ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dhyan Yogeshwar: 'ಕರ್ಣಾಟ ಬಲಂ ಅಜೇಯಂ' ಸಿನಿಮಾದಲ್ಲಿದೆ ಚಾಲುಕ್ಯರ ಕಥೆ; ಬಾದಾಮಿಯಲ್ಲಿ ಭರ್ಜರಿಯಾಗಿ ನಡೆದ ಶೂಟಿಂಗ್‌

ಶಾಸಕ ಹಾಗೂ ನಟ ಸಿ. ಪಿ. ಯೋಗೇಶ್ವರ್ ಪುತ್ರ ಧ್ಯಾನ್ ನಾಯಕರಾಗಿ ನಟಿಸುತ್ತಿರುವ 'ಕರ್ಣಾಟ ಬಲಂ ಅಜೇಯಂ' ಚಿತ್ರದ ಮೊದಲ ಹಂತದ ಶೂಟಿಂಗ್ ಬಾದಾಮಿಯಲ್ಲಿ ನಡೆಯುತ್ತಿದೆ. ನಿರ್ದೇಶಕ ನಾಗಣ್ಣ ಸಾರಥ್ಯದ ಈ ಚಿತ್ರವು 6ನೇ ಶತಮಾನದ ಚಾಲುಕ್ಯರ ಇತಿಹಾಸ ಹಾಗೂ ಇಂದಿನ ರೈತರ ಮಹಾದಾಯಿ ಹೋರಾಟದ ಕಥೆಯನ್ನು ಒಳಗೊಂಡಿದೆಯಂತೆ.

ಬಾದಾಮಿಯಲ್ಲಿ ಯೋಗೇಶ್ವರ್ ಮಗನ ‘ಕರ್ಣಾಟ ಬಲಂ ಅಜೇಯಂ’ ಚಿತ್ರಕ್ಕೆ ಶೂಟಿಂಗ್‌

-

Avinash GR
Avinash GR Aug 3, 2026 8:50 PM

ಶಾಸಕ, ಹಿರಿಯ ನಟ ಸಿ. ಪಿ. ಯೋಗೇಶ್ವರ್ ಅವರ ಪುತ್ರ ಧ್ಯಾನ್ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ‘ಕರ್ಣಾಟ ಬಲಂ ಅಜೇಯಂ’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಭರ್ಜರಿಯಾಗಿ ನಡೆದಿದೆ.

ಐತಿಹಾಸಿಕ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲಿನ ಪ್ರಸಿದ್ದ ತಾಣಗಳಲ್ಲಿ ಸಹಸ್ರಾರು ಕಲಾವಿದರೊಂದಿಗೆ ‘ಬಾದಾಮಿ ಸೀಮೆಯಿದು ಎಂಥ ಸೊಬಗು...’ ಎಂಬ ವೈಭವದ ಹಾಡನ್ನು ಆರು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯದ ಈ ಗೀತೆಗೆ ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದು, ಯಕ್ಷಗಾನ ಹಾಗೂ ನಂದಿಕೋಲು ಕುಣಿತ ಸೇರಿದಂತೆ ನಾಡಿನ ವಿವಿಧ ಜನಪದ ಕಲಾತಂಡಗಳು ಈ ಹಾಡಿನಲ್ಲಿ ಹೆಜ್ಜೆ ಹಾಕಿವೆ. ಈ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಿದೆ.

