ʻಕಿಚ್ಚʼ ಸುದೀಪ್ ಜನ್ಮದಿನಕ್ಕೆ ಭರ್ಜರಿ ಗಿಫ್ಟ್; ವಿಜಯನಗರ ಸಾಮ್ರಾಟ 'ಶ್ರೀ ಕೃಷ್ಣದೇವರಾಯ' ಪಾತ್ರದಲ್ಲಿ ʻಅಭಿನಯ ಚಕ್ರವರ್ತಿʼ?
ಕಿಚ್ಚ ಸುದೀಪ್ ಅವರ ಹೊಸ ಸಿನಿಮಾವು, ಸೆಪ್ಟೆಂಬರ್ 2ರ ಅವರ ಜನ್ಮದಿನದ ಅಂಗವಾಗಿ ಅಧಿಕೃತವಾಗಿ ಘೋಷಣೆಯಾಗಲಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಜಂಟಿಯಾಗಿ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿವೆ. ಅಂದಹಾಗೆ, ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ ಪಾತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
-
ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಅವರ ಜನ್ಮದಿನಕ್ಕೆ (ಸೆಪ್ಟೆಂಬರ್ 2) ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಈ ವಿಶೇಷ ದಿನದಂದು ಸುದೀಪ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾಗಳ ಘೋಷಣೆಯಾಗಲಿದ್ದು, ಅದರಲ್ಲಿ ಒಂದು ಬೃಹತ್ ಐತಿಹಾಸಿಕ ಪ್ರಾಜೆಕ್ಟ್ ಇರಲಿದೆ ಎಂಬ ಸುದ್ದಿ ಸೌತ್ ಇಂಡಿಯಾ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಸಿದೆ.
ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಹಾಗೂ ಪ್ರಿಯಾ ಸುದೀಪ್ ಒಡೆತನದ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್’ ಜಂಟಿಯಾಗಿ ಸುದೀಪ್ ಅವರ ಹೊಸ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿವೆ.
ಕಿರೀಟದ ಪೋಸ್ಟರ್‌ನಿಂದ ಗರಿಗೆದರಿದ ನಿರೀಕ್ಷೆ
ಚಿತ್ರತಂಡ ಬಿಡುಗಡೆ ಮಾಡಿರುವ ವಿಶೇಷ ಪ್ರಚಾರ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ಎ ಕಿಂಗ್-ಸೈಜ್ ಕೊಲ್ಯಾಬೊರೇಷನ್... ಕಿಚ್ಚ ಸುದೀಪ್ X ಪೀಪಲ್ ಮೀಡಿಯಾ ಫ್ಯಾಕ್ಟರಿ X ಸುಪ್ರಿಯಾನ್ವಿ ಸ್ಟುಡಿಯೋಸ್. #PMFxSupriyanvi ಸೆಪ್ಟೆಂಬರ್ 2ರಂದು ಅನೌನ್ಸ್‌ಮೆಂಟ್" ಎಂಬ ಬರಹದ ಜೊತೆಗೆ, ಪೋಸ್ಟರ್‌ನಲ್ಲಿ ರಾಜವೈಭವ ಸಾರುವ ಭವ್ಯ ಕಿರೀಟವನ್ನು ಪ್ರಮುಖವಾಗಿ ತೋರಿಸಲಾಗಿದೆ. ಇದು ಕೇವಲ ಕಮರ್ಷಿಯಲ್ ಸಿನಿಮಾ ಆಗಿರದೆ, ಭರ್ಜರಿ ಐತಿಹಾಸಿಕ ಕಥಾಹಂದರ ಹೊಂದಿರುವ ಪ್ಯಾನ್-ಇಂಡಿಯಾ ಸಿನಿಮಾ ಎಂಬ ಊಹಾಪೋಹಗಳಿಗೆ ಬಲ ತುಂಬಿದೆ.
ಶ್ರೀ ಕೃಷ್ಣದೇವರಾಯರ ಪಾತ್ರದಲ್ಲಿ ಸುದೀಪ್?
