ಡೇಟಿಂಗ್ ಗಾಸಿಪ್ ನಡುವೆಯೇ ಮೃಣಾಲ್ ಠಾಕೂರ್‌ಗೆ ದೊಡ್ಡ ಆಫರ್ ಕೊಟ್ಟ ನಟ ಧನುಷ್! ಏನಿದು ಹೊಸ ನ್ಯೂಸ್?
ಡೇಟಿಂಗ್ ವದಂತಿಗಳ ನಡುವೆಯೇ ನಟ ಧನುಷ್ ತಮ್ಮ ಮುಂದಿನ ಐತಿಹಾಸಿಕ ಮಹಿಳಾ ಪ್ರಧಾನ ಚಿತ್ರಕ್ಕೆ ಮೃಣಾಲ್ ಠಾಕೂರ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವರ ವಂಡರ್‌ಬಾರ್ ಫಿಲ್ಮ್ಸ್ ಅಡಿಯಲ್ಲಿಯೇ ಈ ಸಿನಿಮಾ ನಿರ್ಮಾಣವಾಗುವ ಸಾಧ್ಯತೆಯಿದೆ.
-
ತಮಿಳು ನಟ ಧನುಷ್ ಮತ್ತು ಬಾಲಿವುಡ್ ನಟಿ ಮೃಣಾಲ್ ಠಾಕೂರ್ ನಡುವೆ ಡೇಟಿಂಗ್ ನಡೆಯುತ್ತಿದೆ. ಇಬ್ಬರು ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂಬ ವದಂತಿಯು ಈಚೆಗೆ ಕೇಳಿಬಂದಿತ್ತು. ಅದಕ್ಕೆ ಧನುಷ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವಾದರೂ, ಮೃಣಾಲ್ ಮಾತ್ರ ನನಗೆ ಡೇಟಿಂಗ್, ಮದುವೆಗೆಲ್ಲಾ ಟೈಮಿಲ್ಲ ಎಂದು ಜಾರಿಕೊಂಡಿದ್ದರು. ಆದರೆ ಈ ನಡುವೆ ಕೇಳಿಬಂದಿರುವ ಒಂದು ಬಿಸಿ ಬಿಸಿ ನ್ಯೂಸ್ ಏನಪ್ಪ ಅಂದರೆ, ಧನುಷ್ ಜೊತೆಗೆ ಮೃಣಾಲ್ ಠಾಕೂರ್ ಕೆಲಸ ಮಾಡಲಿದ್ದಾರೆ ಎಂಬುದು.
ಹೌದು, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಧನುಷ್ ನಿರ್ದೇಶಕರಾಗಿಯೂ ಹೆಸರು ಮಾಡುತ್ತಿದ್ದಾರೆ. 'ಪಾ ಪಾಂಡಿ', 'ರಾಯನ್', ‘ಇಡ್ಲಿ ಕಡೈ’ ಸೇರಿದಂತೆ ನಾಲ್ಕು ಭಿನ್ನ ಜಾನರ್‌ನ ಸಿನಿಮಾಗಳನ್ನು ತೆರೆಗೆ ತಂದಿದ್ದಾರೆ. ಸದ್ಯ ನಟನೆಯಲ್ಲಿ ಹೆಚ್ಚು ಬ್ಯುಸಿ ಇರುವ ಧನುಷ್, ಈಗೊಂದು ಐತಿಹಾಸಿಕ ಮಹಿಳಾ ಪ್ರಧಾನ ಸಿನಿಮಾ ಮಾಡುವುದಕ್ಕೆ ಮನಸ್ಸು ಮಾಡಿದ್ದಾರಂತೆ. ಅದರಲ್ಲಿ ಮೃಣಾಲ್ ಠಾಕೂರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸದ್ಯದ ಟಾಕ್.
