ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻವೈಭವ್‌ ಸೂರ್ಯವಂಶಿಯನ್ನು ಬೆಂಚ್‌ ಕಾಯಿಸಬೇಡಿʼ: ಗೌತಮ್‌ ಗಂಭೀರ್‌ಗೆ ಬಾಲ್ಯದ ಕೋಚ್‌ ಮನವಿ!

ವೈಭವ್ ಸೂರ್ಯವಂಶಿಗೆ ಭಾರತ ತಂಡದಲ್ಲಿ ಹೆಚ್ಚಿನ ಅವಕಾಶ ನೀಡಬೇಕು ಎಂದು ಅವರ ಬಾಲ್ಯದ ಕೋಚ್ ಮನೀಶ್ ಓಜಾ ಮನವಿ ಮಾಡಿದ್ದಾರೆ. ಬೆಂಚ್‌ನಲ್ಲಿ ಕುಳಿತುಕೊಳ್ಳುವುದರಿಂದ ಅನುಭವ ಸಿಗುವುದಿಲ್ಲ. ಐದು ಪಂದ್ಯಗಳ ಸರಣಿಯಲ್ಲಿ ಕನಿಷ್ಠ ಎರಡು ಅಥವಾ ಮೂರು ಪಂದ್ಯಗಳನ್ನಾದರೂ ಆಡಿಸಬೇಕು ಎಂದು ಗೌತಮ್ ಗಂಭೀರ್‌ಗೆ ಸಲಹೆ ನೀಡಿದ್ದಾರೆ.

ಸೂರ್ಯವಂಶಿಯನ್ನು ಬೆಂಚ್‌ ಕಾಯಿಸಬೇಡಿ ಎಂದ ಮನೀಶ್‌ ಓಜಾ!

ಗೌತಮ್‌ ಗಂಭಿರ್‌ಗೆ ವೈಭವ್‌ ಬಾಲ್ಯದ ಕೋಚ್‌ ಮನವಿ. -

Profile
Ramesh Kote Nov 25, 2026 4:05 PM

ನವದೆಹಲಿ: ವೈಭವ್ ಸೂರ್ಯವಂಶಿ (Vaibhav Sooryavanshi) ದೇಶಿ ಕ್ರಿಕೆಟ್ ಹಾಗೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ, ಭಾರತ ಹಿರಿಯರ ತಂಡದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವರಿಗೆ ಇನ್ನೂ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ. 15ರ ವಯಸ್ಸಿನ ಈ ಯುವ ಆಟಗಾರ ತಂಡದಲ್ಲಿ ಸ್ಥಾನ ಪಡೆಯಲು ಅನುಭವಿ ಆರಂಭಿಕ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರೊಂದಿಗೆ ಪೈಪೋಟಿ ನಡೆಸುತ್ತಿದ್ದಾರೆ. ಗೌತಮ್ ಗಂಭೀರ್ ಮತ್ತು ಶ್ರೇಯಸ್ ಅಯ್ಯರ್ ನೇತೃತ್ವದ ತಂಡದ ಆಡಳಿತ ಮಂಡಳಿ ಅನುಭವಿ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲು ನಿರ್ಧರಿಸಿದೆ.

2026ರ ಐಪಿಎಲ್‌ ಟೂರ್ನಿಯಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದ ಬಳಿಕ ಭಾರತ ತಂಡ ಒಟ್ಟು 26 ಪಂದ್ಯಗಳನ್ನು ಆಡಿದೆ. ಆದರೆ ಈ ಪೈಕಿ ವೈಭವ್ ಸೂರ್ಯವಂಶಿ ಕೇವಲ 10 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದಾರೆ. ಉಳಿದ ಪಂದ್ಯಗಳಲ್ಲಿ ಅವರು ಬೆಂಚ್‌ನಲ್ಲೇ ಕಾಲ ಕಳೆಯುವಂತಾಗಿದೆ. 15 ವರ್ಷದ ಆಟಗಾರನಿಗೆ ನಿಯಮಿತ ಸ್ಥಾನ ನೀಡುವ ಮೊದಲು ಅನುಭವ ಪಡೆಯಲು ಮತ್ತು ಬೆಳವಣಿಗೆ ಹೊಂದಲು ಸಮಯ ನೀಡಬೇಕು ಎಂಬುದು ತಂಡದ ಆಡಳಿತ ಮಂಡಳಿಯ ನಿಲುವು ಎನ್ನಲಾಗಿದೆ. ಆದರೆ, ಬೆಂಚ್‌ನಲ್ಲಿ ಕುಳಿತುಕೊಳ್ಳುವುದರಿಂದ ವೈಭವ್‌ಗೆ ಅಗತ್ಯವಾದ ಅನುಭವ ಸಿಗುತ್ತದೆ ಎಂಬ ಅಭಿಪ್ರಾಯವನ್ನು ಅವರ ಬಾಲ್ಯದ ಕೋಚ್ ಮನೀಶ್ ಓಜಾ ಒಪ್ಪುತ್ತಿಲ್ಲ.

ʻಈಗ ನೀವೇ ನನಗೆ ಸ್ಪೂರ್ತಿʼ: 200 ರನ್‌ ಚಚ್ಚಿದ ವೈಭವ್‌ ಸೂರ್ಯವಂಶಿಗೆ ಸ್ಕೈ ವಿಶೇಷ ಸಂದೇಶ!

ಗೌತಮ್‌ ಗಂಭೀರ್‌ಗೆ ಮನೀಶ್‌ ಓಜಾ ಮನವಿ

"ವೈಭವ್ ಇಂದು ಪಂದ್ಯವನ್ನಾಡಿದ್ದರಿಂದಲೇ ಇಂತಹ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗಿದೆ. ಅವರು ಬೆಂಚ್‌ನಲ್ಲಿ ಕುಳಿತುಕೊಂಡು ಈ ಸಾಧನೆ ಮಾಡಿಲ್ಲ," ಎಂದು ಓಜಾ ಹೇಳಿದ್ದಾರೆ.

"ಮೈದಾನಕ್ಕಿಳಿದು ಆಡುವ ಮೂಲಕ, ವಿಭಿನ್ನ ಸನ್ನಿವೇಶಗಳನ್ನು ಎದುರಿಸುವ ಮೂಲಕ, ಸವಾಲುಗಳನ್ನು ಸ್ವೀಕರಿಸಿ ಅವುಗಳನ್ನು ಮೆಟ್ಟಿ ನಿಲ್ಲುವ ಮೂಲಕ ಆಟಗಾರ ಅನುಭವ ಪಡೆಯುತ್ತಾನೆ. ಅನುಭವ ಬೆಳೆಯುವುದು ಹೀಗೆಯೇ. ಬೆಂಚ್‌ನಲ್ಲಿ ಕುಳಿತುಕೊಂಡು ಯಾರೂ ಅನುಭವ ಗಳಿಸಿಲ್ಲ, ಮುಂದೆಯೂ ಗಳಿಸಲು ಸಾಧ್ಯವಿಲ್ಲ. ವೈಭವ್ ಸೂರ್ಯವಂಶಿ ಬೆಂಚ್‌ನಲ್ಲಿ ಕುಳಿತುಕೊಳ್ಳುವುದರಿಂದ ಅನುಭವ ಪಡೆಯುತ್ತಾರೆ ಎಂದು ಭಾರತ ತಂಡದ ಆಡಳಿತ ಮಂಡಳಿ ಭಾವಿಸಿದ್ದರೆ, ಅದು ತಪ್ಪು ನಿರ್ಧಾರ ಎಂದು ನಾನು ಭಾವಿಸುತ್ತೇನೆ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವೈಭವ್‌ ಸೂರ್ಯವಂಶಿ ವೇಗದ ದ್ವಿಶತಕ, ಯುಎಇ ಎದುರು ಭಾರತ ಎಗೆ ಭರ್ಜರಿ ಜಯ!

"ಇತ್ತೀಚಿನ ದಿನಗಳಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಐದು ಪಂದ್ಯಗಳ ಸರಣಿಯಲ್ಲಿ ವೈಭವ್‌ಗೆ ಅವಕಾಶ ನೀಡಬೇಕು. ಕನಿಷ್ಠ ಎರಡು ಅಥವಾ ಮೂರು ಪಂದ್ಯಗಳನ್ನಾದರೂ ಆಡಿಸಬೇಕು. ಒಂದು ವೇಳೆ ಅವರು ಯಾವುದಾದರೂ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಮುಂದಿನ ಪಂದ್ಯದಲ್ಲೂ ಖಂಡಿತವಾಗಿಯೂ ಅವಕಾಶ ನೀಡಬೇಕು. ವೈಭವ್ ಅವರನ್ನು ಕೇವಲ ಬದಲಿ ಆಟಗಾರನಂತೆ ನೋಡಬಾರದು," ಎಂದು ಕೋಚ್ ಮನೀಶ್ ಓಜಾ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಮನವಿ ಮಾಡಿದ್ದಾರೆ.

ಸದ್ಯ ವೈಭವ್ ಸೂರ್ಯವಂಶಿ ಈಗಾಗಲೇ ನಿರ್ಮಿಸಿರುವ ದಾಖಲೆಗಳಿಗಿಂತಲೂ ದೊಡ್ಡ ಸಾಧನೆಗಳತ್ತ ಅವರ ಕೋಚ್ ದೃಷ್ಟಿ ನೆಟ್ಟಿದ್ದಾರೆ. ಮಂಗಳವಾರ ಯುಎಇ ವಿರುದ್ಧ 204 ರನ್‌ಗಳ ಐತಿಹಾಸಿಕ ಇನಿಂಗ್ಸ್ ಆಡಿರುವುದನ್ನು ಗಮನಿಸಿದರೆ, ಈ ಯುವ ಆಟಗಾರ ಇನ್ನೆಷ್ಟು ದಾಖಲೆಗಳನ್ನು ಮುರಿಯಲಿದ್ದಾರೆ ಎಂಬುದಷ್ಟೇ ಈಗಿರುವ ಪ್ರಶ್ನೆಯಲ್ಲ. ಕ್ರಿಕೆಟ್‌ನಲ್ಲಿ ಸಾಧ್ಯವಿರುವ ಸಾಧನೆಗಳ ಗಡಿಯನ್ನು ಅವರು ಎಷ್ಟರಮಟ್ಟಿಗೆ ವಿಸ್ತರಿಸಲಿದ್ದಾರೆ ಎಂಬ ಕುತೂಹಲವೂ ಹೆಚ್ಚಾಗಿದೆ.