ಎರಡು ಕಾಲಘಟ್ಟದಲ್ಲಿ ಕಥೆ ಸಾಗುತ್ತದೆ

"ಚನ್ನಪಟ್ಟಣ, ಬಾಗಲಕೋಟ, ಬೆಳಗಾವಿ, ಹುಬ್ಬಳ್ಳಿ ಮುಂತಾದ ಕಡೆ ಚಿತ್ರೀಕರಣ ಮಾಡಲಿದ್ದೇವೆ. ಚಿತ್ರದಲ್ಲಿ ನಾಯಕನ ಹೆಸರು ವಾತಾಪಿ. ಈ ಹಾಡಿನ ಚಿತ್ರೀಕರಣದಲ್ಲಿ ಸುಮಾರು 1000ಕ್ಕೂ ಹೆಚ್ಚು ಜನ ತಂತ್ರಜ್ಞರು, ಕಲಾವಿದರು ಕೆಲಸ ಮಾಡತಾ ಇದ್ದಾರೆ. ನಮ್ಮ ಸೊಗಡಿನ ಕಥೆ ಹೇಳುವ ಪ್ರಯತ್ನ ಮಾಡ್ತಾ ಇದ್ದೇವೆ. ಕಥೆ ಇಂದಿನ ಯುವಪೀಳಿಗೆ ಮತ್ತು 6ನೇ ಶತಮಾನದ ಕಾಲಘಟ್ಟದಲ್ಲಿ ಸಾಗುತ್ತದೆ. ಐತಿಹಾಸಿಕ ಹಾಗೂ ಸಾಮಾಜಿಕ ಕಥೆ ಒಳಗೊಂಡ ಸಿನಿಮಾ ಇದಾಗಿದೆ" ಎಂದು ನಿರ್ದೇಶಕ ನಾಗಣ್ಣ ಹೇಳಿದರು.

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶಾಸಕ ಸಿ. ಪಿ. ಯೋಗೇಶ್ವರ್ ಪುತ್ರ ಧ್ಯಾನ್‌ಗೆ ಸಿಕ್ತು ಸಿಎಂ ಡಿ.ಕೆ. ಶಿವಕುಮಾರ್‌ ಆಶೀರ್ವಾದ

ಒಬ್ಬ ನಟನಾಗಿ ನಿಲ್ಲಬೇಕು ಎಂಬ ಆಸೆ ಇದೆ‌

ನಾಯಕ ಧ್ಯಾನ್ ಯೋಗೀಶ್ವರ್ ಮಾತನಾಡಿ, "ಕಳೆದ 20 ದಿನಗಳಿಂದ ಬಾದಾಮಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿನ ಜನ ನೀಡುತ್ತಿರುವ ಪ್ರೀತಿಗೆ ತುಂಬಾ ಖುಷಿ ಆಗಿದೆ. ಚಿಕ್ಕ ವಯಸ್ಸಿನಿಂದಲೂ ನನಗೆ ನಟನಾಗುವ ಆಸೆ. ಆದರೆ ತಂದೆಗೆ ಇಷ್ಟ ಇರಲಿಲ್ಲ. ನಾನು ಯಾವಾಗ ಎತ್ತರವಾಗಿ ಬೆಳೆದೆನೋ ಆಗ ತಂದೆಗೆ ನನ್ನ ಮೇಲೆ ಭರವಸೆ ಬಂತು. ಒಬ್ಬ ನಟನಾಗಿ ನಿಲ್ಲಬೇಕು ಎಂಬ ಆಸೆ ಇದೆ‌" ಎಂದರು.

