ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತನುಷ್‌ ಶಿವಣ್ಣ ನಟನೆಯ ʻಬಾಸ್‌ʼ ಸಿನಿಮಾ ರಿಲೀಸ್‌ಗೆ ದಾಸನ ಒಪ್ಪಿಗೆ! ಚಿತ್ರತಂಡಕ್ಕೆ ವಿಜಯಲಕ್ಷ್ಮಿ - ದರ್ಶನ್‌ ಹೇಳಿದ್ದೇನು?

ತನುಷ್ ಶಿವಣ್ಣ ನಟಿಸಿ, ನಿರ್ಮಿಸಿರುವ 'ಬಾಸ್‌' ಚಿತ್ರದ ಬಿಡುಗಡೆಗೆ ಎದುರಾಗಿದ್ದ ತಡೆಯಾಜ್ಞೆ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಹೊಸಬರ ಶ್ರಮವನ್ನು ಗೌರವಿಸಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸದೆ ಸಿನಿಮಾ ಬಿಡುಗಡೆಗೆ ಶುಭ ಹಾರೈಸಿದ್ದಾರೆ.

ʻಬಾಸ್ʼ ಸಿನಿಮಾ ರಿಲೀಸ್‌ಗೆ ಗ್ರೀನ್ ಸಿಗ್ನಲ್; ನಟ ದರ್ಶನ್‌ ಹೇಳಿದ್ದೇನು?

-

Avinash GR
Avinash GR Aug 4, 2026 5:44 PM

ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ, ಲವ ವಿ. ನಿರ್ದೇಶನದ 'ಬಾಸ್’ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ ಚಿತ್ರಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಈ ಚಿತ್ರದ ಬಿಡುಗಡೆಗೆ ತಡೆ ಕೋರಿ ʻಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರು ಮೇಲ್ಮನವಿ ಸಲ್ಲಿಸಿದ್ದರು. ಆದರೆ ಕರ್ನಾಟಕ ಹೈಕೋರ್ಟ್ ಅದನ್ನು ವಜಾಗೊಳಿಸಿದ್ದು, ‘ಬಾಸ್’ ಸಿನಿಮಾ ಬಿಡುಗಡೆಗೆ ಅನುಮತಿ ನೀಡಿದೆ.

ಅಲ್ಲದೆ, ದರ್ಶನ್ ಅವರು ʻಬಾಸ್ʼ ಚಿತ್ರವನ್ನು ಬಿಡುಗಡೆ ಮಾಡಿಕೊಳ್ಳಲಿ ಎಂದು ತಮ್ಮ ಪರ ವಕೀಲರ ಮುಂದೆ ಹೇಳಿದ್ದಾರೆ. ಆಗಸ್ಟ್ 7 ರಂದು 'ಬಾಸ್‌' ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಕುರಿತು ನಟ ತನುಷ್‌ ಶಿವಣ್ಣ ಅವರು ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಕಾನೂನು ಹೋರಾಟದಲ್ಲಿ ಗೆದ್ದ ತನುಷ್ ಶಿವಣ್ಣ ನಟನೆಯ ‘ಬಾಸ್’ ಸಿನಿಮಾ; ಬಿಡುಗಡೆಗೆ ಇದ್ದ ತಡೆಯಾಜ್ಞೆ ತೆರವು

ತನುಷ್‌ ಶಿವಣ್ಣ ಹೇಳಿದ್ದೇನು?

