ಗುಣಾತ್ಮಕ, ಮೌಲ್ಯಾಧಾರಿತ ಶಿಕ್ಷಣದಿಂದ ದೇಶದ ಪ್ರಗತಿ ಸಾಧ್ಯ : ಮಾಜಿ ಸಚಿವ ಎನ್.ಎಚ್. ಶಿವಶಂಕರ್ ರೆಡ್ಡಿ
ಗೌರಿಬಿದನೂರಿನಲ್ಲಿ ಕೇಂದ್ರೀಯ ವಿದ್ಯಾಲಯ, ಜಿಟಿಟಿಸಿ, ಆದರ್ಶ ವಿದ್ಯಾಲಯ, ಕೆಜಿಬಿವಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಸರ್ಕಾರಿ ಪಾಲಿಟೆಕ್ನಿಕ್ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಯಿಂದ ಶೈಕ್ಷಣಿಕ ಕ್ರಾಂತಿ ಸಾಧ್ಯವಾಗಿದೆ. ವಿದ್ಯಾರ್ಥಿಗಳು ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು
-
ಗೌರಿಬಿದನೂರು: ಸರ್ಕಾರಿ ಹಾಗೂ ವಸತಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯಗಳೊಂದಿಗೆ ಗುಣಾತ್ಮಕ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡಿದರೆ ದೇಶದ ಪ್ರಗತಿಗೆ ಭದ್ರ ಬುನಾದಿ ಹಾಕಲು ಸಾಧ್ಯ ಎಂದು ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಹೇಳಿದರು.
ತಾಲ್ಲೂಕಿನ ವಿದುರಾಶ್ವತ್ಥದ ಕಸ್ತೂರಿಬಾ ಗಾಂಧೀಜಿ ಬಾಲಿಕಾ ವಿದ್ಯಾಲಯದಲ್ಲಿ ಹೊಂಗಿರಣ ಜನಸೇವಾ ಟ್ರಸ್ಟ್ ಹಾಗೂ ಲಯನ್ಸ್ ಸಂಸ್ಥೆ ವತಿಯಿಂದ ನಡೆದ ನೋಟ್ ಪುಸ್ತಕ ಮತ್ತು ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಭಾಗದ ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಆರಂಭಗೊಂಡಿರುವ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣ ಹಾಗೂ ಅಗತ್ಯ ಸೌಲಭ್ಯಗಳು ದೊರೆಯ ಬೇಕು. ಈ ನಿಟ್ಟಿನಲ್ಲಿ ಹೊಂಗಿರಣ ಜನಸೇವಾ ಟ್ರಸ್ಟ್ ಕೈಗೊಂಡಿರುವ ಸೇವೆ ಶ್ಲಾಘನೀಯ ಎಂದರು.
ನಿವೃತ್ತ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ. ಅಶ್ವತ್ಥರೆಡ್ಡಿ ಮಾತನಾಡಿ, ಗೌರಿಬಿದನೂರಿನಲ್ಲಿ ಕೇಂದ್ರೀಯ ವಿದ್ಯಾಲಯ, ಜಿಟಿಟಿಸಿ, ಆದರ್ಶ ವಿದ್ಯಾಲಯ, ಕೆಜಿಬಿವಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಸರ್ಕಾರಿ ಪಾಲಿಟೆಕ್ನಿಕ್ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಯಿಂದ ಶೈಕ್ಷಣಿಕ ಕ್ರಾಂತಿ ಸಾಧ್ಯವಾಗಿದೆ. ವಿದ್ಯಾರ್ಥಿಗಳು ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹೊಂಗಿರಣ ಜನಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ವಿ. ಲಕ್ಷ್ಮಿಸಾಗರ್ ಹಾಗೂ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎ.ಎಸ್. ಜಗನ್ನಾಥ್ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅಗತ್ಯ ಪರಿಕರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಡಾ. ಕೆ.ಪಿ. ನಾರಾಯಣಪ್ಪ, ಜೀಲಾಕುಂಟೆ ಗಂಗಾಧರಪ್ಪ, ಜಿ.ಎನ್. ಸೂರಜ್, ಮುಖ್ಯ ಶಿಕ್ಷಕಿ ಪಿ.ಸಿ. ಪದ್ಮಲತ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.