ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

3 ವರ್ಷಗಳ ಬಳಿಕ ‘ನರಿ ಕಥೆ’ ಹೇಳಲು ಬಂದ ದಯಾಳ್ ಪದ್ಮನಾಭನ್; ಶಿವರಾತ್ರಿ ಹಬ್ಬಕ್ಕೆ ಸಿನಿಮಾ ರಿಲೀಸ್!

ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ʻನರಿ ಕಥೆʼ ಸಿನಿಮಾದ ಮೂಲಕ ಸುಮಾರು 3 ವರ್ಷಗಳ ಸುದೀರ್ಘ ವಿರಾಮದ ನಂತರ ಮತ್ತೆ ಕನ್ನಡ ಚಿತ್ರ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮರಳಿದ್ದಾರೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ಕಂಡಿರುವ ಈ ಚಿತ್ರವು ನಾಯಕ-ನಾಯಕಿಗಿಂತ ಕಥೆ ಮತ್ತು ಪಾತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಿದೆಯಂತೆ.

3 ವರ್ಷದ ಬಳಿಕ ʻನರಿ ಕಥೆʼ ಹೇಳಲು ಹೊರಟ ನಿರ್ದೇಶಕ ದಯಾಳ್ ಪದ್ಮನಾಭನ್!

-

Avinash GR
Avinash GR Nov 17, 2026 3:50 PM

ವಿಭಿನ್ನ ಕಥಾಹಂದರದ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ದಯಾಳ್ ಪದ್ಮನಾಭನ್, ಸುಮಾರು 3 ವರ್ಷಗಳ ವಿರಾಮದ ನಂತರ ಮತ್ತೆ ಕನ್ನಡ ಚಿತ್ರ ನಿರ್ಮಾಣ ಮತ್ತು ನಿರ್ದೇಶನಕ್ಕೆ ಮರಳಿದ್ದಾರೆ. ‘ಆ ಕರಾಳ ರಾತ್ರಿ’ಯಂತಹ ಯಶಸ್ವಿ ಚಿತ್ರದ ಬಳಿಕ ಇದೀಗ ತಮ್ಮದೇ ‘ಡಿ ಪಿಕ್ಚರ್ಸ್’ ಲಾಂಛನದ ಅಡಿಯಲ್ಲಿ ‘ನರಿ ಕಥೆ’ ಎಂಬ ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.

ಈ ಚಿತ್ರಕ್ಕೆ ದಯಾಳ್ ಪದ್ಮನಾಭನ್ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ಸರಳ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿತು.

ಈ ಹಿಂದೆಯೇ ರೆಡಿಯಾಗಿದ್ದ ಸ್ಕ್ರಿಪ್ಟ್‌

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಹಾಗೂ ನಿರ್ಮಾಪಕ ದಯಾಳ್ ಪದ್ಮನಾಭನ್, "ಇದು ಸಂಪೂರ್ಣವಾಗಿ ಪಾತ್ರಾಧಾರಿತ ಸಿನಿಮಾವಾಗಿದ್ದು, ಇಲ್ಲಿ ನಾಯಕ ಅಥವಾ ನಾಯಕಿಗಿಂತ ಕಥೆ ಮತ್ತು ಪಾತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸುಮಾರು ಐದಾರು ವರ್ಷಗಳ ಹಿಂದೆಯೇ ಈ ಚಿತ್ರದ ಚಿತ್ರಕಥೆ ಸಿದ್ಧವಾಗಿತ್ತಾದರೂ, ಹಲವು ಕಾರಣಗಳಿಂದ ಸೆಟ್ಟೇರಿರಲಿಲ್ಲ. ಇದೀಗ ದೈವಾನುಗ್ರಹದಿಂದ ಸಿನಿಮಾ ಆರಂಭವಾಗಿದೆ" ಎಂದರು.

"ಇದು ನನ್ನ ವೃತ್ತಿಜೀವನದ 23ನೇ ನಿರ್ದೇಶನದ ಚಿತ್ರವಾಗಿದ್ದು, ಕನ್ನಡದಲ್ಲಿ 19ನೇ ಸಿನಿಮಾವಾಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಐದು ನನ್ನ ಅದೃಷ್ಟದ ಸಂಖ್ಯೆಯಾಗಿದ್ದು, ಈ ಚಿತ್ರದ ಬಗ್ಗೆ ವಿಶೇಷ ಭರವಸೆ ಇದೆ. ವಿಭಿನ್ನ ಕಥೆ ಹಾಗೂ ತೀವ್ರ ಭಾವನೆಗಳನ್ನು ಒಳಗೊಂಡಿರುವ ಈ ಚಿತ್ರವನ್ನು ಎಲ್ಲವೂ ಅಂದುಕೊಂಡಂತೆ ನಡೆದರೆ 2027ರ ಮಾರ್ಚ್ 6ರಂದು ಮಹಾಶಿವರಾತ್ರಿಯ ಶುಭದಿನದಂದು ಬಿಡುಗಡೆ ಮಾಡುವ ಯೋಜನೆ ಇದೆ" ಎಂದು ದಯಾಳ್‌ ಮಾಹಿತಿ ಹಂಚಿಕೊಂಡರು.

ಅತ್ಯಂತ ಮಹತ್ವವಿರುವ ಪಾತ್ರ

ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿರುವ ಹಿರಿಯ ನಟ ಬಿ. ಸುರೇಶ, "ಸುಮಾರು ಏಳೆಂಟು ದಿನಗಳ ಹಿಂದೆ ದಯಾಳ್ ಅವರು ಕರೆ ಮಾಡಿ ಚಿತ್ರದ ಕಥೆ ಹೇಳಿದಾಗ ನನಗೆ ತುಂಬಾ ಖುಷಿಯಾಯಿತು. ಕಥೆ ಕೇಳಿದ ತಕ್ಷಣವೇ ಇಂತಹದ್ದೊಂದು ವಿಶೇಷ ಪಾತ್ರದಲ್ಲಿ ನಟಿಸಬೇಕು ಎಂಬ ಆಸೆ ಮೂಡಿತು. ನಾನು ಇಷ್ಟಪಡುವಂತಹ ಹಾಗೂ ಕಥೆಗೆ ಅತ್ಯಂತ ಮಹತ್ವವಿರುವ ಪಾತ್ರವಿದು. ದಯಾಳ್ ಹಾಗೂ ಇಡೀ ಚಿತ್ರತಂಡದ ಜೊತೆ ಕೆಲಸ ಮಾಡುತ್ತಿರುವುದು ಬಹಳ ಸಂತೋಷ ತಂದಿದೆ" ಎಂದರು.

ಪ್ರಮುಖ ಪಾತ್ರದಲ್ಲಿ ಮಿತ್ರ

ಹಾಸ್ಯ ಮತ್ತು ಪೋಷಕ ಪಾತ್ರಗಳ ಮೂಲಕ ಮನೆಮಾತಾಗಿರುವ ನಟ ಮಿತ್ರ, "ನನ್ನನ್ನು ಚಿತ್ರರಂಗದ ಮುಖ್ಯವಾಹಿನಿಗೆ ಪರಿಚಯಿಸಿದವರೇ ದಯಾಳ್ ಪದ್ಮನಾಭನ್. ಗಣೇಶ್ ಅವರ ಮೂಲಕ ನನ್ನನ್ನು ಗುರುತಿಸಿ ಅವಕಾಶ ನೀಡಿದ್ದರು. ಇದೀಗ ಮತ್ತೊಮ್ಮೆ ಅವರ ನಿರ್ದೇಶನದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದು ನನಗೆ ಅತೀವ ಸಂತಸ ತಂದಿದೆ. ಉತ್ತಮ ಕಥೆ ಹಾಗೂ ಪ್ರತಿಭಾವಂತ ಕಲಾವಿದರ ತಂಡದೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ" ಎಂದು ಹೇಳಿದರು.

ದಯಾಳ್‌ ತುಂಬಾ ಶಿಸ್ತಿನ ನಿರ್ದೇಶಕರು

ನಟಿ ವೀಣಾ ಸುಂದರ್ ೀ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, "ಮೊದಲ ಬಾರಿಗೆ ಕಥೆ ಕೇಳಿದಾಗಲೇ ನನಗೆ ಬಹಳ ಇಷ್ಟವಾಯಿತು, ಅದರಲ್ಲೂ ಸೆಕೆಂಡ್‌ ಹಾಫ್‌ ತುಂಬಾ ಕುತೂಹಲಕಾರಿಯಾಗಿದೆ. ದಯಾಳ್ ಅವರಂತಹ ಪರ್ಫೆಕ್ಷನಿಸ್ಟ್ ನಿರ್ದೇಶಕರ ಜೊತೆ ಕೆಲಸ ಮಾಡುವುದು ಉತ್ತಮ ಅನುಭವ. ಕಲಾವಿದರಿಂದ ಯಾವ ರೀತಿಯ ಅಭಿನಯ ಬೇಕು ಎಂಬುದನ್ನು ಅವರು ಸ್ಪಷ್ಟವಾಗಿ ತಿಳಿಸುತ್ತಾರೆ ಮತ್ತು ಸಿನಿಮಾಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಚಿತ್ರೀಕರಿಸುವ ಅವರ ಶಿಸ್ತು ನಿಜಕ್ಕೂ ಮೆಚ್ಚುವಂತಹದ್ದು" ಎಂದು ಅಭಿಪ್ರಾಯಪಟ್ಟರು.

ಈ ಚಿತ್ರದಲ್ಲಿ ಸುಭಾಷ್ ಪಾರ್ಥ, ಬಿಂಬಶ್ರೀ ಹಾಗೂ ಪ್ರಿಯಾ ಗೌಡ ಪ್ರಮುಖ ತಾರಾಗಣದಲ್ಲಿದ್ದಾರೆ. ತಾಂತ್ರಿಕ ವರ್ಗದಲ್ಲಿ ಅವಿನಾಶ್ ಯು. ಶೆಟ್ಟಿ ಕ್ರಿಯೇಟಿವ್ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅಮರ್ ಗೌಡ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.

ಸಂಗೀತ ನಿರ್ದೇಶಕ ಅಭಿಷೇಕ್ ಎಸ್. ಎನ್. ಮಾತನಾಡಿ, "ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತಕ್ಕೆ ವಿಶೇಷ ಮಹತ್ವವಿದೆ. ಕಥೆಯ ಭಾವನೆಗಳಿಗೆ ಪೂರಕವಾಗಿ ಸಂಗೀತ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಚಿತ್ರದಲ್ಲಿ ಒಟ್ಟು 3 ಹಾಡುಗಳಿರಲಿವೆ" ಎಂದು ತಿಳಿಸಿದರು.