ರಿತ್ವಿಕ್ ಮಠದ್ - ಚೈತ್ರಾ ಆಚಾರ್ ಜೋಡಿಯ 'ಮಾರ್ನಮಿ' ಚಿತ್ರದ ರಿಲೀಸ್ ಡೇಟ್ ಫಿಕ್ಸ್; ಕರಾವಳಿಯ ಸಂಸ್ಕೃತಿಯ ಸಿನಿಮಾಕ್ಕೆ ʻಕಿಚ್ಚʼ ಸುದೀಪ್ ಸಾಥ್!
Marnami Movie Release Date: ರಿತೀಶ್ ಶೆಟ್ಟಿ ನಿರ್ದೇಶನದ ಮಾರ್ನಮಿ ಚಿತ್ರವು ಕರಾವಳಿಯ ಆಚರಣೆಗಳು, ಹುಲಿವೇಷ ಮತ್ತು ಭಾವನಾತ್ಮಕ ಪ್ರೇಮಕಥೆಯನ್ನು ಒಳಗೊಂಡಿದ್ದು, ಫೆಬ್ರವರಿ 20ರಂದು ಈ ಸಿನಿಮಾ ತೆರೆಕಾಣುತ್ತಿದೆ. ಕಿರುತೆರೆ ನಟ ರಿತ್ವಿಕ್ ಮಠದ್ ಮತ್ತು ಪ್ರತಿಭಾವಂತ ನಟಿ ಚೈತ್ರಾ ಜೆ. ಆಚಾರ್ ಮುಖ್ಯ ಭೂಮಿಕೆಯಲ್ಲಿದ್ದು, ಕಿಚ್ಚ ಸುದೀಪ್ ಅವರ ಬೆಂಬಲ ಚಿತ್ರತಂಡಕ್ಕೆ ಆನೆಬಲ ನೀಡಿದೆ.
-
ಹೊಸಬರ, ಹೊಸತನದ ಸಿನಿಮಾಗಳು ಇತ್ತೀಚೆಗೆ ಹೆಚ್ಚೆಚ್ಚು ಗಮನಸೆಳೆಯುತ್ತಿವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ʻಮಾರ್ನಮಿʼ ಚಿತ್ರ. ಫೆ.20ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿರುವ ಈ ಸಿನಿಮಾಕ್ಕೆ ನಟ ಕಿಚ್ಚ ಸುದೀಪ್ ಅವರು ಬೆಂಬಲವಾಗಿ ನಿಂತಿರುವುದು ಚಿತ್ರತಂಡಕ್ಕೆ ಆನೆಬಲ ಸಿಕ್ಕಂತಾಗಿದೆ. ಇನ್ನು, ಕಿರುತೆರೆಯಲ್ಲಿ ಹೆಸರು ಮಾಡಿರುವ ರಿತ್ವಿಕ್ ಮಠದ್ ಮತ್ತು ಚೈತ್ರಾ ಜೆ. ಆಚಾರ್ ಮುಖ್ಯಭೂಮಿಕೆಯಲ್ಲಿರುವ ʻಮಾರ್ನಮಿʼ ಚಿತ್ರದ ಮೂಲಕ ಕರಾವಳಿ ಸಂಸ್ಕತಿ, ಆಚರಣೆ ಭಾಷೆ, ಸಂಸ್ಕೃತಿ ಹುಲಿವೇಷ ಹೀಗೆ ಹಲವು ವಿಷಯಗಳನ್ನು ಕಟ್ಟಿಕೊಡಲಾಗಿದೆ.
ಫೆಬ್ರವರಿ 20ರಂದು ಮಾರ್ನಮಿ ರಿಲೀಸ್
ಎರಡು ಬಾರಿ ಚಿತ್ರದ ಬಿಡುಗಡೆಯ ದಿನಾಂಕ ಪ್ರಕಟಿಸಿ ಮುಂದೂಡಿದ್ದ ಚಿತ್ರತಂಡ ಈ ಬಾರಿ ಅಂದುಕೊಂಡ ದಿನದಂದು ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಚಿತ್ರವನ್ನು ನಿಶಾಂತ್, ಶಿಲ್ಪಾ ನಿಶಾಂತ್ ನಿರ್ಮಾಣ ಮಾಡಿದ್ದು, ರಿತೀಶ್ ಶೆಟ್ಟಿ ನಿರ್ದೇಶನ ಹೇಳಿದ್ದಾರೆ. "ಫೆಬ್ರವರಿ 20 ರಂದು ಮಾರ್ನಮಿ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರುತ್ತಿದ್ದೇವೆ. ಈ ಮುಂಚೆ ಎರಡು ಬಾರಿ ದಿನಾಂಕ ಪ್ರಕಟಿಸಿದ್ದ ವೇಳೆ ಪ್ರಚಾರಕ್ಕೆ ಸಮಯ ಸಿಕ್ಕಿರಲಿಲ್ಲ. ಸಿನಿಮಾ ಮಾಡಿ, ಅದನ್ನು ಜನರಿಗೆ ತಲುಪಲು ಸಾಧ್ಯವಾಗಲಿಲ್ಲ ಎನ್ನುವ ಕಾರಣದಿಂದ ಮುಂದೂಡಿದ್ದೆವು. ಈಗ ನಮ್ಮ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ" ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ರಿತೀಶ್ ಶೆಟ್ಟಿ.