ಮೂಲಗಳ ಪ್ರಕಾರ, ಸುದೀಪ್ ಅವರು ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 1509 ರಿಂದ 1529ರವರೆಗೆ ವಿಜಯನಗರ ಸಾಮ್ರಾಜ್ಯವನ್ನು ಸುವರ್ಣ ಯುಗಕ್ಕೆ ಕೊಂಡೊಯ್ದ ಕೃಷ್ಣದೇವರಾಯರು ತಮ್ಮ ಸಾಹಸ, ಚಾಣಾಕ್ಷ ಆಡಳಿತ ಹಾಗೂ ಸಾಹಿತ್ಯ-ಕಲೆಗಳ ಪ್ರೋತ್ಸಾಹಕ್ಕೆ ಇತಿಹಾಸದಲ್ಲಿ ಚಿರಪರಿಚಿತರು. ಈ ಹಿಂದೆ ಡಾ. ರಾಜಕುಮಾರ್ ಅವರಂತಹ ಮೇರು ನಟರು ಕೃಷ್ಣದೇವರಾಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಈಗಿನ ಆಧುನಿಕ ತಂತ್ರಜ್ಞಾನ ಮತ್ತು ಅದ್ದೂರಿ ಮೇಕಿಂಗ್‌ನಲ್ಲಿ ಈ ಕಥೆ ತೆರೆಕಂಡರೆ, ಅದು ಸುದೀಪ್ ವೃತ್ತಿಜೀವನದಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯ ಮೈಲಿಗಲ್ಲು ಪ್ರಾಜೆಕ್ಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಪಾತ್ರದ ಆಯ್ಕೆ ಕುರಿತು ಚಿತ್ರತಂಡವಾಗಲಿ ಅಥವಾ ಸ್ವತಃ ಸುದೀಪ್ ಅವರಾಗಲಿ ಇನ್ನೂ ಅಧಿಕೃತ ಮುದ್ರೆ ಒತ್ತಿಲ್ಲ. ಸೆಪ್ಟೆಂಬರ್ 2ರಂದು ಹೊರಬೀಳಲಿರುವ ಅಧಿಕೃತ ಅಪ್‌ಡೇಟ್‌ನಲ್ಲಿ ಶೀರ್ಷಿಕೆ, ನಿರ್ದೇಶಕರು ಹಾಗೂ ಕಲಾವಿದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
Rajath Kishan, BBK 11: ಸುದೀಪ್-ದರ್ಶನ್ ಒಂದಾದ್ರೆ ತಿರುಪತಿಗೆ ಹೋಗಿ ತಲೆ ಬೋಳಿಸ್ತೀನಿ ಎಂದ ರಜತ್
ಸುದೀಪ್‌ಗಾಗಿ ಒಂದಾದ ಬಿಗ್ ಬ್ಯಾನರ್‌ಗಳು
ಈ ಚಿತ್ರದ ಮೂಲಕ ಎರಡು ಬಿಗ್ ನಿರ್ಮಾಣ ಸಂಸ್ಥೆಗಳು ಕೈಜೋಡಿಸಿವೆ. ಪೀಪಲ್ ಮೀಡಿಯಾ ಫ್ಯಾಕ್ಟರಿಯು ತೆಲುಗಿನಲ್ಲಿ 'ಕಾರ್ತಿಕೇಯ 2', 'ಧಮಾಕ', 'ಬ್ರೋ' ಹಾಗೂ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಮುಂತಾದ ಬಿಗ್-ಬಜೆಟ್ ಚಿತ್ರಗಳನ್ನು ನಿರ್ಮಿಸಿದ್ದು, ಕನ್ನಡದಲ್ಲೂ ಸಕ್ರಿಯವಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಪಿನಾಕ' ಚಿತ್ರದ ಜೊತೆಗೆ ಶ್ರೀಮುರಳಿ ಮತ್ತು ಧ್ರುವ ಸರ್ಜಾ ಅವರೊಂದಿಗೂ ಹೊಸ ಪ್ರಾಜೆಕ್ಟ್‌ಗಳಿಗೆ ಪ್ಲಾನ್ ಹಾಕಿಕೊಂಡಿದೆ.
ಇನ್ನು ಪ್ರಿಯಾ ಸುದೀಪ್ ನೇತೃತ್ವದ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಸಂಸ್ಥೆ ಈಗಾಗಲೇ 'ಮಾರ್ಕ್' ಹಾಗೂ 'ಮ್ಯಾಂಗೋ ಪಚ್ಚಾ' ಪ್ರಾಜೆಕ್ಟ್‌ಗಳ ಮೂಲಕ ಸಿನಿಮಾ ರಂಗದಲ್ಲಿ ಭರವಸೆ ಮೂಡಿಸಿದ್ದು, ಇದೀಗ ದೊಡ್ಡ ಕ್ಯಾನ್ವಾಸ್‌ನ ಚಿತ್ರಕ್ಕೆ ಹೆಜ್ಜೆ ಇಟ್ಟಿದೆ. ಸೆಪ್ಟೆಂಬರ್ 2ರಂದು ಕಿಚ್ಚನ ಅಭಿಮಾನಿಗಳಿಗೆ ಈ 'ಕಿಂಗ್-ಸೈಜ್' ಪ್ರಾಜೆಕ್ಟ್‌ನ ಸಂಪೂರ್ಣ ವಿವರಗಳು ಅನಾವರಣಗೊಳ್ಳಲಿವೆ.