ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Blood Donation Camp: ನ.25ಕ್ಕೆ ಜಿಲ್ಲಾಡಳಿತ ಭವನದಲ್ಲಿ ಹಾಗೂ ಜಿಲ್ಲೆಯ 11 ಕಡೆ ರಕ್ತದಾನ ಶಿಬಿರ

ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ ಭವನ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ 11 ವಿವಿಧ ಸ್ಥಳಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸ ಲಾಗುತ್ತಿದ್ದು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಮನವಿ ಮಾಡಿದರು.

ನ.25ಕ್ಕೆ ಜಿಲ್ಲಾಡಳಿತ ಭವನದಲ್ಲಿ ಹಾಗೂ ಜಿಲ್ಲೆಯ 11 ಕಡೆ ರಕ್ತದಾನ ಶಿಬಿರ

-

Profile
Ashok Nayak Nov 23, 2026 8:36 PM

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ(National Voluntary Blood Donation Day)ಯ ಅಂಗವಾಗಿ ಜಿಲ್ಲಾಡಳಿತ ಭವನ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ 11 ವಿವಿಧ ಸ್ಥಳಗಳಲ್ಲಿ ರಕ್ತದಾನ ಶಿಬಿರ(Blood Donation Camp)ಗಳನ್ನು ಆಯೋಜಿಸಲಾಗುತ್ತಿದ್ದು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಮನವಿ ಮಾಡಿದರು.

ಜಿಲ್ಲಾ ಪಂಚಾಯತ್ ನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ನಡೆದ “ಜಿಲ್ಲಾ ರಕ್ತ ಸುರಕ್ಷತೆ ಟಾಸ್ಕ್ ಪೋರ್ಸ್ ಸಭೆ”ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೆಡ್ ಕ್ರಾಸ್ ಸಹಯೋಗದಲ್ಲಿ ಜಿಲ್ಲಾಡಳಿತ ಭವನದಲ್ಲಿ ನ.25ರಂದು ರಕ್ತದಾನ ಶಿಬಿರ ಏರ್ಪಡಿಸಿದ್ದು, ಭವನದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಭವನಕ್ಕೆ ವಿವಿಧ ಕೆಲಸ ನಿಮಿತ್ತವಾಗಿ ಆಗಮಿಸುವ ಸಾರ್ವಜನಿಕರು ರಕ್ತದಾನ ಕಾರ್ಯದಲ್ಲಿ ಭಾಗವಹಿಸಿ ಸಾಮಾಜಿಕ ಜವಾಬ್ದಾರಿ ತೋರಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Yoga Camp: ಮೂಳೆ, ಸ್ನಾಯು ದೃಢತೆ ಕಡೆಗಣಿಸಬೇಡಿ: 87ನೇ ವಿಶೇಷ ಯೋಗ ಶಿಬಿರದಲ್ಲಿ ಡಾ.ಎಸ್.ಬಿ.ಹಂದ್ರಾಳ ಸಲಹೆ

ಪ್ರತಿ ವರ್ಷದಂತೆ ಈ ವರ್ಷವೂ ನ.25 ರಂದು ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯನ್ನು ರಕ್ತದಾನದ ಮಹತ್ವದ ಬಗ್ಗೆ, ರಕ್ತದಾನ ಮಾಡುವುದರಿಂದ ಆಗುವ ಆರೋಗ್ಯದ ಉಪಯೋಗಗಳು ಹಾಗೂ ಸಾಮಾಜಿಕ ಉಪಯೋಗಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಆಚರಣೆ ಮಾಡಲಾಗುತ್ತದೆ. ಜೊತೆಗೆ ಸ್ವಯಂ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಭವನದಲ್ಲಿ ಆಯೋಜಿಸಿ ರಕ್ತದಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಯೋಜಿಸಲು ಯೋಜಿಸಲಾಗಿದೆ. ಈ ಹಿಂದಿನ ಅಂಕಿ ಅಂಶಗಳನ್ನು ಅವಲೋಕಿಸಿ ಪ್ರತಿ ತಿಂಗಳು ಜಿಲ್ಲೆಗೆ ಎಷ್ಟು ಯುನಿಟ್ ರಕ್ತದ ಅವಶ್ಯಕತೆ ಇದೆ.

