ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಟ ದರ್ಶನ್‌ಗೆ ಸಣ್ಣ ರಿಲೀಫ್: ಸಾಕ್ಷಿ ಹೇಳಲು ಕೋರ್ಟ್‌ತನಕ ಬಂದು ಜೈಲಿಗೆ ವಾಪಸಾದ ಪ್ರದೋಷ್; ಅಷ್ಟಕ್ಕೂ ಆಗಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಎ-14 ಆರೋಪಿ ಪ್ರದೋಷ್ ಸಾಕ್ಷಿ ಹೇಳುವ ಪ್ರಕ್ರಿಯೆ ಸದ್ಯ ಮುಂದೂಡಿಕೆ ಆಗಿದೆ. ದರ್ಶನ್ ಪರ ವಕೀಲರ ತುರ್ತು ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದ ಹಿನ್ನೆಲೆಯಲ್ಲಿ, ಹೇಳಿಕೆ ದಾಖಲಿಸಲು ನ್ಯಾಯಾಲಯಕ್ಕೆ ಬಂದಿದ್ದ ಪ್ರದೋಷ್ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ.

Darshan Case: ಸಾಕ್ಷಿ ಹೇಳಲು ಕೋರ್ಟ್‌ತನಕ ಬಂದು ಜೈಲಿಗೆ ವಾಪಸಾದ ಪ್ರದೋಷ್!

-

Avinash GR
Avinash GR Sep 2, 2026 3:01 PM

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-14 ಆರೋಪಿಯಾಗಿರುವ ಪ್ರದೋಷ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆಗೆ ಸದ್ಯ ಬ್ರೇಕ್ ಬಿದ್ದಿದ್ದು, ನಟ ದರ್ಶನ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಈ ಸಂಬಂಧ ಹೈಕೋರ್ಟ್‌ನ ಆದೇಶ ಬಾಕಿ ಇರುವ ಹಿನ್ನೆಲೆಯಲ್ಲಿ, ವಿಚಾರಣಾ ನ್ಯಾಯಾಲಯಕ್ಕೆ ಸಾಕ್ಷಿ ನುಡಿಯಲು ಬಂದಿದ್ದ ಪ್ರದೋಷ್ ಯಾವುದೇ ಹೇಳಿಕೆ ದಾಖಲಿಸದೆ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ವಾಪಸಾಗಿದ್ದಾರೆ.

ದರ್ಶನ್ ಪರ ವಕೀಲರ ಪ್ರಬಲ ವಾದ

ಪ್ರಕರಣದಲ್ಲಿ ಪ್ರದೋಷ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಅನುಮೋದಿಸಿರುವ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್‌ಗೆ ತುರ್ತು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಪ್ರತ್ಯಕ್ಷ ಸಾಕ್ಷಿಗಳಿದ್ದರೂ, ನಿಯಮಬಾಹಿರವಾಗಿ ಪ್ರದೋಷ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಮಾಡಿಕೊಳ್ಳಲಾಗಿದೆ; ಬೇರೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದಾಗ ಮಾತ್ರ ಇಂತಹ ಪ್ರಕ್ರಿಯೆಗೆ ಅವಕಾಶವಿರುತ್ತದೆ ಎಂದು ದರ್ಶನ್ ಪರ ವಕೀಲರು ಮಂಗಳವಾರ (ಸೆ. 1) ಸಂಜೆ ಹೈಕೋರ್ಟ್‌ನಲ್ಲಿ ಬಲವಾದ ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಪೀಠವು ತನ್ನ ತೀರ್ಪನ್ನು ಬುಧವಾರಕ್ಕೆ (ಸೆ. 2) ಕಾಯ್ದಿರಿಸಿತ್ತು.

ಪ್ರಕ್ರಿಯೆ ಮುಂದೂಡುವಂತೆ ಎಸ್‌ಪಿಪಿ ಮನವಿ

ಇತ್ತ ವಿಚಾರಣಾ ನ್ಯಾಯಾಲಯವು ಸೆಪ್ಟೆಂಬರ್ 2 ರಂದೇ ಹೇಳಿಕೆ ದಾಖಲಿಸಲು ಪ್ರದೋಷ್‌ಗೆ ಸಮನ್ಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ, ಇಂದು ಕಾಮಾಕ್ಷಿಪಾಳ್ಯ ಪೊಲೀಸರು ಆತನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೆಂಗಳೂರಿನ 59ನೇ ಸಿಸಿಎಚ್‌ (CCH) ಕೋರ್ಟ್‌ಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆತಂದಿದ್ದರು. ಆದರೆ, ದರ್ಶನ್ ಸಲ್ಲಿಸಿರುವ ಅರ್ಜಿ ಕುರಿತಂತೆ ಹೈಕೋರ್ಟ್‌ನ ಅಧಿಕೃತ ಆದೇಶ ಇನ್ನೂ ಪ್ರಕಟವಾಗದ ಕಾರಣ, ಪ್ರದೋಷ್ ಹೇಳಿಕೆ ದಾಖಲು ಪ್ರಕ್ರಿಯೆಯನ್ನು ಮುಂದೂಡುವಂತೆ ಎಸ್‌ಪಿಪಿ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಮನವಿ ಮಾಡಿದರು.

ನಟ ದರ್ಶನ್‌ಗೆ ಆಪ್ತ ಸ್ನೇಹಿತನಿಂದಲೇ ದೊಡ್ಡ ಸಂಕಷ್ಟ‌; ಮಾಫಿ ಸಾಕ್ಷಿಯಾಗಲು ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್! ಆದ್ರೆ, ಈ ಷರತ್ತುಗಳನ್ನು ಪಾಲಿಸಲೇಬೇಕು!

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವಾಪಸ್

ಪ್ರಾಸಿಕ್ಯೂಷನ್ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು. ಪರಿಣಾಮವಾಗಿ, ಹೇಳಿಕೆ ದಾಖಲಿಸಲು ಕೋರ್ಟ್ ಹಾಲ್‌ವರೆಗೆ ಬಂದಿದ್ದ ಪ್ರದೋಷ್‌ನನ್ನು ಪೊಲೀಸರು ಮತ್ತೆ ಭದ್ರತೆಯ ನಡುವೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವಾಪಸ್ ಕರೆದೊಯ್ದರು. ಹೈಕೋರ್ಟ್ ನೀಡಲಿರುವ ಅಂತಿಮ ಆದೇಶದ ಮೇಲೆ ಪ್ರದೋಷ್ ಸಾಕ್ಷ್ಯದ ಭವಿಷ್ಯ ನಿರ್ಧಾರವಾಗಲಿದೆ.