Jerax Web Series Review: ಇಲ್ಲಿ ಮನುಷ್ಯರೇ ಡುಪ್ಲಿಕೇಟ್, ಜಾಸ್ತಿನೇ ಇದೆ ಎಂಟರ್‌ಟೇನ್‌ಮೆಂಟ್!
ಡಾಲಿ ಧನಂಜಯ್ ನಿರ್ಮಾಣ ಮಾಡಿರುವ 'ಜೆರಾಕ್ಸ್' ವೆಬ್ ಸರಣಿಯು ಕನ್ನಡದ ಮಟ್ಟಿಗೆ ಒಂದು ವಿಶಿಷ್ಟ ಪ್ರಯೋಗ. ಜೆರಾಕ್ಸ್ ಮಿಷನ್ ಮೂಲಕ ಮನುಷ್ಯನನ್ನೇ ಕಾಪಿ ಮಾಡುವ ಫ್ಯಾಂಟಸಿ ಎಳೆಯನ್ನು ಇಟ್ಟುಕೊಂಡು ನಿರ್ದೇಶಕ ಶ್ರೀನಿಧಿ ಬೆಂಗಳೂರು ಒಂದು ಕಾಮಿಡಿ ಸರಣಿಯನ್ನು ಮಾಡಿದ್ದಾರೆ.
-
ಕನ್ನಡದಲ್ಲಿ ವೆಬ್ ಸರಣಿಯ ಸಂಸ್ಕೃತಿ ಇನ್ನೂ ಅಷ್ಟೊಂದು ಬೆಳೆದಿಲ್ಲ ಎನ್ನುವವರಿಗೆ ಜೀ5 ಮಾತ್ರ ಅದಕ್ಕುತ್ತರವಾಗಿ ಕನ್ನಡದಲ್ಲಿ ಕಂಟೆಂಟ್‌ಗಳನ್ನು ನೀಡುತ್ತಲೇ ಇದೆ. ಅದಕ್ಕೀಗ ಹೊಸ ಸೇರ್ಪಡೆ ಜೆರಾಕ್ಸ್ ವೆಬ್ ಸರಣಿ. ಹೌದು, ಡಾಲಿ ಧನಂಜಯ ನಿರ್ಮಾಣ ಮಾಡಿ, ಶ್ರೀನಿಧಿ ಬೆಂಗಳೂರು ನಿರ್ದೇಶನ ಮಾಡಿರುವ ʻಜೆರಾಕ್ಸ್ʼ ವೆಬ್ ಸರಣಿ. ಹೌದು, ಫ್ಯಾಂಟಸಿ ಅಂಶಗಳ ಜೊತೆಗೆ ಸಸ್ಪೆನ್ಸ್, ಥ್ರಿಲ್ಲರ್ ಗುಣವನ್ನು ಕೂಡ ಹೊಂದಿರುವ ʻಜೆರಾಕ್ಸ್ʼ ಏಪ್ರಿಲ್ 24ರಿಂದ ಸ್ಟ್ರೀಮಿಂಗ್ ಆಗುತ್ತಿದೆ.
ʻಜೆರಾಕ್ಸ್ʼ ವೆಬ್ ಸರಣಿಯ ಕಥೆ ಏನು?
