‘ಕಲ್ಯಾಣಿ’ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ನಟ ‘ಡಾರ್ಲಿಂಗ್’ ಕೃಷ್ಣ; ಡಿಸೆಂಬರ್ನಲ್ಲಿ ಸಿನಿಮಾ ತೆರೆಗೆ
Kalyani Movie Trailer: ‘ಕಲ್ಯಾಣಿ’ ಚಿತ್ರದ ಟ್ರೇಲರ್ ಅನ್ನು ನಟ ‘ಡಾರ್ಲಿಂಗ್’ ಕೃಷ್ಣ ಇತ್ತೀಚೆಗೆ ಬಿಡುಗಡೆಗೊಳಿಸಿದರು. ಉತ್ತರ ಭಾರತದ ಹುಡುಗಿ ಹಾಗೂ ದಕ್ಷಿಣ ಭಾರತದ ಹುಡುಗನ ನಡುವಿನ ನವಿರಾದ ಪ್ರೇಮಕಥೆ ಮತ್ತು ಎರಡು ಸಂಸ್ಕೃತಿಗಳ ಮುಖಾಮುಖಿಯನ್ನು ಈ ಚಿತ್ರ ಹೊಂದಿದೆ.
-
‘ಜಟ್ಟ’, ‘ಮೈತ್ರಿ’ಯಂತಹ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಿರ್ದೇಶಕ ಬಿ. ಎಂ. ಗಿರಿರಾಜ್ ಇದೀಗ ‘ಕಲ್ಯಾಣಿ’ ಎಂಬ ಮತ್ತೊಂದು ವಿಶಿಷ್ಟ ಕಥಾಹಂದರವನ್ನು ತೆರೆಮೇಲೆ ತರಲು ಸಜ್ಜಾಗಿದ್ದಾರೆ. ಲೇಖಕ ಬಸವ ರೆಡ್ಡಿ ಅವರ ಕಥೆಗೆ ಬಿ. ಎಂ. ಗಿರಿರಾಜ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಕೆಲ ತಿಂಗಳ ಹಿಂದಷ್ಟೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ಚಿತ್ರದ ಟ್ರೇಲರ್ ಅನ್ನು ಅದ್ಧೂರಿಯಾಗಿ ಅನಾವರಣಗೊಳಿಸಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಟ ‘ಡಾರ್ಲಿಂಗ್’ ಕೃಷ್ಣ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ‘ಕಲ್ಯಾಣಿ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.
ಟ್ರೇಲರ್ನಲ್ಲಿ ಕಥೆ ಬಿಟ್ಟುಕೊಟ್ಟಿಲ್ಲ!
ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡಿದ ನಟ ಡಾರ್ಲಿಂಗ್ ಕೃಷ್ಣ, ಚಿತ್ರದ ಮೇಕಿಂಗ್ ಮತ್ತು ಟ್ರೇಲರ್ ಕಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. "ಸಾಮಾನ್ಯವಾಗಿ ಸಿನಿಮಾದಲ್ಲಿರುವ ಒಳ್ಳೆಯ ದೃಶ್ಯಗಳನ್ನು ಕಟ್ ಮಾಡಿ ಟ್ರೇಲರ್ ಮಾಡಿರುತ್ತಾರೆ. ಟ್ರೇಲರ್ ನೋಡಿದವರಿಗೆ ಸಿನಿಮಾದ ಕಥೆ, ಶೈಲಿ ಎಲ್ಲದರ ಬಗ್ಗೆಯೂ ಮಾಹಿತಿ ಸಿಗುತ್ತದೆ. ಆದರೆ ‘ಕಲ್ಯಾಣಿ’ ಸಿನಿಮಾ ಟ್ರೇಲರ್ ನೋಡಿದಾಗ ಒಳ್ಳೆಯ ದೃಶ್ಯಗಳು ಕಂಡರೂ, ಸಿನಿಮಾದ ಕಥೆ, ಶೈಲಿ ಯಾವುದರ ಬಗ್ಗೆಯೂ ಗುಟ್ಟು ಬಿಟ್ಟುಕೊಡುವುದಿಲ್ಲ. ಅಷ್ಟು ನಾಜೂಕಾಗಿ ನಿರ್ದೇಶಕರು ಟ್ರೇಲರ್ ಕಟ್ ಮಾಡಿದ್ದಾರೆ. ಟ್ರೇಲರ್ ನೋಡಿದಾಗ ಕನ್ನಡಕ್ಕೆ ಇದೊಂದು ವಿಭಿನ್ನ ಸಿನಿಮಾವಾಗುತ್ತದೆ ಎಂಬ ಭರವಸೆ ಮೂಡುತ್ತದೆ. ಚಿತ್ರ ಪ್ರೇಕ್ಷಕರ ಮನಗೆಲ್ಲಲಿ" ಎಂದು ಹಾರೈಸಿದರು.
