Drishyam 3: ಮತ್ತೆ ಜಾರ್ಜ್‌ಕುಟ್ಟಿಯಾದ ಮೋಹನ್‌ಲಾಲ್; ಸಸ್ಪೆನ್ಸ್ ಥ್ರಿಲ್ಲರ್ ʼದೃಶ್ಯಂ 3ʼ ಚಿತ್ರದ ಶೂಟಿಂಗ್ ಆರಂಭ
ಮಲಯಾಳಂ ನಟ ಮೋಹನ್‌ಲಾಲ್ ಜಾರ್ಜ್‌ಕುಟ್ಟಿಯಾಗಿ ಮತ್ತೆ ಕಾಣಿಸಿಕೊಳ್ಳುತ್ತಿದ್ದು, 'ದೃಶ್ಯಂ 3' ಚಿತ್ರದ ಶೂಟಿಂಗ್ ಪ್ರಾರಂಭಿಸಿದ್ದಾರೆ. ನವರಾತ್ರಿ ಹಬ್ಬದ ಸಂದರ್ಭದಲ್ಲೇ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ಮೋಹನ್‌ಲಾಲ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಚಿತ್ರತಂಡದೊಂದಿಗೆ ಇರುವ ಹಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

Drishyam 3 -

ತಿರುವನಂತಪುರಂ: ಮಲಯಾಳಂನ ‘ದೃಶ್ಯಂ' ಹಾಗೂ ‘ದೃಶ್ಯಂ 2’ ಸಿನಿಮಾಗಳು ಹಿಟ್ ಆಗಿ ಸಿನಿಪ್ರಿಯರ ಮನಸ್ಸು ಗೆದ್ದಿದ್ದವು. ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ರಿಮೇಕ್ ಆಗಿ ಯಶಸ್ಸು ಗಳಿಸಿದ್ದವು. ಈ ಚಿತ್ರದ ಕನ್ನಡ ರಿಮೇಕ್ನಲ್ಲಿ ರವಿ ಚಂದ್ರನ್ ಕಾಣಿಸಿಕೊಂಡಿದ್ದರು. ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಸಂಚಲನ ಉಂಟು ಮಾಡಿದ್ದ 'ದೃಶ್ಯಂ' (Drishyam) ಚಿತ್ರದ ಮೂರನೇ ಭಾಗದ ಶೂಟಿಂಗ್ ಮಾಡಲು ಇದೀಗ ಚಿತ್ರತಂಡ ಸಿದ್ದವಾಗಿದೆ. ಹೌದು, ಖ್ಯಾತ ನಟ ಮೋಹನ್‌ಲಾಲ್ ಜಾರ್ಜ್‌ಕುಟ್ಟಿ ಆಗಿ ಮತ್ತೊಮ್ಮೆ ಕಾಣಿಸಿಕೊಂಡಿದ್ದು, 'ದೃಶ್ಯಂ 3' ಚಿತ್ರದ ಶೂಟಿಂಗ್ ಪ್ರಾರಂಭಿಸಿದ್ದಾರೆ. ನವರಾತ್ರಿ ಹಬ್ಬದ ಸಂದರ್ಭದಲ್ಲೇ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ಮೋಹನ್‌ಲಾಲ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಚಿತ್ರತಂಡದೊಂದಿಗೆ ಇರುವ ಹಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ.
'ದೃಶ್ಯಂ' ಸಿನಿಮಾವು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೆಚ್ಚುಗೆ ಪಡೆದ ಕ್ರೈಂ-ಥ್ರಿಲ್ಲರ್ ಸಿನಿಮಾ ಎನಿಸಿಕೊಂಡಿದೆ. ಮೊದಲ ಎರಡು ಭಾಗಗಳು ಭಾರೀ ಯಶಸ್ಸು ಗಳಿಸಿದ್ದು ಮೂರನೇ ಭಾಗದ ಮೇಲೆ ಭಾರಿ ನಿರೀಕ್ಷೆ ಇದೆ. ಈಗಾಗಲೇ ಸಿನಿಮಾದ ಚಿತ್ರೀಕರಣಕ್ಕೆ ಕೊಚ್ಚಿಯಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ. 'ದೃಶ್ಯಂ 3' ಬಗ್ಗೆ ಮಾತನಾಡಿದ ಮೋಹನ್‌ಲಾಲ್, ಇದು ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ಯಾವುದೇ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. "ನಾನು ಅದರ ಬಗ್ಗೆ ಏನಾದರೂ ಹೇಳಿದರೆ... ಅಯ್ಯೋ, ಅದು ಅತ್ಯಂತ ರಹಸ್ಯವಾದ ವಿಷಯ" ಎಂದು ಅವರು ಹೇಳಿದ್ದಾರೆ. ಜತೆಗೆ, 'ದೃಶ್ಯಂ 2' ಯಶಸ್ಸಿನ ನಂತರ, 'ದೃಶ್ಯಂ 3' ಸವಾಲಿನ ಕೆಲಸವಾಗಿದೆ ಎಂದು ತಿಳಿಸಿ, ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸಲು ಚಿತ್ರತಂಡ ತಯಾರಾಗಿದೆ ಎಂದು ಹೇಳಿಕೊಂಡಿದ್ದಾರೆ.
ಮೊದಲ ಭಾಗಗಳಲ್ಲಿದ್ದ ಪ್ರಮುಖ ಪಾತ್ರಗಳಾದ ಮೀನಾ, ಅನ್ಸಿಬಾ ಹಸನ್ ಮತ್ತು ಎಸ್ತರ್ ಅನಿಲ್ ಕೂಡ ಈ ಭಾಗದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಾಗುತ್ತಿದೆ. ಚಿತ್ರದ ಕಥಾವಸ್ತುವು ಜಾರ್ಜ್‌ಕುಟ್ಟಿ ಮತ್ತು ಅವರ ಕುಟುಂಬವು ಪೊಲೀಸರ ತನಿಖೆಯಿಂದ ತಪ್ಪಿಸಿಕೊಳ್ಳಲು ನಡೆಸುವ ಹೊಸ ಪ್ರಯತ್ನಗಳ ಸುತ್ತ ಇರಲಿದೆ. ಮಲಯಾಳಂ ಆವೃತ್ತಿಯ 'ದೃಶ್ಯಂ 3' 2026ರಲ್ಲಿ ಬಿಡುಗಡೆ ಯಾಗುವ ಸಾಧ್ಯತೆ ಇದೆ ಎಂದು ಹೇಳಾಗುತ್ತಿದ್ದು ಮೋಹನ್‌ಲಾಲ್ ಅವರ ಈ ಚಿತ್ರವು ಮೊದಲ ಎರಡು ಭಾಗಗಳಂತೆ ಸಕ್ಸಸ್ ಆಗುತ್ತಾ ಎಂದು ಕಾದು ನೋಡಬೇಕಿದೆ.