ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Devil Review: ರಾಜಕೀಯ ಚದುರಂಗದಾಟದಲ್ಲಿ ಡೆವಿಲ್‌ ಡಬಲ್‌ ಡ್ರಾಮಾ; ಇದು ದರ್ಶನ್‌ ಫ್ಯಾನ್ಸ್‌ಗೆ ಮಾತ್ರ ಹಂಗಾಮ!

ʻಚಾಲೆಂಜಿಂಗ್‌ ಸ್ಟಾರ್‌ʼ ದರ್ಶನ ಅವರಿಗೆ ʻದಿ ಡೆವಿಲ್‌ʼ ಸಿನಿಮಾ ತುಂಬಾ ಮಹತ್ವದ್ದಾಗಿದೆ. ಸದ್ಯ ಅವರು ಜೈಲಿನಲ್ಲಿದ್ದಾರೆ. ಇತ್ತ ಫ್ಯಾನ್ಸ್‌ ಡೆವಿಲ್‌ ಸಿನಿಮಾವನ್ನು ಗ್ರ್ಯಾಂಡ್‌ ಆಗಿ ವೆಲ್‌ ಕಮ್‌ ಮಾಡಿದ್ದಾರೆ. ಹಾಗಾದರೆ, ಅಭಿಮಾನಿಗಳ ನಿರೀಕ್ಷೆಯನ್ನು ಪೂರೈಸುವಂತೆ ಈ ಸಿನಿಮಾ ಮೂಡಿಬಂದಿದೆಯಾ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.

The Devil Review: ದರ್ಶನ್‌ ʻದಿ ಡೆವಿಲ್ʼ ಹೇಗಿದೆ? ರೇಟಿಂಗ್‌ ಎಷ್ಟು?

-

Avinash GR
Avinash GR Dec 11, 2025 4:19 PM

ನಿರ್ದೇಶಕ ಪ್ರಕಾಶ್‌ ವೀರ್‌ ಅವರು ಈ ಹಿಂದೆ ಬಹುತೇಕ ಮಾಡಿರುವುದೆಲ್ಲಾ ಫ್ಯಾಮಿಲಿ ಡ್ರಾಮಾ ಸಿನಿಮಾಗಳೇ. ಈ ಬಾರಿಯೂ ಒಂದು ಫ್ಯಾಮಿಲಿ ಡ್ರಾಮಾವನ್ನೇ ಕೈಗೆತ್ತಿಕೊಂಡಿದ್ದಾರೆ. ಆದರೆ ʻದಿ ಡೆವಿಲ್‌ʼ ಸಿನಿಮಾ ಪೊಲಿಟಿಕಲ್‌ ಫ್ಯಾಮಿಲಿಯ ಮೆಗಾ ಡ್ರಾಮಾ. ದರ್ಶನ್‌ಗೂ ಈ ಥರದ ಕಥೆ ಹೊಸದು. ಆದರೆ ಚಿತ್ರರಂಗಕ್ಕೆ ಅಲ್ಲ! ಪೊಲಿಟಿಕಲ್‌ ಥ್ರಿಲ್ಲರ್‌ ಕಥೆಯೊಂದನ್ನು ಪ್ರಕಾಶ್‌ ತೆಗೆದುಕೊಂಡಿದ್ದು, ದರ್ಶನ್‌ಗೆ ಎರಡು ಶೇಡ್‌ನ ಪಾತ್ರವನ್ನು ಕೊಟ್ಟಿದ್ದಾರೆ. ಅದನ್ನು ದರ್ಶನ್‌ ಹೇಗೆ ನಿಭಾಯಿಸಿದ್ದಾರೆ?

ದರ್ಶನ್‌ ಡಬಲ್‌ ಆಕ್ಷನ್!