ರಾಯದುರ್ಗ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಒಂದು ಫ್ಯಾಂಟಸಿ ಸ್ಟೋರಿಯೇ ʻಜೆರಾಕ್ಸ್ʼ. ಚಿಕ್ಕ ವಯಸ್ಸಿನಲ್ಲಿ ಅಪ್ಪ-ಅಮ್ಮನನ್ನು ಕಳೆದುಕೊಂಡ ಪ್ರಕಾಶ (ನಾಗಭೂಷಣ) ತನ್ನ ದೊಡ್ಡಪ್ಪನ (ಓಂ ಪ್ರಕಾಶ್ ರಾವ್) ಕಣ್ಗಾವಲಿನಲ್ಲಿ ಬೆಳೆಯುತ್ತಾನೆ. ವಯಸ್ಸಿಗೆ ಬಂದ ಪ್ರಕಾಶ ಬದುಕು ಕಟ್ಟಿಕೊಳ್ಳಲಿ ಎಂದು ದೊಡ್ಡಪ್ಪ ಒಂದು ಜೆರಾಕ್ಸ್ ಮತ್ತು ಸ್ಟೇಷನರಿ ಶಾಪ್ ಹಾಕಿಕೊಡುತ್ತಾನೆ. ಅಂಗಡಿಯಲ್ಲಿ ಜೆರಾಕ್ಸ್ ಮಾಡುತ್ತಲೇ, ಅದೇ ಊರಿನ ಸೂಜಿ (ಪಾಯಲ್) ಮನಸ್ಸಿನಲ್ಲೂ ತನ್ನದೊಂದು ಲವ್ ಕಾಪಿಯನ್ನು ಜೆರಾಕ್ಸ್ ಮಾಡುತ್ತಿರುತ್ತಾನೆ ಪ್ರಕಾಶ. ಹೇಗಾದರೂ ಮಾಡಿ, ಜೀವನದಲ್ಲಿ ಸಖತ್ ಆಗಿ ಸಂಪಾದನೆ ಮಾಡಿ, ಸೂಜಿಯನ್ನು ಮದುವೆಯಾಗಿ ಒಂದು ಸುಂದರ ಸಂಸಾರವನ್ನು ಕಟ್ಟಿಕೊಳ್ಳುವುದೇ ಪ್ರಕಾಶನ ದೊಡ್ಡ ಕನಸು.
ಆದರೆ ಅಂದುಕೊಂಡಂಗೆ ನಡೆಯಬೇಕಲ್ಲ! ಪ್ರಕಾಶನ ಕೊರಳಲ್ಲಿರುವ ತಾಯತವೇ ಆತನ ಬದುಕನ್ನು ತಲೆಕೆಳಗಾಗಿಸುತ್ತದೆ. ಅದಕ್ಕೆ ಸಾಥ್ ನೀಡುವುದು ಆತನದ್ದೇ ಅಂಗಡಿಯಲ್ಲಿ ಪದೇಪದೇ ಕೆಟ್ಟುಹೋಗುವ ಜೆರಾಕ್ಸ್ ಮೀಷಿನ್! ಅದು ಹೇಗೆ ಎಂಬುದನ್ನು ಆರು ಸಂಚಿಕೆಗಳ ಮೂಲಕ ವಿವರವಾಗಿ ಮತ್ತು ರೋಚಕವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಶ್ರೀನಿಧಿ ಬೆಂಗಳೂರು.
ಇದು ಫ್ಯಾಂಟಸಿ ಕಾಮಿಡಿ
ವಿಲಿಯಂ ಷೇಕ್ಸ್‌ಪಿಯರ್ ಅವರ ದಿ ಕಾಮೆಡಿ ಆಫ್ ಎರರ್ಸ್ ಮಾದರಿಯ ತಂತ್ರವನ್ನು ಬಳಸಿಕೊಂಡು, ಇಡೀ ಜೆರಾಕ್ಸ್ ವೆಬ್ ಸರಣಿಯನ್ನು ಹಾಸ್ಯ ಹೊನಲಿನಲ್ಲಿ ತೇಲಿಸಿಕೊಂಡು ಹೋಗಿದ್ದಾರೆ ಶ್ರೀನಿಧಿ. ಎದುರಾಗುವ ಚಿತ್ರವಿಚಿತ್ರ ಸಂದರ್ಭಗಳಿಗೆ ತಕ್ಕಂತೆ ಪಾತ್ರಗಳು ತಬ್ಬಿಬ್ಬುಗೊಳ್ಳುತ್ತವೆ, ಸಂಕಷ್ಟಗಳಲ್ಲಿ ಸಿಲುಕಿಕೊಂಡು ಒದ್ದಾಡುತ್ತವೆ. ಆದರೆ ಆಗೆಲ್ಲಾ ವೀಕ್ಷಕರು ಮಾತ್ರ ಬಿದ್ದು ಬಿದ್ದು ನಗುತ್ತಾರೆ. ಅಷ್ಟೊಂದು ಹ್ಯುಮರಸ್ ಆಗಿ ಜೆರಾಕ್ಸ್ ಅನ್ನು ಕಟ್ಟಿಕೊಟ್ಟಿದ್ದಾರೆ ಶ್ರೀನಿಧಿ. ಈ ಕಥಾ ಮಾದರಿಯೇ ಕನ್ನಡಕ್ಕೆ ತೀರಾ ಹೊಸದು ಎನ್ನಬಹುದು. ಜೆರಾಕ್ಸ್ ಮಿಷಿನ್ ಮೂಲಕ ಪೇಪರ್ ಅನ್ನು ಕಾಪಿ ಮಾಡುವುದು ಸಹಜ, ಆದರೆ ಇಲ್ಲಿ ಮನುಷ್ಯರನ್ನೇ ಕಾಪಿ ಮಾಡಲಾಗುತ್ತದೆ. ಅದು ಹೇಗೆ ಎಂಬುದನ್ನು ಬಹಳ ಕನ್ವಿನ್ಸಿಂಗ್ ಆಗಿಯೇ ತೋರಿಸಿದ್ದಾರೆ ಶ್ರೀನಿಧಿ.
ಒಂದು ಸಿಂಪಲ್ ಆದ ಕಥೆಯ ಎಳೆಯನ್ನು ಇಟ್ಟುಕೊಂಡು, ಅದಕ್ಕೆ ಪೂರಕವಾದ ಮತ್ತು ಬಹಳ ಮಜಾವಾದ ಚಿತ್ರಕಥೆಯನ್ನು ಬರೆದಿರುವ ಶ್ರೀನಿಧಿ, ಎಲ್ಲೂ ಬೋರ್ ಹೊಡೆಸುವುದಿಲ್ಲ. ʻಬ್ಲಿಂಕ್ʼನಂತಹ ಸೀರಿಯಸ್ ಸಿನಿಮಾದಿಂದ ಗುರುತಿಸಿಕೊಂಡಿದ್ದ ಶ್ರೀನಿಧಿ, ಇಲ್ಲಿ ಸಖತ್ ನಗಿಸುತ್ತಾ ಮಜಾವಾಗಿ ಕಥೆ ಹೇಳಿಕೊಂಡು ಹೋಗಿದ್ದಾರೆ.
ಇನ್ನು, ಇದೊಂದು ರಾಯದುರ್ಗ ಎಂಬ ಕಾಲ್ಪನಿಕ ಊರಿನಲ್ಲಿ ಈ ಕಥೆ ನಡೆದರೂ, ಮಂಡ್ಯ, ಮಳವಳ್ಳಿ ಕಡೆಯ ಭಾಷೆಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಆ ಸೊಗಡಿನ ಭಾಷೆಯ ಸಂಭಾಷಣೆ ಖುಷಿ ನೀಡುತ್ತವೆ. ಹಾಗೆಯೇ ವಿನಯ್ ಶಂಕರ್ ಅವರ ಹಿನ್ನೆಲೆ ಸಂಗೀತ ಈ ವೆಬ್ ಸರಣಿಗೊಂದು ಹೊಸ ಚೈತನ್ಯ ತುಂಬಿದೆ ಮತ್ತು ಆದರ್ಶ್ ಅವರ ಛಾಯಾಗ್ರಹಣ ಇದರ ಸೊಗಸನ್ನು ಹೆಚ್ಚಿಸಿದೆ. ಇದು ಫ್ಯಾಂಟಸಿ ಕಥೆಯಾಗಿರುವುದರಿಂದ ಜಾಸ್ತಿ ಲಾಜಿಕ್‌ಗಳನ್ನು ಹುಡುಕುವಂತಿಲ್ಲ.
