ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Rajkumar: 'ಲೀಲಮ್ಮ.. ನಿನ್ನ ಗಂಡ ಯಾರಮ್ಮ?' ಪುಸ್ತಕ ಬಿಡುಗಡೆ; ʻಅಣ್ಣಾವ್ರು ಹಾಲಿನಂತೆ ಪರಿಶುದ್ಧʼ- ಎನ್. ಆರ್. ರಮೇಶ್

ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಎನ್. ಆರ್. ರಮೇಶ್ ಬರೆದಿರುವ 'ಲೀಲಮ್ಮ.. ನಿನ್ನ ಗಂಡ ಯಾರಮ್ಮ..?' ಕೃತಿ ಲೋಕಾರ್ಪಣೆಗೊಂಡಿದೆ. ನಟಿ ಲೀಲಾವತಿ ಅವರ ಪತಿ ರಂಗಭೂಮಿ ಕಲಾವಿದ ಮಹಾಲಿಂಗ ಭಾಗವತರ್ ಎಂಬುದಕ್ಕೆ ಚೆನ್ನೈನ ಆಸ್ತಿ ದಾಖಲೆಗಳ ಸಾಕ್ಷಿ ಒದಗಿಸಲಾಗಿದ್ದು, ಡಾ. ರಾಜ್ ಹಾಲಿನಂತೆ ಪರಿಶುದ್ಧರು ಎಂಬ ಸತ್ಯ ಎಂದು ಅವರು ಹೇಳಿದ್ದಾರೆ.

ʻಲೀಲಮ್ಮ.. ನಿನ್ನ ಗಂಡ ಯಾರಮ್ಮʼ ಪುಸ್ತಕ ಲೋಕಾರ್ಪಣೆ; ಲೇಖಕರು ಹೇಳಿದ್ದೇನು?

-

Avinash GR
Avinash GR Jul 27, 2026 1:07 PM

ವರನಟ ಡಾ. ರಾಜ್‌ಕುಮಾರ್ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದ ಅಪಪ್ರಚಾರಗಳಿಗೆ ಕೊನೆಗೂ ತೆರೆ ಬಿದ್ದಿದ್ದು, ಕಲಾಕೌಸ್ತುಭ ಡಾ. ರಾಜ್ ಅವರು ಹಾಲಿನಂತೆ ಪರಿಶುದ್ಧರಾಗಿದ್ದರು ಎಂದು ಬಿಜೆಪಿ ಮುಖಂಡ ಹಾಗೂ ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಎನ್. ಆರ್. ರಮೇಶ್ ಹೇಳಿದ್ದಾರೆ.

ಬೆಂಗಳೂರಿನ ಯಡಿಯೂರು ವಾರ್ಡ್‌ನಲ್ಲಿರುವ 'ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಸಭಾಂಗಣ'ದಲ್ಲಿ ನಡೆದ ಸಮಾರಂಭದಲ್ಲಿ, ಎನ್. ಆರ್. ರಮೇಶ್ ಬರೆದಿರುವ ಹಾಗೂ ಸ್ನೇಹ ಪ್ರಕಾಶನ ಹೊರತಂದಿರುವ 'ಲೀಲಮ್ಮ.. ನಿನ್ನ ಗಂಡ ಯಾರಮ್ಮ..?' ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

ಸತ್ಯ ಶೋಧನೆಗೆ ಸಂದ ಜಯ: ಡಾ. ಸಿ. ಸೋಮಶೇಖರ್

ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ್, "ಯಾವುದೇ ಸತ್ಯವನ್ನು ಹೊರತೆಗೆಯಬೇಕಾದರೆ ಆಧುನಿಕ ತಂತ್ರಜ್ಞಾನದ ಜೊತೆಗೆ ಸತತ ಅಧ್ಯಯನ ಮತ್ತು ಸಾಧನೆ ಅಗತ್ಯ. ಮೇರುನಟ ಡಾ. ರಾಜ್‌ಕುಮಾರ್ ಅವರ ಚಾರಿತ್ರ್ಯಕ್ಕೆ ಧಕ್ಕೆ ತರಲು ನಡೆದ ಪ್ರಯತ್ನಗಳಿಗೆ ಈ ಕೃತಿ ಸೂಕ್ತ ಉತ್ತರ ನೀಡಿದೆ. ಸತ್ಯ ಶೋಧನೆಯ ಮೂಲಕ ದಶಕಗಳ ಕಾಲದ ಸುಳ್ಳು ಸುದ್ದಿ ಹಾಗೂ ಗೊಂದಲಗಳಿಗೆ ಈಗ ಶಾಶ್ವತ ತೆರೆ ಬಿದ್ದಿದೆ" ಎಂದರು.

