Rukmini Vasanth: ಕೇರಳದಲ್ಲೂ ಕನ್ನಡ ಮಾತನಾಡಿದ ರುಕ್ಮಿಣಿ ವಸಂತ್; ವಿಡಿಯೊ ವೈರಲ್
Madharaasi Movie: 'ಮದರಾಸಿʼ ತಮಿಳು ಚಿತ್ರದ ಪ್ರಮೋಷನ್‌ಗಾಗಿ ಕೇರಳದ ಕೊಚ್ಚಿ ಲುಲು ಮಾಲ್‌ಗೆ ತೆರಳಿದ ಕನ್ನಡತಿ ರುಕ್ಮಿಣಿ ವಸಂತ್ ಅಲ್ಲೂ ಕನ್ನಡದಲ್ಲೇ ಮಾತನಾಡಿದ್ದು, ಗಮನ ಸೆಳೆದಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

-

ತಿರುವನಂತಪುರಂ: ಸದ್ಯ ಪರಭಾಷೆಯ ಚಿತ್ರಗಳಲ್ಲಿ ಗಮನ ಸೆಳೆಯುತ್ತಿರುವ ಕನ್ನಡ ನಟಿಯರ ಪೈಕಿ ರುಕ್ಮಿಣಿ ವಸಂತ್ (Rukmini Vasanth) ಮುಂಚೂಣಿಯಲ್ಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ಅವರ ತಮಿಳು ಚಿತ್ರ ʼಮದರಾಸಿʼ (Madharaasi) ಸೆಪ್ಟೆಂಬರ್ 5ರಂದು ತೆರೆಕಂಡು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಶಿವಕಾರ್ತಿಕೇಯನ್ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಎ.ಆರ್. ಮುರುಗದಾಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಪ್ರಮೋಷನ್‌ಗಾಗಿ ಕೇರಳಕ್ಕೆ ತೆರಳಿದ ರುಕ್ಮಿಣಿ ಅಲ್ಲೂ ಕನ್ನಡದಲ್ಲೇ ಮಾತನಾಡಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ (Viral Video) ಹರಿದಾಡುತ್ತಿದೆ.
ಚಿರಂತ್ ಎನ್ನುವ ಕನ್ನಡಿಗರೊಬ್ಬರು ಈ ವಿಡಿಯೊ ಮಾಡಿದ್ದು, ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಪರ ರಾಜ್ಯಕ್ಕೆ ಹೋದರೂ ಕನ್ನಡತನವನ್ನು ಬಿಟ್ಟು ಕೊಡದ ರುಕ್ಮಿಣಿ ವಸಂತ್ ನಡೆಯನ್ನು ಹೊಗಳಿದ್ದಾರೆ.
ಈ ಸುದ್ದಿಯನ್ನೂ ಓದಿ: Madharaasi Box Office Collection: ಕಾಲಿವುಡ್‌ನಲ್ಲೂ ಗೆಲುವಿನ ನಗೆ ಬೀರಿದ ರುಕ್ಮಿಣಿ ವಸಂತ್; ʼಮದರಾಸಿʼ ಮೊದಲ ದಿನ ಗಳಿಸಿದ್ದೆಷ್ಟು?
ವಿಡಿಯೊದಲ್ಲಿ ಏನಿದೆ?
