ಅಣ್ಣಾವ್ರು ಇರುವುದನ್ನು ಗಮನಿಸಿದೇ ಅವರಂತೆ ಮಿಮಿಕ್ರಿ ಮಾಡಿದ್ದ ನಟ ಜಗ್ಗೇಶ್; ಅಂದು ಡಾ. ರಾಜ್‌ಕುಮಾರ್ ರಿಯಾಕ್ಷನ್ ಹೇಗಿತ್ತು?
Dr Rajkumar Memories: ಡಾ. ರಾಜ್‌ಕುಮಾರ್ ಅವರ 20ನೇ ಪುಣ್ಯಸ್ಮರಣೆಯಂದು ಅವರ ಜೊತೆಗಿನ ಒಡನಾಟದ ಕುರಿತು ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಒಮ್ಮೆ ಅಣ್ಣಾವ್ರು ಪಕ್ಕದಲ್ಲೇ ಇರುವುದನ್ನು ಗಮನಿಸದೆ ಅವರಂತೆಯೇ ಮಿಮಿಕ್ರಿ ಮಾಡಿದ್ದರಂತೆ ಜಗ್ಗೇಶ್. ಮುಂದೇನಾಯಿತು?
-
ವರನಟ ಡಾ. ರಾಜ್‌ಕುಮಾರ್ ಮತ್ತು ನಟ ಜಗ್ಗೇಶ್ ಅವರ ನಡುವೆ ಎಂಥ ಬಾಂಧವ್ಯ ಇತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಜಗ್ಗೇಶ್ ಅವರ ನಟನೆಗೆ ಅಣ್ಣಾವ್ರು ಮನಸೋತಿದ್ದರೆ, ಅಣ್ಣಾವ್ರನ್ನು ದೇವರಂತೆ ಕಾಣುತ್ತಿದ್ದರು ಜಗ್ಗೇಶ್. ಇಂದು ಡಾ. ರಾಜ್‌ಕುಮಾರ್ ಅವರ 20ನೇ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಕೆಲ ಅಪರೂಪದ ಘಟನೆಗಳನ್ನು ಜಗ್ಗೇಶ್ ನೆನಪು ಮಾಡಿಕೊಂಡಿದ್ದಾರೆ. ಒಮ್ಮೆ ರಾಜ್‌ಕುಮಾರ್ ಅವರು ಇರುವುದನ್ನು ಗಮನಿಸಿದೆ, ಅವರಂತೆಯೇ ಮಿಮಿಕ್ರಿ ಮಾಡಿದ್ದರಂತೆ ಜಗ್ಗೇಶ್. ನಂತರ ಅಣ್ಣಾವ್ರ ರಿಯಾಕ್ಷನ್ ಹೇಗಿತ್ತು? ಮುಂದೆ ಓದಿ.
ಜಗ್ಗೇಶ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ
"ಇಂದು ನಮ್ಮ ದೇವರು ದೇವರಾಗಿ, ದೇವರ ಜೊತೆಗೆ ದೇವರ ಪೂಜೆಗೆ ಮೋಡದ ಮರೆಯಲ್ಲಿ ಮರೆಯಾದ ದಿನ.. ಹಾಗೇ ದೇವರು ವಾಸವಿದ್ದ ಮನೆಯ ರಸ್ತೆಯಲ್ಲಿ ಇಂದು ಹೋಗಿ ಬಂದೆ.. ಅವರು ಇದ್ದಾಗ ಸಂಜೆ 6.15 ಗಂಟೆಗೆ ನಡಿಗೆಗೆ ಹೊರಡುತ್ತಿದ್ದರು. ಸಾಮಾನ್ಯ ಬಿಳಿ ಶರ್ಟು, ಪೈಜಾಮ, ತಲೆಗೆ ಬಟ್ಟೆ ಸುತ್ತಿ ಯಾರೂ ಇವರನ್ನು ಪತ್ತೆ ಮಾಡದಂತೆ ಇರುತ್ತಿದ್ದರು. ಅವರ ಹಿಂದೆ ಸಹಾಯಕ ಚನ್ನ ಹನುಮಂತನ ರೀತಿ ಹಿಂಬಾಲಿಸುತ್ತಿದ್ದ.."
ಡಾ. ರಾಜ್‌ಕುಮಾರ್ ಪುಣ್ಯಸ್ಮರಣೆ; ನಾಡಿನ ಹಿತಕ್ಕಾಗಿ ಶ್ರಮಿಸಿದ ಬಂಗಾರದ ಮನುಷ್ಯನನ್ನು ನೆನೆದ ಸಿಎಂ, ಡಿಸಿಎಂ
ಹಳೆಯ ಘಟನೆಯನ್ನು ನೆನಪಿಸಿಕೊಂಡ ಜಗ್ಗೇಶ್
"ಒಂದು ಸಂಜೆ ಡಾ. ರಮಣ್ ರಾವ್ ಮನೆಯ ರಸ್ತೆಯಲ್ಲಿ ಸಿಗರೇಟು ಸೇದುತ್ತಾ ನಿಂತಿದ್ದೆ. ಆಗ ಚನ್ನ ಕಂಡ. ಅಣ್ಣನ ಧ್ವನಿಯಲ್ಲಿ, 'ಏನ್ ಚನ್ನಪ್ಪನವರೇ ಒಬ್ಬರೆ.. ಎಲ್ಲಿ ನಮ್ಮ ದೇವರು..?' ಎಂದೆ. ಆಗ ಆತ ಕಣ್ಣು ಮಿಟುಕಿಸಿ, 'ಸುಮ್ಮನಿರು' ಎಂದ. ಆಗ ನಾನು, 'ಯಾಕೆ..? ಯಾಕೆ..? ಏನಾಯ್ತು..?' ಎಂದಾಗ, ನಿಜವಾದ ಅಣ್ಣನ ಧ್ವನಿ, 'ಇಲ್ಲೆ.. ಇಲ್ಲೆ.. ನಾನಿಲ್ಲೆ' ಎಂದರು.. ನನ್ನ ಸಿಗರೇಟು ಎಲ್ಲೋಯಿತೋ ತಿಳಿಯದು.. ನಾನು ಸ್ತಬ್ಧವಾಗಿ 'ಅಣ್ಣ' ಎಂದು ತಲೆ ಕೆರೆಯುತ್ತಾ ನಿಂತೆ. 'ಮಿಮಿಕ್ರಿ ಚೆನ್ನಾಗಿತ್ತು' ಎಂದು ನಗುತ್ತಾ ಮುಂದೆ ಸಾಗಿದರು.."
"ನನಗೆ ಇಷ್ಟವಾದಾಗಲೆಲ್ಲಾ ಅದೇ ಮನೆಗೆ ಹೋಗಿ ಮಾತಾಡಿಸಿ ಸಮಯ ಕಳೆದು ಬರುತ್ತಿದ್ದೆ. ಇಂದು ಅದೇ ರಸ್ತೆ, ಅದೇ ಜಾಗ, ಮನೆ ಬದಲಾಗಿದೆ, ಅವರು ಮಾತ್ರ ಇಲ್ಲ.. ನನಗನ್ನಿಸಿದ್ದು ಎಂಥ ವಿಚಿತ್ರ ಈ ಜಗತ್ತು. ಯಾರೇ ಆಗಲಿ, ಒಂದು ದಿನ ಇದ್ದವರು ಮತ್ತೊಂದು ದಿನ ನೆನಪು ಮಾತ್ರ. ಹಾಗಾಗಿ ನಾವು ಬಿಟ್ಟು ಹೋಗುವ ನೆನಪು ಸುಮಧುರ ಸುಂದರ ಅನುಕರಣೀಯವಾಗಿ ಇರಬೇಕು.. ʻಬೊಂಬಾಟ್ ಹುಡುಗʼ ಚಿತ್ರದ 'ಬೊಂಬಾಟು ಹುಡುಗ ನಾನು' ಹಾಡಿನ ಊಟದ ವಿರಾಮ ಸಮಯದಲ್ಲಿ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಅವರ ಕಾರ್ಯಕ್ರಮ ಇತ್ತು. ಆಗ ಅವರಿಗೆ ಹಾರ ಹಾಕಿದ ಕ್ಷಣದ ಚಿತ್ರ ಇದು" ಎಂದು ಜಗ್ಗೇಶ್ ಅವರು ಬರೆದುಕೊಂಡಿದ್ದಾರೆ.
ಅಣ್ಣಾವ್ರ ನಿಧನದ ದಿನ ಏನಾಯಿತು?
