆಯುವ ಶಕ್ತಿ ಬಿಗ್ ಬಾಸ್‌ಗೆ ಇದೆ ಎಂಬುದು ಸಾಬೀತಾಗಿದೆ.

ಮಾರುತಿ ಸುಜುಕಿ, ವೈಟ್‌ಗೋಲ್ಡ್, ಏಷ್ಯನ್ ಪೇಂಟ್ಸ್, ಬ್ರಿಟಾನಿಯಾ, ಸ್ಟಾರ್ ಹೆಲ್ತ್ ಇನ್ಶೂರೆನ್ಸ್, ಕಜಾರಿಯಾ ಸೆರಾಮಿಕ್ಸ್, ಹೈಯರ್, ಕ್ಯಾಡ್ಬರಿ, ಅಮೆಜಾನ್, ಸನ್‌ಪ್ಯೂರ್, ಟಿಟಿಕೆ ಪ್ರೆಸ್ಟೀಜ್ ಸೇರಿದಂತೆ ದೇಶ-ವಿದೇಶಗಳ ದೈತ್ಯ ಕಂಪನಿಗಳು ಈ ಬಾರಿ ಬಿಗ್ ಬಾಸ್ ಪ್ರಾಯೋಜಕತ್ವ ವಹಿಸಿಕೊಂಡಿವೆ. ಮುಖ್ಯ ಶೋ ಆರಂಭಕ್ಕೂ ಮುನ್ನವೇ ಡಿಜಿಟಲ್‌ನಲ್ಲಿ ನಡೆದ 'ಅಗ್ನಿಪರೀಕ್ಷೆ' (ತಮಿಳಿನಲ್ಲಿ 'ದಿ ಕಾಮನ್ ಮ್ಯಾನ್') ಪ್ರಿ-ಶೋ ಜನಸಾಮಾನ್ಯರಿಗೆ ಬಿಗ್ ಬಾಸ್ ಮನೆ ಪ್ರವೇಶಿಸಲು ವೇದಿಕೆ ಕಲ್ಪಿಸುವ ಮೂಲಕ ಆರಂಭದಲ್ಲೇ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಲು ನೆರವಾಗಿತ್ತು.

ಸದ್ಯ ಬಿಗ್ ಬಾಸ್ ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ತೆಲುಗಿನಲ್ಲಿ ಕಿಂಗ್ ನಾಗಾರ್ಜುನ್, ತಮಿಳಿನಲ್ಲಿ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಹಾಗೂ ಮಲಯಾಳಂನಲ್ಲಿ ಕಂಪ್ಲೀಟ್ ಆಕ್ಟರ್ ಮೋಹನ್‌ಲಾಲ್ ಅವರಂತಹ ದಿಗ್ಗಜ ನಟರ ಸಾರಥ್ಯದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಕಲರ್ಸ್ ಕನ್ನಡ, ಸ್ಟಾರ್ ಮಾ, ಸ್ಟಾರ್ ವಿಜಯ್ ಮತ್ತು ಏಷ್ಯಾನೆಟ್ ವಾಹಿನಿಗಳಲ್ಲಿ ದಿನನಿತ್ಯದ ಎಪಿಸೋಡ್‌ಗಳು ಪ್ರಸಾರವಾಗುತ್ತಿದ್ದು, ಜಿಯೋಹಾಟ್‌ಸ್ಟಾರ್‌ನಲ್ಲಿ ದಿನದ 24 ಗಂಟೆಯೂ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ.