ʻನನ್ನ ಮಗನ ತಪ್ಪನ್ನು ನಾನು ಸಹಿಸಲಾರೆ, ಕ್ಷಮಿಸಲಾರೆʼ; ಪುತ್ರ ಸಾಮ್ರಾಟ್ ಕೇಸ್ ಬಗ್ಗೆ ನಟ ʻದುನಿಯಾʼ ವಿಜಯ್ ಮೊದಲ ಪ್ರತಿಕ್ರಿಯೆ
ʻದುನಿಯಾʼ ವಿಜಯ್ ಅವರ ಪುತ್ರ ಸಾಮ್ರಾಟ್ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂದೆಯಾಗಿ ಮಗನ ತಪ್ಪುಗಳನ್ನು ನಾನು ಎಂದಿಗೂ ಸಹಿಸುವುದಿಲ್ಲ ಮತ್ತು ಕ್ಷಮಿಸುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
-
ನಟ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್, ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿದ್ದು, ಈ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸದ್ಯ ಈ ಪ್ರಕರಣದಲ್ಲಿ ಸಾಮ್ರಾಟ್‌ಗೆ ಜಾಮೀನು ಸಿಕ್ಕಿದೆ. ಇದೇ ಮೊದಲ ಬಾರಿಗೆ ಪ್ರಕರಣದ ಕುರಿತು ಮಾತನಾಡಿದ ದುನಿಯಾ ವಿಜಯ್, "ನನ್ನ ಮಗನ ತಪ್ಪನ್ನು ನಾನು ಸಹಿಸಲಾರೆ, ಕ್ಷಮಿಸಲಾರೆ" ಎಂದು ಹೇಳಿದ್ದಾರೆ.
ತೀರ್ಪು ಏನು ಬರುತ್ತದೆಯೋ ಬರಲಿ
"ಮಗನ ವಿಚಾರದಲ್ಲಿ ಏನಾಗಿದೆಯೆಂದರೆ, ಇವರೆಲ್ಲ ಸ್ನೇಹಿತರು ಸೇರಿಕೊಂಡು ಗಲಾಟೆ ಮಾಡಿಕೊಂಡಿದ್ದಾರೆ. ಹಾಗಾಗಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಬುದ್ಧಿ ಹೇಳಿದ್ದಾರೆ. ಪ್ರಕರಣ ಕೋರ್ಟ್‌ಗೆ ಹೋಗಿದ್ದು, ಜಾಮೀನು ಕೂಡ ಸಿಕ್ಕಿದೆ. ತಪ್ಪು ಮಾಡಿದಾಗ ಯಾರೇ ಆಗಿರಲಿ, ಕಾನೂನಿನ ದೃಷ್ಟಿಯಲ್ಲಿ ಅವರು ತಪ್ಪಿತಸ್ಥರೇ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅಲ್ಲಿ ತೀರ್ಪು ಏನು ಬರುತ್ತದೆಯೋ ಬರಲಿ" ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.
ತಂದೆಯಾಗಿ ನಾನೂ ಕ್ಷಮಿಸುವುದಿಲ್ಲ
"ಪ್ರಕರಣ ನ್ಯಾಯಾಲಯದಲ್ಲಿದೆ, ತೀರ್ಮಾನ ಹೊರಬರಲಿ. ತಪ್ಪು ಮಾಡಿದ ಮೇಲೆ ಕಾನೂನಿನ ಮುಂದೆ ಎಲ್ಲರೂ ಒಂದೇ; ಯಾರೂ ಹೆಚ್ಚು ಅಲ್ಲ, ಯಾರೂ ಕಡಿಮೆ ಅಲ್ಲ. ನನ್ನ ಮಗ, ಇನ್ನೊಬ್ಬರ ಮಗ ಎಂಬ ಭೇದಭಾವವಿಲ್ಲ. ಕೋರ್ಟ್ ನೀಡುವ ತೀರ್ಪಿಗೆ ನಾವೆಲ್ಲರೂ ತಲೆಬಾಗಲೇಬೇಕು. ತಂದೆಯಾಗಿ ಹೇಳುವುದಾದರೆ, ಎಲ್ಲರ ಮಕ್ಕಳೂ ನನಗೆ ಒಂದೇ. ಜೀವನದಲ್ಲಿ ಯಾವಾಗಲೂ ಎಚ್ಚರದಿಂದ ಇರಬೇಕು, ಮೈಮೇಲೆ ಪ್ರಜ್ಞೆ ಹಾಗೂ ಜವಾಬ್ದಾರಿ ಇರಬೇಕು. ಪ್ರತಿಯೊಬ್ಬರಿಗೂ ಕಾನೂನಿನ ಅರಿವಿರಬೇಕು. ಇಂದು ಮಾತನಾಡುವುದಕ್ಕೂ ಕಾನೂನಿದೆ, ಎಚ್ಚರ ತಪ್ಪಿದರೆ ತಪ್ಪಾಗುತ್ತದೆ. ಇಂತಹ ಸಂದರ್ಭದಲ್ಲಿ ಇಷ್ಟು ದೊಡ್ಡ ಘಟನೆ ನಡೆದಾಗ ಯಾರೂ ಕ್ಷಮಿಸುವುದಿಲ್ಲ, ನಾನೊಬ್ಬ ತಂದೆಯಾಗಿ ನಾನೂ ಕ್ಷಮಿಸುವುದಿಲ್ಲ" ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ.
ಇದು ತಪ್ಪು, ಇಂತಹ ಕೆಲಸ ಮಾಡಬೇಡ
"ನನಗೆ ಇಂತಹ ವರ್ತನೆಗಳು ಇಷ್ಟವಾಗುವುದಿಲ್ಲ. ನಾನೇ ನಾಲ್ಕು ಜನರಿಗೆ ಬುದ್ಧಿವಾದ ಹೇಳುವಾಗ, ನನ್ನ ಮಕ್ಕಳೇ ಇಂತಹ ಕೆಲಸ ಮಾಡಿದರೆ ನಾನು ಸಹಿಸುವುದಿಲ್ಲ. ಕಾನೂನಿನ ಪ್ರಕಾರ ತಪ್ಪು ಎಂದರೆ ತಪ್ಪೇ. ಆತ ದೋಷಿಯೋ ಅಥವಾ ನಿರ್ದೋಷಿಯೋ ಎಂಬುದನ್ನು ಕೋರ್ಟ್ ತೀರ್ಮಾನಿಸಲಿ, ಆ ದಿನವೇ ನಾನು ಮಾತನಾಡುತ್ತೇನೆ. ಈಗಾಗಲೇ ಮಗನ ಜೊತೆ ಮಾತನಾಡಿ ಸಮಾಧಾನ ಮಾಡಿದ್ದೇನೆ. 'ನೀನು ಮಾಡಿರುವುದು ತಪ್ಪು, ತಪ್ಪನ್ನು ತಿದ್ದುವುದಕ್ಕಾಗಿಯೇ ಪೊಲೀಸರಿದ್ದಾರೆ, ಅವರ ಮಾತನ್ನು ಕೇಳಿ ನಿಯಮ ಪಾಲಿಸಬೇಕು' ಎಂದು ತಿಳಿಹೇಳಿದ್ದೇನೆ" ಎಂದು ವಿಜಯ್ ತಿಳಿಸಿದ್ದಾರೆ.
"ಸಾಮಾನ್ಯವಾಗಿ ವಿದ್ಯಾರ್ಥಿಗಳೆಂದ ಮೇಲೆ ಗುಂಪುಗಳಿರುತ್ತವೆ, ಗಲಾಟೆ ಮಾಡಿಕೊಳ್ಳುತ್ತಾರೆ. ಆ ವಯಸ್ಸಿನಲ್ಲಿ ನಾನೂ ಮಾಡಿರಬಹುದು, ಬಹುತೇಕರು ಮಾಡಿರುತ್ತಾರೆ. ಆ ವಯಸ್ಸಿನಲ್ಲಿ ಕಿತ್ತಾಟಗಳು ಸಹಜ, ಅವರು ಇನ್ನೂ ಚಿಕ್ಕ ಹುಡುಗರು. ಹಾಗಿದ್ದರೂ ಒಬ್ಬ ತಂದೆಯಾಗಿ 'ಎಚ್ಚರಿಕೆಯಿಂದ ಇರು, ಇದು ತಪ್ಪು, ಇಂತಹ ಕೆಲಸ ಮಾಡಬೇಡ' ಎಂದೇ ಬುದ್ಧಿ ಹೇಳುತ್ತೇನೆ. ಯಾರೂ ಕೂಡ ಇನ್ನೊಬ್ಬರಿಗೆ ದೈಹಿಕವಾಗಲೀ, ಮಾನಸಿಕವಾಗಲೀ ನೋವುಂಟು ಮಾಡಬಾರದು" ಎಂದು ವಿಜಯ್ ತಿಳಿಸಿದ್ದಾರೆ.
ನನ್ನ ಮಗ ಮಾಡಿದ್ದು ತಪ್ಪು! ಆತನನ್ನು ನಾನು ಕ್ಷಮಿಸಲಾರೆ!
ನಾನು ಸಿನಿಮಾವನ್ನು ದೇವರಂತೆ ಕಾಣುತ್ತೇನೆ
"ಸಿನಿಮಾ ರಂಗ ನನಗೆ ನೀಡಿರುವಷ್ಟು ನೆಮ್ಮದಿಯನ್ನು ಮತ್ಯಾವುದೂ ನೀಡಿಲ್ಲ. ಹಾಗಾಗಿ ನಾನು ಸಿನಿಮಾವನ್ನು ದೇವರಂತೆ ಕಾಣುತ್ತೇನೆ, ಪೂಜಿಸುತ್ತೇನೆ. ಸಿನಿಮಾ ನನಗೆ ಕೊಟ್ಟಿರುವ ನೆಮ್ಮದಿ ಹಾಗೂ ತೃಪ್ತಿ ಅಗಾಧವಾದದ್ದು. ಅದನ್ನು ನೆನೆಸಿಕೊಂಡಾಗಲೆಲ್ಲ ನನಗೆ ಅಪಾರ ಹೆಮ್ಮೆ ಮತ್ತು ಸಂತೋಷವಾಗುತ್ತದೆ" ಎಂದು ದುನಿಯಾ ವಿಜಯ್ ಹೇಳಿದ್ದಾರೆ.