ಒಟಿಟಿಗೆ ಬಂತು ರಾಮ್ ಚರಣ್ - ಶಿವರಾಜ್‌ಕುಮಾರ್ ನಟನೆಯ 'ಪೆದ್ದಿ'; ಯಾವಾಗ? ಎಲ್ಲಿ ಸ್ಟ್ರೀಮಿಂಗ್?
ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ಇದೀಗ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲು ಸಜ್ಜಾಗಿದೆ. ಜೂನ್ 4 ರಂದು ಬಿಡುಗಡೆಯಾಗಿದ್ದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 338 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಬಾಚಿಕೊಂಡಿತ್ತು. ಇದೀಗ 35 ದಿನಗಳ ನಂತರ ಒಟಿಟಿಗೆ ಈ ಸಿನಿಮಾ ಬರುತ್ತಿದೆ.
-
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ 'ಪೆದ್ದಿ' ಚಿತ್ರವು ಈಗ ಡಿಜಿಟಲ್ ಲೋಕಕ್ಕೆ ಪದಾರ್ಪಣೆ ಮಾಡಲು ಸಂಪೂರ್ಣವಾಗಿ ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದ ಈ ಬ್ಲಾಕ್‌ಬಸ್ಟರ್ ಸಿನಿಮಾವು ಜುಲೈ 9 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
ಆಟ ಬದಲಾಗಬಹುದು, ಆದರೆ...
ನೆಟ್‌ಫ್ಲಿಕ್ಸ್ ಖಚಿತಪಡಿಸಿರುವ ಮಾಹಿತಿಯ ಪ್ರಕಾರ, 'ಪೆದ್ದಿ' ಚಿತ್ರವು ಮೊದಲ ಹಂತದಲ್ಲಿ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರೀಮಿಯರ್ ಆಗಲಿದ್ದು, ಹಿಂದಿ ಆವೃತ್ತಿಯು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಪೋಸ್ಟರ್ ಹಂಚಿಕೊಂಡಿರುವ ನೆಟ್‌ಫ್ಲಿಕ್ಸ್, "ಆಟ ಬದಲಾಗಬಹುದು, ಆದರೆ ಚಾಂಪಿಯನ್ ಮಾತ್ರ ಅವನೇ ಇರುತ್ತಾನೆ.. ಜುಲೈ 9 ರಂದು ಸೌತ್ ಭಾಷೆಗಳಲ್ಲಿ 'ಪೆದ್ದಿ' ಸಿನಿಮಾ ವೀಕ್ಷಿಸಿ" ಎಂದು ಬರೆದುಕೊಂಡಿದೆ.
Ram Charan: ಮಗಳ ಮುಖವನ್ನು ಅಂತೂ ರಿವೀಲ್ ಮಾಡಿದ್ರು ರಾಮ್ ಚರಣ್ ದಂಪತಿ
338 ಕೋಟಿಗೂ ಅಧಿಕ ಗಳಿಕೆ
ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಪೆದ್ದಿ' ಚಿತ್ರವು ಕಳೆದ ಜೂನ್ 4ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆರಂಭದಲ್ಲಿ ಚಿತ್ರಕ್ಕೆ ಮಿಶ್ರ ವಿಮರ್ಶೆಗಳು ವ್ಯಕ್ತವಾಗಿದ್ದವು ಹಾಗೂ ನಾಯಕಿ ಜಾನ್ವಿ ಕಪೂರ್ ಅವರ ಪಾತ್ರದ ಬಗ್ಗೆ ಜಾಲತಾಣಗಳಲ್ಲಿ ನೆಗೆಟಿವ್ ಚರ್ಚೆಗಳೂ ನಡೆದಿದ್ದವು. ಆದರೆ, ಎಲ್ಲ ನೆಗೆಟಿವಿಟಿಗಳನ್ನೂ ಮೀರಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಮುಗಿಬಿದ್ದ ಕಾರಣ, ಇದು ಈ ವರ್ಷದ ಅತಿ ದೊಡ್ಡ ಹಿಟ್ ಚಿತ್ರಗಳ ಸಾಲಿಗೆ ಸೇರಿತು. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಈ ಚಿತ್ರವು ಭಾರತದಲ್ಲಿ 286 ಕೋಟಿ ರೂ. ಸೇರಿದಂತೆ ವಿಶ್ವಾದ್ಯಂತ ಒಟ್ಟು 338.98 ಕೋಟಿ ರೂ. ಗಳಿಕೆ ಮಾಡಿ ದಾಖಲೆ ಬರೆದಿದೆ.
