ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Devaraaya Movie: ‘ಕಿಚ್ಚ’ ಸುದೀಪ್ ಜನ್ಮದಿನಕ್ಕೆ ಭರ್ಜರಿ ಗಿಫ್ಟ್: 'ಶ್ರೀ ಕೃಷ್ಣದೇವರಾಯ'ನಾಗಿ ತೆರೆಮೇಲೆ ಮಿಂಚಲಿದ್ದಾರೆ ʻಅಭಿನಯ ಚಕ್ರವರ್ತಿʼ!

ʻದೇವರಾಯʼ ಸಿನಿಮಾದಲ್ಲಿ ಕಿಚ್ಚ ಸುದೀಪ್‌ ಅವರು ವಿಜಯನಗರದ ಸಾರ್ವಭೌಮ ಶ್ರೀಕೃಷ್ಣದೇವರಾಯರಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಸುದೀಪ್‌ ಜನ್ಮದಿನದಂದು ಈ ಐತಿಹಾಸಿಕ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಸುಪ್ರಿಯಾನ್ವಿ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.

Devaraaya: ಶ್ರೀಕೃಷ್ಣದೇವರಾಯನ ಪಾತ್ರದಲ್ಲಿ ಮಿಂಚಲಿದ್ದಾರೆ ನಟ ಸುದೀಪ್

-

Avinash GR
Avinash GR Sep 2, 2026 11:49 AM

ನಟ `ಕಿಚ್ಚ' ಸುದೀಪ್ ಅವರ ಜನ್ಮದಿನದ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಚಿತ್ರತಂಡದಿಂದ ಅದ್ಭುತ ಉಡುಗೊರೆ ಸಿಕ್ಕಿದೆ. ಸುದೀಪ್ ಅವರ ಮುಂದಿನ ಬಹುನಿರೀಕ್ಷಿತ, ಮಹತ್ವಾಕಾಂಕ್ಷೆಯ ಐತಿಹಾಸಿಕ ಬಿಗ್-ಬಜೆಟ್ ಚಿತ್ರ ‘ದೇವರಾಯ’ ಅಧಿಕೃತವಾಗಿ ಘೋಷಣೆಯಾಗಿದ್ದು, ಸಿನಿಪ್ರಿಯರ ಮತ್ತು ಚಿತ್ರರಂಗದ ಗಮನ ಸೆಳೆದಿದೆ.

ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಹಾಗೂ ಪ್ರಿಯಾ ಸುದೀಪ್ ಒಡೆತನದ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್’ ಜಂಟಿಯಾಗಿ ಈ ಬೃಹತ್ ಕ್ಯಾನ್ವಾಸ್‌ನ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿವೆ. ಈ ಕುರಿತು ಎರಡು ದಿನಗಳ ಹಿಂದೆಯೇ 'ವಿಶ್ವವಾಣಿ ಟಿವಿ' ವರದಿ ಮಾಡಿತ್ತು; ಇದೀಗ ಜನ್ಮದಿನದಂದೇ ಆ ಸುದ್ದಿ ಅಧಿಕೃತವಾಗಿ ದೃಢಪಟ್ಟಿದೆ.

ಶ್ರೀಕೃಷ್ಣದೇವರಾಯನ ಪಾತ್ರದಲ್ಲಿ ಸುದೀಪ್

ವಿಜಯನಗರ ಸಾಮ್ರಾಜ್ಯವನ್ನು ಸುವರ್ಣ ಯುಗಕ್ಕೆ ಕೊಂಡೊಯ್ದು ಸಾಹಸ, ಚಾಣಾಕ್ಷ ಆಡಳಿತ ಹಾಗೂ ಸಾಹಿತ್ಯ-ಕಲೆಗಳ ಪೋಷಣೆಗೆ ಹೆಸರಾಗಿದ್ದ ದಕ್ಷಿಣ ಭಾರತದ ಹೆಮ್ಮೆಯ ಚಕ್ರವರ್ತಿ ಶ್ರೀಕೃಷ್ಣದೇವರಾಯರ ಪಾತ್ರದಲ್ಲಿ ಸುದೀಪ್ ಬಣ್ಣ ಹಚ್ಚಲಿದ್ದಾರೆ.

ಈ ಹಿಂದೆ ಕನ್ನಡ ಚಿತ್ರರಂಗದ ಮೇರು ನಟ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರು ಕೃಷ್ಣದೇವರಾಯರ ಪಾತ್ರವನ್ನು ಬೆಳ್ಳಿತೆರೆಯ ಮೇಲೆ ಅಜರಾಮರಗೊಳಿಸಿದ್ದರು. ಇದೀಗ ದಶಕಗಳ ಬಳಿಕ, ಇಂದಿನ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹಾಲಿವುಡ್ ಮಟ್ಟದ ಅದ್ದೂರಿ ಮೇಕಿಂಗ್‌ನೊಂದಿಗೆ ಕೃಷ್ಣದೇವರಾಯರ ವೈಭವವನ್ನು ಮರುಸೃಷ್ಟಿಸಲು ಸಿದ್ಧತೆ ನಡೆದಿದೆ.

