Sai Pallavi: ʼರಾಮಾಯಣʼ ಚಿತ್ರದಲ್ಲಿ ಸೀತೆಯಾದ ಸಾಯಿ ಪಲ್ಲವಿ; ಶೂಟಿಂಗ್ ಆರಂಭ
ನಿತೇಶ್ ತಿವಾರಿ ನಿರ್ದೇಶನದ ಬಾಲಿವುಡ್ ಚಿತ್ರ ʼರಾಮಾಯಣʼದಲ್ಲಿ ಸೀತೆ ಪಾತ್ರಕ್ಕೆ ಬಹುಭಾಷಾ ನಟಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದು, ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅಶೋಕವನದಲ್ಲಿ ರಾಮನ ಬರುವಿಕೆಗಾಗಿ ಕಾಯುವ ಸೀತೆ ಪಾತ್ರವನ್ನು ಸಾಯಿ ಪಲ್ಲವಿ ನಿರ್ವಹಿಸುತ್ತಿದ್ದು, ಇದರ ಫೋಟೊಗಳು ಲೀಕ್ ಆಗಿವೆ.


ಮುಂಬೈ: ಬಾಲಿವುಡ್ ನ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾಗಳಲ್ಲಿ ರಾಮಾಯಣ (Ramayan) ಕೂಡ ಒಂದು. ಬಾಲಿವುಡ್ ಖ್ಯಾತ ನಟ ರಣ್ಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್, ನಟಿ ಸಾಯಿ ಪಲ್ಲವಿ ನಟಿಸುತ್ತಿರುವ ʼರಾಮಾಯಣʼ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ನಿತೇಶ್ ತಿವಾರಿ ನಿರ್ದೇಶನದ ʼರಾಮಾಯಣʼದಲ್ಲಿ ಸೀತೆಯ ಪಾತ್ರಕ್ಕೆ ನಟಿ ಸಾಯಿ ಪಲ್ಲವಿ (Sai Pallavi) ಬಣ್ಣ ಹಚ್ಚಿದ್ದಾರೆ. ನಟಿ ಸಾಯಿ ಪಲ್ಲವಿಯ ಅಶೋಕವನದಲ್ಲಿ ರಾಮನ ಬರುವಿಕೆಗಾಗಿ ಕಾದು ಕೂತಿರುವ ಸೀತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದುಮ ಈ ದೃಶ್ಯದ ಕೆಲವು ಫೋಟೊಗಳು ಇತ್ತೀಚೆಗೆ ಲೀಕ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ʼರಾಮಾಯಣʼ ಚಿತ್ರದ ಶೂಟಿಂಗ್‌ನಲ್ಲಿ ನಟಿ ಸಾಯಿ ಪಲ್ಲವಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ ಅವರು ಕಿತ್ತಳೆ ಬಣ್ಣದ ಸೀರೆಯಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಸೀತಾ ಮಾತೆಯನ್ನು ಹೋಲುವ ಕೇಶವಿನ್ಯಾಸ , ಸರಳತೆ ನೋಡುಗರ ಗಮನ ಸೆಳೆದಿದೆ. ಸಾಯಿ ಪಲ್ಲವಿ ಸದ್ಯ ಲಂಕಾದಲ್ಲಿ ಬಂಧಿಯಾಗಿರುವ ಸೀತಾಮಾತೆಯ ದೃಶ್ಯದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಟ ಸನ್ನಿ ಡಿಯೋಲ್ ಕೂಡ ʼರಾಮಾಯಣʼದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಇತ್ತೀಚೆಗಷ್ಟೇ ನಟ ಸನ್ನಿ ಡಿಯೋಲ್ ಸಂದರ್ಶನವೊಂದರಲ್ಲಿ ತಾವು ʼರಾಮಾಯಣʼ ಸಿನಿಮಾದಲ್ಲಿ ಹನುಮಂತನ ಪಾತ್ರ ನಿರ್ವಹಿಸುದನ್ನು ಖಾತರಿ ಪಡಿಸಿದ್ದರು. ಜತೆಗೆ ತಮ್ಮ ಪಾತ್ರದ ಚಿತ್ರೀಕರಣ ಇನ್ನು ಕೂಡ ಆರಂಭ ಆಗಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.

ಇದನ್ನು ಓದಿ: Saipallavi: ಮದ್ವೆ ಆಗಿ, ಮಕ್ಕಳು ಇರೋ ನಟನ ಜತೆ ಸಾಯಿ ಪಲ್ಲವಿ ಡೇಟಿಂಗ್?
ʼಕೆಜಿಎಫ್ʼ ಸರಣಿ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯರಾಗಿರುವ ನಟ ರಾಕಿಂಗ್ ಸ್ಟಾರ್ ಯಶ್ ʼರಾಮಾಯಣʼ ಸಿನಿಮಾದ ಶೂಟಿಂಗ್‌ನ ದೃಶ್ಯಕ್ಕಾಗಿ ಇತ್ತೀಚೆಗಷ್ಟೆ ಮುಂಬೈಗೆ ತೆರಳಿದ್ದರು. ಸದ್ಯ ʼರಾಮಾಯಣʼದ ಜತೆಗೆ ʼಟಾಕ್ಸಿಕ್ʼ ಸಿನಿಮಾದಲ್ಲಿಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಯಶ್ ʼಕೆಜಿಎಫ್ ಚಾಪ್ಟರ್ 3ʼ ಕೂಡ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ʼರಾಮಾಯಣʼ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀ ರಾಮನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮಂಥರೆ ಪಾತ್ರದಲ್ಲಿ ಶೀಬಾ ಚಡ್ಡಾ, ಕೈಕೇಯಿ ಪಾತ್ರದಲ್ಲಿ ಲಾರಾ ದತ್ತ ನಟಿಸುತ್ತಿದ್ದಾರೆ. ಇನ್ನು ಯಶ್ ರಾವಣನ ಪಾತ್ರದಲ್ಲಿ ಮತ್ತು ಸನ್ನಿ ಡಿಯೋಲ್ ರಾಮಧೂತ ಹನುಮಂತನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರವನ್ನು ಎರಡು ಭಾಗಗಳ ಸರಣಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಮೊದಲ ಭಾಗವು 2026ರ ದೀಪಾವಳಿಯಲ್ಲಿ ಮತ್ತು ಎರಡನೇ ಭಾಗವು 2027ರ ದೀಪಾವಳಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.