ಹಿರಿಯ ನಟಿ ಲೀಲಾವತಿ ಕಾಲು ಜಾರಿ ಬಿದ್ದು ಸೊಂಟ, ಕಾಲಿಗೆ ಗಾಯ

ಅಪಪ್ರಚಾರಕ್ಕೆ ದಾಖಲೆಗಳ ಸಮೇತ ಉತ್ತರ

ಕೃತಿಯ ಲೇಖಕ ಎನ್.ಆರ್. ರಮೇಶ್ ಮಾತನಾಡಿ, "ಅತ್ಯಂತ ಬಡ ಕುಟುಂಬದಿಂದ ಬಂದು ಸ್ವಪ್ರಯತ್ನದಿಂದ ಮಹೋನ್ನತ ಎತ್ತರಕ್ಕೆ ಬೆಳೆದ ಡಾ. ರಾಜ್‌ಕುಮಾರ್ ಅವರ ಏಳಿಗೆಯನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಳೆದ ಐದಾರು ದಶಕಗಳಿಂದ ಅವರ ಚಾರಿತ್ರ್ಯವಧೆ ಮಾಡುವ ದುರುದ್ದೇಶಪೂರ್ವಕ ಅಪಪ್ರಚಾರದಲ್ಲಿ ತೊಡಗಿದ್ದವು. ಸಮಾಜಕ್ಕೆ ನೈಜ ಸತ್ಯವನ್ನು ತಲುಪಿಸುವ ಏಕೈಕ ಉದ್ದೇಶದಿಂದ ಈ ಪುಸ್ತಕ ಬರೆಯಲಾಗಿದೆ" ಎಂದು ಸ್ಪಷ್ಟಪಡಿಸಿದರು.

ಆಸ್ಪತ್ರೆ ನಿರ್ಮಾಣಕ್ಕೆ ಸ್ವಂತ ಜಮೀನು ಮಾರಿದ ನಟಿ ಎಂ.ಲೀಲಾವತಿ

ಲೀಲಾವತಿಯವರ ಪತಿ ಮಹಾಲಿಂಗ ಭಾಗವತರ್

ಡಾ. ರಾಜ್‌ಕುಮಾರ್ ಅವರ ಜೀವನ ಪರಿಶುದ್ಧವಾಗಿತ್ತು ಎಂದು ಬಣ್ಣಿಸಿದ ಲೇಖಕರು, "ಖ್ಯಾತ ರಂಗಭೂಮಿ ಕಲಾವಿದ ದಿವಂಗತ ಮಹಾಲಿಂಗ ಭಾಗವತರ್ ಅವರೇ ನಟಿ ಲೀಲಾವತಿ ಅವರ ಧರ್ಮಪತ್ನಿ. 1962ರಲ್ಲಿ ಇವರಿಬ್ಬರ ವಿವಾಹ ನಡೆದಿದ್ದು, ತದನಂತರ ವಿನೋದ್ ರಾಜ್ ಜನಿಸಿದರು. ತಮಿಳುನಾಡಿನ ಚೆನ್ನೈ ಹಾಗೂ ಚಂಗಲ್ ಪಟ್ಟು ಜಿಲ್ಲೆಗಳಲ್ಲಿ ಮಹಾಲಿಂಗ ಭಾಗವತರ್, ಲೀಲಾವತಿ ಮತ್ತು ವಿನೋದ್ ರಾಜ್ ಅವರ ಹೆಸರಿನಲ್ಲಿರುವ ಸ್ವತ್ತುಗಳ ಅಧಿಕೃತ ದಾಖಲೆಗಳು ಇದಕ್ಕೆ ಸಾಕ್ಷಿಯಾಗಿವೆ" ಎಂದು ಪೂರಕ ಆಧಾರಗಳನ್ನು ವಿವರಿಸಿದರು.

ಈ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಬಿ. ಗಣಪತಿ, ಲೇಖಕರಾದ ದೊಡ್ಡಹುಲ್ಲೂರು ರುಕ್ಕೋಜಿ, ಜಗನ್ನಾಥ್ ಬಹುಳೆ, ಚಲನಚಿತ್ರ ನಿರ್ದೇಶಕ ಪ್ರವೀಣ್ ನಾಯಕ್ ಸೇರಿದಂತೆ ಅನೇಕ ಸಾಹಿತ್ಯ ಹಾಗೂ ಚಲನಚಿತ್ರ ರಂಗದ ಗಣ್ಯರು ಭಾಗವಹಿಸಿದ್ದರು.