ʻದಿ ಡೆವಿಲ್‌ʼ ಸಿನಿಮಾದಲ್ಲಿ ದರ್ಶನ್‌ಗೆ ಡಬಲ್‌ ರೋಲ್. ಒಂದು ಸಿನಿಮಾ ನಟನಾಗಬೇಕೆಂದು ಪರಿತಪಿಸುವ ಸಾದಾಸೀದಾ ಮಿಡಲ್‌ ಕ್ಲಾಸ್‌ ಹೈದ, ಮತ್ತೊಂದು ಸಕಲ ದುರ್ಗುಣಗಳನ್ನು ಅರೆದು ಕುಡಿದು ವಿದೇಶದಲ್ಲಿರುವ ಡೆವಿಲ್! ಇವೆರಡೂ ಪಾತ್ರಗಳನ್ನು ದರ್ಶನ್‌ ಅವರು ಉತ್ತಮವಾಗಿ ನಿಭಾಯಿಸಿದ್ದಾರೆ. ಅದರಲ್ಲಿ ಹೀರೋ ಆಗಬೇಕು ಎಂದುಕೊಂಡಿರುವ ಕೃಷ್ಣನ ಪಾತ್ರದಲ್ಲಿ ನಮಗೆ ವಿಂಟೇಜ್‌ ದರ್ಶನ್‌ ಕಾಣಿಸುತ್ತಾರೆ. ಈಗಾಗಲೇ ನವಗ್ರಹದಲ್ಲಿ ವಿಲನ್‌ ಶೇಡ್‌ನಲ್ಲಿಯೇ ಮಿಂಚಿದ್ದ ದರ್ಶನ್‌ ಇಲ್ಲಿ ಅದಕ್ಕಿಂತಲೂ ಭಿನ್ನವಾಗಿ ಡೆವಿಲ್‌ ಆಗಿ ಅಬ್ಬರಿಸಿದ್ದಾರೆ. ಇವೆರಡೂ ಪಾತ್ರಗಳಲ್ಲಿನ ದರ್ಶನ್‌ ಅವರ ಅಭಿನಯ ಫ್ಯಾನ್ಸ್‌ಗೆ ಇಷ್ಟವಾಗಬಹುದು. ಈ ಚಿತ್ರದ ಸಂದರ್ಭದಲ್ಲೇ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದರು. ಆದರೂ ಅದನ್ನೆಲ್ಲಾ ಪಕಕ್ಕಿಟ್ಟು ಪಾತ್ರಕ್ಕಾಗಿ ಶ್ರಮ ಹಾಕಿರುವುದು ಸಿನಿಮಾದಲ್ಲಿ ಕಾಣುತ್ತದೆ. ಫೈಟ್‌ಗಳನ್ನು ಸ್ಟೈಲಿಶ್‌ ಆಗಿ ಕಂಪೋಸ್‌ ಮಾಡಲಾಗಿದೆ.

ಡೆವಿಲ್‌ ಕಥೆ ಏನು?

ನಟನಾಗಬೇಕು ಎಂದುಕೊಂಡ ಸಾಮಾನ್ಯ ಹುಡುಗ ಕೃಷ್ಣನಿಗೆ (ದರ್ಶನ್‌) ಜೀವನಕ್ಕೆ ಒಂದು ಹೋಟೆಲ್‌ ಬ್ಯುಸಿನೆಸ್‌ ಇರುತ್ತದೆ. ಅಲ್ಲಿಯೇ ಫೈನಾನ್ಸ್‌ ವ್ಯವಹಾರ ಮಾಡುವ ರುಕ್ಮಿಣಿ ಮೇಲೆ ಆತನಿಗೆ ಲವ್‌ ಆಗಿರುತ್ತದೆ. ಇಬ್ಬರು ಇನ್ನೇನೂ ಪ್ರೀತಿಸಿ ಮದುವೆ ಆಗಬೇಕು ಎಂದುಕೊಂಡಿರುವಾಗಲೇ ನಟನಾಗಬೇಕು ಎಂದುಕೊಂಡಿದ್ದ ಕೃಷ್ಣನಿಗೆ ಒಂದು ದೊಡ್ಡ ಅವಕಾಶ ಸಿಕ್ಕಿಬಿಡುತ್ತದೆ. ಆದರೆ ಅಲ್ಲಿಂದ ಕಥೆಯಲ್ಲಿ ಅನೇಕ ತಿರುವುಗಳು ಎದುರಾಗುತ್ತವೆ. ಒಂದು ದೊಡ್ಡ ರಾಜಕೀಯ ಚದುರಂಗದಾಟದಲ್ಲಿ ಕೃಷ್ಣ ಸಿಲುಕಿಕೊಳ್ಳುತ್ತಾನೆ. ಆಗ ಡೆವಿಲ್‌ನ ಎಂಟ್ರಿ ಆಗುತ್ತದೆ. ಅಷ್ಟಕ್ಕೂ ಏನಿದು ರಾಜಕೀಯ ಚದುರಂಗದಾಟ? ಇದಕ್ಕೂ ಕೃಷ್ಣನಿಗೂ ಏನು ಸಂಬಂಧ? ಡೆವಿಲ್‌ ಯಾರು? ಇದನ್ನೆಲ್ಲಾ ಸಿನಿಮಾದಲ್ಲೇ ನೋಡಬೇಕು.