Marnami Movie: 'ಮಾರ್ನಮಿ' ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಕಿಚ್ಚ- ಫೋಟೋಸ್ ಇಲ್ಲಿದೆ!
ಸಿನಿಪ್ರಿಯರಿಗೆ ಈ ಸಿನಿಮಾಗಳು ಇಷ್ಟವಾಗಲಿವೆ
"ನಮ್ಮ ಸಿನಿಮಾದಲ್ಲಿ ಉತ್ತಮವಾದ ಕಥೆ ಇದೆ. ಹುಲಿ ವೇಷ, ಕರಾವಳಿ ಭಾಗದ ಪ್ರೇಮಕಥೆ, ಆಕ್ಷನ್, ಎಮೋಷನ್, ಸಂಬಂಧಗಳ ಬೆಲೆ ಕಟ್ಟಿಕೊಡಲಾಗಿದೆ. ಕರಾವಳಿ ಭಾಗದಲ್ಲಿ ಮಾರ್ನಮಿಯೇ ಮಂಗಳೂರಿನ ದಸರಾ. ಈ ಚಿತ್ರದಲ್ಲಿನ ಚೇತು, ದೀಕ್ಷಾ ಪಾತ್ರಗಳು ಇಷ್ಟವಾಗಲಿದೆ. ಜನರ ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದೇವೆ" ಎಂದು ನಿರ್ದೇಶಕ ರಿತೀಶ್ ಶೆಟ್ಟಿ ಮಾಹಿತಿ ಹಂಚಿಕೊಂಡರು.
Maarnami Teaser: ಕರಾವಳಿ ಭಾಗದ ಪ್ರೇಮಕಥೆ 'ಮಾರ್ನಮಿ'ಗೆ ರಮ್ಯಾ ಸಾಥ್; ನಾಯಕಿ ಚೈತ್ರಾ ಆಚಾರ್ ಪಾತ್ರ ರಿವೀಲ್
ಗೆಲುವಿನ ವಿಶ್ವಾಸದಲ್ಲಿ ರಿತ್ವಿಕ್ ಮಠದ್
"ಈ ಚಿತ್ರಕ್ಕಾಗಿ ನಾನು ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಹುಲಿ ವೇಷ ಸೇರಿದಂತೆ ವಿವಿಧ ವಿಷಯಗಳಿವೆ. ಮನುಷ್ಯ ತಾಳ್ಮೆ ಕಳೆದುಕೊಂಡರೆ ಏನೆಲ್ಲಾ ಆಗಲಿದೆ ಎನ್ನುವ ಹಲವು ಮುಖಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಜೊತೆಗೆ ಕಿಚ್ಚ ಸುದೀಪ್ ಅವರು ನಮ್ಮ ಚಿತ್ರಕ್ಕೆ ಬೆಂಬಲವಾಗಿ ನಿಂತಿರುವುದು ಮತ್ತಷ್ಟು ಶಕ್ತಿ ಸಿಕ್ಕಂತೆ ಆಗಿದೆ. ಕಿರುತೆರೆಯಲ್ಲಿ ಸಿಕ್ಕ ಜನಪ್ರಿಯತೆ ಮತ್ತು ಟಿವಿ ರೇಟಿಂಗ್ ಈ ಸಿನಿಮಾಕ್ಕೂ ಸಿಕ್ಕರೆ ಮಾರ್ನಮಿ ಸೂಪರ್ ಡೂಪರ್ ಹಿಟ್ ಆಗಲಿದೆ" ಎನ್ನುತ್ತಾರೆ ನಟ ರಿತ್ವಿಕ್ ಮಠದ್.
ಶೆಟ್ಟರ ಬಳಗಕ್ಕೆ ಆಹ್ವಾನ
"ರಿತ್ವಿಕ್ ಅವರನ್ನು ಜನರು ಹೆಚ್ಚಾಗಿ ಇಷ್ಟಪಡ್ತಾರೆ. ಅದೇ ಪ್ರೀತಿ ಸಿನಿಮಾಗೆ ತೋರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಬೇಡ ಅಂದು ಬಿಟ್ಟಿದ್ದ ಸಿನಿಮಾವೇ ಮತ್ತೆ ನನಗೆ ಸಿಕ್ಕಿದೆ. ಶೆಟ್ಟರ ಬಳಗವನ್ನು ಚಿತ್ರ ವೀಕ್ಷಿಸಲು ಆಹ್ವಾನಿಸುತ್ತೇನೆ. ಹಾಗಂತ ಸಿನಿಮಾ ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆಯಲು ಮುಜುಗರ, ಅವರಾಗಿಯೇ ಕೇಳಿದರೆ ಸಿನಿಮಾ ಬಗ್ಗೆ ಹೇಳಬಹುದು" ಎಂದು ಮಾಹಿತಿ ಹಂಚಿಕೊಂಡರು ಚೈತ್ರಾ ಜೆ. ಆಚಾರ್.