‘ರಾಮಾಯಣ’ ಸಿನಿಮಾ ನೋಡಿದ ಪ್ರೇಕ್ಷಕರಿಗೆ ‘ಆದಿಪುರುಷ್’ ನಿರ್ದೇಶಕ ಓಂ ರಾವತ್ ನೆನಪಾಗಿದ್ದೇಕೆ? ನೆಟ್ಟಿಗರು ಇಷ್ಟೊಂದು ಟ್ರೋಲ್ ಮಾಡುತ್ತಿರುವುದೇಕೆ?
Ramayana movie: ರಣಬೀರ್ ಕಪೂರ್, ಯಶ್ ನಟನೆಯ ʻರಾಮಾಯಣʼ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಅಭೂತಪೂರ್ವ ಯಶಸ್ಸು ಗಳಿಸುತ್ತಿದ್ದಂತೆ, ಪ್ರಭಾಸ್ ಅಭಿಮಾನಿಗಳಿಗೆ ನಿರ್ದೇಶಕ ಓಂ ರಾವತ್ ಅವರ ‘ಆದಿಪುರುಷ್’ ಚಿತ್ರದ ಕಳಪೆ ಮೇಕಿಂಗ್ ನೆನಪಾಗಿದೆ. ಆ ಹಿನ್ನೆಲೆಯಲ್ಲಿ ಓಂ ರಾವತ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಲೇವಡಿ ಮಾಡಲಾಗುತ್ತಿದೆ.
-
ನಿರ್ದೇಶಕ ಓಂ ರಾವತ್ ಅದ್ಯಾವ ಗಳಿಗೆಯಲ್ಲಿ ‘ಆದಿಪುರುಷ್’ ಸಿನಿಮಾ ಮಾಡಿದರೋ ಏನೋ, ಅದರ ಸೋಲಿನಿಂದ ಹಾಗೂ ಟ್ರೋಲಿಂಗ್‌ನಿಂದ ಆಚೆ ಬರಲು ಅವರಿಗೆ ಸಾಧ್ಯವಾಗುತ್ತಲೇ ಇಲ್ಲ. ಹೌದು, ಓಂ ರಾವತ್ ನಿರ್ದೇಶಿಸಿದ್ದ ‘ಆದಿಪುರುಷ್’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಯಾವ ರೀತಿ ನೆಲಕಚ್ಚಿತ್ತು ಮತ್ತು ಸಿನಿಪ್ರಿಯರಿಗೆ ಎಂತಹ ನಿರಾಸೆ ಮೂಡಿಸಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದೀಗ ನಿತೇಶ್ ತಿವಾರಿ ಅವರ ‘ರಾಮಾಯಣ’ ಸಿನಿಮಾ ತೆರೆಕಂಡಿದ್ದು, ನೆಟ್ಟಿಗರಿಗೆ ದಿಢೀರನೆ ಓಂ ರಾವತ್ ಅವರ ನೆನಪಾಗಿದೆ!
‘ರಾಮಾಯಣ’ ಸಿನಿಮಾದ ಗುಣಮಟ್ಟವನ್ನು ಕೊಂಡಾಡುತ್ತಲೇ, ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್ ನಿರ್ದೇಶಕ ಓಂ ರಾವತ್ ಅವರನ್ನು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 'ರಾಮಾಯಣ' ಚಿತ್ರದ ಮೊದಲ ಭಾಗ ಅದ್ಧೂರಿಯಾಗಿ ಚಿತ್ರಮಂದಿರಗಳನ್ನು ಪ್ರವೇಶಿಸಿ ಪ್ರೇಕ್ಷಕರ ಮನಗೆಲ್ಲುತ್ತಿರುವ ಬೆನ್ನಲ್ಲೇ, ಓಂ ರಾವತ್ ಮತ್ತೊಮ್ಮೆ ನೆಟ್ಟಿಗರ ತೀವ್ರ ಟ್ರೋಲಿಂಗ್‌ಗೆ ಗುರಿಯಾಗಿದ್ದಾರೆ.
ಮತ್ತೊಮ್ಮೆ ಪ್ರಭಾಸ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ಓಂ
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಾಯಕರಾಗಿ ನಟಿಸಿದ್ದ ಭಾರಿ ಬಜೆಟ್‌ನ 'ಆದಿಪುರುಷ್' ಚಿತ್ರ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಮುಗ್ಗರಿಸಿದ್ದಷ್ಟೇ ಅಲ್ಲದೆ, ಪ್ರೇಕ್ಷಕರಿಂದ ತೀವ್ರ ವಿರೋಧವನ್ನೂ ಎದುರಿಸಿತ್ತು. ಮೋಷನ್ ಕ್ಯಾಪ್ಚರ್ ಮತ್ತು ಕಳಪೆ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಬಳಸಿ ಓಂ ರಾವತ್ ಮಾಡಿದ ಪ್ರಯೋಗ ಸಂಪೂರ್ಣವಾಗಿ ಕೈಕೊಟ್ಟಿತ್ತು. ಅಂದಿನಿಂದಲೂ ಸಿಕ್ಕ ಸಿಕ್ಕ ಅವಕಾಶಗಳಲ್ಲೆಲ್ಲ ಪ್ರಭಾಸ್ ಅಭಿಮಾನಿಗಳು ಓಂ ಅವರನ್ನು ಟೀಕಿಸುತ್ತಲೇ ಬಂದಿದ್ದು, ಈಗ 'ರಾಮಾಯಣ' ಬಿಡುಗಡೆಯ ಬೆನ್ನಲ್ಲೇ ಆ ಆಕ್ರೋಶ ಮತ್ತೊಮ್ಮೆ ಕಟ್ಟೆಯೊಡೆದಿದೆ.
