ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೆಟ್‌ಫ್ಲಿಕ್ಸ್‌ನ ಮೊದಲ ಪಾಕಿಸ್ತಾನಿ ವೆಬ್‌ ಸರಣಿ ಭಾರತದಲ್ಲಿ ಬ್ಯಾನ್‌ ಆಗಬೇಕು; ಪ್ರಧಾನಿ ಮೋದಿಗೆ ಪತ್ರ, ತೀವ್ರಗೊಂಡ ವಿರೋಧ

Jo Bachay Hain Sang Samet Lo Web series: ಭಾರತದಲ್ಲಿ ಪಾಕಿಸ್ತಾನಿ ವೆಬ್‌ ಸರಣಿಯಾದ 'ಜೋ ಬಚೇ ಹೈ ಸಂಗ್ ಸಮೇಟ್ ಲೋ' ಪ್ರಸಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಫವಾದ್ ಖಾನ್, ಮಾಹಿರಾ ಖಾನ್ ನಟನೆಯ ಈ ಸರಣಿಯನ್ನು ನಿಷೇಧಿಸುವಂತೆ ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ ಪ್ರಧಾನಿ ಮೋದಿಗೆ ಪತ್ರ ಬರೆದಿದೆ.

ನೆಟ್‌ಫ್ಲಿಕ್ಸ್‌ನ ಮೊದಲ ಪಾಕಿಸ್ತಾನಿ ವೆಬ್‌ ಸರಣಿ ಭಾರತದಲ್ಲಿ Ban ಆಗಬೇಕು!

-

Avinash GR
Avinash GR Nov 25, 2026 4:01 PM

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಮೊದಲ ಪಾಕಿಸ್ತಾನಿ ಮೂಲದ ವೆಬ್ ಸರಣಿ 'ಜೋ ಬಚೇ ಹೈ ಸಂಗ್ ಸಮೇಟ್ ಲೋ' (Jo Bachay Hain Sang Samet Lo) ಭಾರತದಲ್ಲಿ ಸ್ಟ್ರೀಮಿಂಗ್ ಆಗುವುದನ್ನು ನಿಷೇಧಿಸಬೇಕೆಂಬ ಕೂಗು ಇದೀಗ ಮತ್ತಷ್ಟು ತೀವ್ರಗೊಂಡಿದೆ. ಈ ಸರಣಿಯ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ (AICWA) ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿತ್ತು.

ಇದೀಗ ಈ ಬೇಡಿಕೆಗೆ ಶಿವಸೇನೆ (ಯುಬಿಟಿ) ನಾಯಕ ಆನಂದ್ ದುಬೆ ಕೂಡ ಧ್ವನಿಗೂಡಿಸಿದ್ದು, ಮುಂಬರುವ ಡಿಸೆಂಬರ್ 4 ರಂದು ಈ ಸರಣಿ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಭಾರತದಲ್ಲಿ ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಆಗ್ರಹಿಸಿದ್ದಾರೆ.

ಪಾಕಿಸ್ತಾನಿ ವೆಬ್ ಸರಣಿಗಳು ನಮಗೆ ಬೇಡ

ಈ ಕುರಿತು ಬುಧವಾರ (ನ.25) ಮಾತನಾಡಿದ ಆನಂದ್ ದುಬೆ, "ನಮ್ಮ ದೇಶಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಕ್ರಿಕೆಟ್, ವೆಬ್ ಸರಣಿಗಳು ಅಥವಾ ಅವರೊಂದಿಗಿನ ಯಾವುದೇ ರೀತಿಯ ಸಾಂಸ್ಕೃತಿಕ ಒಡನಾಟದಲ್ಲಿ ನಮಗೆ ಆಸಕ್ತಿಯಿಲ್ಲ. ನೆಟ್‌ಫ್ಲಿಕ್ಸ್ ಆಗಿರಲಿ ಅಥವಾ ಇತರ ಯಾವುದೇ ಡಿಜಿಟಲ್ ವೇದಿಕೆಗಳಾಗಿರಲಿ, ಇಂತಹ ಪಾಕಿಸ್ತಾನಿ ವೆಬ್ ಸರಣಿಗಳನ್ನು ಭಾರತದಲ್ಲಿ ಪ್ರದರ್ಶಿಸಬಾರದು ಎಂದು ವಿನಂತಿಸಿ ನಮ್ಮ ಚಲನಚಿತ್ರ ಸಂಘದ ಸದಸ್ಯರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ" ಎಂದು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ನಿರ್ಮಾಣವಾದ ಯಾವುದೇ ವಿಷಯಗಳು ಭಾರತೀಯ ವೇದಿಕೆಗಳಲ್ಲಿ ಲಭ್ಯವಾಗದಂತೆ ನೋಡಿಕೊಳ್ಳಬೇಕು ಎಂದಿರುವ ಅವರು, "ಪಾಕಿಸ್ತಾನ ವೆಬ್ ಸರಣಿಗಳನ್ನು ನಿರ್ಮಿಸಲಿ ಅಥವಾ ಕ್ರಿಕೆಟ್ ಆಡಲಿ.. ಅದು ಅವರಿಗೆ ಬಿಟ್ಟ ವಿಚಾರ, ಅದನ್ನು ಅವರು ತಮ್ಮಲ್ಲೇ ಇಟ್ಟುಕೊಳ್ಳಲಿ" ಎಂದು ಕಿಡಿಕಾರಿದ್ದಾರೆ.