ನಟ ನಾಗಭೂಷಣ್ ಸಂದರ್ಶನ
ಪ್ರಕಾಶನಾಗಿ ನಾಗಭೂಷಣ್ ಮಿಂಚಿಂಗ್
ಈ ವೆಬ್ ಸರಣಿಯ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ, ಕಲಾವಿದರ ಆಯ್ಕೆ. ಪ್ರತಿಯೊಂದು ಪಾತ್ರಕ್ಕೂ ಬಹಳ ಆಪ್ತ ಎನಿಸುವಂತಹ ಕಲಾವಿದರನ್ನೇ ಸೆಲೆಕ್ಟ್ ಮಾಡಿರುವುದು ಶ್ರೀನಿಧಿ ಬುದ್ಧಿವಂತಿಕೆಗೆ ಮತ್ತೊಂದು ಸಾಕ್ಷಿ. ಪ್ರಕಾಶನಾಗಿ ನಟ ನಾಗಭೂಷಣ್, ಅಕ್ಷರಶಃ ಪಾತ್ರವನ್ನು ಜೀವಿಸಿದ್ದಾರೆ. ದೊಡ್ಡಪ್ಪನ ಹಿಂಸೆ, ಪ್ರೇಯಸಿಯ ದೋಖಾ ಮತ್ತು ಅವಳ ಮೇಲಿನ ಅತಿಯಾದ ಪ್ರೀತಿ, ಸಮಸ್ಯೆಗಳಲ್ಲಿ ಸಿಲುಕಿ ಒದ್ದಾಡುವ ಅವರ ನಟನೆ ಬಹಳ ಇಷ್ಟವಾಗುತ್ತದೆ. ಪಾಯಲ್ ಚೆಂಗಪ್ಪ ಅವರಿಗೂ ನಟನೆಗೆ ಜಾಸ್ತಿ ಸ್ಕೋಪ್ ಇರುವಂತಹ ಪಾತ್ರವೇ ಸಿಕ್ಕಿದೆ.
ಬಹಳ ದಿನಗಳ ನಂತರ ದೊಡ್ಡಪ್ಪನಾಗಿ ಓಂ ಪ್ರಕಾಶ್ ರಾವ್ ಅವರ ಕಾಮಿಡಿ ಝಲಕ್ ನೋಡಬಹುದು. ರೇವಂತ್ ಆಗಿ ಯಶವಂತ್ ಶೆಟ್ಟಿ ಇಷ್ಟವಾಗುತ್ತಾರೆ. ಜಿಂಗ್‌ಚಕ್ ಪಾತ್ರಧಾರಿ ಶ್ರೀವತ್ಸ ಸಿಕ್ಕಾಪಟ್ಟೆ ನಗಿಸುತ್ತಾರೆ. ಮಂಜು ಪಾವಗಡ, ವಿಜಯ್ ಪ್ರಸಾದ್, ಸುಧಾಕರ್ ಗೌಡ, ತುಕಾಲಿ ಸಂತು ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದು, ನೋಡುಗರ ಮನಸ್ಸನ್ನು ಕದಿಯುತ್ತಾರೆ. ಫ್ಯಾಂಟಸಿ ಮತ್ತು ಡಾರ್ಕ್ ಹ್ಯೂಮರಸ್ ಮಾದರಿಯ ವೆಬ್ ಸರಣಿಗಳನ್ನು ಇಷ್ಟಪಡುವವರಿಗೆ ಜೆರಾಕ್ಸ್ ಇಷ್ಟವಾಗುತ್ತದೆ.
Movie: ಜೆರಾಕ್ಸ್
Release Date: ಏ.24, 2026
Language: ಕನ್ನಡ
Genre: ಥ್ರಿಲ್ಲರ್, ಡ್ರಾಮಾ, ಕಾಮಿಡಿ
Director: ಶ್ರೀನಿಧಿ ಬೆಂಗಳೂರು
Cast: ನಾಗಭೂಷಣ್, ಪಾಯಲ್ ಚೆಂಗಪ್ಪ, ಮಂಜು ಪಾವಗಡ, ಓಂ ಪ್ರಕಾಶ್ ರಾವ್, ವಿಜಯ್ ಪ್ರಸಾದ್, ತುಕಾಲಿ ಸಂತು
Rating: 3.5/5