International Emmy Awards 2025: ದಿಲ್ಜಿತ್ ದೊಸಾಂಜ್‌ಗೆ ನಿರಾಸೆ, ʻಅತ್ಯುತ್ತಮ ನಟʼ ಪ್ರಶಸ್ತಿ ಪಡೆಯುವಲ್ಲಿ ವಿಫಲ!
International Emmy Awards 2025: ಎಮ್ಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನ್ಯೂಯಾರ್ಕ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಆದರೆ ಈ ಬಾರಿ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಿರಾಸೆ ಎದುರಾಗಿದೆ. ಬಾಲಿವುಡ್‌ನ ʻಅಮರ್ ಸಿಂಗ್ ಚಮ್ಕಿಲಾʼ ಸಿನಿಮಾವು ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಟಿವಿ ಸಿನಿಮಾ ಎರಡು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದರೂ, ಯಾವುದೇ ಪ್ರಶಸ್ತಿ ಲಭಿಸಲಿಲ್ಲ. ನಟ ದಿಲ್ಜಿತ್ ದೊಸಾಂಜ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಕೈತಪ್ಪಿದೆ.
-
53 ನೇ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿಗಳನ್ನು ಮಂಗಳವಾರ (ನ. 24) ನ್ಯೂಯಾರ್ಕ್‌ನಲ್ಲಿ ಪ್ರದಾನ ಮಾಡಲಾಗಿದೆ. ಅಂತಾರಾಷ್ಟ್ರೀಯ ಟೆಲಿವಿಷನ್ ಅಕಾಡೆಮಿ ಆಫ್ ಟೆಲಿವಿಷನ್ ಆರ್ಟ್ಸ್ & ಸೈನ್ಸಸ್ (IATAS) ನೀಡುವ ವಾರ್ಷಿಕ ಪ್ರಶಸ್ತಿಗಳು ಇದಾಗಿದ್ದು, ಕೆಲ್ಲಿ ರಿಪಾ ಮತ್ತು ಮಾರ್ಕ್ ಕಾನ್ಸುಲೋಸ್ ಆಯೋಜಿಸಿದ್ದರು. ಪ್ರಪಂಚದಾದ್ಯಂತ ಬಿಡುಗಡೆಗೊಂಡ ಅತ್ಯುತ್ತಮ ಟಿವಿ ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳನ್ನು 16 ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬಾಲಿವುಡ್‌ನ ʻಅಮರ್ ಸಿಂಗ್ ಚಮ್ಕಿಲಾʼ ಸಿನಿಮಾ ಕೂಡ ಎರಡು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು.
ದಿಲ್ಜಿತ್ ದೊಸಾಂಜ್‌ಗೆ ನಿರಾಸೆ
ʻಅಮರ್ ಸಿಂಗ್ ಚಮ್ಕಿಲಾʼ ಸಿನಿಮಾವು ಕಳೆದ ವರ್ಷ ಒಟಿಟಿಯಲ್ಲಿ ನೇರವಾಗಿ ತೆರೆಕಂಡಿತ್ತು. ಇದೊಂದು ಬಯೋಪಿಕ್ ಆಗಿದ್ದು, ಅಮರ್ ಸಿಂಗ್ ಚಮ್ಕಿಲಾ ಅವರ ಪಾತ್ರದಲ್ಲಿ ನಟ ದಿಲ್ಜಿತ್ ದೊಸಾಂಜ್ ಕಾಣಿಸಿಕೊಂಡಿದ್ದರು. 27ನೇ ವಯಸ್ಸಿಗೆ ನಿಧನರಾದ ಅಮರ್ ಸಿಂಗ್ ಚಮ್ಕಿಲಾ ಅವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದ್ದರು. ಅವರ ಪಾತ್ರವನ್ನು ಮಾಡಿದ್ದಕ್ಕಾಗಿ ಎಮ್ಮಿ ಪ್ರಶಸ್ತಿ ಪಟ್ಟಿಯಲ್ಲಿ ದಿಲ್ಜಿತ್ ದೊಸಾಂಜ್ ಅವರು ಅತ್ಯುತ್ತಮ ನಟ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದ್ದರು. ಆದರೆ ಅವರಿಗೆ ಪ್ರಶಸ್ತಿ ಲಭಿಸಿಲ್ಲ. ಅತ್ಯುತ್ತಮ ಟಿವಿ ಸಿನಿಮಾ ಎಂಬ ವಿಭಾಗದಲ್ಲೂ ʻಅಮರ್ ಸಿಂಗ್ ಚಮ್ಕಿಲಾʼ ಸಿನಿಮಾ ನಾಮ ನಿರ್ದೇಶನಗೊಂಡಿತ್ತು. ಆದರೆ ಪ್ರಶಸ್ತಿ ಲಭಿಸಿಲ್ಲ. ಅಂದಹಾಗೆ, ಈಚೆಗೆ ತೆರೆಕಂಡು ಸೂಪರ್ ಹಿಟ್ ಆಗಿದ್ದ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಹಿಂದಿ ವರ್ಷನ್‌ನ ಪ್ರಮೋಷನ್ ಹಾಡಿನಲ್ಲಿ ದಿಲ್ಜಿತ್ ಕಾಣಿಸಿಕೊಂಡಿದ್ದರು.
ಯಾರಿಗೆಲ್ಲಾ ಪ್ರಶಸ್ತಿ ಲಭಿಸಿದೆ? ಇಲ್ಲಿದೆ ಓದಿ ಪಟ್ಟಿ
ಅತ್ಯುತ್ತಮ ಕಲಾ ಪ್ರೋಗ್ರಾಮಿಂಗ್: ರೈಚಿ ಸಕಾಮೊಟೊ: ಲಾಸ್ಟ್ ಡೇಸ್ (Ryuichi Sakamoto: Last Days) (ಜಪಾನ್)
ಅತ್ಯುತ್ತಮ ನಟ: ಓರಿಯೋಲ್ ಪ್ಲಾ (Oriol Pla) - ಯೋ, ಅಡಿಕ್ಟೋ (ಸ್ಪೇನ್)
ಅತ್ಯುತ್ತಮ ನಟಿ: ಅನ್ನಾ ಮ್ಯಾಕ್ಸ್ವೆಲ್ ಮಾರ್ಟಿನ್ (Anna Maxwell Martin) - ಅಂಟಿಲ್ ಐ ಕಿಲ್ ಯು (Until I Kill You) (ಯುಕೆ)
ಅತ್ಯುತ್ತಮ ಹಾಸ್ಯ: ಲುಡ್ವಿಗ್ (ಯುಕೆ)
ವಾರ್ತಾ ಸರಣಿ: ಡಿಸ್ಪ್ಯಾಚೆಸ್ ಕಿಲ್ ಝೋನ್: ಇನ್ಸೈಡ್ ಗಾಜಾ (ಯುಕೆ)
ಅತ್ಯುತ್ತಮ ಸಾಕ್ಷ್ಯಚಿತ್ರ: ಹೆಲ್ ಜಂಪರ್ (ಯುಕೆ)
ಅತ್ಯುತ್ತಮ ಡ್ರಾಮಾ ಸೀರಿಸ್: ರೈವಲ್ಸ್ (ಯುಕೆ)
ಅತ್ಯುತ್ತಮ ಮಕ್ಕಳ ಅನಿಮೇಷನ್: ಬ್ಲೂಯಿ (ಆಸ್ಟ್ರೇಲಿಯಾ)
ಮಕ್ಕಳ: ವಾಸ್ತವಿಕ ಮತ್ತು ಮನರಂಜನೆ: ಆಫ್ ಫ್ರಿಟ್ಜಿಸ್ ಸ್ಪ್ಯುರೆನ್ - ವೀ ವಾರ್ ದಾಸ್ ಸೋ ಇನ್ ಡೆರ್ ಡಿಡಿಆರ್? (Auf Fritzis Spuren - Wie war das so in der DDR?) (ಜರ್ಮನಿ)
ಮಕ್ಕಳ: ಲೈವ್-ಆಕ್ಷನ್: ಫಾಲನ್ (ಯುಕೆ)
ನಾನ್-ಸ್ಕ್ರಿಪ್ಟೆಡ್ ಮನರಂಜನೆ: ಶಾಓಲಿನ್ ಹೀರೋಸ್: ಡೆನ್ಮಾರ್ಕ್ (ಡೆನ್ಮಾರ್ಕ್)
ಅತ್ಯುತ್ತಮ ಶಾರ್ಟ್-ಫಾರ್ಮ್ ಸರಣಿ: ಲಾ ಮೆಡಿಯಾಟ್ರೀಸ್ (ಕೆನಡಾ)
ಕ್ರೀಡಾ ಸಾಕ್ಷ್ಯಚಿತ್ರ: ಇಟ್ಸ್ ಆಲ್ ಓವರ್: ದಿ ಕಿಸ್ ದ್ಯಾಟ್ ಚೇಂಜ್ಡ್ ಸ್ಪ್ಯಾನಿಷ್ ಫುಟ್‌ಬಾಲ್ (ಸ್ಪೇನ್)
ಅತ್ಯುತ್ತಮ ಟಿವಿ ಸಿನಿಮಾ/ಮಿನಿ-ಸೀರೀಸ್: ಲಾಸ್ಟ್ ಬಾಯ್ಸ್ ಅಂಡ್ ಫೇರೀಸ್ (ಯುಕೆ)