Spark Movie Review: ಸಹಕಾರಿ ಬ್ಯಾಂಕ್‌ಗಳ ಹಗರಣದ ಸುತ್ತ ಸಾಗುವ ಸಸ್ಪೆನ್ಸ್ ಥ್ರಿಲ್ಲರ್ ‘ಸ್ಪಾರ್ಕ್’
Spark Movie Review: ಸಹಕಾರಿ ಬ್ಯಾಂಕ್‌ನಲ್ಲಿ ಜನಸಾಮಾನ್ಯರು ಕಷ್ಟಪಟ್ಟು ಠೇವಣಿ ಇರಿಸಿದ ಹಣ ರಾಜಕೀಯ ಸ್ವಾರ್ಥಕ್ಕಾಗಿ ಲೂಟಿಯಾಗುತ್ತದೆ. ಈ ಹಗರಣವನ್ನು ಭೇದಿಸಲು ತನಿಖಾ ಪತ್ರಕರ್ತ ಹಾಗೂ ಪೊಲೀಸ್ ಅಧಿಕಾರಿ ಅಖಾಡಕ್ಕೆ ಇಳಿಯುತ್ತಾರೆ. ನೆನಪಿರಲಿ ಪ್ರೇಮ್ ನೆಗೆಟಿವ್ ಶೇಡ್‌ನಲ್ಲಿ ಅಬ್ಬರಿಸಿದ್ದು, ನಿರಂಜನ್ ಸುಧೀಂದ್ರ ತನಿಖಾ ಪತ್ರಕರ್ತನಾಗಿ ಮಿಂಚಿದ್ದಾರೆ.
-
ಸಿನಿಮಾ: ಸ್ಪಾರ್ಕ್
ತಾರಾಗಣ: ನಿರಂಜನ್ ಸುಧೀಂದ್ರ, ನೆನಪಿರಲಿ ಪ್ರೇಮ್, ರಚನಾ ಇಂದರ್, ಭಾವನಾ ಮೆನನ್, ರಮೇಶ್ ಇಂದಿರಾ, ಧರ್ಮಣ್ಣ ಕಡೂರು, ಅಶ್ವಿನ್ ಹಾಸನ್ ಮತ್ತಿತರರು
ನಿರ್ದೇಶನ: ಮಹಂತೇಶ್ ಹಂದ್ರಾಳ್
ನಿರ್ಮಾಣ: ಗರಿಮಾ ಅವಿನಾಶ್ ವಸಿಷ್ಠ
ಸಂಗೀತ: ಸಚಿನ್ ಬಸ್ರೂರು
ಅವಧಿ: 2 ಗಂಟೆ 29 ನಿಮಿಷ
ರೇಟಿಂಗ್: 3/5
ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಟನೆಯ ‘ಸ್ಪಾರ್ಕ್’ ಸಿನಿಮಾವು ಟೀಸರ್ ಹಾಗೂ ಟ್ರೇಲರ್‌ನಿಂದಲೇ ಗಮನ ಸೆಳೆದಿತ್ತು. ಅದರಲ್ಲೂ ಈ ಸಿನಿಮಾದಲ್ಲಿ ‘ನೆನಪಿರಲಿ’ ಪ್ರೇಮ್ ವಿಲನ್ ಪಾತ್ರದಲ್ಲಿದ್ದಾರೆ ಎಂದಾಗ ಸಿನಿಪ್ರಿಯರಲ್ಲಿ ಸಹಜವಾಗಿಯೇ ಕುತೂಹಲ ಮೂಡಿತ್ತು. ಸದ್ಯ ಈ ಸಿನಿಮಾ ತೆರೆಕಂಡಿದೆ. ಹಾಗಾದರೆ ಈ ಸಿನಿಮಾ ಹೇಗಿದೆ? ಇಲ್ಲಿದೆ ಸಂಪೂರ್ಣ ವಿಮರ್ಶೆ!
ಸ್ಪಾರ್ಕ್ ಕಥೆ ಏನು?
ಅಮರಜ್ಯೋತಿ ಸಹಕಾರಿ ಬ್ಯಾಂಕ್‌ನಲ್ಲಿ ಬಡವರು, ಕೂಲಿಕಾರರು, ಮಧ್ಯಮ ವರ್ಗದವರು ಸೇರಿದಂತೆ ಅನೇಕರು ಮಕ್ಕಳ ವಿದ್ಯಾಭ್ಯಾಸ, ಮದುವೆ, ಮನೆ ನಿರ್ಮಾಣ ಮುಂತಾದ ಕಾರಣಗಳಿಗಾಗಿ ಹಣ ಠೇವಣಿ ಇಟ್ಟಿರುತ್ತಾರೆ. ಆದರೆ ಹೀಗೆ ಕಷ್ಟಪಟ್ಟು ಕೂಡಿಟ್ಟ ಹಣ ರಾಜಕೀಯ ಲಾಭಕ್ಕಾಗಿ ದುರುಪಯೋಗವಾಗುತ್ತದೆ.
