ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಕ್ಷನ್‌ ಸೈಡ್‌ಗಿಟ್ಟು ಫ್ಯಾಮಿಲಿ ಗೆಲ್ಲಲು ಬಂದ ನಟ ಧ್ರುವ ಸರ್ಜಾ; 'ವಸುದೈವ ಕುಟುಂಬಕಂ' ಚಿತ್ರದ ಟೈಟಲ್‌‌ ಟೀಸರ್‌ ರಿಲೀಸ್!

Vasudhaiva Kutumbakam Movie: 'ವಸುದೈವ ಕುಟುಂಬಕಂ' ಚಿತ್ರದ ಮೂಲಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ನಿರ್ದೇಶಕ ನಂದ ಸುಧೀರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಪಕ್ಕಾ ಸೆಂಟಿಮೆಂಟ್ ಹಾಗೂ ಮನರಂಜನೆಯ ರಸದೌತಣ ನೀಡಲಿದೆಯಂತೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾದ ಟೈಟಲ್‌ ರಿಲೀಸ್‌ ಆಗಿದೆ.

ಧ್ರುವ ಸರ್ಜಾ ನಟನೆಯ 'ವಸುದೈವ ಕುಟುಂಬಕಂ' ಚಿತ್ರದ ಟೀಸರ್‌ಗೆ ಫ್ಯಾನ್ಸ್ ಫಿದಾ

-

Avinash GR
Avinash GR Oct 6, 2026 2:04 PM

'ಆಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ. ಜನ್ಮದಿನದ ಈ ವಿಶೇಷ ಸಂದರ್ಭದಲ್ಲಿ ಧ್ರುವ ಸರ್ಜಾ ನಾಯಕರಾಗಿ ನಟಿಸಲಿರುವ ಬಹುನಿರೀಕ್ಷಿತ ನೂತನ ಸಿನಿಮಾದ ಶೀರ್ಷಿಕೆ ಅಧಿಕೃತವಾಗಿ ಅನಾವರಣಗೊಂಡಿದ್ದು, ಚಿತ್ರಕ್ಕೆ ʻವಸುದೈವ ಕುಟುಂಬಕಂ' ಎಂದು ಹೆಸರಿಡಲಾಗಿದೆ.

'ಪೊಗರು' ಚಿತ್ರದ ನಂತರ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದಕಿಶೋರ್ ಕಾಂಬಿನೇಶನ್‌ನಲ್ಲಿ ಈ ಪ್ರಾಜೆಕ್ಟ್ ಮೂಡಿಬರುತ್ತಿದ್ದು, ಈ ಚಿತ್ರದ ಮೂಲಕ ನಿರ್ದೇಶಕ ನಂದಕಿಶೋರ್ ತಮ್ಮ ಹೆಸರನ್ನು 'ನಂದ ಸುಧೀರ್' ಎಂದು ಬದಲಿಸಿಕೊಂಡಿರುವುದು ವಿಶೇಷ. ಮೈರಾ ಕ್ರಿಯೇಷನ್ಸ್ ಲಾಂಛನದಲ್ಲಿ ಹರೀಶ್ ಪೆದ್ದಿ ನಿರ್ಮಾಣ ಮಾಡುತ್ತಿರುವ ಈ ಮಹತ್ವಾಕಾಂಕ್ಷೆಯ ಚಿತ್ರಕ್ಕೆ ಬಿ.ಎಸ್. ಸುಧೀಂದ್ರ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.

ʻಕೆಡಿʼ ಸಿನಿಮಾ ನೋಡಿ ಖುಷಿಯಾದ ಧ್ರುವ ಸರ್ಜಾ ಫ್ಯಾಮಿಲಿ; ಚಿರು ಸರ್ಜಾ ಬಗ್ಗೆ ಪತ್ನಿ ಪ್ರೇರಣಾ ಹೇಳಿದ್ದೇನು?

ಗಲಾಟೆ ಎಲ್ಲಾ ಬೇಡ ಬ್ರೋ

ಮಾಸ್ ಆಕ್ಷನ್ ಇಮೇಜ್ ಹೊಂದಿರುವ ಧ್ರುವ ಸರ್ಜಾ ಈ ಬಾರಿ ಸಂಪೂರ್ಣ ಕೌಟುಂಬಿಕ ಕಥಾಹಂದರವನ್ನು ಆಯ್ಕೆ ಮಾಡಿಕೊಂಡಿದ್ದು, ʻವಸುದೈವ ಕುಟುಂಬಕಂʼ ಇಡೀ ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಆನಂದಿಸಬಹುದಾದ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಆಗಿರಲಿದೆ. ಚಿತ್ರದಲ್ಲಿ ಪ್ರೀತಿ, ಆಕ್ಷನ್ ಮತ್ತು ಭಾವುಕ ಸೆಂಟಿಮೆಂಟ್ ಸನ್ನಿವೇಶಗಳು ಹದವಾಗಿ ಬೆರೆತಿರಲಿದ್ದು, ಪ್ರೇಕ್ಷಕರನ್ನು ಕಚಗುಳಿಯಿಡುವ ರಂಜನೆಗೆ ಕೊರತೆಯಿರುವುದಿಲ್ಲ ಎಂಬ ಭರವಸೆಯನ್ನು ಚಿತ್ರತಂಡ ನೀಡಿದೆ. ರಿಲೀಸ್‌ ಆಗಿರುವ ಟೈಟಲ್‌ ಟೀಸರ್‌ನಲ್ಲಿ, ಕುಸ್ತಿಪಟುಗಳು ಧ್ರುವಗೆ "ಅಖಾಡಕ್ಕೆ ಇಳಿದು ಒಂದ್‌ ಕೈ ಮಿಲಾಯಿಸ್ತಿಯಾ" ಎಂದು ಕೇಳುತ್ತಾರೆ. ಆಗ ಧ್ರುವ, "ಫ್ಯಾಮಿಲಿಯನ್ನು ಗೆಲ್ಲಬೇಕು ಅಂತ ಬಂದಿದ್ದೀನಿ, ಗಲಾಟೆ ಎಲ್ಲಾ ಬೇಡ ಬ್ರೋ.." ಎಂದು ಖಡಕ್‌ ಆಗಿ ಹೇಳಿದ್ದಾರೆ.

ಸಂಗೀತ ನೀಡಲಿದ್ದಾರೆ ಹರಿಕೃಷ್ಣ

ಧ್ರುವ ಸರ್ಜಾ ಅವರ ಚಿತ್ರಗಳ ಹಾಡುಗಳು ಯಾವತ್ತೂ ಚಾರ್ಟ್‌ಬಸ್ಟರ್ ಆಗಿರುತ್ತವೆ. ಅದೇ ರೀತಿ ಈ ಚಿತ್ರದಲ್ಲೂ ಅತ್ಯದ್ಭುತ ಮೆಲೋಡಿ ಗೀತೆಗಳಿರಲಿದ್ದು, ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸ್ವರ ಸಂಯೋಜನೆಯ ಜವಾಬ್ದಾರಿ ಹೊತ್ತಿದ್ದಾರೆ. ಅಲ್ಲದೆ ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಹಾಗೂ ದೀಪು ಎಸ್. ಕುಮಾರ್ ಅವರ ಸಂಕಲನವಿರಲಿದ್ದು, ಚಿತ್ರರಂಗದ ಹೆಸರಾಂತ ತಂತ್ರಜ್ಞರ ತಂಡವೇ ಈ ಚಿತ್ರದ ಹಿಂದಿದೆ. ಹಿರಿಯ ಹಾಗೂ ಅನುಭವಿ ಕಲಾವಿದರ ಬಹುದೊಡ್ಡ ತಾರಾಗಣವಿರಲಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಉಳಿದ ತಾರಾಬಳಗದ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ.