ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕುತೂಹಲ ಮೂಡಿಸಿದ ʻಶಬರಿʼ ಚಿತ್ರದ ಟೀಸರ್‌; ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾದೊಂದಿಗೆ ʻಒರಟʼ ಶ್ರೀ ಕಮ್‌ಬ್ಯಾಕ್!‌

‘ಒರಟ’ ಚಿತ್ರದ ಖ್ಯಾತಿಯ ನಿರ್ದೇಶಕ ಒರಟ ಶ್ರೀ ಸಾರಥ್ಯದ ಸಸ್ಪೆನ್ಸ್ ಥ್ರಿಲ್ಲರ್ ‘ಶಬರಿ’ ಚಿತ್ರದ ಟೀಸರ್ ಅನ್ನು ಲಹರಿ ವೇಲು ಬಿಡುಗಡೆಗೊಳಿಸಿದ್ದಾರೆ. ಹಾಡುಗಳಿಗೆ ಮಾರುಹೋಗಿ ಲಹರಿ ಸಂಸ್ಥೆಯು ಆಡಿಯೋ ಹಕ್ಕುಗಳನ್ನು ಖರೀದಿಸಿದೆ ಎಂದು ಅವರು ಹೇಳಿದ್ದಾರೆ. ಈ ಚಿತ್ರದಲ್ಲಿ ಸಮರ್ಥ್ ಹಾಗೂ ಕೃತಿಕಾ ಗೌಡ ಮುಖ್ಯ ಭೂಮಿಕೆಯಲ್ಲಿದ್ದಾರೆ.

ʻಒರಟʼ ಶ್ರೀ ನಿರ್ದೇಶನದ ʻಶಬರಿʼ ಚಿತ್ರದ ಟೀಸರ್‌ ರಿಲೀಸ್‌

-

Avinash GR
Avinash GR Jul 3, 2026 5:04 PM

‘ಒರಟ’, ‘ಕೋರ’ದಂತಹ ಸಸ್ಪೆನ್ಸ್ ಹಾಗೂ ವಿಭಿನ್ನ ಕಥಾಹಂದರದ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಒರಟ ಶ್ರೀ ಅವರ ಬಹುನಿರೀಕ್ಷಿತ ಹೊಸ ಚಿತ್ರ ‘ಶಬರಿ’ ಈಗ ಸದ್ದು ಮಾಡಲು ಆರಂಭಿಸಿದೆ. ಇತ್ತೀಚೆಗೆ ನಡೆದ ಭವ್ಯ ಪತ್ರಿಕಾಗೋಷ್ಠಿಯಲ್ಲಿ ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು ಅವರು ಚಿತ್ರದ ಅಧಿಕೃತ ಟೀಸರ್ ಅನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಆಡಿಯೋ ಹಕ್ಕು ಖರೀದಿಸಿದ ಲಹರಿ

ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಲಹರಿ ವೇಲು, "ನಿರ್ದೇಶಕ ಒರಟ ಶ್ರೀ ಅವರಿಗೆ ಸಿನಿಮಾದ ಮೇಲಿರುವ ಅತೀವ ಪ್ರೀತಿ ಅಪಾರವಾದದ್ದು. ಅವರು ಈ ಚಿತ್ರವನ್ನು ಅತ್ಯಂತ ಸೊಗಸಾಗಿ ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳು ಅದ್ಭುತವಾಗಿ ಮೂಡಿಬಂದಿರುವ ಕಾರಣಕ್ಕಾಗಿಯೇ ಲಹರಿ ಸಂಸ್ಥೆಯು ಇದರ ಆಡಿಯೋ ಹಕ್ಕುಗಳನ್ನು ಖರೀದಿಸಿದೆ" ಎಂದು ಪ್ರಶಂಸಿಸಿದರು. ಇನ್ನು ಸಿನಿಮಾದ ಆರಂಭದಲ್ಲೇ ಮಾಡಿಕೊಂಡಿದ್ದ ಒಪ್ಪಂದದಂತೆ, ನಿಗದಿಪಡಿಸಿದ ಬಜೆಟ್ ಮಿತಿಯಲ್ಲೇ ಇಡೀ ಸಿನಿಮಾವನ್ನು ಪೂರ್ಣಗೊಳಿಸಿ ಒರಟ ಶ್ರೀ ಜವಾಬ್ದಾರಿ ಮೆರೆದಿರುವುದು ಈ ಚಿತ್ರದ ಮತ್ತೊಂದು ವಿಶೇಷತೆಯಾಗಿದೆ.

Lahari Velu Son Marriage: ಲಹರಿ ವೇಲು ಪುತ್ರ ಅದ್ಧೂರಿ ವಿವಾಹ; ಇಲ್ಲಿವೆ ಫೋಟೋಸ್‌

ಈ ಚಿತ್ರಕ್ಕೆ ಮೂವರು ನಿರ್ಮಾಪಕರು

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್‌ಗಳಾಗಿರುವ ರಮೇಶ್, ಸುಧಾಕರ್ ರೆಡ್ಡಿ ಮತ್ತು ವಿಷ್ಣುಕಾಂತ್. ಎ ಜಂಟಿಯಾಗಿ ‘ಭಾರವಿ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸಮರ್ಥ್ ಮತ್ತು ಕೃತಿಕಾ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಇವರೊಂದಿಗೆ ‘ರಾಣಿ’ ಧಾರಾವಾಹಿ ಖ್ಯಾತಿಯ ಬಾಲನಟಿ ಧನ್ವಿ, ನೀನಾಸಂ ಅಶ್ವತ್ಥ್, ಎಂ.‌ ಕೆ. ಮಠ, ಸೀತಾ ಹರ್ಷವರ್ಧನ್, ಯೋಗೇಶ್ ವೀರ್ ಹಾಗೂ ಮಂಡ್ಯ ಸಿದ್ದು ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.

ಶಬರಿ ಯಾರು?

‘ಶಬರಿ’ ಚಿತ್ರವು ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಮಿಸ್ಟ್ರಿ ಅಂಶಗಳನ್ನು ಒಳಗೊಂಡಿದ್ದರೂ, ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಕೇವಲ ಒಂದು ಜೀಪು ಮತ್ತು ಪುಟ್ಟ ಹುಡುಗಿಯ ಝಲಕ್ ಮಾತ್ರ ತೋರಿಸಲಾಗಿದ್ದು, ಅಸಲಿ ‘ಶಬರಿ’ ಯಾರು ಎಂಬ ರಹಸ್ಯ ಹಾಗೂ ಕುತೂಹಲವನ್ನು ಚಿತ್ರತಂಡ ಕಾಯ್ದಿರಿಸಿದೆ.

ಈ ಚಿತ್ರಕ್ಕೆ ಬಿ. ಆರ್. ಹೇಮಂತ್ ಕುಮಾರ್ ಅವರ ಸಂಗೀತ ನಿರ್ದೇಶನವಿದ್ದು, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ ಹಾಗೂ ಕೆ. ಗಿರೀಶ್ ಕುಮಾರ್ ಅವರ ಸಂಕಲನ ಕಾರ್ಯವಿದೆ. ಸದ್ಯದಲ್ಲೇ ಸಿನಿಮಾ ಬೆಳ್ಳಿಪರದೆಗೆ ಬರಲು ಸಜ್ಜಾಗುತ್ತಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಹರಿ ವೇಲು ಅವರೊಂದಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ‘ತಲೆದಂಡ’ ಚಿತ್ರದ ನಿರ್ದೇಶಕ ಪ್ರವೀಣ್ ಕೃಪಾಕರ್ ಮತ್ತು ‘ಕಾಮನ್ ಮ್ಯಾನ್’ ಚಿತ್ರದ ನಿರ್ಮಾಪಕ ನರಸಿಂಹ ಮೂರ್ತಿ ಪಾಲ್ಗೊಂಡು ಚಿತ್ರತಂಡವನ್ನು ಹುರಿದುಂಬಿಸಿದರು.