ಈ ಹಂತದಲ್ಲಿ ಅಖಾಡಕ್ಕೆ ಇಳಿಯುವುದೇ ಖಾಸಗಿ ವಾಹಿನಿಯ ತನಿಖಾ ಪತ್ರಕರ್ತ ಅಭಿರಾಮ್ (ನಿರಂಜನ್ ಸುಧೀಂದ್ರ). ಆದರೆ ಕಥೆಗೆ ರೋಚಕ ತಿರುವು ಸಿಗುವುದು ಪೊಲೀಸ್ ಅಧಿಕಾರಿ ರಂಜಿತ್ ಕುಮಾರ್ (ನೆನಪಿರಲಿ ಪ್ರೇಮ್) ಈ ಬ್ಯಾಂಕ್ ಹಗರಣದ ತನಿಖೆ ಕೈಗೆತ್ತಿಕೊಂಡಾಗ! ಪೊಲೀಸ್ ತನಿಖೆಗಿಂತ ಒಂದು ಹೆಜ್ಜೆ ಮುಂದಿರುವ ಅಭಿರಾಮ್, ತನ್ನದೇ ಮಾರ್ಗದಲ್ಲಿ ಸಾಕ್ಷ್ಯ ಕಲೆಹಾಕುತ್ತಿರುತ್ತಾನೆ. ಅಂತಿಮವಾಗಿ ಯಾರು ಮೊದಲು ಈ ತನಿಖೆಯ ರಹಸ್ಯವನ್ನು ಭೇದಿಸುತ್ತಾರೆ ಎಂಬುದೇ ಚಿತ್ರದ ಮುಖ್ಯ ಟ್ವಿಸ್ಟ್!
ಮೇಕಿಂಗ್ ಹೇಗಿದೆ?
ಸಹಕಾರಿ ಬ್ಯಾಂಕ್ ಹಗರಣಗಳನ್ನೇ ಕಥಾವಸ್ತುವಾಗಿಸಿಕೊಂಡು, ಅದಕ್ಕೊಂದು ಸಸ್ಪೆನ್ಸ್-ಥ್ರಿಲ್ಲರ್ ಸ್ಪರ್ಶ ನೀಡಿ ತೆರೆಗೆ ತಂದಿದ್ದಾರೆ ನಿರ್ದೇಶಕ ಮಹಂತೇಶ್ ಹಂದ್ರಾಳ್. ಸಹಕಾರಿ ಬ್ಯಾಂಕ್ ಮತ್ತು ಅದರ ಸುತ್ತಲಿನ ರಾಜಕೀಯ ಅವ್ಯವಹಾರಗಳ ಕುರಿತು ಈ ಹಿಂದೆ ಯಾರೂ ಸಿನಿಮಾ ಮಾಡುವ ಪ್ರಯತ್ನ ಮಾಡಿರಲಿಲ್ಲ. ಆದರೆ, ಮಹಂತೇಶ್ ಅಂಥದ್ದೊಂದು ಧೈರ್ಯದ ಹೆಜ್ಜೆ ಇಟ್ಟಿದ್ದಾರೆ. ನೇರವಾಗಿ ತೆರೆದುಕೊಳ್ಳುವ ಕಥೆ, ಕ್ಲೈಮ್ಯಾಕ್ಸ್‌ವರೆಗೂ ಒಂದೇ ವೇಗದಲ್ಲಿ ಸಾಗುವುದು ಈ ಚಿತ್ರದ ಪ್ಲಸ್ ಪಾಯಿಂಟ್. ಅಲ್ಲದೆ, ಕೊನೆಯವರೆಗೂ ಅಸಲಿ ವಿಲನ್ ಯಾರು ಎಂಬ ಗುಟ್ಟನ್ನು ಕಾಪಾಡಿಕೊಳ್ಳುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸ್ವಾಮಿ ಗೌಡ ಅವರ ಛಾಯಾಗ್ರಹಣ ಮತ್ತು ಸಚಿನ್ ಬಸ್ರೂರು ಅವರ ಸಂಗೀತ ಈ ಸಿನಿಮಾವನ್ನು ತಾಂತ್ರಿಕವಾಗಿ ಗಟ್ಟಿಗೊಳಿಸಿವೆ.
ಇದು ಸಸ್ಪೆನ್ಸ್ ಥ್ರಿಲ್ಲರ್ ಪ್ರಕಾರದ ಸಿನಿಮಾವಾಗಿರುವುದರಿಂದ, ಇನ್ನಷ್ಟು ಚುರುಕಾದ ಟ್ವಿಸ್ಟ್‌ಗಳನ್ನು ನೀಡುವ ಅವಕಾಶವಿತ್ತು. ಪೊಲೀಸ್ ಪಾತ್ರ ಕ್ಲೀನ್ ಶೇವ್‌ನಲ್ಲಿದ್ದಿದ್ದರೆ ನೈಜತೆಗೆ ಇನ್ನಷ್ಟು ಹತ್ತಿರವಾಗುತ್ತಿತ್ತು. ಸಂಭಾಷಣೆಗಳು ಅಲ್ಲಲ್ಲಿ ಪಂಚಿಂಗ್ ಆಗಿ ಮೂಡಿಬಂದಿವೆ.
ಪ್ರೇಮ್‌ಗೆ ನೆಗೆಟಿವ್ ಶೇಡ್
ನಟ ‘ನೆನಪಿರಲಿ’ ಪ್ರೇಮ್ ಅವರು ಇಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆರಂಭದಿಂದ ಅಂತ್ಯದವರೆಗೂ ಅವರ ಪಾತ್ರ ಕುತೂಹಲಕಾರಿಯಾಗಿ ಸಾಗುತ್ತದೆ. ನಟ ನಿರಂಜನ್ ದಿನದಿಂದ ದಿನಕ್ಕೆ ನಟನೆಯಲ್ಲಿ ಪಕ್ವಗೊಳ್ಳುತ್ತಿರುವುದು ಈ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ತನಿಖಾ ಪತ್ರಕರ್ತನಾಗಿ ಗಮನಾರ್ಹ ಅಭಿನಯ ನೀಡಿರುವ ಅವರು, ಫೈಟ್ಸ್ ಮತ್ತು ಡ್ಯಾನ್ಸ್‌ನಲ್ಲಿ ಮಿಂಚಿದ್ದಾರೆ. ಪ್ರೇಮ್ ಮತ್ತು ನಿರಂಜನ್ ನಡುವಿನ ಜಿದ್ದಾಜಿದ್ದಿ ನೋಡುಗರಿಗೆ ಮಜಾ ನೀಡುತ್ತದೆ.
Spark Movie: ʼಸ್ಪಾರ್ಕ್ʼ ಪೋಸ್ಟರ್ ವಿವಾದಕ್ಕೆ ತೆರೆ; ರಮೇಶ್ ಇಂದಿರಾ ಬಳಿ ಕ್ಷಮೆ ಕೋರಿದ ನಿರ್ದೇಶಕ
ನಾಯಕಿಯಾಗಿ ರಚನಾ ಇಂದರ್ ಇಷ್ಟವಾಗುತ್ತಾರೆ. ನಟಿ ಭಾವನಾ ಮೆನನ್ ಅವರಿಗೆ ಪ್ರಮುಖ ಪಾತ್ರ ಸಿಕ್ಕಿದ್ದು, ಅವರ ಪಾತ್ರದ ಹಿನ್ನೆಲೆಯೇ ಬಹಳ ಆಸಕ್ತಿದಾಯಕವಾಗಿದೆ. ಧರ್ಮಣ್ಣ ಕಡೂರು ತಮ್ಮ ಹಾಸ್ಯದ ಮೂಲಕ ಚಿತ್ರದಲ್ಲಿ ಲವಲವಿಕೆ ತರುವ ಪ್ರಯತ್ನ ಮಾಡಿದ್ದಾರೆ. ರಮೇಶ್ ಇಂದಿರಾ, ಬಾಲರಾಜವಾಡಿ, ನೀನಾಸಂ ಅಶ್ವತ್ಥ್ ಮತ್ತು ಅಶ್ವಿನ್ ಹಾಸನ್ ಸೇರಿದಂತೆ ಇಡೀ ತಾರಾಗಣ ತಮ್ಮ ಪಾತ್ರಗಳಿಗೆ ಸೂಕ್ತ ನ್ಯಾಯ ಒದಗಿಸಿದೆ. ಸಾಮಾಜಿಕ ಕಳಕಳಿಯುಳ್ಳ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ‘ಸ್ಪಾರ್ಕ್’ ಇಷ್ಟವಾಗಬಹುದು.