Actor Rajinikanth: ಮತ್ತೊಂದು ದಾಖಲೆ ಬರೆದ ರಜನಿಕಾಂತ್; ಬಿಡುಗಡೆ ಮುನ್ನವೇ ಬರೋಬ್ಬರಿ 120 ಕೋಟಿ ರೂ.ಗೆ ʼಕೂಲಿʼ ಒಟಿಟಿ ಹಕ್ಕು ಸೇಲ್?
Actor Rajinikanth: ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ, ರಜನಿಕಾಂತ್ ನಟನೆಯ ʼಕೂಲಿʼ ತಮಿಳು ಚಿತ್ರ ಬಿಡುಗಡೆ ಮುನ್ನವೇ ದಾಖಲೆ ಬರೆದಿದೆ. ಚಿತ್ರದ ಒಟಿಟಿ ಹಕ್ಕು ದಾಖಲೆಯ 120 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿದೆ ಎಂದು ವರದಿಯೊಂದು ತಿಳಿಸಿದೆ.

ʼಕೂಲಿʼ ಚಿತ್ರದ ಪೋಸ್ಟರ್.

ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Actor Rajinikanth) ಅವರಿಗೆ ದೇಶ ಮಾತ್ರವಲ್ಲ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಚಿತ್ರ ಬಿಡುಗಡೆಗಾಗಿ ಕಾದು ಕೂರುವವರೂ ತುಂಬಾ ಸಂಖ್ಯೆಯಲ್ಲಿದ್ದಾರೆ. ಇದೇ ಕಾರಣಕ್ಕೆ ರಜನಿಕಾಂತ್ ಚಿತ್ರ ಘೋಷಣೆಯಾದಗಲೇ ನಿರೀಕ್ಷೆ ಗರಿಗೆದರುತ್ತದೆ. ಅಲ್ಲದೆ ರಿಲೀಸ್ ಆದ ಮೊದಲ ದಿನವೇ ಕೋಟಿ ಕೋಟಿ ದೋಚುತ್ತದೆ. ಆ ಮೂಲಕ ಪ್ರತಿಯೊಂದು ಚಿತ್ರವೂ ಹೊಸದೊಂದು ದಾಖಲೆ ಬರೆಯುತ್ತದೆ. ಇದೀಗ ಅವರ ಸಿನಿಮಾ ಥಿಯೇಟರ್ ಅಷ್ಟೇ ಅಲ್ಲದೆ ಒಟಿಟಿಯಲ್ಲಿಯೂ ರೆಕಾರ್ಡ್ ಬರೆಯಲು ಮುಂದಾಗಿದೆ. ಸದ್ಯ ಬಿಡುಗಡೆಗೆ ಸಜ್ಜಾಗಿರುವ ರಜನಿಕಾಂತ್ ನಟನೆಯ ʼಕೂಲಿʼ (Coolie) ಚಿತ್ರ ಒಟಿಟಿ ಫ್ಲ್ಯಾಟ್‌ಫಾರ್ಮ್‌ಗೆ ಬರೋಬ್ಬರಿ 120 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ವರದಿಯೊಂದು ತಿಳಿಸಿದೆ. ಆ ಮೂಲಕ ತಲೈವಾ ಹೊಸದೊಂದು ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ.
ತಮಿಳಿನಲ್ಲಿ ಹೊಸ ಅಲೆಯ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಭರವಸೆ ಮೂಡಿಸಿರುವ ಲೋಕೇಶ್ ಕನಕರಾಜ್ ʼಕೂಲಿʼ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಚಿತ್ರದ ರಿಲೀಸ್ ದಿನಾಂಕ ಇನ್ನೂ ನಿರ್ಧರಿಸಿಲ್ಲ. ಅದಾಗಲೇ ಒಟಿಟಿ ಹಕ್ಕಿಗೆ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ.
