ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಲ್ವರ್‌ಸ್ಟೋನ್‌ನಲ್ಲಿ ತಮಿಳುನಾಡು ಸಿಎಂ ವಿಜಯ್ ಜೊತೆ ತ್ರಿಷಾ ಕೃಷ್ಣನ್ ಪ್ರತ್ಯಕ್ಷ: ಅಜಿತ್ ರೇಸಿಂಗ್ ಟ್ರ್ಯಾಕ್‌ನಲ್ಲಿ ವಿಡಿಯೋ ವೈರಲ್‌

ಸಿಲ್ವರ್‌ಸ್ಟೋನ್ ಸರ್ಕ್ಯೂಟ್‌ನಲ್ಲಿ ನಡೆದ ‘ಮಿಚೆಲಿನ್ ಲೆ ಮ್ಯಾನ್ಸ್ ಕಪ್’ ರೇಸ್‌ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಹಾಗೂ ನಟಿ ತ್ರಿಷಾ ಕೃಷ್ಣನ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ವಿಡಿಯೋ ವೈರಲ್‌ ಆಗಿದೆ. ಅಜಿತ್ ಕುಮಾರ್ ಸ್ಪರ್ಧಿಸಿದ ಈ ಪಂದ್ಯಾವಳಿಗೆ ವಿಜಯ್ ಚಾಲನೆ ನೀಡಿದ್ದು, ಗ್ಯಾಲರಿಯಲ್ಲಿ ತ್ರಿಷಾ ಜೊತೆ ನಿಂತು ರೇಸ್ ವೀಕ್ಷಿಸಿದರು.

ಸಿಲ್ವರ್‌ಸ್ಟೋನ್‌ನಲ್ಲಿ ಸಿಎಂ ವಿಜಯ್ -‌ ತ್ರಿಷಾ ಜೋಡಿ ವಿಡಿಯೋ ವೈರಲ್!

-

Avinash GR
Avinash GR Sep 13, 2026 1:12 PM

ಯುನೈಟೆಡ್ ಕಿಂಗ್‌ಡಮ್‌ನ (UK) ಪ್ರತಿಷ್ಠಿತ ಸಿಲ್ವರ್‌ಸ್ಟೋನ್ ಸರ್ಕ್ಯೂಟ್‌ನಲ್ಲಿ ನಡೆದ ‘ಮಿಚೆಲಿನ್ ಲೆ ಮ್ಯಾನ್ಸ್ ಕಪ್’ ಕಾರ್ ರೇಸಿಂಗ್ ಪಂದ್ಯಾವಳಿಯಲ್ಲಿ ಕಾಲಿವುಡ್‌ನ ಅಪರೂಪದ ತಾರಾ ಸಮಾಗಮ ಕಂಡುಬಂದಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಈ ರೇಸ್‌ಗೆ ಅಧಿಕೃತ ಚಾಲನೆ ನೀಡಿ ಗಮನ ಸೆಳೆದರೆ, ಮತ್ತೊಂದೆಡೆ ನಟ ಅಜಿತ್ ಕುಮಾರ್ ತಮ್ಮ ರೇಸಿಂಗ್ ತಂಡದೊಂದಿಗೆ ಕಣಕ್ಕಿಳಿದು ಅಬ್ಬರಿಸಿದ್ದಾರೆ.

ಆದರೆ ಈ ಇಡೀ ಕಾರ್ಯಕ್ರಮದಲ್ಲಿ ಸಿಎಂ ವಿಜಯ್ ಅವರ ಜೊತೆಗೆ ನಟಿ ತ್ರಿಷಾ ಕೃಷ್ಣನ್ ಒಟ್ಟಿಗೆ ಕಾಣಿಸಿಕೊಂಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮತ್ತು ಚರ್ಚೆಗೆ ಕಾರಣವಾಗಿದೆ.

ವಿಜಯ್‌ ಜೊತೆ ರೇಸ್‌ ವೀಕ್ಷಿಸಿದ ತ್ರಿಷಾ

ರೇಸಿಂಗ್ ಸರ್ಕ್ಯೂಟ್‌ಗೆ ಆಗಮಿಸಿದ ನಟಿ ತ್ರಿಷಾ ಕೃಷ್ಣನ್, ಸಿಎಂ ವಿಜಯ್ ಜೊತೆಗೇ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತು ಅಜಿತ್ ಅವರ ರೇಸಿಂಗ್ ಸಾಹಸವನ್ನು ಕಣ್ತುಂಬಿಕೊಂಡರು. ಜೀನ್ಸ್, ಕಪ್ಪು ಟೀ-ಶರ್ಟ್ ಮತ್ತು ಬ್ರೌನ್ ಜಾಕೆಟ್ ಧರಿಸಿ ವಿಜಯ್ ಮಿಂಚಿದರೆ, ಅವರಿಗೆ ಹೊಂದಿಕೆಯಾಗುವಂತೆ ಜೀನ್ಸ್, ಬಿಳಿ ಟೀ-ಶರ್ಟ್ ಹಾಗೂ ಬ್ರೌನ್ ಜಾಕೆಟ್‌ನಲ್ಲಿ ತ್ರಿಷಾ ಕಂಗೊಳಿಸಿದರು.

ಈ ಇಬ್ಬರೂ ತಾರೆಯರು ಸಚಿವ ಆಧವ್ ಅರ್ಜುನ್ ಜೊತೆಗೂಡಿ ರೇಸ್ ವೀಕ್ಷಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿದ್ದು, ನೆಟ್ಟಿಗರು ಈ ವಿಡಿಯೋ ಕ್ಲಿಪ್‌ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಸಿಲ್ವರ್‌ಸ್ಟೋನ್‌ಗೆ ಬರುವ ಮುನ್ನ ಲಂಡನ್‌ನಲ್ಲಿ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಜೊತೆಗೂ ತ್ರಿಷಾ ಕಾಲ ಕಳೆದಿದ್ದು, ರಾಧಿಕಾ ಕೂಡ ಅಜಿತ್‌ಗೆ ಬೆಂಬಲ ಸೂಚಿಸಲು ಈ ರೇಸ್‌ಗೆ ಸಾಕ್ಷಿಯಾಗಿದ್ದರು.

Vijay-Trisha: ವಿಚ್ಛೇದನ ಪ್ರಕರಣದ ನಡುವೆ ವಿಜಯ್-ತ್ರಿಷಾ ಬಗ್ಗೆ ಈ ಬಾಲಿವುಡ್ ಸೆಲೆಬ್ರಿಟಿ ಭರ್ಜರಿ ಸಪೋರ್ಟ್!

ಕಳೆದ ವರ್ಷದ ಆ ಘಟನೆ ನೆನಪಾಯ್ತು

ವಿಜಯ್ ಹಾಗೂ ತ್ರಿಷಾ ಕಾಲಿವುಡ್‌ನ ಅತ್ಯಂತ ಹಿಟ್ ತೆರೆಜೋಡಿಗಳಲ್ಲಿ ಒಂದಾಗಿದ್ದು, 'ಗಿಲ್ಲಿ', 'ತಿರುಪಾಚಿ', 'ಆದಿ', 'ಕುರುವಿ' ಹಾಗೂ 'ಲಿಯೋ' ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಐತಿಹಾಸಿಕ ಸಮಾರಂಭದಲ್ಲೂ ತ್ರಿಷಾ ಭಾಗಿಯಾಗಿ, ವಿಜಯ್ ಕುಟುಂಬದ ಜೊತೆ ನಿಂತು ಭಾವುಕರಾಗಿದ್ದ ಕ್ಷಣಗಳು ಸುದ್ದಿಯಾಗಿದ್ದವು. ಇದೀಗ ವಿದೇಶಿ ನೆಲದಲ್ಲೂ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ನಡುವೆ ಹೊಸ ಕುತೂಹಲಕ್ಕೆ ನಾಂದಿ ಹಾಡಿದೆ.

2025ರ ಜುಲೈನಲ್ಲಿ ಬೋಸ್ಟನ್ ಕೋಲ್ಡ್‌ಪ್ಲೇ ಕನ್ಸರ್ಟ್ ವೇಳೆ ಆಂಡಿ ಬೈರಾನ್ ಮತ್ತು ಕ್ರಿಸ್ಟಿನ್ ಕ್ಯಾಬಟ್ ಕ್ಯಾಮೆರಾ ಕಣ್ಣಿಗೆ ಬಿದ್ದ ಘಟನೆಯನ್ನು ಉಲ್ಲೇಖಿಸಿ ನೆಟ್ಟಿಗರು ಈ ಜೋಡಿಯ ವಿಡಿಯೋಗೆ ತಮಾಷೆಯ ಹೋಲಿಕೆಗಳನ್ನು ಮಾಡುತ್ತಿದ್ದಾರೆ.

ವಿಜಯ್‌ - ಅಜಿತ್‌ ಮಹಾಮಿಲನ

ಇದೇ ವೇಳೆ, ಕಾಲಿವುಡ್‌ನ ಇಬ್ಬರು ಧ್ರುವತಾರೆಗಳಾದ ವಿಜಯ್ ಮತ್ತು ಅಜಿತ್ ಕುಮಾರ್ ಅವರ ಭೇಟಿ ರೇಸ್‌ಟ್ರ್ಯಾಕ್‌ನಲ್ಲಿ ಭಾವನಾತ್ಮಕ ವಾತಾವರಣ ನಿರ್ಮಿಸಿತು. ರೇಸಿಂಗ್ ಸೂಟ್‌ನಲ್ಲಿದ್ದ ಅಜಿತ್ ಬಳಿ ನಗುತ್ತಾ ಓಡೋಡಿ ಬಂದ ವಿಜಯ್, ಅವರನ್ನು ಪ್ರೀತಿಯಿಂದ ತಬ್ಬಿಕೊಂಡು ಶುಭ ಹಾರೈಸಿದರು. ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ತಮ್ಮ ಪಕ್ಷವಾದ ‘ಟಿವಿಕೆ’ ಪರ ಘೋಷಣೆ ಕೂಗಿದಾಗ, "ಇದು ನನ್ನ ವೇದಿಕೆಯಲ್ಲ, ಅಜಿತ್ ಅವರಿಗೆ ಪ್ರೋತ್ಸಾಹ ನೀಡಿ" ಎಂದು ವಿಜಯ್ ಮನವಿ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ರೇಸ್ ಮುಗಿದ ಬಳಿಕ, ವಿಜಯ್ ತಮ್ಮ ಟಿವಿಕೆ ಪಕ್ಷದ ಬಣ್ಣಗಳ ಕಸ್ಟಮೈಸ್ಡ್ ರೇಸಿಂಗ್ ಸೂಟ್ ಧರಿಸಿ, ಅಜಿತ್ ಕುಮಾರ್ ಜೊತೆಗೂಡಿ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಫೋಟೋಗಳಿಗೆ ಪೋಸ್ ನೀಡುವ ಮೂಲಕ ಈ ಐತಿಹಾಸಿಕ ಭೇಟಿಗೆ ಅದ್ಧೂರಿ ಮುಕ್ತಾಯ ಹಾಡಿದರು.