ಕಲಬುರಗಿಯ ಮೂವರಿಗೆ ಅಧ್ಯಕ್ಷ ಸ್ಥಾನ: ರಾಯಚೂರಿಗೆ ಪ್ರತಿಷ್ಠಿತ ಕೆಕೆಆರ್‌ಡಿಬಿ ಚುಕ್ಕಾಣಿ
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಾವಿರಾರು ಕೋಟಿ ರುಪಾಯಿ ಅನುದಾನ ನಿರ್ವಹಿಸುವ ಕೆಕೆಆರ್ ಡಿಬಿ ಅಧ್ಯಕ್ಷ ಸ್ಥಾನ ಸಾಮಾನ್ಯ ರಾಜಕೀಯ ಹುದ್ದೆಯಲ್ಲ. ಪ್ರಾದೇಶಿಕ ಅಸಮಾನತೆ ನಿವಾರಣೆ, ಶಿಕ್ಷಣ, ಆರೋಗ್ಯ, ರಸ್ತೆ, ಕುಡಿಯುವ ನೀರು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಯಂತಹ ಪ್ರಮುಖ ಕ್ಷೇತ್ರಗಳ ಯೋಜನೆಗಳಿಗೆ ಮಂಡಳಿ ಅನುದಾನ ಒದಗಿಸುತ್ತದೆ.
-
ದೇವೇಂದ್ರ ಜಾಡಿ ಕಲಬುರಗಿ
ಹಲವು ತಿಂಗಳಿಂದ ಖಾಲಿ ಉಳಿದಿದ್ದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ಸ್ಥಾನಕ್ಕೆ ಕೊನೆಗೂ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರು ದದ್ದಲ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಿದ್ದು, ರಾಜ್ಯ ಸರಕಾರದ ಅಧಿಕೃತ ಆದೇಶವೊಂದೇ ಬಾಕಿಯಾಗಿದೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಾವಿರಾರು ಕೋಟಿ ರುಪಾಯಿ ಅನುದಾನ ನಿರ್ವಹಿಸುವ ಕೆಕೆಆರ್ ಡಿಬಿ ಅಧ್ಯಕ್ಷ ಸ್ಥಾನ ಸಾಮಾನ್ಯ ರಾಜಕೀಯ ಹುದ್ದೆಯಲ್ಲ. ಪ್ರಾದೇಶಿಕ ಅಸಮಾನತೆ ನಿವಾರಣೆ, ಶಿಕ್ಷಣ, ಆರೋಗ್ಯ, ರಸ್ತೆ, ಕುಡಿಯುವ ನೀರು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಯಂತಹ ಪ್ರಮುಖ ಕ್ಷೇತ್ರಗಳ ಯೋಜನೆಗಳಿಗೆ ಮಂಡಳಿ ಅನುದಾನ ಒದಗಿಸುತ್ತದೆ.
ಹೀಗಾಗಿ ಅಧ್ಯಕ್ಷ ಸ್ಥಾನದ ಮೇಲೆ ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳ ರಾಜಕೀಯ ನಾಯಕರ ಕಣ್ಣಿತ್ತು. ಡಾ. ಅಜಯಸಿಂಗ್ ಸಚಿವರಾದ ಬಳಿಕ ಕೆಕೆಆರ್ ಡಿಬಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಎರಡು ತಿಂಗಳಿಗೂ ಹೆಚ್ಚು ಕಾಲ ಸ್ಥಾನ ಖಾಲಿಯಾಗಿತ್ತು. ಇದೀಗ ರಾಯಚೂರು ಗ್ರಾಮೀಣ ಕ್ಷೇತ್ರದ ಎರಡನೇ ಬಾರಿಗೆ ಶಾಸಕರಾಗಿರುವ ದದ್ದಲ್ ಅವರಿಗೆ ಅವಕಾಶ ಕಲ್ಪಿಸುವ ಮೂಲಕ ಪ್ರಾದೇಶಿಕ ಹಾಗೂ ಸಾಮಾಜಿಕ ಸಮೀಕರಣಕ್ಕೆ ಒತ್ತು ನೀಡಲಾಗಿದೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ನಡೆದಿದೆ.
ಸಚಿವ ಸ್ಥಾನ ತಪ್ಪಿದ ರಾಯಚೂರಿಗೆ ಕೆಕೆಆರ್‌ಡಿಬಿ?
ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಪ್ರಾತಿನಿಧ್ಯ ಸಿಗಬೇಕು ಎಂಬ ಬೇಡಿಕೆ ಕಾಂಗ್ರೆಸ್‌ನೊಳಗೆ ಇತ್ತು. ಸಂಪುಟದಲ್ಲಿ ಅವಕಾಶ ಸಿಗದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಭಾವಿ ನಾಯಕರಿಗೆ ಪ್ರಮುಖ ನಿಗಮ ಅಥವಾ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಒತ್ತಡವೂ ಇತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷ ಸ್ಥಾನ ರಾಯಚೂರಿನ ಪಾಲಾಗುವ ಸಾಧ್ಯತೆ ರಾಜಕೀಯ ಮಹತ್ವ ಪಡೆದುಕೊಂಡಿದೆ. ಎರಡನೇ ಬಾರಿಗೆ ಶಾಸಕರಾಗಿರುವ ದದ್ದಲ್ ಅವರ ಜತೆಗೆ ಎಸ್‌ಟಿ ಸಮುದಾಯದ ಪ್ರಾತಿನಿಧ್ಯವೂ ನೇಮಕದ ಲೆಕ್ಕಾಚಾ ರದಲ್ಲಿ ಪ್ರಮುಖ ಅಂಶವಾಗಿದೆ ಎನ್ನಲಾಗುತ್ತಿದೆ.
ದದ್ದಲ್-ಬಾದರ್ಲಿ ನಡುವೆ ಪೈಪೋಟಿ: ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನಕ್ಕಾಗಿ ರಾಯಚೂರು ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಬಸನಗೌಡ ದದ್ದಲ್ ಹಾಗೂ ಬಾದರ್ಲಿ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿದ್ದವು. ಇಬ್ಬರ ನಡುವೆ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು ಎನ್ನಲಾಗಿದ್ದು, ರಾಯಚೂರಿಗೆ ಈ ಹುದ್ದೆ ದೊರಕಿಸಬೇಕು ಎಂಬ ಸ್ಥಳೀಯ ಕಾಂಗ್ರೆಸ್ ನಾಯಕರ ಒತ್ತಡವೂ ಇತ್ತು ಎನ್ನಲಾಗಿದೆ. ಅಂತಿಮವಾಗಿ ದದ್ದಲ್ ಅವರ ಹೆಸರನ್ನು ಎಐಸಿಸಿ ಮಟ್ಟದಲ್ಲಿ ಶಿಫಾರಸು ಮಾಡಲಾಗಿದೆ. ಸರಕಾರದ ಅಧಿಕೃತ ಆದೇಶ ಹೊರಬಿದ್ದ ಬಳಿಕ ನೇಮಕಾತಿ ಸ್ಪಷ್ಟಗೊಳ್ಳಲಿದೆ.
ಆದೇಶವೊಂದೇ ಬಾಕಿ: ಕೆಕೆಆರ್‌ಡಿಬಿ ಸೇರಿದಂತೆ 18 ಪ್ರಮುಖ ನಿಗಮಮಂಡಳಿಗಳಿಗೆ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಶಿಫಾರಸು ಹೊರಬಿದ್ದಿದೆ. ಇದೀಗ ರಾಜ್ಯ ಸರಕಾರದ ಅಧಿಕೃತ ಆದೇಶ ಹೊರಬೀಳಬೇಕಿದೆ. ಇಂದು ಅಥವಾ ನಾಳೆ ನೇಮಕಾತಿ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಪಕ್ಷದ ವಲಯದಲ್ಲಿ ಹೇಳಲಾಗುತ್ತಿದೆ.
