Deepavali Festivals: ಕೆಜಿಎಫ್- ಕಾಂತಾರ ಸಿನಿಮಾ ಹೆಸರಿನ ಪಟಾಕಿ ಬ್ರ್ಯಾಂಡ್- ಖರೀದಿಗೆ ಮುಗಿಬಿದ್ದ ಫ್ಯಾನ್ಸ್
Kantara,'KGF' crackers: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಹಾಗೂ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾದ ಹೆಸರನ್ನು ಇಟ್ಟುಕೊಂಡು ಪಟಾಕಿ ಕಂಪೆನಿಗಳು ತಮ್ಮ ಪ್ರಾಡೆಕ್ಟ್ ಗೆ ಸಿನಿಮಾ ಹೆಸರನ್ನೇ ಇಟ್ಟಿವೆ. ಈಗಾಗಲೇ ಕಾಂತಾರ ಹಾಗೂ ಕೆ.ಜಿ.ಎಫ್. (KGF) ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಅಭಿಮಾನಿಗಳು ಅದನ್ನು ಖರೀದಿಸಿ ದೀಪಾವಳಿಗೂ ಮುನ್ನವೆ ಪಟಾಕಿ ಸಿಡಿಸಿ ಖುಷಿ ಪಟ್ಟಿದ್ದಾರೆ.

-

ನವದೆಹಲಿ: ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದ್ದು ಈಗಾಗಲೇ ಎಲ್ಲೆಡೆ ಹಬ್ಬದ ಸಿದ್ಧತೆ ನಡೆಯುತ್ತಿದೆ. ವೀಕೆಂಡ್ ಗೆ ಶಾಪಿಂಗ್ ಮಾಡಿ ಹಬ್ಬಕ್ಕೆ ಬೇಕಾದ ತಿಂಡಿ ತಿನಿಸು, ಪಟಾಕಿ ಇತ್ಯಾದಿಗಳ ಖರೀದಿ ಕೂಡ ಜೋರಾಗಿಯೇ ನಡೆಯುತ್ತಿದೆ. ಅಂತೆಯೇ ಈ ಬಾರಿ ಹಬ್ಬಕ್ಕೆ ಎರಡು ಸಿನಿಮಾಗಳ ಪಟಾಕಿಯ ಅಬ್ಬರ ಪ್ರಾರಂಭವಾಗಿದೆ. ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಕೆ.ಜಿ.ಎಫ್ ಹಾಗೂ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ (Rishab Shetty) ಅಭಿನಯದ ಕಾಂತಾರ ಸಿನಿಮಾದ ಹೆಸರನ್ನು ಇಟ್ಟುಕೊಂಡು ಪಟಾಕಿ ಕಂಪೆನಿಗಳು ತಮ್ಮ ಪ್ರಾಡೆಕ್ಟ್ ಗೆ ಸಿನಿಮಾ ಹೆಸರನ್ನೇ ಇಟ್ಟಿವೆ.
ಈಗಾಗಲೇ ಕಾಂತಾರ (Kantara) ಹಾಗೂ ಕೆ.ಜಿ.ಎಫ್. (KGF) ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಅಭಿಮಾನಿಗಳು ಅದನ್ನು ಖರೀದಿಸಿ ದೀಪಾವಳಿಗೂ ಮುನ್ನವೆ ಪಟಾಕಿ ಸಿಡಿಸಿ ಖುಷಿ ಪಟ್ಟಿದ್ದಾರೆ. ಇನ್ನು ಈ ಬಗ್ಗೆ ಪಟಾಕಿ ಖರೀದಿ ಮಾಡಿ ಖುಷಿ ಪಡುವ ಬಳಗ ಒಂದೆಡೆಯಾದರೆ ಇನ್ನೊಂದೆಡೆ ಈ ರೀತಿ ಟ್ರಿಕ್ಸ್ ಬಳಸಿ ಅಭಿಮಾನಿಗಳ ಎಮೋಷನ್ಸ್ ಅನ್ನು ಮಾರಾಟಗಾರರು ದುರ್ಬಳಕೆ ಮಾಡುತ್ತಿದ್ದಾರೆ ಎಂಬ ವಿರೋಧಗಳು ಕೂಡ ಸೋಶಿಯಲ್ ಮಿಡಿಯಾದಲ್ಲಿ ವ್ಯಕ್ತವಾಗುತ್ತಿದೆ.
