2025ರಲ್ಲಿ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕೊಟ್ಟ ಮೋಹನ್‌ಲಾಲ್‌ಗೆ ವರ್ಷಾಂತ್ಯದಲ್ಲಿ ʻಬಿಗ್ʼ ಶಾಕ್! ಹಿಂಗ್ಯಾಕಾಯ್ತು ಗುರು?
ಮಲಯಾಳಂ ನಟ ಮೋಹನ್‌ಲಾಲ್ ಅವರಿಗೆ 2025ರ ಮೊದಲ ಎಂಟು ತಿಂಗಳು ಸುವರ್ಣಕಾಲವಾಗಿತ್ತು. L2: Empuraan, Thudarum ಮತ್ತು Hridayapoorvam ನಂತಹ ಚಿತ್ರಗಳ ಮೂಲಕ 600 ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದ್ದರು. ಆದರೆ, ವರ್ಷಾಂತ್ಯದಲ್ಲಿ ತೆರೆಕಂಡ ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಚಿತ್ರ 'ವೃಷಭ' ಹೀನಾಯವಾಗಿ ಸೋತಿದೆ.
-
ಮಲಯಾಳಂ ನಟ ಮೋಹನ್‌ಲಾಲ್ ಅವರ ವೃತ್ತಿ ಬದುಕಿಗೆ 2025ರ ಒಂಥರಾ ಲಕ್ಕಿ ಎಂದೇ ಹೇಳಬಹುದು. ಅವರು ನಟಿಸಿದ್ದ ಮೂರು ಮಲಯಾಳಂ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಎರಡು ಸಿನಿಮಾಗಳಲ್ಲಿ ಅವರು ಅತಿಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದರು. ಆದರೆ ವರ್ಷಾಂತ್ಯದಲ್ಲಿ ಮಾತ್ರ ದೊಡ್ಡ ಹೊಡೆತವೇ ಮೋಹನ್‌ಲಾಲ್‌ಗೆ ಬಿದ್ದಿದ್ದು, 'ಲಾಲೆಟ್ಟ' ಫ್ಯಾನ್ಸ್‌ಗೆ ನೋವು ನೀಡಿತು. ಅಂದಹಾಗೆ, ನೋವು ನೀಡಿದ ಆ ಸಿನಿಮಾ ವೃಷಭ!
ಮೂರು ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಿದ್ದ ಮೋಹನ್‌ಲಾಲ್
2025ರ ಮಾರ್ಚ್‌ನಲ್ಲಿ ಮೋಹನ್‌ಲಾಲ್ ನಟಿಸಿದ್ದ ʻಎಲ್2: ಎಂಪುರಾನ್ʼ ಸಿನಿಮಾ ತೆರೆಕಂಡಿತ್ತು. ಪ್ಯಾನ್ ಇಂಡಿಯಾ ರೇಂಜ್‌ನ ಆ ಸಿನಿಮದ ಬಜೆಟ್ ಸುಮಾರು 150 ಕೋಟಿ ರೂ. ಬಾಕ್ಸ್ ಆಫೀಸ್‌ನಲ್ಲಿ ಆ ಸಿನಿಮಾವು ಸುಮಾರು 260+ ಕೋಟಿ ರೂ. ಬಾಚಿಕೊಂಡಿತ್ತು. ನಂತರ ಬರೀ ಒಂದು ತಿಂಗಳ ಅಂತರದಲ್ಲಿ ಮೋಹನ್‌ಲಾಲ್ ಅವರ ʻತುಡರುಂʼ ಸಿನಿಮಾ ತೆರೆಕಂಡಿತ್ತು. ಇದು ನಿಜಕ್ಕೂ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ. ಯಾಕೆಂದರೆ, ಇದರ ಬಜೆಟ್ 28 ಕೋಟಿ ರೂ.! ಆದರೆ ಇದರ ಗಳಿಕೆ ಸುಮಾರು 235 ಕೋಟಿ ರೂ.ಗಳು.
ನಂತರ ಆಗಸ್ಟ್‌ನಲ್ಲಿ ಮೋಹನ್‌ಲಾಲ್ ಅವರು ʻಹೃದಯಪೂರ್ವಂʼ ಹೆಸರಿನ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಂಡರು. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ, ಈ ಸಿನಿಮಾ ಕೂಡ ಶತಕೋಟಿ ಕ್ಲಬ್ ಸೇರಿತು. ಅಲ್ಲಿಗೆ 2025ರ ಮೊದಲ 8 ತಿಂಗಳಲ್ಲಿ ಮೂರು ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿದ್ದರು. ಮೋಹನ್‌ಲಾಲ್. ಇದರ ಮಧ್ಯೆ ʻಭಾ ಭಾ ಬಾʼ, ʻಕಣ್ಣಪ್ಪʼ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಮೋಹನ್‌ಲಾಲ್ ನಟಿಸಿದ್ದರು. ಇದೆಲ್ಲಾ ಕಳೆದ ವರ್ಷದ ಅವರ ಸಕ್ಸಸ್‌ಫುಲ್ ಕಥೆಯಾದರೆ, ವರ್ಷಾಂತ್ಯದಲ್ಲಿ ಅವರಿಗೆ ದೊಡ್ಡ ಶಾಕ್ ಎದುರಾಗಿತ್ತು.
