ಅಂಜನಾದ್ರಿ ಬೆಟ್ಟಕ್ಕೆ ತೆಲುಗು ನಿರ್ಮಾಪಕರನ್ನು ಕರೆತಂದ ರಿಷಬ್ ಶೆಟ್ಟಿ; ʻಜೈ ಹನುಮಾನ್ʼ ಬಗ್ಗೆ ʻಡಿವೈನ್ ಸ್ಟಾರ್ʼ ಹೇಳಿದ್ದೇನು?
Jai Hanuman Movie: ರಿಷಬ್ ಶೆಟ್ಟಿ ಅವರ ಜೈ ಹನುಮಾನ್ ಚಿತ್ರದ ಮುಹೂರ್ತವು ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಅದ್ದೂರಿಯಾಗಿ ನೆರವೇರಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಆಸೆಯಂತೆ ಹನುಮಂತನ ಜನ್ಮಸ್ಥಳದಲ್ಲೇ ಈ ಕಾರ್ಯಕ್ರಮ ನಡೆದಿದ್ದು, ಇದು ಹನುಮನಿಗೆ ಮಾಡುವ ಸೇವೆ ಎಂದಿದ್ದಾರೆ. ಈ ಚಿತ್ರಕ್ಕೆ ಆಸ್ಕರ್ ವಿಜೇತ ಎಂ. ಎಂ. ಕೀರವಾಣಿ ಅವರ ಸಂಗೀತ ನಿರ್ದೇಶನವಿದೆ.
-
ʻಕಾಂತಾರ: ಚಾಪ್ಟರ್ 1ʼ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ತಮ್ಮ ಮುಂದಿನ ಬಹುನಿರೀಕ್ಷಿತ ಜೈ ಹನುಮಾನ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ತೆಲುಗಿನ ಪ್ರಶಾಂತ್ ವರ್ಮಾ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಮುಹೂರ್ತ ನೆರವೇರಿದೆ.
ಹನುಮಂತ ಹುಟ್ಟಿದ ಜಾಗದಲ್ಲೇ ಮುಹೂರ್ತ
"ಅಂಜನಾದ್ರಿ ಬೆಟ್ಟದಲ್ಲಿ ಹನುಮಾನ್ ಸಿನಿಮಾವನ್ನು ಮುಹೂರ್ತ ಮಾಡುತ್ತಿದ್ದೇವೆ. ಮೈತ್ರಿ ಮೂವೀ ಮೇಕರ್ಸ ಅವರು ನಿರ್ಮಾಣ ಮಾಡುತ್ತಿದ್ದಾರೆ. ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಅಡಿಯಲ್ಲಿ ಪ್ರಶಾಂತ್ ವರ್ಮಾ ಅವರು ನಿರ್ದೇಶಿಸುತ್ತಿರುವ ಜೈ ಹನುಮಾನ್ ಚಿತ್ರದ ಮುಹೂರ್ತವನ್ನು ಅಂಜನಾದ್ರಿ ಬೆಟ್ಟದಲ್ಲೇ ಮಾಡೋಣ ಎಂದು ನಾನು ಆರಂಭದಲ್ಲೇ ಹೇಳಿದ್ದೆ. ಇದು ಹನುಮಂತ ಹುಟ್ಟಿರುವ ಜಾಗ. ಇಲ್ಲಿಯೇ ಮಾಡೋಣ ಎಂದಿದ್ದೆ, ಅಂತೆಯೇ ಇಂದು ಈ ಸಿನಿಮಾದ ಮುಹೂರ್ತ ಇಲ್ಲಿ ನಡೆದಿದೆ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಅಂಜನಾದ್ರಿ ಬೆಟ್ಟದಲ್ಲಿ ಶುರುವಾಯ್ತು ರಿಷಬ್ ಶೆಟ್ಟಿ ಹೊಸ ಸಿನಿಮಾ; ʻಜೈ ಹನುಮಾನ್ʼ ಚಿತ್ರಕ್ಕೆ ಅದ್ದೂರಿ ಮುಹೂರ್ತ
"ಎಲ್ಲರಿಗೂ ಖುಷಿ ಆಗಿದೆ. ಹನುಮಂತನ ಜನ್ಮಸ್ಥಳದಲ್ಲಿ ಸಿನಿಮಾಗೆ ಮುಹೂರ್ತ ಮಾಡಿರುವುದು ನಮಗೆ ಖುಷಿ ನೀಡಿದೆ. ಹನುಮಂತನಿಗೆ ಒಂದು ಸೇವೆ ಎಂದುಕೊಂಡು ಈ ಸಿನಿಮಾವನ್ನು ಆರಂಭಿಸಿದ್ದೇವೆ. ನಾನು ಈ ಮೊದಲು ಕೂಡ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದೆ. ಪ್ರಶಾಂತ್ ವರ್ಮಾ ಅವರು ಒಂದು ಭಕ್ತಿಪ್ರಧಾನ ಕಥೆ ಮಾಡಿಕೊಂಡಿದ್ದಾರೆ. ಈ ಸಿನಿಮಾವನ್ನು ರಾಮನ, ಹನುಮನ ಭಕ್ತರಿಗೆ ತಲುಪಿಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ" ಎಂದು ರಿಷಬ್ ಶೆಟ್ಟಿ.
Rishab Shetty: ಹೊಸ ಸಿನಿಮಾಕ್ಕೆ ರಿಷಬ್ ಸಜ್ಜು! ಶೂಟಿಂಗ್ ಯಾವಾಗ? ಇಲ್ಲಿದೆ ಅಪ್‌ಡೇಟ್
ಇನ್ನು, ಜೈ ಹನುಮಾನ್ ಸಿನಿಮಾಗೆ ಟೀ ಸಿರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ಕ್ಲ್ಯಾಪ್ ಮಾಡಿದರು. ವಿತರಕ ಅನಿಲ್ ಥಡಾನಿ ಕ್ಯಾಮೆರಾಗೆ ಚಾಲನೆ ನೀಡಿದರು. ರಿಷಬ್ ಶೆಟ್ಟಿ ಜೊತೆ ಪತ್ನಿ ಪ್ರಗತಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ವರ್ಮಾ, ನಿರ್ಮಾಪಕರಾದ ನವೀನ್ ಯೆರ್ನೇನಿ ಮತ್ತು ವೈ ರವಿ ಶಂಕರ್, ನಟ ತೇಜ್ ಸಜ್ಜಾ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದು ಸೂಪರ್ ಹಿಟ್ 'ಹನುಮಾನ್' ಚಿತ್ರದ ಮುಂದುವರಿದ ಭಾಗವಾಗಿದೆ. ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ.
ಅಂದಹಾಗೆ, ಬಾಹುಬಲಿ, ಈಗ, ಆರ್‌ಆರ್‌ಆರ್ ಸಿನಿಮಾಗಳ ಸಂಗೀತ ನಿರ್ದೇಶಕ, ಆಸ್ಕರ್ ಪ್ರಶಸ್ತಿ ವಿಜೇತ ಎಂ. ಎಂ. ಕೀರವಾಣಿ ಅವರು ಜೈ ಹನುಮಾನ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಎಸ್. ತಿರು ಅವರ ಛಾಯಾಗ್ರಾಹಣವಿದೆ.