Baththa arrives on OTT: ವಿಜಯ್ ಸೇತುಪತಿ ಅಭಿಮಾನಿಗಳಿಗೆ ಗುಡ್‌ನ್ಯೂಸ್; ನೆಟ್‌ಫ್ಲಿಕ್ಸ್‌ನಲ್ಲಿ ಈ ಮೂವಿ ಸ್ಟ್ರೀಮಿಂಗ್‌!

ಶಾಶ್ವತ ಕಾನೂನು ಚೌಕಟ್ಟನ್ನು ರೂಪಿಸಬೇಕು

ಪಾಕಿಸ್ತಾನದ ಕಲಾವಿದರಾದ ಫವಾದ್ ಖಾನ್ ಮತ್ತು ಮಾಹಿರಾ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸರಣಿಯ ಭಾರತೀಯ ಬಿಡುಗಡೆಗೆ ನಿರ್ಬಂಧ ಹೇರುವಂತೆ ಕೋರಿ ಎಐಸಿಡಬ್ಲ್ಯೂಎ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ತಮ್ಮ ಪತ್ರದಲ್ಲಿ, ಮೇ 2025ರ ಸ್ಟ್ರೀಮಿಂಗ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸಿನಿ ಕಾರ್ಮಿಕರ ಸಂಘ ಒತ್ತಾಯಿಸಿದೆ. ಅಲ್ಲದೆ, ದೂರದರ್ಶನ, ಒಟಿಟಿ ವೇದಿಕೆಗಳು ಹಾಗೂ ಚಿತ್ರಮಂದಿರಗಳಲ್ಲಿ ಪಾಕಿಸ್ತಾನಿ ಕಂಟೆಂಟ್ ಪ್ರಸಾರವಾಗುವುದನ್ನು ಮತ್ತು ನಿಯಮ ಉಲ್ಲಂಘನೆಗಳನ್ನು ತಡೆಯಲು ಶಾಶ್ವತ ಕಾನೂನು ಚೌಕಟ್ಟನ್ನು ರೂಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.

ಒಂದೆಡೆ ಭಾರತದಲ್ಲಿ ಈ ಸರಣಿಯ ವಿರುದ್ಧ ನಿಷೇಧದ ಕೂಗು ಜೋರಾಗಿದ್ದರೆ, ಮತ್ತೊಂದೆಡೆ ಸರಣಿಯ ಟ್ರೇಲರ್ ಜಾಗತಿಕವಾಗಿ ಬಿಡುಗಡೆಯಾಗಿದ್ದು ಸದ್ಯ ಭಾರತದಲ್ಲೂ ವೀಕ್ಷಣೆಗೆ ಲಭ್ಯವಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಟ್ರೇಲರ್ 1.8 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

ಕಾದಂಬರಿ ಆಧಾರಿತ ವೆಬ್‌ ಸರಣಿ

‘ಜೋ ಬಚೇ ಹೈ ಸಂಗ್ ಸಮೇಟ್ ಲೋ’ ಸರಣಿಯನ್ನು ಖ್ಯಾತ ಲೇಖಕಿ ಫರ್ಹತ್ ಇಶ್ತಿಯಾಕ್ ಅವರ ಇದೇ ಹೆಸರಿನ ಅತ್ಯಂತ ಜನಪ್ರಿಯ ಉರ್ದು ಕಾದಂಬರಿಯನ್ನು ಆಧರಿಸಿ ನಿರ್ಮಿಸಲಾಗಿದೆ. 2009ರಲ್ಲಿ 'ಖವಾತೀನ್ ಡೈಜೆಸ್ಟ್'ನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದ ಈ ಕಥೆ, 2013ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಗೊಂಡು ಭಾರಿ ಜನಮನ್ನಣೆ ಗಳಿಸಿತ್ತು. ಮೊಮಿನಾ ದುರೈದ್ ನಿರ್ದೇಶನದ ಹಾಗೂ ದುರೈದ್ ಖುರೇಷಿ ನಿರ್ಮಾಣದ ಈ ವೆಬ್ ಸರಣಿಯು, ಮೂರು ತಲೆಮಾರುಗಳಲ್ಲಿ ನಡೆಯುವ ಆರು ವಿಭಿನ್ನ ಪ್ರೇಮಕಥೆಗಳನ್ನು ಬೆಸೆದಿದ್ದು, ಪ್ರೀತಿ ಮತ್ತು ಕೌಟುಂಬಿಕ ಬಾಂಧವ್ಯದ ಕಥಾಹಂದರವನ್ನು ಹೊಂದಿದೆ.