ಕನ್ನಡಿಗ ಚಿರಂತ್ ಕೊಚ್ಚಿಯ ಲುಲು ಮಾಲ್‌ಗೆ ತೆರಳಿದ್ದರು. ಈ ವೇಳೆ ಅವರಿಗೆ 'ಮದರಾಸಿ' ಸಿನಿಮಾದ ಪ್ರಮೋಷನ್‌ಗಾಗಿ ರುಕ್ಮಿಣಿ ಮತ್ತು ಚಿತ್ರತಂಡ ಅಲ್ಲಿಗೆ ಆಗಮಿಸಲಿದೆ ಎನ್ನುವ ಮಾಹಿತಿ ಗೊತ್ತಾಯಿತು. ಹೀಗಾಗಿ ವಿಡಿಯೊ ಮಾಡಲು ಆರಂಭಿಸಿದ ಅವರು, ʼʼಸದ್ಯದಲ್ಲೇ ರುಕ್ಮಿಣಿ ವಸಂತ್ ಆಗಮಿಸಲಿದ್ದಾರೆ. ಅವರನ್ನು ಮಾತನಾಡಿಸೋಣʼʼ ಎಂದಿದ್ದಾರೆ. ಈ ವೇಳೆ ಸಾಕಷ್ಟು ಜನಸಂದಣಿ ನೆರೆದಿತ್ತು. ಸ್ವಲ್ಪ ಹೊತ್ತಿನಲ್ಲೇ ರಕ್ಮಿಣಿ ಆಗಮಿಸಿದರು. ಜನಸಂದಣಿ ಮಧ್ಯೆ ಚಿರಂತ್ ʼʼಹಲೋ ರುಕ್ಮಿಣಿ ಅವರೆ ಹೇಗಿದ್ದೀರಿ?ʼʼ ಎಂದು ಕೇಳಿದ್ದಾರೆ. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ರುಕ್ಮಿಣಿ ʼʼಹೋ ಕನ್ನಡʼʼ ಎಂದು ಹೇಳಿ ಮುಂದೆ ಸಾಗಿದ್ದಾರೆ.
ಈ ವಿಡಿಯೊವನ್ನು ಚಿರಂತ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಇದಕ್ಕೆ ರುಕ್ಮಿಣಿ ಕೂಡ ಕಾಮೆಂಟ್ ಮಾಡಿದ್ದು, ʼʼಸಡನ್ ಆಗಿ ಕನ್ನಡ ಕೇಳಿ ಸಿಕ್ಕಾಪಟ್ಟೆ ಖುಷಿ ಆಯ್ತು. ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಧನ್ಯವಾದʼʼ ಎಂದು ಪ್ರತಿಕ್ರಿಯಿಸಿದ್ದಾರೆ.
ʼಮದರಾಸಿʼ ಕಲೆಕ್ಷನ್ ಹೇಗಿದೆ?
ಸದ್ಯ ʼಮದರಾಸಿʼ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. 3 ದಿನಗಳಲ್ಲಿ ಈ ಚಿತ್ರ ಭಾರತದಲ್ಲಿ 36 ಕೋಟಿ ರೂ. ಗಳಿಸಿದೆ. ಮೊದಲ ದಿನ 13 ಕೋಟಿ ರೂ., 2ನೇ ದಿನ 12 ಕೋಟಿ ರೂ., ಮತ್ತು 3ನೇ ದಿನ 10.85 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಸೈಕಾಲಜಿಕಲ್ ಥ್ರಿಲ್ಲರ್‌ನಲ್ಲಿ ಶಿವಕಾರ್ತಿಕೇಯನ್ ಮತ್ತು ರುಕ್ಮಿಣಿ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ವಿದ್ಯುತ್ ಜಮ್ಮ್ವಾಲ್, ಬಿಜು ಮೆನನ್, ವಿಕ್ರಾಂತ್, ಪ್ರೇಮ್ ಕುಮಾರ್, ವಿನೋದಿನಿ ವೈದ್ಯನಾಥ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಸದ್ಯದ ಪ್ರಾಜೆಕ್ಟ್
ಸದ್ಯ ರುಕ್ಮಿಣಿ ವಿವಿಧ ಭಾಷೆಗಳ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ʼಕಾಂತಾರ: ಚಾಪ್ಟರ್ 1ʼರಲ್ಲಿ ನಾಯಕಿಯಾಗಿ ಕನಕವತಿ ಪಾತ್ರದಲ್ಲಿ ರುಕ್ಮಿಣಿ ಕಾಣಿಸಿಕೊಂಡಿದ್ದು ಅಕ್ಟೋಬರ್ 2ರಂದು ತೆರೆಗೆ ಬರಲಿದೆ. ಇನ್ನು ಯಶ್ ಅವರ ʼಟಾಕ್ಸಿಕ್ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜತೆಗೆ ಟಾಲಿವುಡ್ ಸೂಪರ್ ಸ್ಟಾರ್ ಜೂ. ಎನ್‌ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ.