ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊದಲ ದಿನವೇ ಅಬ್ಬರಿಸಿ, ಬೊಬ್ಬಿರಿದ ʻಜೈಲರ್‌ 2ʼ; ವಿಶ್ವಾದ್ಯಂತ 125+ ಕೋಟಿ ಕಲೆಕ್ಷನ್‌, ಫಸ್ಟ್‌ ಡೇ ಕರ್ನಾಟಕದಿಂದ ಸಿಕ್ಕ ಹಣವೆಷ್ಟು ಗೊತ್ತಾ?

Jailer 2 Box Office Day 1: ʻಸೂಪರ್‌ಸ್ಟಾರ್ʼ ರಜನಿಕಾಂತ್ ಅಭಿನಯದ ‘ಜೈಲರ್ 2’‌ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡಿದ್ದು, ಮೊದಲ ದಿನವೇ ವಿಶ್ವಾದ್ಯಂತ 125 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ರಜನಿಕಾಂತ್ ಪ್ರೇಕ್ಷಕರನ್ನು ಭರ್ಜರಿಯಾಗಿ ರಂಜಿಸಿದ್ದಾರೆ.

Rajinikanth: ʻಜೈಲರ್ 2ʼ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?

-

Avinash GR
Avinash GR Oct 16, 2026 5:36 PM

ʻಸೂಪರ್‌ಸ್ಟಾರ್ʼ ರಜನಿಕಾಂತ್ ಅಭಿನಯದ, ನೆಲ್ಸನ್ ನಿರ್ದೇಶನದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾವು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ಮೊದಲ ದಿನವೇ ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡಿದ್ದು, ಬರೋಬ್ಬರಿ 125.25 ಕೋಟಿ ಕಲೆಕ್ಷನ್ ಬಾಚಿಕೊಂಡಿದೆ.

ಈ ಮೂಲಕ ಕಾಲಿವುಡ್ ಇತಿಹಾಸದಲ್ಲೇ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಮೂರನೇ ಅತಿದೊಡ್ಡ ತಮಿಳು ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಟೈಗರ್ ಮುತ್ತುವೇಲ್ ಪಾಂಡಿಯನ್’ ಆಗಿ ರಜನಿಕಾಂತ್ ಮತ್ತೊಮ್ಮೆ ತೆರೆಮೇಲೆ ಅಬ್ಬರಿಸಿದ್ದು, ಅಭಿಮಾನಿಗಳನ್ನು ಸಖತ್‌ ಆಗಿಯೇ ರಂಜಿಸಿದ್ದಾರೆ.

ʻಜೈಲರ್‌ 2ʼ ಚಿತ್ರಕ್ಕೆ ಮೂರನೇ ಸ್ಥಾನ

ಮೂಲಗಳ ಪ್ರಕಾರ, ಈ ಚಿತ್ರವು ಭಾರತದ ಮಾರುಕಟ್ಟೆಯಲ್ಲಿ ಮೊದಲ ದಿನ 70.25 ಕೋಟಿ ರೂ. ಗ್ರಾಸ್‌ ಗಳಿಕೆ ಕಂಡಿದೆ. ಇದರ ಜೊತೆಗೆ ವಿದೇಶದಿಂದ ಮೊದಲ ದಿನವೇ 55 ಕೋಟಿ ಹರಿದುಬಂದಿದ್ದು, ಒಟ್ಟಾರೆ ಕಲೆಕ್ಷನ್ 125.25 ಕೋಟಿ ಮುಟ್ಟಿದೆ. ಆದರೆ, ಈ ಹಿಂದೆ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿಬಂದಿದ್ದ ರಜನಿಕಾಂತ್ ಅವರ ‘ಕೂಲಿ’ (151.10 ಕೋಟಿ ರೂ.) ಹಾಗೂ ʻದಳಪತಿʼ ವಿಜಯ್ ಅವರ ‘ಲಿಯೋ’ (142 ಕೋಟಿ ರೂ.) ಚಿತ್ರಗಳ ಮೊದಲ ದಿನದ ಜಾಗತಿಕ ದಾಖಲೆಯನ್ನು ಮುರಿಯಲು ‘ಜೈಲರ್ 2’ ಚಿತ್ರಕ್ಕೆ ಸಾಧ್ಯವಾಗಿಲ್ಲ.

ತಮಿಳು ವರ್ಷನ್‌ಗೆ ಜಾಸ್ತಿ ಕಲೆಕ್ಷನ್

ಈ ಚಿತ್ರವನ್ನು ಮೊದಲ ದಿನವೇ ದೇಶಾದ್ಯಂತ ಬರೋಬ್ಬರಿ 37 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಭಾರತದಲ್ಲಿ ತಮಿಳು ಆವೃತ್ತಿಯಿಂದಲೇ 43.35 ಕೋಟಿ ರೂ. ನೆಟ್ ಕಲೆಕ್ಷನ್ ಬಂದಿದೆ. ತೆಲುಗು ಆವೃತ್ತಿಯು 12.50 ಕೋಟಿ ತಂದುಕೊಟ್ಟರೆ, ಹಿಂದಿ ಆವೃತ್ತಿಯಿಂದ 3.50 ಕೋಟಿ ಹಾಗೂ ಕನ್ನಡ ಆವೃತ್ತಿಯಿಂದ 35 ಲಕ್ಷ ಗಳಿಕೆ ಸಂಗ್ರಹವಾಗಿದೆ.

Jailer 2 Movie: 'ಜೈಲರ್‌ 2' ಚಿತ್ರದಿಂದ ಹೊರಬಿತ್ತು ಬಿಗ್‌ ಅಪ್‌ಡೇಟ್‌; ರಜನಿಕಾಂತ್‌ ಮಗಳ ಪಾತ್ರಕ್ಕೆ ಕನ್ನಡತಿ ಆಯ್ಕೆ?

ಕರ್ನಾಟಕದಲ್ಲಿ 14.50 ಕೋಟಿ ರೂ. ಕಲೆಕ್ಷನ್‌

ಇನ್ನು ರಾಜ್ಯವಾರು ಗ್ರಾಸ್ ಗಳಿಕೆಯನ್ನು ಗಮನಿಸಿದರೆ, ತಮಿಳುನಾಡು ನಂತರ ಕರ್ನಾಟಕದಲ್ಲೇ ಈ ಚಿತ್ರಕ್ಕೆ ದೊಡ್ಡಮಟ್ಟದ ಓಪನಿಂಗ್ ಸಿಕ್ಕಿದೆ. ತಮಿಳುನಾಡಿನಲ್ಲಿ 24 ಕೋಟಿ ಗ್ರಾಸ್ ಕಲೆಕ್ಷನ್ ಆಗಿದ್ದರೆ, ಕರ್ನಾಟಕದಲ್ಲಿ ಬರೋಬ್ಬರಿ 14.50 ಕೋಟಿ ಬಾಚಿಕೊಂಡಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಿಂದಲೂ ಒಟ್ಟಾಗಿ 14.50 ಕೋಟಿ ಗ್ರಾಸ್ ಬಂದಿದ್ದು, ಕೇರಳದಿಂದ 12.50 ಕೋಟಿ ಹಾಗೂ ಭಾರತದ ಉಳಿದ ಭಾಗಗಳಿಂದ 4.75 ಕೋಟಿ ಸಂಗ್ರಹವಾಗಿದೆ.

ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿರುವ ಈ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ರಮ್ಯಾ ಕೃಷ್ಣನ್, ಯೋಗಿ ಬಾಬು, ಮಿರ್ನಾ, ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್ ಮತ್ತು ಸೂರಜ್ ವೆಂಜಾರಮೂಡು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿದ್ದಂತೆ ಮೋಹನ್‌ಲಾಲ್, ಶಿವರಾಜ್‌ಕುಮಾರ್ ಮತ್ತು ಜಾಕಿ ಶ್ರಾಫ್ ಅತಿಥಿ ಪಾತ್ರಗಳಲ್ಲಿ ಮತ್ತೊಮ್ಮೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದು, ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ವಿಶೇಷ ಪಾತ್ರದಲ್ಲಿ ಎಂಟ್ರಿ ಕೊಟ್ಟಿರುವುದು ಚಿತ್ರದ ತೂಕವನ್ನು ಹೆಚ್ಚಿಸಿದೆ. ವಾರಾಂತ್ಯದಲ್ಲಿ ಚಿತ್ರದ ಗಳಿಕೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.