Ulidavaru Kandante Movie: ʻರಸ್ತೆಯಲ್ಲೂ ಇರಲಿ ಸಹನೆʼ ಎಂದ ಹುಬ್ಬಳ್ಳಿ-ಧಾರಾವಾಡ ಪೊಲೀಸರ ಕ್ರಿಯೇಟಿವಿಟಿಗೆ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಫಿದಾ
ರಕ್ಷಿತ್ ಶೆಟ್ಟಿ ಅವರ ಟ್ವೀಟ್ ಬಳಸಿಕೊಂಡು ಹುಬ್ಬಳ್ಳಿ-ಧಾರವಾಡ ಪೊಲೀಸರು ವಿಶಿಷ್ಟವಾಗಿ ಸಂಚಾರ ಜಾಗೃತಿ ಮೂಡಿಸಿದ್ದಾರೆ. 'ಉಳಿದವರು ಕಂಡಂತೆ' ಸಿನಿಮಾ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಕ್ಷಿತ್ ಮಾಡಿದ ಟ್ವೀಟ್ ಅನ್ನು ರೀ-ಪೋಸ್ಟ್ ಮಾಡಿರುವ ಪೊಲೀಸರು, ಚಿತ್ರದ ಡೈಲಾಗ್ ಅನ್ನು ಬಳಸಿ ರಸ್ತೆಯಲ್ಲಿ ಓವರ್‌ಟೇಕ್ ಮಾಡುವಾಗ ಜಾಗರೂಕರಾಗಿರಲು ತಿಳಿಸಿದ್ದಾರೆ.
-
ʻಸಿಂಪಲ್ ಸ್ಟಾರ್ʼ ರಕ್ಷಿತ್ ಶೆಟ್ಟಿ ಅವರು ಈಚೆಗೆ ಒಂದು ಟ್ವೀಟ್ ಮಾಡಿದ್ದರು. ಅದೇನಪ್ಪ ಅಂದ್ರೆ, ʻಉಳಿದವರು ಕಂಡಂತೆʼ ಸಿನಿಮಾ ತೆರೆಕಂಡು 12 ವರ್ಷಗಳಾಗಿವೆ. ಆ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ʻಉಳಿದವರು ಕಂಡಂತೆʼ ಚಿತ್ರದ ಕುರಿತು ಟ್ವೀಟ್ ಮಾಡಿದ್ದರು. ಆದರೆ ಆ ಟ್ವೀಟ್ ಅನ್ನೇ ಇಟ್ಟುಕೊಂಡು ಹುಬ್ಬಳ್ಳಿ - ಧಾರವಾಡ ಪೊಲೀಸರು ಸಂಚಾರ ಜಾಗೃತಿ ಮೂಡಿಸಿದ್ದಾರೆ.
ರಕ್ಷಿತ್ ಶೆಟ್ಟಿ ಟ್ವೀಟ್‌ನಲ್ಲಿ ಏನಿತ್ತು?
2014ರಲ್ಲಿ ತೆರೆಕಂಡಿದ್ದ ʻಉಳಿದವರು ಕಂಡಂತೆʼ ಸಿನಿಮಾವನ್ನು ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಿದ್ದರು. ಆ ಚಿತ್ರವು ತೆರೆಕಂಡಾಗ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿರಲಿಲ್ಲ. ಆನಂತರ ಅದೊಂದು ಕಲ್ಟ್ ಕ್ಲಾಸಿಕ್ ಸ್ಥಾನಮಾವನ್ನು ಪಡೆದುಕೊಂಡಿತು. ಅಷ್ಟೊಂದು ದೊಡ್ಡಮಟ್ಟದ ಕ್ರೇಜ್ ಈ ಚಿತ್ರಕ್ಕಿದೆ. ಈ ಸಿನಿಮಾ ರಿಲೀಸ್ ಆಗಿ 12 ವರ್ಷ ಆದ ಹಿನ್ನೆಲೆಯಲ್ಲಿ, "ಬಿಡುಗಡೆಯಾಗಿ 12 ವರ್ಷಗಳೇ ಕಳೆದಿದ್ದರೂ, 'ಉಳಿದವರು ಕಂಡಂತೆ' ಚಿತ್ರದ ಬಗ್ಗೆ ಸಂಭ್ರಮಿಸಲು ಇಂದಿಗೂ ಒಂದಲ್ಲಾ ಒಂದು ಕಾರಣವಿದ್ದೇ ಇದೆ" ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದರು.