ಅಪ್ಪಟ ಕನ್ನಡತನದ, ನಮ್ಮ ಮಣ್ಣಿನ ಸಿನಿಮಾ

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ಸಿ. ಪಿ. ಯೋಗೇಶ್ವರ್, "ನಮ್ಮ ಕರ್ಣಾಟಬಲಂ ಅಜೇಯಂ ಸಿನಿಮಾ ಚಿತ್ರೀಕರಣ ಪ್ರಾರಂಭಿಸಿ ತಿಂಗಳಾಯ್ತು. ನರಗುಂದ, ಬಾದಾಮಿಯ ಸುತ್ತಮುತ್ತ ನಿರಂತರ ಚಿತ್ರೀಕರಣ ಮಾಡುತ್ತಿದ್ದೇವೆ, ಇನ್ನೆರಡು ದಿನ ಚಿತ್ರೀಕರಣ ಮಾಡಿದರೆ ಬಾದಾಮಿ ಭಾಗದ ಚಿತ್ರೀಕರಣ ಮುಗಿಯುತ್ತದೆ. ಆನಂತರ ಹೊಸಪೇಟೆ, ಬೆಂಗಳೂರಿನಲ್ಲಿ ಒಂದೆರಡು ದಿನ ಚಿತ್ರೀಕರಣ ಮಾಡಿದರೆ ಮೊದಲ ಹಂತದ ಚಿತ್ರೀಕರಣ ಮುಗಿಯುತ್ತದೆ. ನಂತರ 2ನೇ ಹಂತದಲ್ಲಿ ಹಳೆ ಮೈಸೂರು ಭಾಗದಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಬಾದಾಮಿಯಿಂದ ಶುರುವಾಗುವ ಕಥೆ ಇಡೀ ಕರ್ನಾಟಕಕ್ಕೆ ಸಾಗುತ್ತದೆ. ಇದೊಂದು ಅಪ್ಪಟ ಕನ್ನಡತನದ, ನಮ್ಮ ಮಣ್ಣಿನ ಸಿನಿಮಾ.‌ ಈ ಮೂಲಕ ಇಂದಿನ ಯುವಕರಿಗೆ ಇತಿಹಾಸ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂದಿನ ರೈತರ ಸಮಸ್ಯೆಗಳ ಜೊತೆಗೆ ಚಾಲುಕ್ಯರ ಕಾಲದ ಕಥೆಯನ್ನು ಇದರಲ್ಲಿ ಹೇಳಲಿದ್ದೇವೆ" ಎಂದು ಹೇಳಿದರು.

ಸ್ಯಾಂಡಲ್‌ವುಡ್‌ಗೆ ಚನ್ನಪಟ್ಟಣ ಶಾಸಕ ಸಿ. ಪಿ. ಯೋಗೇಶ್ವರ್ ಪುತ್ರ ಧ್ಯಾನ್‌ ಎಂಟ್ರಿ; ಒಟ್ಟೊಟ್ಟಿಗೆ ಅದ್ದೂರಿಯಾಗಿ ಲಾಂಚ್ ಆಗಲಿವೆ 2 ಸಿನಿಮಾಗಳು!

ಮಹಾದಾಯಿ ಹೊರಾಟದ ಕಥೆ ಇದೆ

"ಹಿರಿಯರ ತಂಡ ಇದರಲ್ಲಿ ಕೆಲಸ ಮಾಡುತ್ತಿದೆ. ಪುತ್ರ ಧ್ಯಾನ್ ಸಂಪೂರ್ಣ ತಯಾರಿ ಮಾಡಿಕೊಂಡು ಅಭಿನಯಕ್ಕಿಳಿದಿದ್ದಾನೆ. ನಾವು ಈ ಚಿತ್ರವನ್ನು ಕನ್ನಡ ಭಾಷೆಯಲ್ಲಿ ಮಾತ್ರ ಮಾಡುತ್ತಿದ್ದೇವೆ. ಮಹಾದಾಯಿ ಹೊರಾಟದ ಕಥೆ ಕೂಡ ಇದರಲ್ಲಿದ್ದು, ಇಡೀ ಕರ್ನಾಟಕದ ರೈತರ ಸಮಸ್ಯೆ ಇಟ್ಟುಕೊಂಡು ಈ ಕಥೆ ಮಾಡಿದ್ದೇನೆ. ಪುಲಕೇಶಿಯ ನಾಡಿನ ಜನ ಇಂದು ಏಕೆ ಗುಳೆ ಹೋಗುತ್ತಿದ್ದಾರೆ ಎಂಬ ಅಂಶದ ಮೇಲೆ ಕಥೆ ಸಾಗಲಿದ್ದು, ಸಂಪೂರ್ಣ ಕರ್ನಾಟಕ ನೀರಾವರಿ ಆಗಬೇಕು ಎಂಬುದು ನಮ್ಮ ಆಶಯ. ʻಕರ್ಣಾಟ ಬಲಂʼ ಎಂಬುದು ಚಾಲುಕ್ಯರ ಪುಲಕೇಶಿ ಸೈನ್ಯದ ಹೆಸರು. ಅದನ್ನೇ ನಾವು ಚಿತ್ರದ ಶೀರ್ಷಿಕೆಯಾಗಿ ಇಟ್ಟುಕೊಂಡಿದ್ದೇವೆ" ಎಂದು ಸಿ ಪಿ ಯೋಗೇಶ್ವರ್‌ ತಿಳಿಸಿದರು.