ಈ ಸಿನಿಮಾವು ಸುದೀಪ್ ಅವರ ಸಿನಿಪಯಣದಲ್ಲೇ ಅತ್ಯಂತ ದೊಡ್ಡ ಮೈಲಿಗಲ್ಲಾಗುವ ನಿರೀಕ್ಷೆ ಮೂಡಿಸಿದೆ. ಮೊದಲ ಬಾರಿಗೆ ಸುದೀಪ್‌ ಅವರು ಐತಿಹಾಸಿಕ ಪಾತ್ರವೊಂದರಲ್ಲಿ ನಟಿಸುತ್ತಿರುವುದು ವಿಶೇಷ. ಪ್ರಿಯಾ ಸುದೀಪ್ ಅರ್ಪಿಸುತ್ತಿರುವ ಈ ಚಿತ್ರಕ್ಕೆ ಟಿ.ಜಿ. ವಿಶ್ವಪ್ರಸಾದ್‌ ಹಾಗೂ ಕೃತಿ ಪ್ರಸಾದ್‌ ಬೃಹತ್ ಮೊತ್ತದ ಬಂಡವಾಳ ಹೂಡುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ ಆಗುತ್ತಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ

ತೆಲುಗಿನಲ್ಲಿ 'ಕಾರ್ತಿಕೇಯ 2', 'ಧಮಾಕಾ', 'ಬ್ರೋ' ಹಾಗೂ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ನಂತಹ ಪ್ಯಾನ್-ಇಂಡಿಯಾ ಹಿಟ್ ಚಿತ್ರಗಳನ್ನು ನಿರ್ಮಿಸಿ ಜನಪ್ರಿಯತೆ ಗಳಿಸಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲೂ ಭದ್ರವಾಗಿ ನೆಲೆವೂರಲು ಸಜ್ಜಾಗಿದೆ. ಕೃಷ್ಣದೇವರಾಯರ ಆಳ್ವಿಕೆಯ ಭವ್ಯತೆಯನ್ನು ಜಾಗತಿಕ ಮಟ್ಟದಲ್ಲಿ ತೆರೆದಿಡುವ ನಿಟ್ಟಿನಲ್ಲಿ ನಿರ್ಮಾಪಕರು ಯಾವುದೇ ರಾಜಿ ಇಲ್ಲದೆ ಸಿನಿಮಾವನ್ನು ನಿರ್ಮಾಣ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ʻಕಿಚ್ಚʼ ಸುದೀಪ್ ಜನ್ಮದಿನಕ್ಕೆ ಭರ್ಜರಿ ಗಿಫ್ಟ್; ವಿಜಯನಗರ ಸಾಮ್ರಾಟ 'ಶ್ರೀ ಕೃಷ್ಣದೇವರಾಯ' ಪಾತ್ರದಲ್ಲಿ ʻಅಭಿನಯ ಚಕ್ರವರ್ತಿʼ?

2027ರ ಡಿಸೆಂಬರ್‌ನಲ್ಲಿ ತೆರೆಗೆ

ಸದ್ಯಕ್ಕೆ ಈ ಚಿತ್ರದ ಶೀರ್ಷಿಕೆ ಮತ್ತು ಪವರ್‌ಫುಲ್ ಪೋಸ್ಟರ್ ಮೂಲಕ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಸೃಷ್ಟಿಸಿರುವ ಚಿತ್ರತಂಡ, ಈ ಬಿಗ್‌ ಬಜೆಟ್‌ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎಂಬುದನ್ನು ಗೌಪ್ಯವಾಗಿಟ್ಟಿದೆ. ಐತಿಹಾಸಿಕ ಹಿನ್ನೆಲೆ, ಬೃಹತ್ ಸೆಟ್‌ಗಳು ಹಾಗೂ ಅತ್ಯಾಧುನಿಕ ಗ್ರಾಫಿಕ್ಸ್ ಕೆಲಸಗಳಿಗೆ ಹೆಚ್ಚಿನ ಸಮಯಾವಕಾಶ ಬೇಕಿರುವುದರಿಂದ, 'ದೇವರಾಯ' ಚಿತ್ರವನ್ನು 2027ರ ಡಿಸೆಂಬರ್‌ನಲ್ಲಿ ಜಗತ್ತಿನಾದ್ಯಂತ ಬಹುಭಾಷೆಗಳಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.