ಸೂಪರ್ ಹಿಟ್ ಸಿನಿಮಾಗಳ ಹೆಸರನ್ನೇ ಬಳಸಿಕೊಂಡು ತಮ್ಮ ಬ್ರ್ಯಾಂಡ್ ಪ್ರಮೋಟ್ ಮಾಡುವ ವಿಚಾರವು ಈ ಹಿಂದಿನಿಂದಲೂ ಇದೆ. ಯಜಮಾನ ಉಪ್ಪಿನಕಾಯಿ, ಆಪ್ತಮಿತ್ರ ಸೀರೆ, ಸೂಪರ್ ಇಂಡಸ್ಟ್ರಿಯಲ್ ಸ್ಟೀಲ್ ಹೀಗೆ ಸಿನಿಮಾದ ಜೊತೆಗೆ ತಮ್ಮ ಬ್ರ್ಯಾಂಡ್ ಅನ್ನು ಕೂಡ ಪ್ರಮೋಟ್ ಮಾಡಲಾಗಿತ್ತು. ಇತ್ತೀಚೆಗಷ್ಟೇ ಗಣೇಶ ಹಬ್ಬದ ಸಂದರ್ಭದಲ್ಲಿ 'ಬಾಹುಬಲಿ' ಅವತಾರದ ಗಣೇಶ, 'KGF' ರಾಕಿಭಾಯ್ ಸ್ಟೈಲ್ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಿದ್ದು ನಮಗೆಲ್ಲ ತಿಳಿದಿದೆ. ಇದೀಗ ದೀಪಾವಳಿಗೆ 'ಕಾಂತಾರ', ಕೆಜಿಎಫ್ ಶಾಟ್ಸ್ ಪಟಾಕಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಈ ಎರಡು ಸಿನಿಮಾ ಹೆಸರಿನ ಬ್ರ್ಯಾಂಡ್ ಪಟಾಕಿಗಳು ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಪರ ರಾಜ್ಯದಲ್ಲಿಯೂ ಫೇಮಸ್ ಆಗಿವೆ. ಈ ಹೆಸರಿನ ಪಟಾಕಿಯ ಖರೀದಿಗೆ ಬೇಡಿಕೆ ಕೂಡ ಅಧಿಕವಿದೆ. ಈ ಹೆಸರಿನ ಪಟಾಕಿಗೆ ಮಕ್ಕಳು, ಯುವಕರು ಸೇರಿದಂತೆ ಎಲ್ಲರನ್ನು ಸೆಳೆಯುವಂತಿದ್ದು ತಮಿಳುನಾಡಿನ ಹೊಸೂರು ಪಟಾಕಿ ಅಂಗಡಿಗಳಲ್ಲಿ ಈ ಬ್ರ್ಯಾಂಡ್ ಪಟಾಕಿಗೆ ಬೇಡಿಕೆ ಹೆಚ್ಚಾಗಿದೆ.
ಇದನ್ನೂ ಓದಿ:Nanna Magale Super Star Movie: ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದ ‘ನನ್ನ ಮಗಳೇ ಸೂಪರ್ ಸ್ಟಾರ್ʼ ಚಿತ್ರತಂಡ
ಕನ್ನಡದ ಸಿನಿಮಾ ಇಂಡಸ್ಟ್ರಿಯಲ್ಲಿಯೇ KGF' ಹಾಗೂ 'ಕಾಂತಾರ' ಚಿತ್ರಗಳು ಹೊಸ ದಾಖಲೆಯನ್ನೇ ಮಾಡಿತ್ತು. ಈ ಎರಡು ಸಿನಿಮಾಗಳು 2 ಭಾಗಗಳಲ್ಲಿ ತೆರೆಗೆ ಬಂದಿದ್ದು ಭರ್ಜರಿ ಕಲೆಕ್ಷನ್ ಕೂಡ ಮಾಡಿತ್ತು. ಅಕ್ಟೋಬರ್ 2ರಂದು 'ಕಾಂತಾರ ಚಾಪ್ಟರ್ 1 ರಿಲೀಸ್ ಆಗಿದ್ದು ಇದುವರೆಗೆ ಬಹುತೇಕ ಸಿನಿಮಾ ಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಈ ಮೂಲಕ ಪ್ರಸ್ತುತ 600 ಕೋಟಿಗೂ ಅಧಿಕ ಗಳಿಕೆ ಮಾಡಿದ್ದು ಹಬ್ಬದ ಸಂದರ್ಭದಲ್ಲಿ ಹಾಗೂ ವೀಕೆಂಡ್ ನಲ್ಲಿ ಇನ್ನು ಹೆಚ್ಚು ಕಲೆಕ್ಷನ್ ಆಗುವ ನಿರೀಕ್ಷೆ ಇದೆ.
ಪ್ರಶಾಂತ್ ನೀಲ್ ನಿರ್ದೇಶನದ 'KGF' ಚಾಪ್ಟರ್-3 ಹಿಂಟ್ ಕೂಡ ಈ ಹಿಂದೆ ಸಿಕ್ಕಿತ್ತು. ಆದರೆ ಅದರ ಬಗ್ಗೆ ಎಲ್ಲಿಯೂ ಸುದ್ದಿ ಸದ್ಯಕ್ಕಿಲ್ಲ. ಅಲ್ಲದೆ ಯಶ್ ಅವರು ಸದ್ಯ ರಾಮಾಯಣ ಹಾಗೂ ಟಾಕ್ಸಿಕ್ ಸಿನಿಮಾದ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಚಾಪ್ಟರ್ 3 ಸದ್ಯಕ್ಕಿಲ್ಲ ಎನ್ನಬಹುದು. ಹಾಗೇ ಕಾಂತಾರ ಚಾಪ್ಟರ್ 1 ಬಳಿಕ ಮುಂದಿನ ಭಾಗ ಸದ್ಯಕ್ಕಿಲ್ಲ ಎಂದು ರಿಷಭ್ ಕೂಡ ಸ್ಪಷ್ಟನೆ ನೀಡಿದ್ದರು. ಒಟ್ಟಾರೆ ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ , ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿರುವುದು ಖುಷಿಯ ವಿಚಾರವಾಗಿದೆ. .