ಮತ್ತೊಂದು ಪೋಸ್ಟ್‌ನಲ್ಲಿ ಡಾ. ರಾಜ್‌ಕುಮಾರ್ ಅವರ ನಿಧನದ ದಿನ ಏನು ನಡೆಯಿತು ಎಂಬುದನ್ನು ಬರೆದುಕೊಂಡಿದ್ದಾರೆ ಜಗ್ಗೇಶ್. "2006 ಏಪ್ರಿಲ್‍ನ 12ನೇ ತಾರೀಖು.. ಶ್ರೀರಂಗಪಟ್ಟಣದ ಹಳ್ಳಿಯಲ್ಲಿ ʻಪಾಂಡವರುʼ ಚಿತ್ರೀಕರಣ.. ರಾಜಣ್ಣ ಅಳಿಯ ರಾಮ್‌ಕುಮಾರ್ ನಿರ್ಮಾಣ.. ಮಂಡ್ಯ ಆದ ಪ್ರಯುಕ್ತ ಅಂಬರೀಷ್ ರವರ ಅಭಿಮಾನಿ ಮನೆಯಿಂದ ಊಟದ ವ್ಯೆವಸ್ಥೆ ಕೇಳಬೇಕೆ? ಹಬ್ಬದ ರೀತಿ ಇತ್ತು.. ಊಟಕ್ಕೆ ಎಲ್ಲರು ತಯಾರಿದ್ದರು ರಾಜಣ್ಣನ ಮರಣದ ಸುದ್ಧಿ ಬರಸಿಡಿಲಿನಂತೆ ಬಂತು. ಎಲ್ಲರೂ ಊಟ ಬಿಟ್ಟು ಕ್ಷಣಾರ್ಧದಲ್ಲಿ ಜಾಗ ಖಾಲಿ ಮಾಡಿದರು.."
ಜಗ್ಗೇಶ್ ಹಂಚಿಕೊಂಡ ಪೋಸ್ಟ್
2006 ಏಪ್ರಿಲ್‍ನ 12ನೆ ತಾರೀಖು
— ನವರಸನಾಯಕ ಜಗ್ಗೇಶ್ (@Jaggesh2) April 12, 2026
ಶ್ರೀರಂಗಪಟ್ಟಣದ ಹಳ್ಳಿಯಲ್ಲಿ "ಪಾಂಡವರು" ಚಿತ್ರೀಕರಣ
ರಾಜಣ್ಣ ಅಳಿಯ ರಾಮಕುಮಾರ್ ನಿರ್ಮಾಣ..ಮಂಡ್ಯ ಆದ ಪ್ರಯುಕ್ತ ಅಂಬರೀಶ ರವರ ಅಭಿಮಾನಿ ಮನೆಯಿಂದ ಊಟದ ವ್ಯೆವಸ್ತೆ ಕೇಳಬೇಕೆ ಹಬ್ಬದ ರೀತಿ ಇತ್ತು..
ಊಟಕ್ಕೆ ಎಲ್ಲರು ತಯಾರಿದ್ದರು ರಾಜಣ್ಣನ ಮರಣದ ಸುದ್ಧಿ ಬರಸಿಡಿಲಿನಂತೆ ಬಂತು ಎಲ್ಲರು ಊಟ ಬಿಟ್ಟು… pic.twitter.com/iKX879476D
"ಬೆಂಗಳೂರಿಗೆ ಬಂದರೆ ಅಸಾಧ್ಯ ಜನಸಂಖ್ಯೆ, ದೊಂಬಿ, ಗಲಾಟೆ, ಕರ್ಪ್ಯೂ, ಇದರ ನಡುವೆ ರಾಜಣ್ಣನ ಅಂತ್ಯಕ್ರಿಯೆ. ಮುಂದೆ ಈ ದಿನ ಕನ್ನಡಿಗರು ನೆನಪಿಡುವ ಇತಿಹಾಸದ ದಿನವಾಯಿತು. ರಾಜಣ್ಣನ ಜೊತೆ ಕೊನೆಯ ಪಯಣದಲ್ಲಿ ರಾತ್ರಿ 12ರ ವರೆಗೆ ಜೊತೆಗಿದ್ದೆ. ಅದೇ ಅಣ್ಣನ ಹಾಗೂ ನನ್ನ ಕೊನೆಯ ವೀಕ್ಷಣೆ. ಅವರು ಬಂದ ಊರಿಗೆ ಹೋದರು. ನಾನು ನನ್ನ ಮನೆಗೆ ಬಂದೆ.. ನಮ್ಮ ಅಣ್ಣ ನಮ್ಮ ಹೆಮ್ಮೆ" ಎಂದು ಜಗ್ಗೇಶ್ ಅವರು ಬರೆದುಕೊಂಡಿದ್ದಾರೆ.