ಕಲ್ಯಾಣ ಕರ್ನಾಟಕದ ಖಾಲಿ ಹುದ್ದೆಗಳನ್ನು ಕೆಪಿಎಸ್ಸಿಯಿಂದ ಹೊರಗಿರಿಸಿ, ಕೆಇಎ ಮೂಲಕ ಭರ್ತಿ ಮಾಡಿ: ಸಚಿವ ಪ್ರಿಯಾಂಕ್ ಖರ್ಗೆ
Kalyana Karnataka Reservation: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ಹಾಗೂ ಈ ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನ್ಯಾಯಯುತ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸಂವಿಧಾನದ 371(ಜೆ) ವಿಧಿಯನ್ನು ಜಾರಿಗೆ ತರಲಾಗಿದೆ. ಕಾಯ್ದೆಯ ಅನುಷ್ಠಾನದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ವಿಳಂಬ ಸಲ್ಲದು ಎಂದು ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ.
-
ಬೆಂಗಳೂರು, ನವೆಂಬರ್ 6: ಕಲ್ಯಾಣ ಕರ್ನಾಟಕ (Kalyana Karnataka Reservation) ಭಾಗದಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದಿಂದ ಹೊರಗಿರಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ಆದ್ಯತೆ ಮೇರೆಗೆ ಭರ್ತಿ ಮಾಡಿಕೊಳ್ಳಬೇಕು ಅಧಿಕಾರಿಗಳಿಗೆ ಎಂದು ಗೃಹ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.
ಇಂದು ವಿಕಾಸಸೌಧದಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಹಾಗೂ ಸಂವಿಧಾನದ 371(ಜೆ) ವಿಧಿಯ ಅನುಷ್ಠಾನ ಕುರಿತ ಉಪಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ಹಾಗೂ ಈ ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನ್ಯಾಯಯುತ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸಂವಿಧಾನದ 371(ಜೆ) ವಿಧಿಯನ್ನು ಜಾರಿಗೆ ತರಲಾಗಿದೆ. ಈ ಮಹತ್ವದ ಸಂವಿಧಾನಾತ್ಮಕ ಆಶಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಕಾಯ್ದೆಯ ಅನುಷ್ಠಾನದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ವಿಳಂಬ ಸಲ್ಲದು ಎಂದು ಸಚಿವರು ಎಚ್ಚರಿಸಿದರು.
ಸಂವಿಧಾನದತ್ತ ಹಕ್ಕು, ಭಿಕ್ಷೆಯಲ್ಲ
371(ಜೆ) ಕಾಯ್ದೆಯು ಕಲ್ಯಾಣ ಕರ್ನಾಟಕದ ಜನರ ಅಭಿವೃದ್ಧಿ ಮತ್ತು ಹಕ್ಕುಗಳ ರಕ್ಷಣೆಗಾಗಿ ಸಾಕಷ್ಟು ಶ್ರಮ ವಹಿಸಿ ಜಾರಿಗೆ ತಂದಿರುವ ಮಹತ್ವದ ಸಂವಿಧಾನಾತ್ಮಕ ಕ್ರಮವಾಗಿದೆ. ಆದರೆ, ಈ ಕಾಯ್ದೆಯ ಆಶಯಕ್ಕೆ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸುವ ವಿಚಾರದಲ್ಲಿ ಅಧಿಕಾರಿಗಳು ನಿರೀಕ್ಷಿತ ಗಂಭೀರತೆ ತೋರುತ್ತಿಲ್ಲ ಎಂಬುದು ಕಂಡುಬರುತ್ತಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕದ ಜನರು ಈ ಕಾಯ್ದೆಯಡಿ ಶಿಕ್ಷಣ, ಉದ್ಯೋಗ ಸೇರಿದಂತೆ ತಮಗೆ ದೊರೆಯಬೇಕಾದ ಸೌಲಭ್ಯಗಳನ್ನು ಅಧಿಕಾರಯುತವಾಗಿ ಕೇಳುತ್ತಿದ್ದಾರೆಯೇ ಹೊರತು ಯಾರ ಬಳಿಯೂ ಭಿಕ್ಷೆ ಬೇಡುತ್ತಿಲ್ಲ. ಇದು ಸಂವಿಧಾನವೇ ನೀಡಿರುವ ಅವರ ಹಕ್ಕು. ಹೀಗಾಗಿ, 371(ಜೆ) ವಿಧಿಯ ಅನುಷ್ಠಾನವನ್ನು ಅಧಿಕಾರಿಗಳು ಹಗುರವಾಗಿ ಪರಿಗಣಿಸಬಾರದು. ಕಾಯ್ದೆಯ ಆಶಯವನ್ನು ಸಂಪೂರ್ಣವಾಗಿ ಜಾರಿಗೊಳಿಸುವ ಹೊಣೆಗಾರಿಕೆಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಅವರು ಪ್ರತಿಪಾದಿಸಿದರು.
ಕಳೆದ ಸಭೆಯ ನಿರ್ದೇಶನಗಳ ಅನುಷ್ಠಾನಕ್ಕೆ ನಿರ್ಲಕ್ಷ್ಯವೇಕೆ?
ಹಿಂದಿನ ಸಭೆಯಲ್ಲಿ ಅಧಿಕಾರಿಗಳು ನೀಡಿದ್ದ ಅಂಕಿ-ಅಂಶಗಳಿಗೂ ಇಂದಿನ ಸಭೆಯಲ್ಲಿ ಸಲ್ಲಿಸಿರುವ ಮಾಹಿತಿಗೂ ಯಾವುದೇ ಗಮನಾರ್ಹ ವ್ಯತ್ಯಾಸ ಕಂಡುಬರುತ್ತಿಲ್ಲ. ಕಳೆದ ಸಭೆಯಲ್ಲಿ ಸ್ಪಷ್ಟವಾಗಿ ನೀಡಿದ್ದ ನಿರ್ದೇಶನಗಳ ಅನುಷ್ಠಾನದಲ್ಲಿ ಪ್ರಗತಿ ಸಾಧಿಸದಿರುವುದು, ಅಧಿಕಾರಿಗಳು ಆ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ನೀಡುವ ನಿರ್ದೇಶನಗಳು ಕೇವಲ ದಾಖಲೆಗಳಿಗೆ ಸೀಮಿತವಾಗಬಾರದು. ಅವುಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಿ, ಮುಂದಿನ ಸಭೆಯಲ್ಲಿ ಸಾಧಿಸಿರುವ ಪ್ರಗತಿಯ ಸ್ಪಷ್ಟ ಅಂಕಿ-ಅಂಶಗಳನ್ನು ಸಲ್ಲಿಸಬೇಕು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ವೇಗ ನೀಡುವುದರ ಜತೆಗೆ, 371(ಜೆ) ಅಡಿಯಲ್ಲಿ ಈ ಭಾಗದ ಜನರಿಗೆ ದೊರೆಯಬೇಕಾದ ಸಾಂವಿಧಾನಿಕ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಒತ್ತಾಯಿಸಿದರು.