ನಿರ್ದೇಶನ ಹೇಗಿದೆ? ಮೇಕಿಂಗ್‌ ಚೆನ್ನಾಗಿದೆಯಾ?

ನಿರ್ದೇಶಕ ಪ್ರಕಾಶ್‌ ವೀರ್‌ ಈ ಹಿಂದೆ ‘ತಾರಕ್’ ಥರದ ಫ್ಯಾಮಿಲಿ ಡ್ರಾಮಾವನ್ನು ದರ್ಶನ್‌ಗಾಗಿ ಮಾಡಿದ್ದರು. ಆದರೆ ಈ ಬಾರಿ ಪೊಲಿಟಿಕಲ್‌ ಡ್ರಾಮಾವನ್ನು ಮಾಡಿದ್ದಾರೆ. ಒಂದು ಗಟ್ಟಿ ಹಾಗೂ ಟ್ವಿಸ್ಟ್‌ವುಳ್ಳ ಕಥೆಯನ್ನೇ ಪ್ರಕಾಶ್‌ ಆಯ್ಕೆ ಮಾಡಿಕೊಂಡಿದ್ದರೂ, ಅದಕ್ಕೊಂದು ಬಲವಾದ ಚಿತ್ರಕಥೆಯನ್ನ ಬರೆಯುವಲ್ಲಿ ಹಿಂದೆ ಬಿದ್ದಿದ್ದಾರೆ ಎನಿಸುತ್ತದೆ. ಕೆಲವು ಕಡೆಯಂತೂ ಅದನ್ನು ಅದು ಪೇಲವ ಎನಿಸುತ್ತದೆ. ಮೇಕಿಂಗ್‌ನಲ್ಲಿ ಹೊಸತನವಿಲ್ಲ, ಕೆಲ ಕಡೆ ಲಾಜಿಕ್ ಕೂಡ ಇಲ್ಲ, ಕ್ಲೈಮ್ಯಾಕ್ಸ್ ಹತ್ತಿರವಿದೆ ಎನ್ನುವಾಗ ಚಿತ್ರಕಥೆಯು ಇನ್ನಷ್ಟು ಜಾಳು ಎನಿಸುತ್ತದೆ. ಅಷ್ಟೇ ಅಲ್ಲ, ಕ್ಲೈಮ್ಯಾಕ್ಸ್‌ ಸಹ ಸ್ಪಷ್ಟತೆಯಿಂದ ಕೂಡಿಲ್ಲ. ಫೈಟ್‌ಗಳನ್ನು ಉತ್ತಮವಾಗಿ ಕಂಪೋಸ್‌ ಮಾಡಲಾಗಿದೆ. ವಿನಯ್ ಗೌಡ ಜೊತೆಗಿನ ಫೈಟ್‌ ವಿಭಿನ್ನವಾಗಿದೆ. ದರ್ಶನ್‌ ವರ್ಸಸ್‌ ದರ್ಶನ್‌ ಸೀನ್‌ಗಳು ಕೂಡ ಸಖತ್‌ ಆಗಿವೆ.

