ನಾಲ್ಕೇ ತಿಂಗಳಿನಲ್ಲಿ ರೆಡಿಯಾಯ್ತು ʻಕಿಚ್ಚʼ ಸುದೀಪ್ ಹೊಸ ಸಿನಿಮಾ; ʻಮಾರ್ಕ್ʼ ಟೀಮ್‌ನಿಂದ ಹೊರಬಿತ್ತು ಗುಡ್ ನ್ಯೂಸ್!
ಮಾರ್ಕ್ ಸಿನಿಮಾದ ಚಿತ್ರೀಕರಣವು ಕೇವಲ ನಾಲ್ಕು ತಿಂಗಳಲ್ಲಿ ಮುಕ್ತಾಯಗೊಂಡಿದ್ದು, ನಟ ʻಕಿಚ್ಚʼ ಸುದೀಪ್ ಅವರು ಟ್ವೀಟ್ ಮೂಲಕ ಇಡೀ ತಂಡದ 110 ದಿನಗಳ ಕಠಿಣ ಶ್ರಮವನ್ನು ಕೊಂಡಾಡಿದ್ದಾರೆ. ಡಿಸೆಂಬರ್ 25ಕ್ಕೆ ಕ್ರಿಸ್‌ಮಸ್ ಹಬ್ಬದಂದು ಈ ಚಿತ್ರವು ಗ್ರ್ಯಾಂಡ್ ಆಗಿ ತೆರೆಕಾಣಲಿದೆ.
ಕಿಚ್ಚ ಸುದೀಪ್ ಮಾರ್ಕ್ ಸಿನಿಮಾ -
ಕಿಚ್ಚ ಸುದೀಪ್ ಅಭಿನಯದ ʻಮಾರ್ಕ್ʼ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ಕಳೆದ ಜುಲೈನಲ್ಲಿ ʻಮಾರ್ಕ್ʼ ಸಿನಿಮಾಗೆ ಮುಹೂರ್ತವಾಗಿತ್ತು. ಇದೀಗ ನಾಲ್ಕೇ ತಿಂಗಳಿನಲ್ಲಿ ಚಿತ್ರೀಕರಣವನ್ನು ಮುಗಿಸಿರುವುದು ವಿಶೇಷ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿದೆ. ಡಿಸೆಂಬರ್ 25ಕ್ಕೆ ಈ ಚಿತ್ರವು ಗ್ರ್ಯಾಂಡ್ ಆಗಿ ತೆರೆಕಾಣಲಿದೆ.
ಕನಕಪುರ ರಸ್ತೆಯಲ್ಲಿ ಶೂಟಿಂಗ್
ʻಮಾರ್ಕ್ʼ ಸಿನಿಮಾಗೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಕೊನೆ ಹಂತದ ಚಿತ್ರೀಕರಣ ಮುಗಿದಿದೆ. 'ಮ್ಯಾಕ್ಸ್’ ಸಿನಿಮಾದಲ್ಲಿ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ ಮೋಡಿ ಮಾಡಿತ್ತು. ಈಗ ಮತ್ತೆ ಅವರಿಬ್ಬರು ‘ಮಾರ್ಕ್’ ಸಿನಿಮಾದ ಮೂಲಕ ರಂಜಿಸಲು ಬರುತ್ತಿದ್ದಾರೆ. ‘ಮ್ಯಾಕ್ಸ್’ ರೀತಿಯೇ ಈ ಬಾರಿ ಕೂಡ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25ರಂದು ‘ಮಾರ್ಕ್’ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಲಿದೆ.
ಸುದೀಪ್ ಏನಂದ್ರು?
