ಪಂಜಾಬಿ ಗಾಯಕಿ ಇಂದರ್ ಕೌರ್ ಕಾಲುವೆಯಲ್ಲಿ ಶವವಾಗಿ ಪತ್ತೆ; ಮದುವೆ ಪ್ರಪೋಸಲ್ ತಿರಸ್ಕರಿಸಿದ್ದಕ್ಕೆ ಕೊಲೆ ಮಾಡಿದ್ನಾ ಪಾಪಿ?
ಅಪಹರಣಕ್ಕೊಳಗಾಗಿದ್ದ ಪಂಜಾಬ್‌ನ ಉದಯೋನ್ಮುಖ ಗಾಯಕಿ ಇಂದರ್ ಕೌರ್, ಇದೀಗ ಭೀಕರವಾಗಿ ಕೊಲೆಯಾಗಿದ್ದಾರೆ. ಕೆನಡಾದಿಂದ ಬಂದಿದ್ದ ಸುಖ್ವಿಂದರ್ ಸಿಂಗ್ ಎಂಬಾತ ಆಕೆಯನ್ನು ಕಿಡ್ನಾಪ್ ಮಾಡಿ, ಹತ್ಯೆಗೈದು ಮೃತದೇಹವನ್ನು ನೀಲೋನ್ ಕಾಲುವೆಗೆ ಎಸೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
-
ಅಪಹರಣಕ್ಕೊಳಗಾಗಿದ್ದ ಪಂಜಾಬ್‌ನ ಜನಪ್ರಿಯ ಗಾಯಕಿ ಇಂದರ್ ಕೌರ್ (ಯಶಿಂದರ್ ಕೌರ್) 6 ದಿನಗಳ ನಂತರ ಲುಧಿಯಾನದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇಂದರ್ ಅವರ ಮೃತದೇಹವು ನೀಲೋನ್ ಕಾಲುವೆಯಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರು ಗುರುತು ಪತ್ತೆ ಹಚ್ಚಿದ ನಂತರ ಮರಣೋತ್ತರ ಪರೀಕ್ಷೆಗಾಗಿ ಸಮ್ರಾಲಾ ಸಿವಿಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಇಂದರ್ ಕೌರ್ ಅವರ ಸಹೋದರ ಜೋತಿಂದರ್ ಸಿಂಗ್ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, "ಮೇ 13 ರಂದು ರಾತ್ರಿ 8.30ರ ಸುಮಾರಿಗೆ ಇಂದರ್ ದಿನಸಿ ಸಾಮಗ್ರಿಗಳನ್ನು ಖರೀದಿಸಲು ತಮ್ಮ ಫೋರ್ಡ್ ಫಿಗೋ ಕಾರಿನಲ್ಲಿ ಮನೆಯಿಂದ ಹೊರಟಿದ್ದರು. ಆದರೆ, ತಡವಾದರೂ ಅವರು ಮನೆಗೆ ಮರಳಿ ಬಂದಿರಲಿಲ್ಲ. ಅವರಿಗಾಗಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದಾಗ, ಭಾಲೂರ್ ನಿವಾಸಿ ಸುಖ್ವಿಂದರ್ ಸಿಂಗ್ ಎಂಬಾತನ ಮೇಲೆ ಅನುಮಾನ ವ್ಯಕ್ತವಾಗಿದೆ. ಆತ ಇಂದರ್ ಕೌರ್ ಅವರನ್ನು ಬಲವಂತವಾಗಿ ಮದುವೆಯಾಗಲು ಬಯಸಿದ್ದ ಎನ್ನಲಾಗಿದೆ. ಆದರೆ ಇಂದರ್ ಆತನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರು, ಈ ಕಾರಣಕ್ಕೆ ಆತ ಇಂದರ್ ಮೇಲೆ ದ್ವೇಷ ಸಾಧಿಸುತ್ತಿದ್ದ" ಎಂದು ಆರೋಪಿಸಲಾಗಿತ್ತು.
