Cult Movie: ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರನ ಚಿತ್ರಕ್ಕೆ ಮತ್ತೆ ಸಂಕಷ್ಟ; ಶೂಟಿಂಗ್‌ಗೆ ತಡೆ: ಕಾರಣವೇನು?
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಟನೆಯ ʼಕಲ್ಟ್ʼ ಕನ್ನಡ ಸಿನಿಮಾದ ಶೂಟಿಂಗ್ ವೇಳೆ ನಿಯಮ ಮೀರಿರುವ ಆರೋಪ ಕೇಳಿ ಬಂದಿದ್ದು, ತುಂಗಭದ್ರಾ ನದಿ ತೀರದಲ್ಲಿ ಬೆಂಕಿ ಹಾಕಿದೆ ಎನ್ನಲಾಗಿದೆ. ಹೀಗಾಗಿ ಚಿತ್ರೀಕರಣಕ್ಕೆ ಸರ್ಕಾರ ತಡೆ ಒಡ್ಡಿದೆ. ಹಂಪಿಯ ಸ್ನಾನಘಟ್ಟದ ಎದುರು ಬದಿಯ ವಿರುಪಾಪುರ ಗಡ್ಡಿ ಸಮೀಪದಲ್ಲಿ ನದಿ ತೀರದಲ್ಲಿ ಬೆಂಕಿ ಹಾಕಿ ಶೂಟಿಂಗ್ ನಡೆಸಲಾಗಿದೆ ಎನ್ನುವ ದೂರೂ ಕೇಳಿ ಬಂದಿದೆ.
ವಿಜಯನಗರ: ಇತ್ತೀಚೆಗೆ ʼಕಾಂತಾರ: ಚಾಪ್ಟರ್ 1ʼ ಮತ್ತು ʼಟಾಕ್ಸಿಕ್ʼ ಚಿತ್ರತಂಡ ನಿಯಮ ಉಲ್ಲಂಘಿಸಿ ಚಿತ್ರೀಕರಣ ನಡೆಸಿವೆ ಎನ್ನುವ ಆರೋಪ ಕೇಳಿ ಬಂದು ಭಾರಿ ಸಂಚಲನ ಮೂಡಿತ್ತು. ಬಳಿಕ ಅಧಿಕಾರಿಗಳು ತನಿಖೆ ನಡೆಸಿ ಕ್ಲಿನ್‌ಚಿಟ್ ನೀಡಿದ್ದರು. ಈ ಸುದ್ದಿ ತಣ್ಣಗಾಗುವ ಮುನ್ನ ಇದೀಗ ಮತ್ತೊಂದು ಸ್ಯಾಂಡಲ್‌ವುಡ್ ಚಿತ್ರಕ್ಕೆ ನಿಯಮ ಉಲ್ಲಂಘನೆಯ ವಿವಾದ ಸುತ್ತಿಕೊಂಡಿದೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರ ಪುತ್ರ ಝೈದ್ ಖಾನ್ (Zaid Khan) ನಟನೆಯ ʼಕಲ್ಟ್ʼ ಸಿನಿಮಾ (Cult Movie)ದ ಶೂಟಿಂಗ್ ವೇಳೆ ನಿಯಮ ಮೀರಿರುವ ಆರೋಪ ಕೇಳಿ ಬಂದಿದ್ದು, ತುಂಗಭದ್ರಾ ನದಿ ತೀರದಲ್ಲಿ ಬೆಂಕಿ ಹಾಕಿದೆ ಎನ್ನಲಾಗಿದೆ. ಹೀಗಾಗಿ ಚಿತ್ರೀಕರಣಕ್ಕೆ ಸರ್ಕಾರ ತಡೆ ಒಡ್ಡಿದೆ.
ಹಂಪಿಯ ಸ್ನಾನಘಟ್ಟದ ಎದುರು ಬದಿಯ ವಿರುಪಾಪುರ ಗಡ್ಡಿ ಸಮೀಪದಲ್ಲಿ ನದಿ ತೀರದಲ್ಲಿ ಬೆಂಕಿ ಹಾಕಿ ಶೂಟಿಂಗ್ ನಡೆಸಲಾಗಿದೆ ಎನ್ನುವ ದೂರು ಕೇಳಿ ಬಂದಿದೆ. ತುಂಗಭದ್ರಾ ನದಿ ತೀರವನ್ನು ನೀರುನಾಯಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಹೀಗಾಗಿ ಇಲ್ಲಿ ಬೆಂಕಿ ಹಾಕುವುದು ಸೇರಿದಂತೆ ಕೆಲವು ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಆದರೆ ಈ ಆದೇಶವನ್ನು ಗಾಳಿಗೆ ತೂರಿ ಚಿತ್ರತಂಡ ಬೆಂಕಿ ಹಾಕಿ ಶೂಟಿಂಗ್ ನಡೆಸಿದೆ.