ʻಮಾರ್ಕ್ʼ ಸಿನಿಮಾ ಶೂಟಿಂಗ್ ಮುಕ್ತಾಯವಾದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ನಟ ಕಿಚ್ಚ ಸುದೀಪ್, ʻʻಜುಲೈ 7 ರಂದು ನಮ್ಮ ತಂಡವು ಒಂದೇ ಉದ್ದೇಶದಿಂದ ಹೊರಟಿತು. ಆರಂಭದಲ್ಲಿ ಅಸಾಧ್ಯವೆಂದು ತೋರಿದ್ದನ್ನು ಸಾಧಿಸುವುದು. ಕಡಿಮೆ ಸಮಯದಲ್ಲಿ ಪೂರ್ಣಗೊಳಿಸುವ ದೊಡ್ಡ ಧ್ಯೇಯ. ಅದನ್ನು ಸಾಧ್ಯವಾಗಿಸಿದ್ದು ಕೆಲವರ ಪ್ರಯತ್ನವಲ್ಲ, ಬದಲಾಗಿ ತಂಡದ ಪ್ರತಿಯೊಬ್ಬ ವ್ಯಕ್ತಿಯ ಕಠಿಣ ಪರಿಶ್ರಮ. ಪ್ರತಿಯೊಬ್ಬ ಸದಸ್ಯರು ಪ್ರತಿದಿನ ಒಂದೇ ಉದ್ದೇಶದಿಂದ ಎಚ್ಚರಗೊಂಡರು, ಒಂದೇ ಗಮನದಿಂದ ಒಟ್ಟಾಗಿ ಕೆಲಸ ಮಾಡಿದರು, ತಮ್ಮ ಎಲ್ಲವನ್ನೂ ನೀಡಿದರು ಮತ್ತು ಗುರಿಯನ್ನು ತಲುಪುವವರೆಗೆ ಪ್ರತಿಯೊಂದು ಅಡಚಣೆಯನ್ನು ನಿವಾರಿಸಿದರು. ʻಮಾರ್ಕ್ʼ ಚಿತ್ರವು ಸುಮಾರು 110 ದಿನಗಳ ಅಗಾಧ ಶ್ರಮ ಮತ್ತು ಲೆಕ್ಕವಿಲ್ಲದಷ್ಟು ಕಾಲ್‌ಶೀಟ್‌ಗಳ ನಂತರ ಮುಕ್ತಾಯಗೊಳ್ಳುತ್ತಿದೆʼʼ ಎಂದು ಸುದೀಪ್ ಹೇಳಿದ್ದಾರೆ.
Mark Teaser: 'ಮಾರ್ಕ್'ಗೆ ಉಘೇ ಉಘೇ ಅಂದ್ರು ಫ್ಯಾನ್ಸ್! ಟೀಸರ್‌ನಲ್ಲಿ ಕಿಚ್ಚನ ರೌದ್ರಾವತಾರ
ʻʻನಾವು ಪ್ರಮುಖ ಸಿಜಿ, ಹಿನ್ನೆಲೆ ಸಂಗೀತ, ಡಬ್ಬಿಂಗ್ ಮತ್ತು ಹೆಚ್ಚಿನ ಪೋಸ್ಟ್-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿದ್ದೇವೆ. ಈ ಪ್ರಯಾಣವನ್ನು ನೆನಪಿಸಿಕೊಳ್ಳುವುದು ನಮಗೆ ಥ್ರಿಲ್ ನೀಡುತ್ತದೆ. ನಾವು ಹೇಗೆ ಧೈರ್ಯ ಮಾಡಿದೆವು ಮತ್ತು ನಾವು ಅದನ್ನು ಹೇಗೆ ಸಾಧಿಸಿದೆವು? ʻಮಾರ್ಕ್ʼ ಚಿತ್ರದ ಇಡೀ ಕುಟುಂಬಕ್ಕೆ ಅಪರಿಮಿತ ಪ್ರೀತಿ ಮತ್ತು ಚಪ್ಪಾಳೆʼʼ ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ.
'ಮಾರ್ಕ್’ ಸಿನಿಮಾಗೆ ಶೇಖರ್ ಚಂದ್ರ ಅವರು ಛಾಯಾಗ್ರಹಣ ಮಾಡಿದ್ದು, ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಅಜಯ್ ಮಾರ್ಕಂಡೇಯ ಎಂಬ ಪಾತ್ರವನ್ನು ಸುದೀಪ್ ಮಾಡಿದ್ದಾರೆ. ‘ಸತ್ಯಜ್ಯೋತಿ ಫಿಲ್ಮ್ಸ್’ ಹಾಗೂ ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್‌ಗಳು ಜತೆಯಾಗಿ ಈ ‘ಮಾರ್ಕ್’ ಚಿತ್ರವನ್ನು ನಿರ್ಮಿಸಿವೆ.