ವಿಎಫ್‌ಎಕ್ಸ್‌ ಎಫೆಕ್ಟ್‌ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದಿತ್ತು. ಜೊತೆಗೆ ಈ ಸಿನಿಮಾದಲ್ಲಿ ಗಿಲ್ಲಿ ನಟ ಸೇರಿದಂತೆ ಅನೇಕ ಹಾಸ್ಯ ನಟರ ದಂಡೇ ಇದೆ. ಆದರೂ, ಕಾಮಿಡಿಗೆ ಕೊರತೆ ಇದೆ. ಇದರ ಜೊತೆಗೆ ತಾಂತ್ರಿಕವರ್ಗದ ಕೆಲಸ ಕೂಡ ಕೂಡ ಅಷ್ಟೇನೂ ಅದ್ಭುತ ಎನಿಸುವಂತಿಲ್ಲ. ಅಜನೀಶ್‌ ಸಂಗೀತದಲ್ಲಿ ಇದ್ರೆ ನೆಮ್ದಿಯಾಗ್‌ ಇರಬೇಕು ಸಾಂಗ್‌ ಫ್ಯಾನ್ಸ್‌ಗೆ ಇಷ್ಟವಾಗಬಹುದು, ಮಿಕ್ಕ ಹಾಡುಗಳಲ್ಲಿ ಧಮ್ ಇಲ್ಲ. ಹಿನ್ನೆಲೆ ಸಂಗೀತದಲ್ಲಿ ಅಜನೀಶ್‌ ಅವರ ಮ್ಯಾಜಿಕ್‌ ಕೇಳಿಸಲಿಲ್ಲ. ಅದೇ ರೀತಿ ಪ್ರತಿಭಾನ್ವಿತ ಛಾಯಾಗ್ರಾಹಕ ಸುಧಾಕರ್‌ ಎಸ್‌ ರಾಜ್‌ ಅವರಿಂದ ಇನ್ನೂ ಹೆಚ್ಚಿನದ್ದು ನಿರೀಕ್ಷೆ ಮಾಡಲಾಗಿತ್ತು. ದರ್ಶನ್‌ ಫ್ಯಾನ್ಸ್‌ ಬಹಳ ನಿರೀಕ್ಷೆಯಿಂದ ಈ ಸಿನಿಮಾಕ್ಕಾಗಿ ಕಾಯುತ್ತಿದ್ದರು. ಅಲ್ಲದೇ ಸದ್ಯದ ಪರಿಸ್ಥಿತಿಯಲ್ಲಿ ಡೆವಿಲ್‌ ಬಹಳ ಮುಖ್ಯವಾದ ಸಿನಿಮಾವಾಗಿತ್ತು. ಆದರೂ ಅವರ ನಂಬಿಕೆಗೆ ತಕ್ಕಂತೆ ಈ ಚಿತ್ರ ಮೂಡಿಬಂದಿಲ್ಲವೇನೋ ಎಂಬ ಫೀಲ್‌ ಆಗಾಗ ಬರುತ್ತದೆ. ಮೊದಲ ಬಾರಿಗೆ ಪೂರ್ಣ ಪ್ರಮಾಣದ ರಾಜಕೀಯ ಕಥೆಯಲ್ಲಿ ದರ್ಶನ್‌ ನಟಿಸಿರುವುದು ಅವರ ಫ್ಯಾನ್ಸ್‌ಗೆ ಇಷ್ಟವಾಗಬಹುದು.

ಕಲಾವಿದರ ನಟನೆ ಹೇಗಿದೆ?

ನಟಿ ರಚನಾ ರೈ ಅವರು ತಮಗೆ ಸಿಕ್ಕ ಚಾನ್ಸ್‌ ಅನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ನಟ ಅಚ್ಯುತ್ ಕುಮಾರ್ ಅವರಿಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ನಿಭಾಯಿಸಿದ್ದಾರೆ. ದರ್ಶನ್‌ ನಂತರ ಅಚ್ಯುತ್‌ಗೆ ಹೆಚ್ಚು ಸ್ಕ್ರೀನ್‌ ಸ್ಪೇಸ್‌ ಸಿಕ್ಕಿದೆ. ಹುಲಿ ಕಾರ್ತಿಕ್, ಗಿಲ್ಲಿ ನಟ ಅವರು ನಗಿಸಲು ಪ್ರಯತ್ನಿಸಿದ್ದಾರೆ. ಸಿಎಂ ಪಾತ್ರಕ್ಕೆ ಮಹೇಶ್‌ ಮಂಜ್ರೇಕರ್‌ ಅವರಿಗಿಂತ ಕನ್ನಡದ ಹಿರಿಯ ಕಲಾವಿದರನ್ನೇ ಆಯ್ಕೆ ಮಾಡಿಕೊಳ್ಳಬಹುದಿತ್ತು. ಶರ್ಮಿಳಾ ಮಾಂಡ್ರೆ, ಶೋಭರಾಜ್‌, ಚಂದು ಗೌಡ, ವಿನಯ್‌ ಗೌಡ, ರೋಜರ್ ನಾರಾಯಣ್‌ ಸಿಕ್ಕ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.