ಯಾರೆಲ್ಲಾ ನಟಿಸಿದ್ದಾರೆ?
ಚಿತ್ರದಲ್ಲಿ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಅವರೊಂದಿಗೆ, ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೇಂದು, ಬೊಮನ್ ಇರಾನಿ ಹಾಗೂ ರವಿ ಕಿಶನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಅವರ ಸಂಗೀತ ಈ ಚಿತ್ರದ ಪ್ರಮುಖ ಪ್ಲಸ್ ಪಾಯಿಂಟ್ ಆಗಿದೆ.
Ram Charan: ಹೊಸ ದೃಶ್ಯಗಳ ಸೇರ್ಪಡೆ; ಪೆದ್ದಿ ನಿರ್ದೇಶಕ ಕೊಟ್ಟೇ ಬಿಟ್ರು ಅಪ್‌ಡೇಟ್!
ಮಗನ ಕಣ್ಣಿಗೆ ಗಾಯದ ಬಗ್ಗೆ ಚಿರು ಮಾತು
ಇತ್ತೀಚೆಗೆ ನಡೆದ ಚಿತ್ರದ ಸಕ್ಸಸ್ ಸೆಲೆಬ್ರೇಷನ್‌ನಲ್ಲಿ ಭಾಗಿಯಾಗಿದ್ದ ಮೆಗಾಸ್ಟಾರ್ ಚಿರಂಜೀವಿ, ಶೂಟಿಂಗ್ ವೇಳೆ ರಾಮ್ ಚರಣ್ ಎದುರಿಸಿದ್ದ ಭೀಕರ ಅಪಘಾತದ ಬಗ್ಗೆ ಮಾತನಾಡಿದ್ದಾರೆ. "ಆಕ್ಷನ್ ದೃಶ್ಯವೊಂದರ ಚಿತ್ರೀಕರಣದ ವೇಳೆ ಚರಣ್ ಕಣ್ಣಿಗೆ ತೀವ್ರ ಗಾಯವಾಗಿ ಎಂಟು ಹೊಲಿಗೆಗಳನ್ನು ಹಾಕಲಾಗಿತ್ತು. ಆ ಫೋಟೋ ನೋಡಿದಾಗ ನನಗೆ ತೀವ್ರ ಭಯವಾಗಿತ್ತು. ಗಾಯವು ಇನ್ನು ಸ್ವಲ್ಪ ಕೆಳಗೆ ಆಗಿದ್ದರೆ ಅವನು ಕಣ್ಣನ್ನೇ ಕಳೆದುಕೊಳ್ಳಬೇಕಾಗುತ್ತಿತ್ತು. ಅದೃಷ್ಟವಶಾತ್ ಹುಬ್ಬಿನ ಮೇಲಾಗಿದ್ದರಿಂದ ಅಪಾಯ ತಪ್ಪಿದೆ" ಎಂದಿದ್ದರು.
ಮಗನ ಬದ್ಧತೆಯನ್ನು ಶ್ಲಾಘಿಸಿದ್ದ ಚಿರಂಜೀವಿ, "ಅವನು ಒಬ್ಬ ಸ್ಟಾರ್ ಹೀರೋ ಮಗನಾಗಿ ಇಷ್ಟೊಂದು ರಿಸ್ಕ್ ತೆಗೆದುಕೊಂಡು ಕಷ್ಟಪಡುವ ಅಗತ್ಯವಿರಲಿಲ್ಲ. ಆದರೆ ಮುಂಜಾನೆ 4 ಗಂಟೆಗೆ ಎದ್ದು, ಕಠಿಣ ತರಬೇತಿ ಪಡೆದು ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದ. ಒಬ್ಬ ನಟನಾಗಿ ಅವನ ಈ ಸಮರ್ಪಣಾ ಮನೋಭಾವ ನನಗೆ ಅಪಾರ ಹೆಮ್ಮೆ ತಂದಿದೆ" ಎಂದು ಹೇಳಿಕೊಂಡಿದ್ದರು.