ʻರಾಮಾಯಣʼಕ್ಕೆ ಭಾರಿ ಮೆಚ್ಚುಗೆ
ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದಲ್ಲಿ, ನಮಿತ್ ಮಲ್ಹೋತ್ರಾ ಮತ್ತು ರಾಕಿಂಗ್ ಸ್ಟಾರ್ ಯಶ್ ಜಂಟಿಯಾಗಿ ನಿರ್ಮಿಸಿರುವ 'ರಾಮಾಯಣ' ಚಿತ್ರಕ್ಕೆ ಎಲ್ಲೆಡೆ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ. ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ಯಶ್ ಅಭಿನಯಿಸಿರುವ ಈ ಚಿತ್ರದ ದೃಶ್ಯವೈಭವ, ನೈಜತೆ, ಅತ್ಯುನ್ನತ ಗುಣಮಟ್ಟದ ವಿಎಫ್‌ಎಕ್ಸ್ ಹಾಗೂ ಭವ್ಯ ಮೇಕಿಂಗ್ ವೀಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ. ಪ್ರತಿಯೊಂದು ಸನ್ನಿವೇಶವನ್ನೂ ತೆರೆಯ ಮೇಲೆ ಕಾವ್ಯಮಯವಾಗಿ ಕಟ್ಟಿಕೊಟ್ಟಿರುವ ರೀತಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಭವ್ಯತೆಯನ್ನು ಕಣ್ತುಂಬಿಕೊಂಡ ಸಿನಿಪ್ರಿಯರು ತಕ್ಷಣವೇ 'ಆದಿಪುರುಷ್' ಚಿತ್ರಕ್ಕೆ ಹೋಲಿಸಿ, ಓಂ ರಾವತ್ ಅವರನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದ್ದಾರೆ.
ಪ್ರಭಾಸ್ ಫ್ಯಾನ್ಸ್ ಟ್ರೋಲ್
Adem nuv sonthamga rasukunna story kadhu!! Andariki telisina Ramayanam.. Chedagottav kadha ra characters lepesi, aa makeover ento emo @omraut Niku nachinattu tiskunav... Idi Om Raut Ramayanam 😡😡😡 #Adipurush #Prabhas https://t.co/4CZUdN96MP
— 𝑩𝒉𝒂𝒈𝒚𝒂 (@BhaagiWorld) November 6, 2026
ಓಂ ರಾವತ್‌ಗೆ ಸಖತ್ ಟ್ರೋಲ್
'ಆದಿಪುರುಷ್' ಚಿತ್ರದ ರಾಘವ, ಜಾನಕಿ ಮತ್ತು ಲಂಕೇಶ್ ಪಾತ್ರಗಳ ವಿನ್ಯಾಸ ಹಾಗೂ ಅಂದಿನ ಕಳಪೆ ಗ್ರಾಫಿಕ್ಸ್ ಅನ್ನು 'ರಾಮಾಯಣ'ದ ಅದ್ಭುತ ಪಾತ್ರವರ್ಗ ಮತ್ತು ದೃಶ್ಯಗಳೊಂದಿಗೆ ಹೋಲಿಸಿ, ನೆಟ್ಟಿಗರು ಮೀಮ್ಸ್‌ಗಳ ಮೂಲಕ ಲೇವಡಿ ಮಾಡುತ್ತಿದ್ದಾರೆ. "ಎಷ್ಟೇ ಬಾರಿ ನೋಡಿದರೂ ರೋಮಾಂಚನ ನೀಡುವ ರಾಮಾಯಣದಂತಹ ಪವಿತ್ರ ಕಾವ್ಯವನ್ನು ಎಷ್ಟು ಕೆಟ್ಟದಾಗಿ ಹಾಳುಮಾಡಲು ಸಾಧ್ಯವೋ ಅಷ್ಟು ಹಾಳುಮಾಡಿದ್ದು ಓಂ ರಾವತ್..." ಎಂದು ವೀಕ್ಷಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ನಿರಾಸೆ ಮೂಡಿಸಿದ ಓಂ ರಾವತ್, ಪ್ರಭಾಸ್ ಅವರಂತಹ ದೊಡ್ಡ ಸೂಪರ್‌ಸ್ಟಾರ್ ಒದಗಿಸಿದ ಬೃಹತ್ ಅವಕಾಶವನ್ನು ಸಂಪೂರ್ಣವಾಗಿ ವ್ಯರ್ಥ ಮಾಡಿದರು ಎಂದು ಕಿಡಿಕಾರುತ್ತಿದ್ದಾರೆ. ಹೀಗೆ 'ರಾಮಾಯಣ' ಚಿತ್ರತಂಡದ ಶ್ರಮವನ್ನು ಕೊಂಡಾಡುತ್ತಲೇ, 'ಆದಿಪುರುಷ್' ಚಿತ್ರದ ಕಳಪೆ ಮೇಕಿಂಗ್ ನೆನಪಿಸಿ ಓಂ ರಾವತ್ ಅವರ ಕಾಲೆಳೆಯುವ ಪೋಸ್ಟ್‌ಗಳು ಜಾಲತಾಣಗಳಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿವೆ.