Dipika Padukone: ಅಲ್ಲು ಅರ್ಜುನ್ ಬಿಗ್ ಬಜೆಟ್ ಸಿನಿಮಾಕ್ಕೆ ದೀಪಿಕಾ ಹೀರೋಯಿನ್- ಶೂಟಿಂಗ್ ಶುರುವಾಯ್ತಾ? ವಿಡಿಯೊ ಫುಲ್ ವೈರಲ್
AA22xA6 Movie: ನಿರ್ದೇಶಕರ ಜೊತೆಗಿನ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಿ ಸ್ಪಿರಿಟ್ ಮತ್ತು ಕಲ್ಕಿ-2 ಚಿತ್ರತಂಡದಿಂದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೊರ ಬಿದ್ದಿದ್ದಾರೆ ಎನ್ನುವ ಸುದ್ದಿ ಭಾರಿ ವೈರಲ್ ಆಗಿತ್ತು. ಆದರೆ ಇದೀಗ ದೀಪಿಕಾ ನಿರ್ದೇಶಕ ಅಟ್ಲೀಯವರ ‘AA22xA6 ಸಿನಿಮಾದಲ್ಲಿ ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.


ಮುಂಬೈ: ಸ್ಪಿರಿಟ್ ಮತ್ತು ಕಲ್ಕಿ-2 ಸಿನಿಮಾಗಳಿಂದ ಎಕ್ಸಿಟ್ ಆಗಿ ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ(Dipika Padukone) ಇದೀಗ ಮತ್ತೊಂದು ಬಿಗ್ ಬಜೆಟ್ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಿರ್ದೇಶಕ ಅಟ್ಲೀ ಮತ್ತು ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ದೀಪಿಕಾ ಹಿರೋಯಿನ್ ಎಂಬ ಸುದ್ದಿ ಹರಿದಾಡುತ್ತಿದೆ. ಆ ಮೂಲಕ ಜವಾನ್ ಸಿನಿಮಾದ ನಂತರ ಅಟ್ಲೀ ನಿರ್ದೇಶನದ ಮತ್ತೊಂದು ಸಿನಿಮಾದಲ್ಲಿ ಮಿಂಚಲು ದೀಪಿಕಾ ರೆಡಿ ಆಗಿದ್ದಾರೆ. ಇದಕ್ಕೆ ಸಂಬಂಧಿಸಿದ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಯಾವುದು ಈ ಬಿಗ್ ಬಜೆಟ್ ಸಿನಿಮಾ?
ಅಟ್ಲೀ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟನೆಯ ‘AA22xA6’ಎನ್ನುವ ಚಿತ್ರ ಸೆಟ್ಟೇರುತ್ತಿದೆ. ಈ ಚಿತ್ರಕ್ಕೆ ನಾಯಕ ನಟಿ ಯಾರೆಂಬುದು ಕುತೂಹಲ ಸೃಷ್ಠಿಸಿತ್ತು. ಇದೀಗ ಈ ಬಗ್ಗೆ ನಿರ್ಮಾಪಕರು ವಿಶೇಷ ವಿಡಿಯೋ ಬಿಡುಗಡೆ ಮಾಡಿದ್ದು, ದೀಪಿಕಾರನ್ನು ಚಿತ್ರತಂಡಕ್ಕೆ ಸ್ವಾಗತಿಸಿದ್ದಾರೆ. ವಿಡಿಯೋದ ಪ್ರಾರಂಭದಲ್ಲೇ ಸಿನಿಮಾದ ಚಿತ್ರಕಥೆ ಕುರಿತು ಮಾತನಾಡಿದ್ದಾರೆ. ಬಳಿಕ ಸೆಟ್‌ಗೆ ತೆರಳಿ ಚಿತ್ರಕ್ಕೆ ತಯಾರಿ ನಡೆಸುತ್ತಿರುವ ದೃಶ್ಯವೊಂದನ್ನು ಹಂಚಿಕೊಂಡಿದ್ದಾರೆ. ಒಟ್ಟಾರೆಯಾಗಿ ದೀಪಿಕಾ ಈ ಚಿತ್ರದಲ್ಲಿ ಭರ್ಜರಿ ಆಕ್ಷನ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದಂತೂ ಪಕ್ಕಾ ಆಗಿದೆ.