Apsara Murder Case: ಕಿರುತೆರೆ ನಟಿ ಹತ್ಯೆ ಪ್ರಕರಣ; ದೇವಸ್ಥಾನದ ಅರ್ಚಕನಿಗೆ ಜೀವಾವಧಿ ಶಿಕ್ಷೆ
ಕೊಲ್ಲಲೆಂದೇ ಕೆನಡಾದಿಂದ ಬಂದಿದ್ನ ಕಿರಾತಕ?
ಇಂದರ್ ಕೌರ್ ಅವರನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದಲೇ ಸುಖ್ವಿಂದರ್ ಸಿಂಗ್ ಕೆನಡಾದಿಂದ ಪಂಜಾಬ್‌ಗೆ ಬಂದಿದ್ದ ಎಂದು ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ. ತನ್ನ ಸಹಚರರೊಂದಿಗೆ ಸೇರಿಕೊಂಡು ಇಂದರ್ ಕೌರ್ ಇದ್ದ ಕಾರನ್ನು ಅಡ್ಡಗಟ್ಟಿದ ಸುಖ್ವಿಂದರ್, ಗನ್ ತೋರಿಸಿ ಬೆದರಿಸಿ, ಆಕೆಯನ್ನು ಅಪಹರಿಸಿದ್ದಾನೆ. ಬಳಿಕ ಆಕೆಯನ್ನು ಕೊಲೆ ಮಾಡಿ, ಮೃತದೇಹವನ್ನು ನೀಲೋ ಕಾಲುವೆಗೆ ಎಸೆದು ಮತ್ತೆ ಕೆನಡಾಕ್ಕೆ ಪರಾರಿಯಾಗಿದ್ದಾನೆ ಎಂದು ದೂರಿದ್ದಾರೆ.
ದೂರು ನೀಡಿದ್ದರೂ ಕ್ರಮ ಇಲ್ಲ
ಮೇ 15 ರಂದೇ ಸುಖ್ವಿಂದರ್ ಸಿಂಗ್ ಮತ್ತು ಆತನ ಸಹಚರ ಕರಮ್‌ಜಿತ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ, ಪೊಲೀಸರು ಸಕಾಲದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಪೊಲೀಸರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಮಾಲ್‌ಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಬಲ್ಬೀರ್ ಸಿಂಗ್ ಅವರು ಪ್ರಕರಣ ದಾಖಲಾಗಿರುವುದನ್ನು ಖಚಿತಪಡಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ತಿಳಿಸಿದ್ದಾರೆ.
ಗಾಯಕಿಯಾಗಿ ಹೆಸರು ಸಂಪಾದಿಸಿದ್ದ ಇಂದರ್ ಕೌರ್
ಪಂಜಾಬಿ ಸಂಗೀತ ಉದ್ಯಮದಲ್ಲಿ ಉದಯೋನ್ಮುಖ ಗಾಯಕಿಯಾಗಿದ್ದ ಇಂದರ್ ಕೌರ್, ತಮ್ಮ ಮ್ಯೂಸಿಕ್ ಕಾನ್ಸರ್ಟ್ ಮತ್ತು ಸೋಷಿಯಲ್ ಮೀಡಿಯಾ ರೀಲ್ಸ್‌ಗಳ ಮೂಲಕ ಜನಪ್ರಿಯತೆ ಗಳಿಸುತ್ತಿದ್ದರು. ಇವರು ಹಾಡಿದ್ದ 'ಸೋನೆ ದಿ ಚಿರ್ಹಿ', 'ಜಿಜಾ', 'ಸೋಹ್ನಾ ಲಗ್ದಾ' ಮತ್ತು 'ದೇಸಿ ಸಿರ್ರೆ ದಾ' ಮುಂತಾದ ಹಾಡುಗಳು ಪಂಜಾಬಿ ಸಂಗೀತ ಪ್ರಿಯರ ಗಮನ ಸೆಳೆದಿದ್ದವು.