Dhanush: ʻಇಳಯರಾಜʼ ಜೊತೆಗೆ ಮತ್ತೊಂದು ಜೀವನ ಚರಿತ್ರೆಯ ಸಿನಿಮಾದಲ್ಲಿ ಧನುಷ್!
ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಧನುಷ್ ನಿರ್ದೇಶನದ ಈ ಚಿತ್ರವು 1960-70ರ ದಶಕದ ಹಿನ್ನೆಲೆಯುಳ್ಳ ಒಂದು ಐತಿಹಾಸಿಕ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಇದರಲ್ಲಿ ಮೃಣಾಲ್ ಠಾಕೂರ್ ಅತ್ಯಂತ ಶಕ್ತಿಶಾಲಿ ದೇವತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಧನುಷ್ ಅವರ 'ವಂಡರ್‌ಬಾರ್ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿಯೇ ನಿರ್ಮಿಸಲಾಗುತ್ತಿದ್ದು, ಜಿ. ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಲಿದ್ದಾರೆ ಎನ್ನಲಾಗಿದೆ. ಸದ್ಯ ತಮ್ಮ ಶೂಟಿಂಗ್ ಶೆಡ್ಯೂಲ್‌ಗಳ ನಡುವೆಯೇ ಈ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಿಗೆ ಧನುಷ್ ಸಮಯ ನೀಡುತ್ತಿದ್ದಾರಂತೆ.
Dhanush: ಪ್ರೇಮಿಗಳ ದಿನದಂದೇ ಹಸೆಮಣೆ ಏರಲು ರೆಡಿಯಾದ್ರಾ ಧನುಷ್-ಮೃಣಾಲ್ ಠಾಕೂರ್?
ಆದರೆ, ಇದುವರೆಗೂ ಇಬ್ಬರ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಸಿಕ್ಕಿಲ್ಲ. ಇಬ್ಬರು ಕೂಡ ತಮ್ಮ ಮುಂದಿನ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಧನುಷ್ ಅವರಂತೂ 8-9 ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದರೆ, ಅತ್ತ ಮೃಣಾಲ್ ಠಾಕೂರ್ ಅವರು ತೆಲುಗು ಮತ್ತು ಹಿಂದಿಯಲ್ಲಿ ಸಿನಿಮಾಗಳಲ್ಲಿ ಒಪ್ಪಿಕೊಳ್ಳುತ್ತಾ ಬ್ಯುಸಿ ಆಗಿದ್ದಾರೆ.
ವದಂತಿಗಳ ಬಗ್ಗೆ ಕಿಡಿಕಾರಿದ್ದ ನಟಿ
ಈ ಹಿಂದೆ ಧನುಷ್ ಜೊತೆ ಮೃಣಾಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರಿದಾಡಿದಾಗ, "ನನಗೆ ಯಾರ ಜೊತೆಗೂ ಡೇಟಿಂಗ್ ಮಾಡಲು ಸಮಯವಿಲ್ಲ. ಧನುಷ್ ತನಗೆ ಕೇವಲ ಒಬ್ಬ ಉತ್ತಮ ಸ್ನೇಹಿತ ಮತ್ತು ಅವರ ಕೆಲಸದ ಬಗ್ಗೆ ಗೌರವವಿದೆ. ಇಂತಹ ಆಧಾರರಹಿತ ಸುದ್ದಿಗಳು ಸಿನಿಮಾ ಅವಕಾಶಗಳ ಮೇಲೆ ಪರಿಣಾಮ ಬೀರುತ್ತವೆ. ಒಂದು ವೇಳೆ ನಾನು ನಿಜವಾಗಿಯೂ ಪ್ರೀತಿಯಲ್ಲಿದ್ದರೆ, ಆ ವಿಷಯವನ್ನು ನಾನೇ ಪ್ರಪಂಚಕ್ಕೆ ತಿಳಿಸುತ್ತೇನೆ" ಎಂದು ಅವರು ನೇರವಾಗಿಯೇ ಹೇಳಿದ್ದರು ಮೃಣಾಲ್.