ಹುಬ್ಬಳ್ಳಿ ಧಾರವಾಡ ಪೊಲೀಸರ ಟ್ವೀಟ್
Your Attention Please..!
— HUBBALLI DHARWAD CITY POLICE (@compolhdc) March 28, 2026
As the Cuban kid always said...
"Keep patience"
: for movies and while overtaking on roads too...#RoadSafety https://t.co/3kcPT5TGuZ
ಹುಬ್ಬಳ್ಳಿ - ಧಾರವಾಡ ಪೊಲೀಸರು ಟ್ವೀಟ್‌ನಲ್ಲಿ ಏನಿತ್ತು?
ರಕ್ಷಿತ್ ಶೆಟ್ಟಿ ಮಾಡಿದ ಟ್ವೀಟ್ ಅನ್ನೇ ರೀ-ಪೋಸ್ಟ್ ಮಾಡಿದ ಹುಬ್ಬಳ್ಳಿ - ಧಾರವಾಡ ಪೊಲೀಸರು, "ದಯವಿಟ್ಟು ಗಮನಿಸಿ..! ಆ ಕ್ಯೂಬನ್ ಬಾಲಕ ಯಾವಾಗಲೂ ಹೇಳುವಂತೆ... "ಸಹನೆಯಿಂದಿರಿ"... ಸಿನಿಮಾಗಳ ವಿಷಯದಲ್ಲೂ ಇರಲಿ ಮತ್ತು ರಸ್ತೆಯಲ್ಲಿ ಓವರ್‌ಟೇಕ್ ಮಾಡುವಾಗಲೂ ಇರಲಿ..." ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ, ಉಳಿದವರು ಕಂಡಂತೆ ಚಿತ್ರದಲ್ಲಿ ಕ್ಯೂಬನ್ ಕಿಡ್‌ನ ಉಲ್ಲೇಖ ಇದೆ. ಅದನ್ನೇ ಇಟ್ಟುಕೊಂಡು ಸಂಚಾರ ಜಾಗೃತಿಗೆ ಒಂದು ಟ್ವೀಟ್ ಮಾಡಿದ್ದಾರೆ ಹುಬ್ಬಳ್ಳಿ - ಧಾರವಾಡ ಪೊಲೀಸರು. ಇದನ್ನು ಕಂಡ ನೆಟ್ಟಿಗರು, ಪೊಲೀಸರ ಈ ಕ್ರಿಯಾಶೀಲತೆಯನ್ನು ಮೆಚ್ಚಿಕೊಂಡಿದ್ದಾರೆ.
'ರಿಚರ್ಡ್ ಆಂಟನಿ' ಬರೋದು ಯಾವಾಗ?
ಅಂದಹಾಗೆ, ಉಳಿದವರು ಕಂಡಂತೆ ಚಿತ್ರದ ಪ್ರೀಕ್ವೇಲ್ ಆಗಿ 'ರಿಚರ್ಡ್ ಆಂಟನಿ' ಸಿನಿಮಾವನ್ನು ಮಾಡುವುದಾಗಿ ರಕ್ಷಿತ್ ಶೆಟ್ಟಿ ಘೋಷಣೆ ಮಾಡಿದ್ದರು. ಅದನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುವುದಾಗಿಯೂ ಹೇಳಿಕೊಂಡಿತ್ತು. ಇದೆಲ್ಲಾ ನಡೆದ 5 ವರ್ಷಗಳಾಗಿವೆ. ಆದರೂ 'ರಿಚರ್ಡ್ ಆಂಟನಿ' ಸಿನಿಮಾದ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಸದ್ಯದ ಮೂಲಗಳ ಪ್ರಕಾರ, 'ರಿಚರ್ಡ್ ಆಂಟನಿ' ಸಿನಿಮಾವನ್ನು ನಿರ್ಮಾಣ ಮಾಡುವುದು ಕೂಡ ಅನುಮಾನ ಎನ್ನಲಾಗಿದೆ. ಹಾಗಾದರೆ, ಆ ಸಿನಿಮಾದ ನಿರ್ಮಾಪಕರು ಯಾರು? ಯಾವಾಗ ಶುರುವಾಗಲಿದೆ ಎಂಬುದರ ಬಗೆ ರಕ್ಷಿತ್ ಶೆಟ್ಟಿ ಅವರಿಂದಲೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.