"ಹೈಕೋರ್ಟ್‌ನಲ್ಲಿ ನಮ್ಮ ಚಿತ್ರ ಬಿಡುಗಡೆಗೆ ಅವಕಾಶ ಸಿಕ್ಕ ನಂತರ, ನಾನು ವಿಜಯಲಕ್ಷ್ಮಿ ದರ್ಶನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಅವರ ಪರ ವಕೀಲರಾದ ಪ್ರಥಮ್, ವಿಜಯಲಕ್ಷ್ಮಿ ಅವರಿಗೆ ಫೋನ್ ಮೂಲಕ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟರು. ನಾನು ವಿಜಯಲಕ್ಷ್ಮಿ ದರ್ಶನ್ ಅವರ ಜೊತೆ ಮಾತನಾಡಿದೆ. ಅವರು ಮೊದಲು ಕೇಳಿದ ಪ್ರಶ್ನೆ, ʻನಿಮ್ಮ ಸಿನಿಮಾದಲ್ಲಿ ನಮ್ಮ ಕುಟುಂಬದ ಕುರಿತಾದ ಯಾವುದೇ ಸನ್ನಿವೇಶಗಳು ಇಲ್ಲ ತಾನೆ?ʼ ಎಂದು. ನಾನು ʻಇಲ್ಲʼ ಎಂದು ಹೇಳಿದೆ. ʻನಮ್ಮ ವಕೀಲರು ನಿಮ್ಮ ಚಿತ್ರವನ್ನು ನೋಡಿ ನಮಗೆ ತಿಳಿಸುತ್ತಾರೆ. ಯಾವುದಾದರೂ ಕುಟುಂಬಕ್ಕೆ ಸಂಬಂಧಿಸಿದ ಸನ್ನಿವೇಶಗಳಿದ್ದರೆ ನೀವು ಅದನ್ನು ತೆಗೆಯಬೇಕಾಗುತ್ತದೆʼ ಎಂದು ವಿಜಯಲಕ್ಷ್ಮಿ ಅವರು ತಿಳಿಸಿದರು. ನಾನು ʻಆಯ್ತುʼ ಎಂದೆ" ಎಂದು ತನುಷ್‌ ಹೇಳಿದ್ದಾರೆ.

ನಟ ದರ್ಶನ್‌ ಏನಂದ್ರು ನೋಡಿ!

"ವಕೀಲರಾದ ಪ್ರಥಮ್ ಅವರು ಚಿತ್ರ ನೋಡಿ,‌ ವಿಜಯಲಕ್ಷ್ಮೀ ದರ್ಶನ್ ಹಾಗೂ ದರ್ಶನ್ ಅವರಿಗೆ ವಿಷಯ ತಿಳಿಸಿದ್ದಾರೆ. ಮೊದಲಿನಿಂದಲೂ ಹೊಸಬರ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಹಾಗೂ ಒಂದು ಚಿತ್ರ ನಿರ್ಮಾಣದ ಹಿಂದೆ ಎಷ್ಟೆಲ್ಲಾ ಕಷ್ಟಗಳಿವೆ ಎಂದು ಅರಿತಿರುವ ದರ್ಶನ್ ಅವರು ʻಸುಪ್ರೀಂ ಕೋರ್ಟ್‌ಗೆ ಹೋಗುವುದು ಬೇಡ. ಅವರು ಚಿತ್ರ ಬಿಡುಗಡೆ ಮಾಡಿಕೊಳ್ಳಲಿʼ ಎಂದು ತಿಳಿಸಿದ್ದಾರೆ. ವಿಜಯಲಕ್ಷ್ಮಿ ಅವರು ಸಹ ಫೋನ್‌ನಲ್ಲಿ ಮಾತನಾಡಿ, ʻನಿಮ್ಮ ಸಿನಿಮಾವನ್ನು ಬಿಡುಗಡೆ ಮಾಡಿ. ಒಳ್ಳೆಯದಾಗಲಿʼ ಎಂದು ಹಾರೈಸಿದ್ದಾರೆ. ಈ ಸಮಯದಲ್ಲಿ ದರ್ಶನ್ ದಂಪತಿಗೆ ಧನ್ಯವಾದ ತಿಳಿಸುತ್ತೇನೆ. ಇಷ್ಟು ದಿನಗಳ ಅಡೆತಡೆಗಳನ್ನೆಲ್ಲಾ ಮೀರಿ ನಮ್ಮ ಚಿತ್ರ ಇದೇ ಆಗಸ್ಟ್ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ" ಎಂದು ಚಿತ್ರದ ನಾಯಕ ಹಾಗೂ ನಿರ್ಮಾಪಕ ತನುಷ್ ಶಿವಣ್ಣ ತಿಳಿಸಿದರು.

ಲವ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಪಾಯಲ್ ಚಂಗಪ್ಪ ಕಾಣಿಸಿಕೊಂಡಿದ್ದಾರೆ. ಛಾಯಾಗ್ರಹಣವನ್ನು ಶರತ್ ಮಾಡಿದ್ದಾರೆ.