ಪಟ್ಟಿಯಲ್ಲಿ ಜಿಲ್ಲೆಯ ಮೂವರಿಗೆ ಸ್ಥಾನ
ಕೆಕೆಆರ್‌ಡಿಬಿ ಸೇರಿದಂತೆ ವಿವಿಧ ನಿಗಮಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಹೊರಬಿದ್ದ ಶಿಫಾರಸು ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ ಮೂವರಿಗೆ ಅವಕಾಶ ದೊರೆತಿದೆ. ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಅವರಿಗೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ, ಚಿಂಚೋಳಿ ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಅವರಿಗೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಕಾಂಗ್ರೆಸ್ ಮುಖಂಡ ಶಾಮ ನಾಟೀಕಾರ ಅವರಿಗೆ ಕರ್ನಾಟಕ ಮಸಾಲ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ.
ಯಾರಿಗೆ ಯಾವ ಹುದ್ದೆ ?
ಬಸನಗೌಡ ದದ್ದಲ್, ಕೆಕೆಆರ್‌ಡಿಬಿ ಅಧ್ಯಕ್ಷ; ರಾಯಚೂರು ಗ್ರಾಮೀಣ.
ಅಲ್ಲಮಪ್ರಭು ಪಾಟೀಲ್, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ; ಕಲಬುರಗಿ ದಕ್ಷಿಣ.
ಸುಭಾಷ ರಾಠೋಡ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ; ಚಿಂಚೋಳಿ.
ಶಾಮ ನಾಟೀಕಾರ, ಕರ್ನಾಟಕ ಮಸಾಲ ಅಭಿವೃದ್ಧಿ ಮಂಡಳಿ
ಕೆಕೆಆರ್‌ಡಿಬಿ ಅಧ್ಯಕ ಸ್ಥಾನ ಏಕೆ ಮಹತ್ವ?
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ.
ಶಿಕ್ಷಣ, ಆರೋಗ್ಯ, ರಸ್ತೆ, ಕುಡಿಯುವ ನೀರು ಹಾಗೂ ಮೂಲಸೌಕರ್ಯಕ್ಕೆ ಆದ್ಯತೆ.
ಪ್ರಾದೇಶಿಕ ಅಸಮಾನತೆ ಕಡಿಮೆ ಮಾಡುವ ಪ್ರಮುಖ ಅಭಿವೃದ್ಧಿ ಸಂಸ್ಥೆ.
ಅನುದಾನ ಹಂಚಿಕೆ ಮತ್ತು ಅಭಿವೃದ್ಧಿ ಆದ್ಯತೆಗಳಲ್ಲಿ ಅಧ್ಯಕ್ಷರಿಗೆ ಪ್ರಮುಖ ಪಾತ್ರ.
ಎರಡು ತಿಂಗಳಿಗೂ ಹೆಚ್ಚು ಕಾಲ ಖಾಲಿ ಇದ್ದ ಅಧ್ಯಕ್ಷ ಸ್ಥಾನಕ್ಕೆ ಇದೀಗ ಹೆಸರು ಅಂತಿಮ ಹಂತಕ್ಕೆ.
![]()
ಕರ್ನಾಟಕದ ವಿವಿಧ ಮಂಡಳಿ ಹಾಗೂ ನಿಗಮಗಳಿಗೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಲ್ಲ 18 ನಾಯಕರಿಗೂ ಹಾರ್ದಿಕ ಅಭಿನಂದನೆಗಳು. ಈ ನೇಮಕಾತಿಗಳು ಸರಕಾರದ ಆಡಳಿತ ವ್ಯವಸ್ಥೆಗೆ ಮತ್ತಷ್ಟು ಬಲ ನೀಡಲಿದ್ದು, ನೂತನ ಅಧ್ಯಕ್ಷರು ತಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ, ಸ್ಪಂದನಾಶೀಲ ಆಡಳಿತದ ಮೂಲಕ ಜನರಿಗೆ ಸ್ಪಷ್ಟ ಹಾಗೂ ಸ್ಪರ್ಶಿಸಬಹುದಾದ ಫಲಿತಾಂಶಗಳನ್ನು ತಲುಪಿಸುವ ವಿಶ್ವಾಸವಿದೆ.
-ಡಾ.ಅಜಯ್ ಸಿಂಗ್, ಸಚಿವ