ತಮ್ಮ ಹೊಸ ಪ್ರಯತ್ನದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಬಿ. ಎಂ. ಗಿರಿರಾಜ್, "ಇದೊಂದು ನವಿರಾದ ಒಲವಿನ ಕಥೆಯನ್ನು ಮುನ್ನೆಲೆಯಲ್ಲಿಟ್ಟುಕೊಂಡು ಮಾಡಿದ ಸಿನಿಮಾ. ನಂಬಿಕೆ, ಸ್ನೇಹ, ಐಡೆಂಟಿಟಿಯ ವಿಷಯಗಳ ಜೊತೆಗೆ ಎರಡು ಸಂಸ್ಕೃತಿಗಳ ಮುಖಾಮುಖಿ ಈ ಸಿನಿಮಾದಲ್ಲಾಗುತ್ತದೆ. ಉತ್ತರ ಭಾರತದ ಹುಡುಗಿ ಮತ್ತು ದಕ್ಷಿಣ ಭಾರತದ ಹುಡುಗನ ಎರಡು ಪಾತ್ರಗಳನ್ನು ಪ್ರಧಾನವಾಗಿ ಇಟ್ಟುಕೊಂಡು ಎರಡು ಸಂಸ್ಕೃತಿಗಳ ಅನಾವರಣವನ್ನು ಈ ಚಿತ್ರದಲ್ಲಿ ಮಾಡುವ ಪ್ರಯತ್ನ ಮಾಡಿದ್ದೇವೆ. ನಾನು ಇಲ್ಲಿಯವರೆಗೆ ಮಾಡಿರುವ ಸಿನಿಮಾಗಳಿಗಿಂತ ಸಂಪೂರ್ಣ ವಿಭಿನ್ನವಾಗಿರುವ ಸಿನಿಮಾ ಇದಾಗಿದೆ" ಎಂದು ವಿವರಿಸಿದರು.
ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರು ದಶಕಗಳಿಂದ ಕಾರ್ಯಕಾರಿ ನಿರ್ಮಾಪಕರಾಗಿ 45ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿರುವ ಕುಮಾರಸ್ವಾಮಿ ಆರ್. ಅವರು ‘ಆರ್. ಕೆ. ಸಿನೆಮಾಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ರಂಗಭೂಮಿ ಪ್ರತಿಭೆ ಸಾಮ್ರಾಟ್ ಶೆಟ್ಟಿ ‘ಕಲ್ಯಾಣಿ’ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದು, ಅವರಿಗೆ ಜೋಡಿಯಾಗಿ ಉತ್ತರ ಭಾರತದ ನಟಿ ಸಿಮ್ರನ್ ಕೌರ್ ಅಭಿನಯಿಸಿದ್ದಾರೆ. ಉಳಿದಂತೆ ರಾಹುಲ್ ಜೇಟ್ಲಿ, ಶಮಂತ್ ರಾವ್, ಪಿ. ಡಿ. ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು, ಶೈಲೇಂದ್ರ, ರಂಗು ಸಮರ್ಪಣ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದ ಪ್ರಮುಖ ಪಾತ್ರಗಳಲ್ಲಿದೆ.
ತಾಂತ್ರಿಕವಾಗಿ ಬಿ. ಜೆ. ಭರತ್ ಸಂಗೀತ ಸಂಯೋಜನೆ, ಪ್ರಶಾಂತ ಸಾಗರ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ. ಭಟ್ಕಳ ಹಾಗೂ ಬೆಂಗಳೂರು ಸುತ್ತಮುತ್ತ ಬಹುತೇಕ ಚಿತ್ರೀಕರಣ ಪೂರೈಸಿಕೊಂಡಿರುವ ‘ಕಲ್ಯಾಣಿ’, ಇದೇ ಡಿಸೆಂಬರ್ನಲ್ಲಿ ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ. ಮ. ಹರೀಶ್, ಹಿರಿಯ ನಿರ್ಮಾಪಕ ಎಂ. ಎನ್. ಕುಮಾರ್, ನಟ ರಾಕೇಶ್ ಅಡಿಗ ಹಾಗೂ ರ್ಯಾಪರ್ ಅಲೋಕ್ (ಆಲ್ ಓಕೆ) ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.