ಚಿತ್ರತಂಡ ಶೇರ್ ಮಾಡಿರುವ ವಿಡಿಯೊ ಇಲ್ಲಿದೆ
ವಿಡಿಯೊದಲ್ಲಿ ನಿರ್ಮಾಪಕರು ದೀಪಿಕಾರನ್ನು "ರಾಜಕುಮಾರಿ" ಎಂದು ಕರೆದಿದ್ದು, ಗೆಲುವು ಸಾಧಿಸಲು ರೆಡಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಈ ಸಿನಿಮಾದಲ್ಲಿ ಇಬ್ಬರು ನಾಯಕರು ಇರಬಹುದೆಂಬ ಊಹಿಸಲಾಗಿತ್ತು. ಆದರೆ ಇತ್ತೀಚೆಗೆ ಅಲ್ಲು ಅರ್ಜುನ್ ಅವರ ತಂಡ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದುಮತ್ತಷ್ಟು ಕುತೂಹಲ ಮೂಡಿಸಿದೆ. ಇನ್ನು ಸಿನಿಮಾ ಶೂಟಿಂಗ್ 2025ರ ಮಧ್ಯದಲ್ಲಿ ಆರಂಭವಾಗಲಿದ್ದು, 2026ರಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.
ಸ್ಪಿರಿಟ್ ಮತ್ತು ಕಲ್ಕಿ-2 ಸಿನಿಮಾ ಶೂಟಿಂಗ್‌ನಿಂದ ದೀಪಿಕಾ ಔಟ್:
ಇದರ ನಡುವೆಯೇ, ದೀಪಿಕಾ ಪಡುಕೋಣೆ ನಟ ಪ್ರಭಾಸ್ ಅಭಿನಯದ ಸ್ಪಿರಿಟ್ ಚಿತ್ರದಿಂದ ಹೊರ ಬಂದಿರುವ ಸುದ್ದಿ ಕೂಡ ಚರ್ಚೆಯಲ್ಲಿದೆ. ವರದಿಗಳ ಪ್ರಕಾರ, ದಿನಕ್ಕೆ 8 ಗಂಟೆಗಳ ಕೆಲಸ, ಹೆಚ್ಚಿನ ಸಂಭಾವನೆ ಹಾಗೂ ಲಾಭಾಂಶದಲ್ಲಿ ಪಾಲು ಹೀಗೆ ದೀಪಿಕಾ ಅವರ ಕೆಲವು ಬೇಡಿಕೆಗಳು ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗಗೆ ಇಷ್ಟವಾಗಿಲ್ಲ ಎನ್ನಲಾಗಿದೆ. ಇತ್ತೀಚೆಗೆ ತಾಯಿ ಆಗಿರುವ ದೀಪಿಕಾ ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸರಿದೂಗಿಸುವ ನಿಟ್ಟಿನಲ್ಲಿ ಕೆಲಸದ ಸಮಯ ಕಡಿಮೆ ಮಾಡುವ ದೃಷ್ಟಿಯಿಂದ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Deepika Padukone: ಸ್ಪಿರಿಟ್ ಚಿತ್ರತಂಡದಿಂದ ಹೊರಬಂದ ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತ ಮಣಿರತ್ನಂ
ಆದರೆ ಸ್ಪಿರಿಟ್ ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಳ್ಳುವ ಮೂಲಕ ದೀಪಿಕಾರ ವಿರುದ್ಧ ತೀವ್ರ ಕಿಡಿ ಕಾರಿದ್ದು, "ನಾನು ಯಾವುದೇ ಕಲಾವಿದನಿಗೆ ಕಥೆ ಹೇಳುವಾಗ ಅವರ ಮೇಲೆ ನಂಬಿಕೆ ಇಡುತ್ತೇನೆ. ಆದರೆ ನೀವು ಆ ನಂಬಿಕೆಯನ್ನು ನೀವು ಕಳೆದುಕೊಂಡಿದ್ದೀರಿ. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ, ನಾಗ್ ಅಶ್ವಿನ್ ನಿರ್ದೇಶನದ "ಕಲ್ಕಿ 2" ಚಿತ್ರದಿಂದಲೂ ದೀಪಿಕಾ ಹೊರಗುಳಿಯುವ ಸಾಧ್ಯತೆಗಳ ಬಗ್ಗೆ ಸುದ್ದಿಗಳು ಹರಡಿವೆ. ದೀಪಿಕಾ ತಮ್ಮ ಕೆಲಸದ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಲು ಸಿದ್ಧವಿಲ್ಲದ ಕಾರಣದಿಂದ ನಿರ್ದೇಶಕರಿಗೆ ಇದು ತಲೆ ನೋವಾಗಿದೆ ಎಂದು ವದಂತಿಗಳು ಹಬ್ಬಿವೆ. ಆದರೆ ಈ ಕುರಿತಾಗಿ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.