ಚಿತ್ರೀಕರಣಕ್ಕೆ ಬ್ರೇಕ್
ಪ್ರಭಾವಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರನ ಚಿತ್ರ ಎನ್ನುವ ಕಾರಣಕ್ಕೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತರೇ ಎನ್ನುವ ಅನುಮಾನ ಮೂಡಿತ್ತು. ಬುಧವಾರ (ಜ. 29) ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ‘ಕಲ್ಟ್’ ಸಿನಿಮಾ ತಂಡವು ಅನುಮತಿ ಪಡೆಯದೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ, ರಂಗಾಪುರ ಬಳಿ ಚಿತ್ರೀಕರಣಕ್ಕೆ ಮುಂದಾಗಿತ್ತು. ಹೀಗಾಗಿ ಸ್ಥಳೀಯ ಅರಣ್ಯ ಅಧಿಕಾರಿಗಳು ಚಿತ್ರೀಕರಣ ನಡೆಸದಂತೆ ಸೂಚಿಸಿದೆ ಎಂದು ವರದಿಯೊಂದು ತಿಳಿಸಿದೆ.
ʼಕಲ್ಟ್ʼ ಚಿತ್ರಕ್ಕೂ ವಿವಾದಕ್ಕೂ ಬಿಡದ ನಂಟು
ಹಾಗೆ ನೋಡಿದರೆ ʼಉಪಾಧ್ಯಕ್ಷʼ ಸಿನಿಮಾ ನಿರ್ದೇಶಕ ಅನಿಲ್ ಕುಮಾರ್ ಅವರ ʼಕಲ್ಟ್ʼ ಚಿತ್ರಕ್ಕೆ ಅಂಟಿಕೊಳ್ಳುತ್ತಿರುವ ವಿವಾದ ಇದು ಮೊದಲ ಸಲವೇನಲ್ಲ. ಝೈದ್ ನಟನೆಯ ಈ 2ನೇ ಚಿತ್ರ ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ.
ಈ ಹಿಂದೆ ಚಿತ್ರೀಕರಣದ ವೇಳೆ ದುಬಾರಿ ಡ್ರೋನ್ ಮುರಿದು, ಡ್ರೋನ್ ಮಾಲೀಕ ಆತ್ಮಹತ್ಯೆಗೆ ಮುಂದಾಗಿ ದೊಡ್ಡ ವಿವಾದ ಉಂಟಾಗಿತ್ತು. ಕೊನೆಗೆ ಝೈದ್ ಖಾನ್, ತಮ್ಮ ಕೈಯಿಂದ ಹಣ ಕೊಟ್ಟು ಯುವಕನಿಗೆ ಸಹಾಯ ಮಾಡಿದ್ದರು. ಚಿತ್ರದ ಶೂಟಿಂಗ್ ವೇಳೆ ಬಾಡಿಗೆ ಪಡೆದ ಡ್ರೋನ್ ಸಂಪೂರ್ಣ ಡ್ಯಾಮೇಜ್ ಆಗಿತ್ತು. ಇದಕ್ಕೆ ಮೊದಲಿಗೆ ಚಿತ್ರತಂಡ ಯಾವುದೇ ನಷ್ಟ ಪರಿಹಾರ ನೀಡದ ಕಾರಣ ಟೆಕ್ನಿಶಿಯನ್ ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದರು. ಹೀಗಾಗಿ ʼಕಲ್ಟ್ʼ ಚಿತ್ರತಂಡ ವಿರುದ್ದ ಪ್ರಕರಣ ದಾಖಲಾಗಿತ್ತು. ಬಳಿಕ ʼಕಲ್ಟ್ʼ ಚಿತ್ರತಂಡ ಟೆಕ್ನಿಶಿಯನ್‌ಗೆ ನಷ್ಟ ಪರಿಹಾರ ನೀಡಿದ್ದರಿಂದ ಸಂತೋಷ್ ದೂರು ವಾಪಸ್ ಪಡೆದಿದ್ದರು.
ಈ ಸುದ್ದಿಯನ್ನೂ ಓದಿ: Cult Movie: ದೂರು ಹಿಂಪಡೆದ ಡ್ರೋನ್ ತಂತ್ರಜ್ಞ, ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾ ಶೂಟಿಂಗ್ ನಿರಾತಂಕ
2022ರಲ್ಲಿ ತೆರೆಕಂಡ ʼಬನಾರಸ್ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಝೈದ್ ಅಭಿನಯಿಸುತ್ತಿರುವ 2ನೇ ಚಿತ್ರ ʼಕಲ್ಟ್ʼ. ಇದರಲ್ಲಿ ನಾಯಕಿಯರಾಗಿ ರಚಿತಾ ರಾಮ್ ಮತ್ತು ಮಲೈಕಾ ನಟಿಸುತ್ತಿದ್ದಾರೆ. ಭಾರಿ ಕುತೂಹಲ ಕೆರಳಿಸಿರುವ ಈ ಚಿತ್ರ ಸದ್ಯ ಒಂದಲ್ಲ ಒಂದು ವಿವಾದಗಳ ಸುಳಿಗೆ ಸಿಲುಕಿಕೊಂಡಿದೆ.