ʻಜೋಗಿʼ ಪ್ರೇಮ್ - `ಕಿಚ್ಚ' ಸುದೀಪ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆ; ಅಕ್ಟೋಬರ್ 20ಕ್ಕೆ ಅದ್ಧೂರಿ ಮುಹೂರ್ತ!
ಕಿಚ್ಚ ಸುದೀಪ್ ಮತ್ತು ʻಜೋಗಿʼ ಪ್ರೇಮ್ ಜೋಡಿ ಮತ್ತೆ ಒಂದಾಗಿದೆ. ಪ್ರೇಮ್ ನಿರ್ದೇಶನದ 10ನೇ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದ್ದು, ನಟ ಸುದೀಪ್ ಜನ್ಮದಿನದ ಪ್ರಯುಕ್ತ ಈ ಸರ್ಪ್ರೈಸ್ ಸಿಕ್ಕಿದೆ. ಅಕ್ಟೋಬರ್ 20ರಂದು ಅದ್ಧೂರಿ ಮುಹೂರ್ತ ನಿಗದಿಯಾಗಿದೆ. ಇಂದಿನ ತಲೆಮಾರಿನ ಕೌಟುಂಬಿಕ ಎಮೋಷನಲ್ ಕಥೆಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ ಪ್ರೇಮ್.
-
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಡೈರೆಕ್ಟರ್, ‘ಶೋಮ್ಯಾನ್’ ಎಂದೇ ಖ್ಯಾತರಾದ ʻಜೋಗಿʼ ಪ್ರೇಮ್ ಹಾಗೂ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಹೊಸ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಸುದೀಪ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ನಿರ್ದೇಶಕ ಪ್ರೇಮ್ ಈ ಭರ್ಜರಿ ಸರ್ಪ್ರೈಸ್ ನೀಡಿದ್ದು, ಇದು ಪ್ರೇಮ್ ಅವರ ನಿರ್ದೇಶನದ 10ನೇ ಚಿತ್ರವಾಗಿರುವುದು ವಿಶೇಷ.
ಈ ಹಿಂದೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದಿದ್ದ ‘ದಿ ವಿಲನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮೊದಲ ವಾರವೇ ಬರೋಬ್ಬರಿ ಭರ್ಜರಿ ಕಮಾಯಿ ಮಾಡಿ, ಸೆನ್ಸೇಷನ್ ಸೃಷ್ಟಿಸಿತ್ತು. ಆ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಸಾಥ್ ನೀಡಿದ್ದರು. ಇದೀಗ ಮತ್ತೊಮ್ಮೆ ಈ ಬ್ಲಾಕ್‌ಬಸ್ಟರ್ ಜೋಡಿ ಒಂದಾಗುತ್ತಿದ್ದು, ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಅಕ್ಟೋಬರ್ 20ರಂದು ಅದ್ಧೂರಿ ಮುಹೂರ್ತ
ಈ ಚಿತ್ರದ ಮೊದಲ ಫಸ್ಟ್ ಲುಕ್ ಹಾಗೂ ಹಿನ್ನೆಲೆ ಸಂಗೀತದ ಝಲಕ್ ಬಿಡುಗಡೆಯಾಗಿದ್ದು, ಈಗಾಗಲೇ ಸಿನಿಪ್ರಿಯರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಟೈಟಲ್ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಸಂಬಂಧಗಳು ಮತ್ತು ಎಮೋಷನಲ್ ಕಥೆಗಳನ್ನು ಮ್ಯೂಸಿಕಲ್ ಆಗಿ, ಅಷ್ಟೇ ಕಲರ್‌ಫುಲ್ ಆಗಿ ಕಟ್ಟಿಕೊಡುವಲ್ಲಿ ನಿಪುಣರಾಗಿರುವ ಪ್ರೇಮ್, ಈ ಬಾರಿ ಇಂದಿನ ತಲೆಮಾರಿನ ಮನೆ-ಮನದ ಕಥೆಯನ್ನು ಪ್ರೇಕ್ಷಕರ ಮುಂದಿಡಲು ಸಜ್ಜಾಗಿದ್ದಾರೆ.
ಇನ್ನೊಂದೆಡೆ ಎಮೋಷನ್, ಆ್ಯಕ್ಷನ್ ಹಾಗೂ ಕ್ಲಾಸಿ ಲುಕ್‌ಗೆ ಹೆಸರಾಗಿರುವ ಸುದೀಪ್, ಈ ಕಥೆಗೆ ನಾಯಕನಾಗಿ ಜೀವ ತುಂಬಲಿದ್ದಾರೆ. ನಿಮ್ಮ ಊಹೆಗೂ ನಿಲುಕದ ಹಲವು ಅಚ್ಚರಿಯ ತಾರಾಬಳಗ ಹಾಗೂ ತಾಂತ್ರಿಕ ಸಹಯೋಗಗಳೊಂದಿಗೆ ಸಿದ್ಧವಾಗಲಿರುವ ಈ ಮಹತ್ವಾಕಾಂಕ್ಷೆಯ ಚಿತ್ರಕ್ಕೆ ಇದೇ ಅಕ್ಟೋಬರ್ 20ರಂದು ಅದ್ಧೂರಿಯಾಗಿ ಮುಹೂರ್ತ ನೆರವೇರಲಿದೆ.
Kichcha Sudeep : ‘ಸ್ಕೂಲ್ ಬಸ್’ ಚಿತ್ರದಲ್ಲಿ ಕಿಚ್ಚ ಸುದೀಪ್; ಬಹುಭಾಷೆಗಳಲ್ಲಿ ರಿಲೀಸ್!
ಸಾಲು ಸಾಲು ಸಿನಿಮಾಗಳಲ್ಲಿ ಸುದೀಪ್ ನಟನೆ
ʻಕಿಚ್ಚʼ ಸುದೀಪ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲೇ ಅವರ ಸಾಲು ಸಾಲು ಹೊಸ ಸಿನಿಮಾಗಳ ಘೋಷಣೆಯಾಗಿರುವುದು ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಅನುಪ್ ಭಂಡಾರಿ ನಿರ್ದೇಶನದ ‘ಬಿಲ್ಲ ರಂಗ ಭಾಷಾ’ ಚಿತ್ರದ ಭರ್ಜರಿ ಫಸ್ಟ್ ಲುಕ್ ಅನಾವರಣಗೊಂಡು ಎಲ್ಲರ ಗಮನ ಸೆಳೆದಿದೆ. ಇದರ ಬೆನ್ನಲ್ಲೇ ತೆಲುಗಿನ ಪೀಪಲ್ ಮೀಡಿಯಾ ಫ್ಯಾಕ್ಟರಿ ಜೊತೆಗೆ ʻದೇವರಾಯʼ ಸಿನಿಮಾ ಘೋಷಣೆ ಆಗಿದೆ. ಸಮುದ್ರಖನಿ ಜೊತೆ ʻಸ್ಕೂಲ್ ಬಸ್ʼ ಸಿನಿಮಾದಲ್ಲೂ ಸುದೀಪ್ ಒಂದು ಗೆಸ್ಟ್ ಅಪಿರಿಯಿನ್ಸ್ ಮಾಡುತ್ತಿದ್ದಾರೆ. ಇದರ ಜೊತೆಗೆ
ಪ್ರೇಮ್ ಅವರೊಂದಿಗಿನ ಈ ಹೊಸ ಪ್ರಾಜೆಕ್ಟ್ ಅನೌನ್ಸ್ ಆಗುವ ಮೂಲಕ, ಸುದೀಪ್ ಅವರ ಮುಂದಿನ ಸಿನಿಮಾಗಳ ಲೈನಪ್‌ಗಳು ಸಖತ್ ಕುತೂಹಲ ಮೂಡಿಸಿದೆ.