ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಬಾಚಿಕೊಂಡ ರವಿತೇಜ ನಟನೆಯ ‘ಇರುಮುಡಿ’ ಒಟಿಟಿಗೆ ಎಂಟ್ರಿ! ಯಾವಾಗ, ಎಲ್ಲಿ ವೀಕ್ಷಿಸಬಹುದು?
Irumudi OTT Release Date: ʻಮಾಸ್ ಮಹಾರಾಜʼ ರವಿತೇಜ ಹಾಗೂ ಪ್ರಿಯಾ ಭವಾನಿ ಶಂಕರ್ ನಟಿಸಿರುವ ‘ಇರುಮುಡಿ’ ಸಿನಿಮಾವು ಸೆಪ್ಟೆಂಬರ್ 18ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. 45 ಕೋಟಿ ವೆಚ್ಚದಲ್ಲಿ ತಯಾರಾಗಿ 208 ಕೋಟಿ ಬಾಚಿದ ಈ ಚಿತ್ರ, ಮದ್ಯವ್ಯಸನಿ ಅಪ್ಪ ಹಾಗೂ ಮುದ್ದು ಮಗಳ ನಡುವಿನ ಭಾವನಾತ್ಮಕ ಪಯಣವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದೆ.
-
ʻಮಾಸ್ ಮಹಾರಾಜʼ ರವಿತೇಜ ಹಾಗೂ ಪ್ರಿಯಾ ಭವಾನಿ ಶಂಕರ್ ನಟಿಸಿರುವ ‘ಇರುಮುಡಿ’ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಗೆಲುಗು ಕಂಡಿದೆ. ಚಿತ್ರಮಂದಿರಗಳಲ್ಲಿ ಸದ್ದು ಮಾಡಿದ ಬೆನ್ನಲ್ಲೇ ಈಗ ಒಟಿಟಿ ಅಂಗಳಕ್ಕೆ ಲಗ್ಗೆಯಿಡಲು ಈ ಸಿನಿಮಾ ಸಜ್ಜಾಗಿದೆ. ಶಿವ ನಿರ್ವಾಣ ನಿರ್ದೇಶನದ ಹಾಗೂ ‘ಮೈತ್ರಿ ಮೂವಿ ಮೇಕರ್ಸ್’ ಬ್ಯಾನರ್‌ನಡಿ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ನಿರ್ಮಿಸಿದ ಈ ಚಿತ್ರವು ಆಗಸ್ಟ್ 21 ರಂದು ತೆರೆಕಂಡು ಪ್ರೇಕ್ಷಕರ ಮನಗೆದ್ದಿತ್ತು.
ಇದೀಗ ಚಿತ್ರಮಂದಿರಗಳಲ್ಲಿ ಯಶಸ್ವಿ 4ನೇ ವಾರಕ್ಕೆ ಕಾಲಿಟ್ಟಿರುವ ನಡುವೆಯೇ, ಸೆಪ್ಟೆಂಬರ್ 18 ರಿಂದ ‘ನೆಟ್‌ಫ್ಲಿಕ್ಸ್’ನಲ್ಲಿ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಸ್ಟ್ರೀಮಿಂಗ್ ಆರಂಭವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
Irumudi OTT: ರವಿತೇಜ ನಟನೆಯ ತೆಲುಗು ಸಿನಿಮಾ ‘ಇರುಮುಡಿ’ ಒಟಿಟಿ ರಿಲೀಸ್ ಯಾವಾಗ?
ಈ ಸಿನಿಮಾದ ಕಥೆ ಏನು?
ತಂದೆ ಮತ್ತು ಪುಟ್ಟ ಮಗಳ ನಡುವಿನ ಭಾವನಾತ್ಮಕ ಅನುಬಂಧವೇ ಈ ಚಿತ್ರದ ಜೀವಾಳ. ಮದ್ಯವ್ಯಸನಿಯಾದ ತಂದೆಯೊಬ್ಬ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ, 40 ದಿನಗಳ ಕಾಲ ಕುಡಿತದಿಂದ ಸಂಪೂರ್ಣ ದೂರವಿರುವ ಕಥಾಹಂದರವನ್ನು ನಿರ್ದೇಶಕ ಶಿವ ನಿರ್ವಾಣ ಅತ್ಯಂತ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಮಗಳು ಮತ್ತು ತಂದೆಯ ನಡುವಿನ ಬಾಂಧವ್ಯ ಪ್ರೇಕ್ಷಕರ ಕಣ್ಣಂಚಲಿ ನೀರು ತರಿಸುತ್ತದೆ.
ಪತ್ನಿ ಕಾವೇರಿ ಪಾತ್ರದಲ್ಲಿ ಪ್ರಿಯಾ ಭವಾನಿ ಶಂಕರ್, ಮಗಳಾಗಿ ಬೇಬಿ ನಕ್ಷತ್ರ, ಅಯ್ಯಪ್ಪ ಸ್ವಾಮಿ ಗುರುಸ್ವಾಮಿ ಪಾತ್ರದಲ್ಲಿ ಹಿರಿಯ ನಟ ಸಾಯಿಕುಮಾರ್ ಹಾಗೂ ಶಾಲಾ ಶಿಕ್ಷಕಿಯ ಪಾತ್ರದಲ್ಲಿ ಸ್ವಾಸಿಕಾ ಅದ್ಭುತ ಅಭಿನಯ ನೀಡಿದ್ದಾರೆ. ಆಂಧ್ರಪ್ರದೇಶ-ಒಡಿಶಾ ಗಡಿಯಲ್ಲಿರುವ ಸಣ್ಣ ಪಟ್ಟಣ ಸಿಲೇರು ಸೇರಿದಂತೆ ನೈಜ ತಾಣಗಳಲ್ಲೇ ಬಹುತೇಕ ಚಿತ್ರೀಕರಣ ನಡೆಸಿರುವುದು ಚಿತ್ರದ ಗಟ್ಟಿತನವನ್ನು ಹೆಚ್ಚಿಸಿದೆ.
ರವಿತೇಜ ಅವರ ವೃತ್ತಿಜೀವನದ ಅತ್ಯುತ್ತಮ ಹಾಗೂ ಮಹತ್ವದ ಮೈಲಿಗಲ್ಲಾಗಿ ಹೊರಹೊಮ್ಮಿರುವ ‘ಇರುಮುಡಿ’, ಈ ವರ್ಷದ ಅತಿ ದೊಡ್ಡ ಲಾಭದಾಯಕ ಚಿತ್ರಗಳಲ್ಲಿ ಒಂದಾಗಿದೆ. ಕೇವಲ 45 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಕೇವಲ 24 ದಿನಗಳನ್ನು ಪೂರೈಸುವಷ್ಟರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 208.18 ಕೋಟಿ ಕಲೆಕ್ಷನ್ ಬಾಚಿಕೊಂಡಿದೆ.
ಈ ಮೂಲಕ 2026ರ ಟಾಲಿವುಡ್‌ನಲ್ಲಿ ‘ಮನ ಶಂಕರ ವರಪ್ರಸಾದ್ ಗಾರು’, ‘ದಿ ರಾಜಾ ಸಾಬ್’ ಮತ್ತು ‘ಪೆದ್ದಿ’ ಚಿತ್ರಗಳ ನಂತರ ಅಧಿಕೃತವಾಗಿ ₹200 ಕೋಟಿ ಕ್ಲಬ್ ಪ್ರವೇಶಿಸಿದ ನಾಲ್ಕನೇ ಹೆಗ್ಗಳಿಕೆಯ ಸಿನಿಮಾ ಎಂಬ ದಾಖಲೆಗೂ ಪಾತ್ರವಾಗಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಡುವೆಯೇ ಡಿಜಿಟಲ್ ಜಗತ್ತಿಗೂ ಲಗ್ಗೆಯಿಡುತ್ತಿರುವುದು ಜಾಗತಿಕ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.