ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವವರ ಮೇಲೆ ಸಮರ ಸಾರಿದ ʻಬಿಗ್ ಬಾಸ್ʼ ಧ್ರುವಂತ್; ಪೊಲೀಸರಿಗೆ ನೀಡಿದ ದೂರಿನಲ್ಲೇನಿದೆ?
ಬಿಗ್ ಬಾಸ್ ಕನ್ನಡ ಸೀಸನ್ 12ರ ಮಾಜಿ ಸ್ಪರ್ಧಿ ಹಾಗೂ ನಟ ಧ್ರುವಂತ್ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಶ್ಲೀಲ, ಮಾನಹಾನಿಕಾರಕ ಹಾಗೂ ಬೆದರಿಕೆ ಒಡ್ಡುವ ಪೋಸ್ಟ್‌ಗಳನ್ನು ಹಾಕುತ್ತಿದ್ದ ಟ್ರೋಲರ್‌ಗಳ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಮತ್ತು ಬಸವೇಶ್ವರ ನಗರದ ಸೈಬರ್ ಸೆಲ್‌ನಲ್ಲಿ ದೂರು ನೀಡಿದ್ದಾರೆ.
-
ಕಿರುತೆರೆ ನಟ, 'ಬಿಗ್ ಬಾಸ್ ಕನ್ನಡ' ಸೀಸನ್ 12ರ ಮಾಜಿ ಸ್ಪರ್ಧಿ ಧ್ರುವಂತ್ ಅವರನ್ನು ಗುರಿಯಾಗಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಟ್ರೋಲ್ ಮಾಡುತ್ತಿದ್ದರು. ಇತ್ತೀಚೆಗೆ ಧ್ರುವಂತ್ ಸಂದರ್ಶನವೊಂದರಲ್ಲಿ "ಹುಚ್ಚು ಹುಚ್ಚರ ಥರ ಆಡುವವರಿಗೆ ಬೆಲೆ ಜಾಸ್ತಿ" ಎಂದಿದ್ದರು. ಅದನ್ನೇ ಇಟ್ಟುಕೊಂಡು ಧ್ರುವಂತ್ ವಿರುದ್ಧ ಕೆಲವರು ಕೆಟ್ಟ ಕಾಮೆಂಟ್‌ಗಳನ್ನು ಮಾಡುತ್ತಾ, ಟ್ರೋಲ್ ವಿಡಿಯೋಗಳನ್ನು ಹರಿಬಿಡುತ್ತಿದ್ದರು. ಇದೀಗ ಇಂಥವರ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಹಾಗೂ ಬಸವೇಶ್ವರ ನಗರದ ಸೈಬರ್ ಸೆಲ್‌ನಲ್ಲಿ ಧ್ರುವಂತ್ ಎಫ್‌ಐಆರ್ ದಾಖಲಿಸಿದ್ದಾರೆ.
ಧ್ರುವಂತ್ ನೀಡಿದ ದೂರಿನಲ್ಲೇನಿದೆ?
"ನಾನು ಕನ್ನಡ ಚಿತ್ರರಂಗ ಮತ್ತು ದೂರದರ್ಶನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಟನಾಗಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 12ರ ಫೈನಲಿಸ್ಟ್ ಆಗಿ ಸಾರ್ವಜನಿಕ ವ್ಯಕ್ತಿಯಾಗಿ ಸಮಾಜದಲ್ಲಿ ಗೌರವ ಮತ್ತು ವಿಶ್ವಾಸವನ್ನು ಸಂಪಾದಿಸಿದ್ದೇನೆ. ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮೂಲಕ ಕೆಲವರು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ನಿರಂತರವಾಗಿ ಅವಾಚ್ಯ, ಅಶ್ಲೀಲ, ಮಾನಹಾನಿಕಾರಕ ಹಾಗೂ ಬೆದರಿಕೆ ಒಡ್ಡುವ ರೀತಿಯ ಪೋಸ್ಟ್‌ಗಳು, ಕಾಮೆಂಟ್‌ಗಳು ಮತ್ತು ಸಂದೇಶಗಳನ್ನು ಪ್ರಕಟಿಸುತ್ತಿದ್ದಾರೆ" ಎಂದು ಧ್ರುವಂತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ
"ಈ ಕೃತ್ಯಗಳು ನನ್ನ ವೈಯಕ್ತಿಕ ಮಾನಸಿಕ ನೆಮ್ಮದಿಗೆ ಧಕ್ಕೆ ಉಂಟುಮಾಡುವುದಲ್ಲದೆ, ನನ್ನ ವೃತ್ತಿಜೀವನ, ಸಾರ್ವಜನಿಕ ಇಮೇಜ್, ಖ್ಯಾತಿ ಹಾಗೂ ಭವಿಷ್ಯದ ಉದ್ಯೋಗಾವಕಾಶಗಳ ಮೇಲೆಯೂ ಗಂಭೀರ ಪರಿಣಾಮ ಬೀರಿವೆ. ನಿರ್ಮಾಪಕರು, ನಿರ್ದೇಶಕರು, ಬ್ರಾಂಡ್‌ಗಳು ಮತ್ತು ಇತರ ವೃತ್ತಿಪರರು ನನ್ನ ಬಗ್ಗೆ ತಪ್ಪು ಅಭಿಪ್ರಾಯ ತಳೆಯುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿವೆ. ನನ್ನ ಗೌರವವನ್ನು ಉದ್ದೇಶಪೂರ್ವಕವಾಗಿ ಹಾಳುಮಾಡಲು ಹಾಗೂ ಸಾರ್ವಜನಿಕರಲ್ಲಿ ನನ್ನ ಬಗ್ಗೆ ದ್ವೇಷ ಮತ್ತು ಅವಿಶ್ವಾಸ ಮೂಡಿಸಲು ಈ ಕೃತ್ಯಗಳನ್ನು ಎಸಗಲಾಗುತ್ತಿದೆ" ಎಂದಿದ್ದಾರೆ.
ತೀವ್ರ ಮಾನಸಿಕ ಯಾತನೆ ಆಗಿದೆ
"ಅವರು ನಿರಂತರವಾಗಿ ಅವಾಚ್ಯ ಪದಗಳಿಂದ ನಿಂದಿಸುವುದು, ಸುಳ್ಳು ಮತ್ತು ಮಾನಹಾನಿಕಾರಕ ಆರೋಪಗಳನ್ನು ಹರಡುವುದು, ಬೆದರಿಕೆ ಹಾಕುವುದು, ನನ್ನ ಸಾಮಾಜಿಕ ಹಾಗೂ ವೃತ್ತಿಪರ ಬದುಕಿಗೆ ಧಕ್ಕೆ ಉಂಟುಮಾಡುವುದು ಮತ್ತು ಸಾರ್ವಜನಿಕವಾಗಿ ಅವಮಾನಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಕೃತ್ಯಗಳಿಂದ ನನಗೆ ತೀವ್ರ ಮಾನಸಿಕ ಯಾತನೆ ಹಾಗೂ ಸಾಮಾಜಿಕ ಅವಮಾನ ಉಂಟಾಗಿದೆ. ಆದ್ದರಿಂದ ಈ ರೀತಿ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ನನಗೆ ರಕ್ಷಣೆ ನೀಡಬೇಕು" ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.