ಕಿರಣ್ ಆದಿತ್ಯ ಮತ್ತು ಲೇಖ ಚಂದ್ರ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಲೈಫ್ ಟುಡೇ' ಸಿನಿಮಾದ ʻಸಿಕ್ಕರೆ ಸಿಕ್ಕರೆ..ʼ ಸಾಂಗ್‌ನ ಲಾಂಚ್ ಇವೆಂಟ್ ಎಮ್ ಎಸ್ ರಾಮಯ್ಯ ಕಾಲೇಜು ಮೈದಾನದಲ್ಲಿ ನಡೆಯಿತು. ಈ ಸಿನಿಮಾವನ್ನು ಕಾಂತ ಕನ್ನಲ್ಲಿ ನಿರ್ದೇಶನ ಮಾಡಿದ್ದು, ಮೇಘನಾ ಪ್ರದೀಪ್ ನಿರ್ಮಾಣ ಮಾಡಿದ್ದಾರೆ. ವಿಶೇಷವೆಂದರೆ, ಸಾಂಗ್ ಲಾಂಚ್ ಇವೆಂಟ್‌ಗೆ ನಟಿ ಮಾನ್ವಿತಾ ಹರೀಶ್, ʻಬಿಗ್ ಬಾಸ್ʼ ಖ್ಯಾತಿಯ ರಿಷಾ ಗೌಡ ಮತ್ತು ʻಅಯೋಗ್ಯʼ ನಿರ್ದೇಶಕ ಮಹೇಶ್ ಅತಿಥಿಗಳಾಗಿ ಆಗಮಿಸಿದ್ದರು.
ಜೋಗಿ ಪ್ರೇಮ್ ಗಾಯನ
ಕೆ. ರಾಮನಾರಾಯಣ್ ಬರೆದ 'ಸಿಕ್ಕರೆ ಸಿಕ್ಕರೆ' ಸಾಂಗ್ ಅನ್ನು ಜೋಗಿ ಪ್ರೇಮ್ ಅವರು ಹಾಡಿದ್ದಾರೆ. ಈಚೆಗೆ ʻಸಿದ್ದಯ್ಯ ಸ್ವಾಮಿ ಬನ್ನಿʼ ಹಾಗೂ ʻಅಣ್ತಮ್ಮ ಜೋಡೆತ್ತು..ʼ ಹಾಡನ್ನು ಹಾಡಿ ಟ್ರೆಂಡ್‌ನಲ್ಲಿರುವ ಜೋಗಿ ಪ್ರೇಮ್ ಅವರು ಈಗ ಸಿಕ್ಕರೆ ಸಿಕ್ಕರೆ ಹಾಡಿಗೂ ಧ್ವನಿ ನೀಡಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಅವರು ಈ ಹಾಡಿಗೆ ಸಂಗೀತ ನೀಡಿದ್ದಾರೆ. ಇದೊಂದು ಲವ್ ಬ್ರೇಕಪ್ ಸಾಂಗ್ ಆಗಿದ್ದು, ಸಖತ್ ಹಿಟ್ ಆಗಲಿದೆ ಎಂಬ ಭರವಸೆ ಚಿತ್ರತಂಡದ್ದು.
Jogi Prem: ಬಾಲಿವುಡ್ ಗಾಯಕ ಸೋನು ನಿಗಮ್‌ಗೆ ಹಿಗ್ಗಾಮುಗ್ಗಾ ಬೈದಿದ್ರಂತೆ ಜೋಗಿ ಪ್ರೇಮ್!
ಹೀರೋ ಕಿರಣ್ ಆದಿತ್ಯ ಹೇಳಿದ್ದೇನು?
"ನಾವು ವಾಸ್ತವದಲ್ಲಿನ ಕಂಟೆಂಟ್ ಅನ್ನು ಇಟ್ಕೊಂಡು ಮಾಡಿರುವ ಸಿನಿಮಾ ಇದು. ಜೊತೆಗೆ ಕಮರ್ಷಿಯಲ್ ಟಚ್ ಕೂಡ ಕೊಟ್ಟಿದ್ದೇವೆ. ಈಗಿನ ಕಾಲೇಜು ಯೂಥ್ಸ್‌ಗೆಂದೇ ಮಾಡಿರುವ ಸಿನಿಮಾ ಇದು. ನಾನು ನಟ ಯಶ್ ಅವರ ಅಭಿಮಾನಿ. ಅವರು ಹೇಳಿದಂಗೆ, ಅಣ್ತಮ್ಮ ಇಲ್ಲಿ ಯಾರೂ ಹೀರೋಗಳನ್ನ ಹುಟ್ಟು ಹಾಕಲ್ಲ, ನಮಗೆ ನಾವೇ ಹೀರೋ ಆಗ್ಬೇಕು ಅನ್ನೋ ಮಾತನ್ನು ನಾನು ಪಾಲಿಸುತ್ತೇನೆ" ಎಂದು ಹೇಳುತ್ತಾರೆ ಕಿರಣ್ ಆದಿತ್ಯ.
"ನಾನು ಸಾಂಗ್ ನೋಡಿದೆ, ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾ ಮಾಡೋದು ಎಷ್ಟು ಕಷ್ಟ ಅಂತ ನನಗೂ ಗೊತ್ತು. ಎಲ್ಲರಿಗೂ ಒಳ್ಳೆಯದಾಗಲಿ" ಎಂದು ಅತಿಥಿಯಾಗಿ ಬಂದಿದ್ದ ನಟಿ ಮಾನ್ವಿತಾ ಹರೀಶ್ ಶುಭ ಹಾರೈಸಿದರು.
ಬಳಿಕ ಮಾತನಾಡಿದ ಮತ್ತೋರ್ವ ಅತಿಥಿ ʻಅಯೋಗ್ಯʼ ಖ್ಯಾತಿಯ ಮಹೇಶ್, "ಶ್ರೀಧರ್ ಅವರ ಹಾಡುಗಳು ನನಗೆ ಫೇವರೀಟ್. ಅವರ ಎಲ್ಲಾ ಹಾಡುಗಳು ತಮ್ಮದೇ ಆದ ಶೈಲಿಯನ್ನು ಹೊಂದಿವೆ. ದರ್ಶನ್, ಸುದೀಪ್, ಧ್ರುವ ಸರ್ಜಾ, ಯಶ್ ಎಲ್ಲರೂ ಬಂದಿದ್ದು ಜೀರೋದಿಂದಾನೇ. ಹೀರೋ ಕಿರಣ್ ಅವರ ಜರ್ನಿ ಈಗ ಶುರುವಾಗುತ್ತಿದೆ. ನಿಮ್ಮ ಲೈಫ್ ಕೂಡ ಲೈಫ್ ಟುಡೇ ಚಿತ್ರದಿಂದಲೇ ಬದಲಾಗುತ್ತದೆ" ಎಂದರು.