ಎಷ್ಟು ರಕ್ತದಾನ ಆಗಲಿದೆ ಎಂಬುದರ ಬಗ್ಗೆ ಅಂದಾಜು ಮಾಡಿ ವರದಿ ನೀಡಬೇಕು. ಪ್ರತಿ ಮಾಹೆ ಯಲ್ಲಿ ಮೂರು ಇಲಾಖೆಯವರು ಸೇರಿಕೊಂಡು ಇಲಾಖಾವಾರು ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲು ಕ್ರಿಯಾ ಯೋಜನೆಯನ್ನು ಮಾಡಿಕೊಳ್ಳಬೇಕು. ಅದರಂತೆ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲು ಜಿಲ್ಲೆಯಲ್ಲಿ ವಾರ್ಷಿಕ ಕ್ಯಾಲೆಂಡರ್‌ ಅನ್ನು ಸಿದ್ಧಪಡಿಸಲು ಈ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

1634818 meeting

ರಕ್ತದಾನವು ದಿನಾಚರಣೆಗೆ ಮಾತ್ರ ಸೀಮಿತವಾಗಬಾರದು. ಪ್ರತಿ ಮಾಹೆಯ ರಕ್ತದಾನ ಶಿಬಿರಗಳನ್ನು ಯೋಜಿತವಾಗಿ ಆಯೋಜಿಸಬೇಕು. ಈ ನಿಟ್ಟಿನಲ್ಲಿ ಒಂದು ವರ್ಷದಲ್ಲಿ ಯಾವ ಯಾವ ದಿನಾಂಕ ಗಳಲ್ಲಿ ಯಾವ ಯಾವ ಇಲಾಖೆಯವರು ಎಷ್ಟು ರಕ್ತದಾನ ಮಾಡುವುದು ಎಂಬುದನ್ನು ಗುರಿ ನಿಗದಿಪಡಿಸಿ ಪ್ರಯತ್ನಿಸುವುದು ಒಳಿತು.

ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ರಕ್ತದಾನ ಮಾಡುವ ಮೂಲಕ ಇತರಿಗೆ ಮಾದರಿಯಾದರೆ ಸಾರ್ವಜನಿಕರು ಸಹ ಪ್ರೇರಿತರಾಗಿ ರಕ್ತದಾನ ಮಾಡುತ್ತಾರೆ. ಆದ್ದರಿಂದ ಶಿಕ್ಷಣ, ಆರೋಗ್ಯ, ಕಂದಾಯ, ಪೊಲೀಸ್ ಹಾಗೂ ಆರ್.ಡಿ.ಪಿ.ಆರ್ ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಗಳು ಇರುವುದರಿಂದ ಅವರೆಲ್ಲರನ್ನು ಪ್ರೇರೆಪಿಸಿ ರಕ್ತದಾನವನ್ನು ಯಶಸ್ವಿಯಾಗಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ಎಲ್ಲಾ ಇಲಾಖೆಗಳನ್ನು ಸಮನ್ವಯ ಹಾಗೂ ಸಹಕಾರ ಪಡೆದು ರಕ್ತದಾನದಲ್ಲಿ ಜಿಲ್ಲೆಯು ಮಾದರಿಯಾಗುವಂತೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದಿಂದ ಆಯೋಜಿಸಿದ್ದ ರಸಪ್ರಶ್ನೆ ಮತ್ತು ಮ್ಯಾರಾಥಾನ್ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚೇತನ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಉಮಾ, ರೆಡ್ ಕ್ರಾಸ್ ಸಂಸ್ಥೆಯ ರವಿಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.