Happy happy birthday thalaivaaa @rajinikanth ❤️❤️
— Lokesh Kanagaraj (@Dir_Lokesh) December 12, 2024
Our gift to you from Team #Coolie 🔥🔥 💥https://t.co/jghTSP2VHd
ಒಟಿಟಿ ಹಕ್ಕು ಯಾರ ಪಾಲಾಯ್ತು?
ಮೂಲಗಳ ಪ್ರಕಾರ ಒಟಿಟಿ ದೈತ್ಯ ಅಮೆಜಾನ್ ಪ್ರೈಮ್ ವಿಡಿಯೊ 'ಕೂಲಿ' ಚಿತ್ರದ ಹಕ್ಕನ್ನು ಖರೀದಿಸಿದೆಯಂತೆ. ಅಧಿಕೃತ ಘೋಷಣೆ ಇನ್ನಷ್ಟೇ ಹೊರ ಬರಬೇಕಿದೆ. ವಿಶೇಷ ಎಂದರೆ ಈ ಹಿಂದೆ ರಜನಿಕಾಂತ್ ಅವರ 'ಜೈಲರ್' ಚಿತ್ರದ ಹಕ್ಕನ್ನೂ ಅಮೆಜಾನ್ ಪ್ರೈಮ್ ಬರೋಬ್ಬರಿ 100 ಕೋಟಿ ರೂ.ಗೆ ಖರೀದಿಸಿತ್ತು.
ಮೊದಲ ಬಾರಿಗೆ ಲೋಕೇಶ್ ಮತ್ತು ರಜನಿಕಾಂತ್ ತೆರೆಮೇಲೆ ಒಂದಾಗುತ್ತಿರುವ ಕಾರಣಕ್ಕೆ 'ಕೂಲಿ' ಆರಂಭದಿಂದಲೂ ಕುತೂಹಲ ಕೆರಳಿಸಿದೆ. ಅದಕ್ಕೆ ತಕ್ಕಂತೆ ಕೆಲವು ದಿನಗಳ ಹಿಂದೆ ರಿಲೀಸ್ ಆದ ಟೀಸರ್ ತಲೈವಾ ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಇದು ಪಕ್ಕಾ ಆ್ಯಕ್ಷನ್ ಚಿತ್ರದ ಎನ್ನುವ ಸೂಚನೆ ಟೀಸರ್ ಮೂಲಕವೇ ಸಿಕ್ಕಿದೆ. ರಜನಿಕಾಂತ್ ಮತ್ತೊಮ್ಮೆ ಮಾಸ್ ಅವತಾರ ತಾಳಿದ್ದಾರೆ. ಸದ್ಯ ಚಿತ್ರತಂಡ ಕಥೆಯ ಕುರಿತಾಗಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಅದಾಗ್ಯೂ ರಜನಿಕಾಂತ್ ನೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಬಹು ತಾರಾಗಣ
ಈ ಚಿತ್ರ ಬಹುತಾರಾಗಣ ಹೊಂದಿದ್ದು, ವಿವಿಧ ಸಿನಿಮಾರಂಗದ ಜನಪ್ರಿಯ ಕಲಾವಿದರು ನಟಿಸುತ್ತಿದ್ದಾರೆ. ಬಾಲಿವುಡ್ ನಟ ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ನಾಗಾರ್ಜುನ ಅಕ್ಕಿನೇನಿ, ಸೌಬಿನ್ ಸಾಹಿರ್, ಸತ್ಯರಾಜ್, ಶ್ರುತಿ ಹಾಸನ್ ಅಭಿನಯಿಸುತ್ತಿದ್ದಾರೆ. ಮತ್ತೊಂದು ವಿಶೇಷ ಎಂದರೆ ಬಹುಭಾಷಾ ನಟಿ ಪೂಜಾ ಹೆಗ್ಡೆ ಈ ಚಿತ್ರದ ವಿಶೇಷ ಹಾಡಿನಲ್ಲಿ ಸೊಂಟ ಬಳುಕಿಸಲಿದ್ದಾರೆ. ಈ ಎಲ್ಲ ಕಾರಣಕ್ಕೆ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಇದು ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.