ಚಾಲುಕ್ಯ ಸಾಮ್ರಾಜ್ಯದ ಹಿರಿಮೆ ಎತ್ತಿ ಹಿಡಿಯುವ ಹಾಡು

"ಬೇರೆ ಬೇರೆ ಭಾಷೆಗಳಲ್ಲಿ ಬರುತ್ತಿರುವ ಐತಿಹಾಸಿಕ ಸಿನಿಮಾಗಳು ಕಾಲ್ಪನಿಕ ಕಥೆಯನ್ನು ಒಳಗೊಂಡಿರುತ್ತವೆ. ನಮ್ಮದು ನೈಜ ಘಟನೆ ಹಾಗೂ ಇಂದಿನ ಸಮಸ್ಯೆಯ ಬಗ್ಗೆ ಇರುವ ಕಥೆ. ನಾನು 25 ವರ್ಷದ ನಂತರ ಅಭಿನಯ ಮಾಡುತ್ತಿದ್ದು, ರೈತ ಹೋರಾಟಗಾರನ ಪಾತ್ರ ನಿರ್ವಹಿಸಿದ್ದೇನೆ. ಮಗನ ಅಭಿನಯದ ಬಗ್ಗೆ ಮೆಚ್ಚುಗೆ ಆಗುತ್ತಿದೆ. ಈಗ ಚಿತ್ರೀಕರಣ ಮಾಡುತ್ತಿರುವ ಒಂದು ಗೀತೆಯನ್ನು ಆರು ದಿನ ಚಿತ್ರೀಕರಣ ಮಾಡುತ್ತಿದ್ದೇವೆ. ಈ ಹಾಡಿಗಾಗಿ ಬಾದಾಮಿ, ಐಹೊಳೆ, ಪಟ್ಟದಕಲ್ಲು ಮುಂತಾದ ಕಡೆ ಚಿತ್ರೀಕರಣ ಮಾಡಿದ್ದು, ಇದು ಕನ್ನಡಕ್ಕೆ ಒಂದು ಹೆಮ್ಮೆಯ ಗೀತೆಯಾಗಲಿದೆ ಎಂಬ ವಿಶ್ವಾಸವಿದೆ. ಬಾದಾಮಿ ಮತ್ತು ಚಾಲುಕ್ಯ ಸಾಮ್ರಾಜ್ಯದ ಹಿರಿಮೆ ಎತ್ತಿ ಹಿಡಿಯುವ ಹಾಡು ಇದು" ಎಂದರು ಸಿ ಪಿ ಯೋಗೇಶ್ವರ್‌.

ಈ ಚಿತ್ರಕ್ಕೆ ನಾಗಣ್ಣ ನಿರ್ದೇಶನ ಹಾಗೂ ಶೇಖರ್ ಚಂದ್ರು ಛಾಯಾಗ್ರಹಣವಿದೆ. ಎಂ.ಎಸ್. ರಮೇಶ್ ಸಂಭಾಷಣೆ ಬರೆದಿದ್ದು, ಕೆ.ಪಿ. ಶ್ರೀಕಾಂತ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ನಾಯಕಿಯಾಗಿ ಮಣಿಕಾ ವಿಶ್ವಕರ್ಮ ನಟಿಸುತ್ತಿದ್ದು, ನಾಯಕನ ತಾಯಿಯಾಗಿ ಲಯ, ಹಾಗೆಯೇ ಸಂಪತ್, ಮಾನಸಿ ಸುಧೀರ್, ಬಲ ರಾಜವಾಡಿ, ಮಜಾ ಟಾಕೀಸ್ ಪವನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈಗಾಗಲೇ ಶೇ. 35ರಷ್ಟು ಚಿತ್ರೀಕರಣ ಪೂರ್ಣಗೊಂಡಿರುವ ಈ ಸಿನಿಮಾ 2026ರ ಸಂಕ್ರಾಂತಿ ಹಬ್ಬದ ವೇಳೆಗೆ ಬಿಡುಗಡೆಯಾಗಲಿದೆ.