ವೃಷಭ ಕಲೆಕ್ಷನ್ ಕುರಿತ ಟ್ವೀಟ್
#Vrusshabha 8 Days world wide update :
— Jerin Georgekutty (@jerinGeorgekut2) January 2, 2026
Area wise breakup :
🔹Kerala : 97 Lakhs
🔹Telugu states : 16.02 Lakhs
🔹Tamilnadu : 6.31 Lakhs
🔹Karnataka : 7.19 Lakhs
🔹North states : 14 Lakhs
Total Domestic = 1.40 Crores
🔹UAE/ GCC : AED 63985 / $17423
🔹UK : £2348 / $3162… pic.twitter.com/MTeSN83Emc
ಸಕ್ಸಸ್ ಜರ್ನಿಗೆ ಗುಮ್ಮಿದ ವೃಷಭ!
ಹೌದು, 2025 ಡಿಸೆಂಬರ್ ಅಂತ್ಯದಲ್ಲಿ ಮೋಹನ್‌ಲಾಲ್ ನಟನೆಯ ʻವೃಷಭʼ ಸಿನಿಮಾ ತೆರೆಕಂಡಿತ್ತು. ಇದು ಪ್ಯಾನ್ ಇಂಡಿಯಾ ಸಿನಿಮಾ. ಆದರೆ ಇದು ತೆರೆಕಾಣುವ ಹೊತ್ತಿಗೆ ಯಾವುದೇ ಹೈಪ್ ಇರಲಿಲ್ಲ. ಸರಿಯಾದ ಸಂಖ್ಯೆಯಲ್ಲಿ ಶೋಗಳು ಕೂಡ ಎಲ್ಲಾ ಭಾಷೆಗಳಲ್ಲಿ ಸಿಗಲಿಲ್ಲ. ಸಿನಿಮಾ ನೋಡಿದವರಿಂದಂತೂ ತೀರಾ ನೆಗೆಟಿವ್ ಪ್ರತಿಕ್ರಿಯೆ ಸಿಕ್ಕಿತ್ತು. ತೀರಾ ಸವಕಲು ಎನಿಸುವ ಕಥೆಯನ್ನು ಮೋಹನ್‌ಲಾಲ್ ಒಪ್ಪಿಕೊಂಡಿದ್ದಾದರೂ ಏಕೆ ಎಂಬ ಪ್ರಶ್ನೆ ಮೂಡಿತು. ಸುಮಾರು 70 ಕೋಟಿ ರೂ. ಬಜೆಟ್‌ನ ಈ ಸಿನಿಮಾವು ಕೊನೆಗೆ 2 ಕೋಟಿ ರೂ. ಗಡಿ ಕೂಡ ಈ ಸಿನಿಮಾ ಮುಟ್ಟಿಲ್ಲ ಎನ್ನಲಾಗಿದೆ. ಮೋಹನ್‌ಲಾಲ್ ಕರಿಯರ್‌ನ ಅತಿ ದೊಡ್ಡ ಪ್ಲಾಫ್ ಸಿನಿಮಾ ಎಂಬ ಪಟ್ಟ ಈಗ ವೃಷಭ ಸಿನಿಮಾಗೆ ಸಿಕ್ಕಿದೆ.
ಅಂದಹಾಗೆ, ಈ ಸಿನಿಮಾವನ್ನು ವಿಕ್ಟರಿ, ರನ್ನ, ಅಧ್ಯಕ್ಷ ಖ್ಯಾತಿಯ ನಂದಕಿಶೋರ್ ಅವರು ನಿರ್ದೇಶಿಸಿದ್ದರು. ಕನ್ನಡದ ಕಲಾವಿದರಾದ ರಾಗಿಣಿ ದ್ವಿವೇದಿ, ಸಮರ್ಜಿತ್ ಲಂಕೇಶ್, ಗರುಡ ರಾಮ್, ಪಾವನಾ ಗೌಡ, ಕಿಶೋರ್ ಮುಂತಾದವರು ನಟಿಸಿದ್ದರು. ಬಾಲಿವುಡ್‌ನ ಹೆಸರಾಂತ ನಿರ್ಮಾಣ ಸಂಸ್ಥೆ ಬಾಲಾಜಿ ಮೋಷನ್ ಪಿಕ್ಚರ್ಸ್ ಇದಕ್ಕೆ ಹಣ ಹಾಕಿತ್ತು. ಈ ಚಿತ್ರದ ಹಿಂದೆ ದೊಡ್ಡ ದೊಡ್ಡ ಕೈಗಳೇ ಇದ್ದರೂ, ಇದರ ಹೀನಾಯ ಸೋಲನ್ನು ಮಾತ್ರ ಯಾರಿಂದಲೂ ತಪ್ಪಿಸಲು ಸಾಧ್ಯವಾಗಲಿಲ್ಲ. ಈ ಥರ ಯಾಕಾಯ್ತು ಅಂತ ಮೋಹನ್‌ಲಾಲ್ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ.