‘ನಂದಗೋಕುಲ’ ಧಾರಾವಾಹಿಗೆ ನಟ ಯಶವಂತ್ ಗುಡ್‌ಬೈ ಹೇಳೋದಕ್ಕೆ ʻಬಿಗ್ ಬಾಸ್ʼ ಶೋ ಕಾರಣವೇ? ದೊಡ್ಮನೆಯಿಂದ ಕೇಶವನಿಗೆ ಬಂದೈತಾ ಆಫರ್?
‘ನಂದಗೋಕುಲ’ ಧಾರಾವಾಹಿಯಿಂದ ನಟ ಯಶವಂತ್ ಹೊರಬಂದಿದ್ದು, ಬಿಗ್ ಬಾಸ್ ಮನೆಗೆ ಹೋಗುವ ವದಂತಿಗಳಿಗೆ ತೆರೆ ಎಳೆದಿದ್ದಾರೆ. ರಿಯಾಲಿಟಿ ಶೋ ಪ್ರವೇಶಿಸಿದರೆ ನಟನ ನೈಜ ಸ್ವಭಾವವೇ ಬಯಲಾಗಿ ಕಲಾ ಬದುಕು ಅಂತ್ಯಗೊಳ್ಳುತ್ತದೆ ಎಂದಿರುವ ಅವರು, ಯಾವುದೇ ಪ್ರಚಾರದ ಗೀಳಿಲ್ಲದೆ, ಬೆಳ್ಳಿತೆರೆಯಲ್ಲಿ ನೆಲೆ ಕಂಡುಕೊಳ್ಳುವ ಇರಾದೆಯನ್ನು ಹೊಂದಿದ್ದಾರೆ.
-
ಕಿರುತೆರೆಯ ಜನಪ್ರಿಯ ‘ನಂದಗೋಕುಲ’ ಧಾರಾವಾಹಿಯಲ್ಲಿ ಕೇಶವ ಪಾತ್ರದ ಮೂಲಕ ಮನೆಮಾತಾಗಿದ್ದ ನಟ ಯಶವಂತ್ ಅವರು ಧಾರಾವಾಹಿಯಿಂದ ಹೊರನಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ವಿದಾಯದ ಸಂದೇಶ ಹಂಚಿಕೊಂಡಿರುವ ಬೆನ್ನಲ್ಲೇ, ಅವರು ಮುಂಬರುವ ‘ಬಿಗ್ ಬಾಸ್’ ರಿಯಾಲಿಟಿ ಶೋ ಪ್ರವೇಶಿಸುತ್ತಿದ್ದಾರಾ ಎಂಬ ಗುಸುಗುಸು ಕಿರುತೆರೆ ವಲಯದಲ್ಲಿ ಜೋರಾಗಿತ್ತು. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ಖುದ್ದು ಯಶವಂತ್ ತೆರೆ ಎಳೆದಿದ್ದು, ವಿಶ್ವವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ನಿರ್ಧಾರದ ಹಿಂದಿನ ಅಸಲಿ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.
ಬಿಗ್ ಬಾಸ್ ಒಂದು ದೊಡ್ಡ ವೇದಿಕೆ
ʻಬಿಗ್ ಬಾಸ್ʼ ಆಫರ್ ಕುರಿತ ಪ್ರಶ್ನೆಗೆ ನೇರವಾಗಿಯೇ ಉತ್ತರಿಸಿದ ಯಶವಂತ್, "ನನಗೆ ಯಾವುದೇ ಬಿಗ್ ಬಾಸ್ ಆಫರ್ ಬಂದಿಲ್ಲ. ಅಷ್ಟಕ್ಕೂ ನನಗಲ್ಲಿಗೆ ಹೋಗಲು ಇಷ್ಟವೇ ಇಲ್ಲ. ಚಿಕ್ಕ ವಯಸ್ಸಿನಿಂದಲೂ ಕೇವಲ ನಟನಾಗಬೇಕು ಎಂಬ ಆಸೆಯಿತ್ತೇ ಹೊರತು, ಅತಿಯಾದ ಪ್ರಚಾರ ಅಥವಾ ಅಟೆನ್ಷನ್ ಪಡೆಯುವುದು ನನಗಿಷ್ಟವಿಲ್ಲ. ನಾನೇನಾದರೂ ಬಿಗ್ ಬಾಸ್‌ಗೆ ಹೋಗುವುದೇ ಆಗಿದ್ದರೆ, ಈ ರೀತಿ ಬಹಿರಂಗವಾಗಿ ಸಂದರ್ಶನ ನೀಡಲು ಸಾಧ್ಯವೇ ಇರುತ್ತಿರಲಿಲ್ಲ. ಹೋಗಲ್ಲ ಅಂತ ಹೇಳಿ ಮತ್ತೆ ಅಲ್ಲಿಗೆ ಹೋದರೆ ನನ್ನನ್ನು ಪ್ರೀತಿಸಿದ ಜನರೇ 'ಛೀ' ಎಂದು ಉಗಿಯುತ್ತಾರೆ. ಬಿಗ್ ಬಾಸ್ ಒಂದು ದೊಡ್ಡ ವೇದಿಕೆ, ಆದರೆ ನಟನಾಗಿ ಅಲ್ಲಿಗೆ ಹೋದರೆ ಸಿಗುವ ಅತಿಯಾದ ಎಕ್ಸ್‌ಪೋಸರ್ ನನಗೆ ಬೇಕಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
Nandagokula serial: ‘ನಂದಗೋಕುಲ’ ಧಾರಾವಾಹಿ ಕೇಶವನ ಪಾತ್ರಕ್ಕೆ ಬಂದ ಈ ನಟ ಯಾರು?
ನಟನಾ ವೃತ್ತಿಯೇ ಅಲ್ಲಿಗೆ ಮುಗಿದುಹೋದಂತೆ
ನಟನೊಬ್ಬ ರಿಯಾಲಿಟಿ ಶೋಗಳಿಗೆ ಹೋದರೆ ಎದುರಾಗುವ ಸವಾಲುಗಳ ಬಗ್ಗೆ ಮಾತನಾಡಿದ ಅವರು, "ವಾಸ್ತವವಾಗಿ ಒಬ್ಬ ನಟ ಜಾದೂಗಾರನಿದ್ದಂತೆ. ಜಾದೂಗಾರನ ತಂತ್ರಗಳೇ ಜನರಿಗೆ ತಿಳಿದುಬಿಟ್ಟರೆ ಆತನ ಪ್ರದರ್ಶನವನ್ನು ಯಾರೂ ನೋಡುವುದಿಲ್ಲ. ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಎರಡು ಗಂಟೆಗಳ ಕಾಲ ಹಿಡಿದಿಟ್ಟುಕೊಳ್ಳಬೇಕೆಂದರೆ ನಟನ ವರ್ತನೆಯಲ್ಲಿ ಆ ಕುತೂಹಲ ಸದಾ ಜೀವಂತವಾಗಿರಬೇಕು. ಬಿಗ್ ಬಾಸ್‌ಗೆ ಹೋದರೆ ನನ್ನ ನೈಜ ವ್ಯಕ್ತಿತ್ವವೇ ಬಯಲಾಗಿಬಿಡುತ್ತದೆ. ಆಗ ಪ್ರೇಕ್ಷಕರಿಗೆ ನನ್ನ ಮುಂದಿನ ಪಾತ್ರಗಳು ಕಾಣಿಸುವುದೇ ಇಲ್ಲ. ಉದಾಹರಣೆಗೆ, ಈಗ ನಾನು ಕೇಶವನ ಪಾತ್ರಕ್ಕಿಂತ ಭಿನ್ನವಾಗಿ, ಪ್ರಬುದ್ಧವಾಗಿ ಮಾತನಾಡುತ್ತಿದ್ದೇನೆ. ಇದನ್ನೇ ಜನರು ನೋಡಿದರೆ ಅವರಿಗೆ ಆ ಪಾತ್ರದ ಮೇಲಿನ ಆಸಕ್ತಿಯೇ ಹೊರಟುಹೋಗುತ್ತದೆ. ಹೀಗಾಗಿ ಅಲ್ಲಿಗೆ ಹೋದರೆ ನನ್ನ ನಟನಾ ವೃತ್ತಿಯೇ ಅಲ್ಲಿಗೆ ಮುಗಿದುಹೋದಂತೆ" ಎಂದು ವಿಶ್ಲೇಷಿಸಿದ್ದಾರೆ.
ಬಿಗ್ ಬಾಸ್ ಅಂದ್ರೆ ನಂಗೆ ಸ್ವಲ್ಪನೂ ಇಷ್ಟ ಇಲ್ಲ!
ಸ್ಪರ್ಧಿಯಾಗುವ ಆಸೆ ನನಗಿಲ್ಲ
ರಿಯಾಲಿಟಿ ಶೋ ಸ್ಪರ್ಧಿಯಾಗುವ ಇರಾದೆ ತಮಗಿಲ್ಲ ಎಂದಿರುವ ಅವರು, "ಸದ್ಯ ಸಿನಿಮಾರಂಗದಲ್ಲಿ ನನ್ನದೇ ಆದ ಛಾಪು ಮೂಡಿಸುವತ್ತ ಗಮನಹರಿಸಿದ್ದೇನೆ. ಬಿಗ್ ಬಾಸ್ ಕಾರ್ಯಕ್ರಮವನ್ನು ವೀಕ್ಷಿಸಲು ಮತ್ತು ಕಿಚ್ಚ ಸುದೀಪ್ ಸರ್ ಅವರನ್ನು ನೋಡಲು ನನಗೆ ತುಂಬಾ ಇಷ್ಟ. ಸುದೀಪ್ ಸರ್ ಎಷ್ಟೇ ಒತ್ತಡ, ಕೋಪವಿದ್ದರೂ ಶೋ ನಿಭಾಯಿಸುವ ರೀತಿ ನಮಗೆಲ್ಲ ದೊಡ್ಡ ಸ್ಫೂರ್ತಿ. ಭವಿಷ್ಯದಲ್ಲಿ ನನ್ನದೇ ಸಿನಿಮಾದ ಪ್ರಚಾರಕ್ಕಾಗಿ ಆ ವೇದಿಕೆಗೆ ಹೋಗಿ, ಸುದೀಪ್ ಸರ್ ಎದುರು ನಿಂತು ಮಾತನಾಡುವುದು ನನ್ನ ಬಾಲ್ಯದ ಕನಸು. ಕಳೆದ ವರ್ಷ ನಮ್ಮ ಧಾರಾವಾಹಿಯ ಪ್ರಚಾರಕ್ಕಾಗಿ ಅಲ್ಲಿಗೆ ಹೋಗಿ, ಒಮ್ಮೆ ಬಿಗ್ ಬಾಸ್ ಮನೆ ನೋಡಿ ಬಾ ಎಂದಿದ್ದ ತಾಯಿಯ ಆಸೆಯನ್ನು ಈಡೇರಿಸಿದ್ದೆ. ಆದರೆ, ಸ್ಪರ್ಧಿಯಾಗಿ ಮಾತ್ರ ನಾನು ಎಂದಿಗೂ ಆ ಮನೆಗೆ ಕಾಲಿಡುವುದಿಲ್ಲ" ಎಂದು ಯಶವಂತ್ ಸ್ಪಷ್ಟಪಡಿಸಿದ್ದಾರೆ.