Dhruva Sarja: ʻಕೆಡಿʼ ಬಳಿಕ ʻಕ್ರಿಮಿನಲ್ʼ ಆದ ಧ್ರುವ ಸರ್ಜಾ; ಅದ್ದೂರಿಯಾಗಿ ಲಾಂಚ್ ಆಯ್ತು ಹೊಸ ಸಿನಿಮಾ!
Dhruva Sarja New Movie Name: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾಕ್ಕೆ 'ಕ್ರಿಮಿನಲ್' ಎಂದು ಟೈಟಲ್ ಇಡಲಾಗಿದೆ. ಪಕ್ಕಾ ಗ್ರಾಮೀಣ ಹಿನ್ನೆಲೆಯ ಈ ಚಿತ್ರವನ್ನು 'ಕೆರೆಬೇಟೆ' ಖ್ಯಾತಿಯ ರಾಜ್ ಗುರು ಬಿ. ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
-
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ʻಕೆಡಿʼ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬ ಬಗ್ಗೆ ಚರ್ಚೆಗಳು ಜೋರಾಗಿರುವ ಹೊತ್ತಿನಲ್ಲಿ ಅವರ ಮುಂದಿನ ಸಿನಿಮಾದ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ನವೆಂಬರ್ 18ರಂದು ಧ್ರುವ ಸರ್ಜಾ ನಟನೆಯ ಹೊಸ ಸಿನಿಮಾಕ್ಕೆ ಚಾಲನೆ ಸಿಕ್ಕಿದ್ದು, ʻಕ್ರಿಮಿನಲ್ʼ ಎಂದು ಟೈಟಲ್ ಇಡಲಾಗಿದೆ.
ಇದು ಲೋಕಲ್ ಸಿನಿಮಾ
ಧ್ರುವ ಸರ್ಜಾ ಅವರು ಕ್ರಿಮಿನಲ್ ಸಿನಿಮಾದ ಮೂಲಕ ಪಕ್ಕಾ ಗ್ರಾಮೀಣ ಹಿನ್ನೆಲೆಯ ಯುವಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಗೋಲ್ಡ್‌ಮೈನ್ಸ್ ಟೆಲಿಫಿಲ್ಮ್ಸ್‌ನ ಮನೀಶ್ ಶಾ ಅವರು ʻಕ್ರಿಮಿನಲ್ʼ ಚಿತ್ರಕ್ಕೆ ದುಡ್ಡು ಹಾಕುತ್ತಿದ್ದಾರೆ. ʻಕೆರೆಬೇಟೆʼಚಿತ್ರದ ಮೂಲಕ ಖ್ಯಾತಿ ಪಡೆದ ರಾಜ್ ಗುರು ಬಿ. ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ವಿಶೇಷ. ತಮ್ಮ ಎರಡನೇ ಸಿನಿಮಾಗೆ ಅವರು ಧ್ರುವ ಸರ್ಜಾ ಅವರ ಕಾಲ್‌ಶೀಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Rachita Ram: 8 ವರ್ಷಗಳ ಬಳಿಕ ಧ್ರುವ ಸರ್ಜಾಗೆ ಜೋಡಿಯಾಗ್ತಾರೆ ನಟಿ ರಚಿತಾ ರಾಮ್! ಯಾವ ಸಿನಿಮಾ, ಡೈರೆಕ್ಟರ್ ಯಾರು?
ರಚಿತಾ ರಾಮ್ ನಾಯಕಿ
ಈ ಸಿನಿಮಾದಲ್ಲಿ ಧ್ರುವ ಸರ್ಜಾ ಎದುರು ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿಂದೆ ʻಬಹದ್ದೂರ್ʼ ಚೇತನ್ ಕುಮಾರ್ ನಿರ್ದೇಶಿಸಿದ್ದ ʻಭರ್ಜರಿʼ ಚಿತ್ರದಲ್ಲಿ ರಚಿತಾ ರಾಮ್ ಮತ್ತು ಧ್ರುವ ಸರ್ಜಾ ಒಟ್ಟಿಗೆ ಕಾಣಿಸಿಕೊಂಡಿದ್ದರು. 2017ರಲ್ಲಿ ತೆರೆಕಂಡಿದ್ದ ಈ ಸಿನಿಮಾವು ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಆನಂತರ ರಚಿತಾ ರಾಮ್ ಮತ್ತು ಧ್ರುವ ಸರ್ಜಾ ಒಟ್ಟಿಗೆ ಯಾವುದೇ ಸಿನಿಮಾ ಮಾಡಿರಲಿಲ್ಲ. ಇದೀಗ 8 ವರ್ಷಗಳ ನಂತರ ಈ ಇಬ್ಬರು ಮತ್ತೆ ಒಟ್ಟಿಗೆ ತೆರೆಹಂಚಿಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ ಇರುವ ರಚ್ಚು
ಸದ್ಯ ರಚಿತಾ ರಾಮ್ ಅವರು ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದಾರೆ. ʻದುನಿಯಾʼ ವಿಜಯ್ ಅವರ ಜೊತೆಗೆ ರಚಿತಾ ರಾಮ್ ನಟಿಸಿರುವ ʻಲ್ಯಾಂಡ್ ಲಾರ್ಡ್ʼ ಸಿನಿಮಾ ತೆರೆಗೆ ಸಿದ್ಧವಾಗಿದೆ. ಇಲ್ಲಿ ಹಳ್ಳಿ ಹೆಣ್ಣು ಮಗಳ ಪಾತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಜೈದ್ ಖಾನ್ ಜೊತೆ ʻಕಲ್ಟ್ʼ ಚಿತ್ರದಲ್ಲಿ ಸಖತ್ ಬೋಲ್ಡ್ ಪಾತ್ರವನ್ನು ನಿಭಾಯಿಸಿದ್ದಾರೆ ರಚಿತಾ ರಾಮ್. ಸತೀಶ್ ʻನೀನಾಸಂʼ ಅವರ ಜೊತೆಗೆ ʻಅಯೋಗ್ಯ 2ʼ ಚಿತ್ರದ ಶೂಟಿಂಗ್‌ನಲ್ಲಿ ರಚಿತಾ ರಾಮ್ ಅವರು ಬ್ಯುಸಿ ಇದ್ದು, ಇದೀಗ ʻಕ್ರಿಮಿನಲ್ʼ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.
ಅತ್ತ ಧ್ರುವ ಸರ್ಜಾ ಅವರು ʻಕೆಡಿʼ ಸಿನಿಮಾದ ಬಿಡುಗಡೆ ಮೇಲೂ ಗಮನ ನೀಡಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರ ಯಾವಾಗ ತೆರೆಗೆ ಬರಲಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು 2025ರಲ್ಲಿಯೇ ತೆರೆಗೆ ತರುವ ಪ್ರಯತ್ನಗಳಿತ್ತು. ಅದೀಗ 2026ರಕ್ಕೆ ಪೋಸ್ಟ್‌ಪೋನ್ ಆಗಿದೆ. ಅತಿ ಶೀಘ್ರದಲ್ಲೇ ʻಕೆಡಿʼ ಸಿನಿಮಾದ ರಿಲೀಸ್ ಡೇಟ್ ಘೋಷಣೆಯಾಗಲಿದೆ.